ವನಜಾ ಎಂಬ ಬೀಜ ಮಾತೆ
ಜನಜನಿತ
ಇಂದು ದೇಶಾದ್ಯಂತ ದೇಸೀ ತಳಿ, ಸಾವಯವ ಒಳಸುರಿಗಳು, ಸಾವಯವ ಕೃಷಿ ಇತ್ಯಾದಿ ದೊಡ್ಡ ಮಟ್ಟದ ಸರಕಾರಿ ಯೋಜನೆಗಳಾಗಿಯೂ ಬೆಳೆದಿದ್ದರೆ ಅದರ ಹಿಂದೆ ವನಜಾ ಅವರ ಕೊಡುಗೆಯಿದೆ. ನಮ್ಮ ರಾಜ್ಯದಲ್ಲಿ ಈ ಪರ್ಯಾಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಬಹುತೇಕರು ಗ್ರೀನ್ ಫೌಂಡೇಶನ್‌ನಲ್ಲಿ ವನಜಾ ಅವರ ಶಿಷ್ಯತ್ವದ ಮೂಲಕ ಕಲಿತವರು.
‘ಗ್ರೀನ್ ಫೌಂಡೇಶನ್’ ಸಂಸ್ಥಾಪಕಿ ಡಾ. ವನಜಾ ರಾಮಪ್ರಸಾದ್ ನಿಧನ ಹೊಂದಿದ್ದಾರೆ. ದೊಡ್ಡ ಹೋರಾಟ, ಇನ್ನೇನೋ ಝಗ್ಗನೆ ಮಾಧ್ಯಮದ ಗಮನ ಸೆಳೆಯುವ ಕೆಲಸ ಅವರು ಮಾಡಿಲ್ಲದ ಕಾರಣ ಹೌದೇ ಅವರು ಯಾರು? ಎಂದು ಕೇಳಬಹುದು. ದೇಸೀ ತಳಿಗಳ ಸಂರಕ್ಷಣೆ ಅಭಿವೃದ್ಧಿಯನ್ನು ವೃತದಂತೆ ಕೈಗೊಂಡವರು ವನಜಾ. ಅಷ್ಟೇ ಆದರೆ ಅದು ಆಂಶಿಕ ಕೆಲಸ. ಇಡೀ ಈ ಕೆಲಸವನ್ನು ಮಹಿಳೆಯರನ್ನು ಕಟ್ಟಿಕೊಂಡು ಮಾಡಿದರು. ಐ.ಐ.ಎಂ.ನಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಪಿಎಚ್.ಡಿ. ಮಾಡುತ್ತಿದ್ದಾಗ ವನಜಾ ಅವರು ಸಮಸ್ಯೆಯ ಮೂಲಕ್ಕೆ ಕೈ ಹಾಕಿದರು. ಆರೋಗ್ಯ ಸಮಸ್ಯೆ ಅವರನ್ನು ದೇಸೀ ತಳಿಗಳ ಕಡೆ ಒಯ್ದಿತು. ದೇಸೀ ತಳಿಗಳ ಪೌಷ್ಟಿಕತೆ, ರೋಗ ನಿರೋಧಕತೆ, ಸಹಿಷ್ಣುತೆ ಹೀಗೆ ಅದರ ವಿಶ್ವರೂಪ ದರ್ಶನವಾಗುತ್ತಲೇ ಹೋಯಿತು. ಮುಂದೆ ಏನೋ ಹುದ್ದೆ ಕ್ಯಾರಿಯರ್ ಸಾಧ್ಯತೆಗಳೆಲ್ಲಾ ಇದ್ದಾಗ ವನಜಾ ಅವನ್ನೆಲ್ಲಾ ಬಿಟ್ಟು ಕರ್ನಾಟಕದ ಗಡಿಯಲ್ಲಿರುವ ತಳಿಯಲ್ಲಿ ಪುಟ್ಟದಾಗಿ ಗ್ರೀನ್ ಸಂಸ್ಥೆಯನ್ನು ಆರಂಭಿಸಿದರು. ಒಂದು ಶೆಡ್, ಅದೇ ಆಫೀಸು. ಕಂಡ ಕಂಡಲ್ಲಿ ತಿರುಗಿ ರೈತರಿಂದ ನಾಟೀ ತಳಿ ಸಂಗ್ರಹಿಸಿದರು. ಈ ತಳಿ ಸಂಗ್ರಹವೆಂದರೆ ಅದೊಂದು ಭ್ರಾಮಕ ಕೆಲಸವೂ ಹೌದು. ಹತ್ತೂರಲ್ಲಿ ಹತ್ತು ತಳಿ ಸಿಕ್ಕಿತು ಅಂದುಕೊಂಡರೆ ಅವೆಲ್ಲಾ ಸ್ಥಳೀಯ ಹೆಸರುಗಳ ಭಿನ್ನತೆಯಿಂದ ಈ ಸಂಖ್ಯೆ ಅರ್ಧಕ್ಕರ್ಧ ಇಳಿಯಬಹುದು. ಇನ್ನು ಸಿಕ್ಕಿದ ಬೀಜಗಳೆಲ್ಲಾ ತಳಿ ಶುದ್ಧತೆ ಇರುವ ಬೀಜಗಳೆಂಬ ಗ್ಯಾರಂಟಿ ಇಲ್ಲ. ತಳಿ ಶುದ್ಧತೆ ಅರಿಯಲು ಈ ತಳಿಯ ಲಕ್ಷಣಗಳ ಪಟ್ಟಿ ಪಡೆಯಬೇಕು. ಈ ಪಟ್ಟಿ ಪಡೆಯಲು ಇದರ ತಳಿ ದಾಸ್ತಾನು ಹೊಂದಿರುವ ಕೃಷಿ ವಿವಿ, ಮತ್ತಿತರ ಕೃಷಿ ಸಂಬಂಧಿತ ಕೇಂದ್ರಗಳನ್ನು ಸುತ್ತಬೇಕು.
ಆ ತಳಿ ಲಕ್ಷಣಗಳ ಸೂಚಿ ಸಿಕ್ಕಿದರೆ ಸಾಕೇ, ಈ ಬೀಜಗಳನ್ನು ಪದೇ ಪದೇ ನಾಟಿ ಮಾಡಿ ಶುದ್ಧ ಬೀಜಗಳನ್ನು ಪಡೆಯಬೇಕು. ಈ ಶುದ್ಧ ತಳಿ ಬೀಜ ಪಡೆದು ಅವನ್ನು ಕಲಾಕೃತಿಯಂತೆ ಇಟ್ಟರೆ ಉಪಯೋಗ ಇಲ್ಲ. ಅವುಗಳನ್ನು ಪ್ರತೀ ವರ್ಷ ವೃದ್ಧಿಸಿ ತಳಿ ಕಾಪಿಡಬೇಕು.
ಇವೆಲ್ಲಾ ಪ್ರಚಾರದ ಬೆಳಕು ಝಗ್ಗನೆ ಬೀಳುವ ಕ್ಷೇತ್ರವೇ ಅಲ್ಲ. ತಣ್ಣಗೆ ಯಾವ ನಿರೀಕ್ಷೆಯೂ ಇಲ್ಲದೆ ಮಾಡುವ ಕೆಲಸ. ವನಜಾ ಹಠ ಬಿಡದೆ ಇದನ್ನು ಮಾಡಿದರು. ಆರಂಭದಿಂದ ಅವರೊಂದಿಗೆ ಕೆಲಸ ಮಾಡಿದ ಜಿ. ಕೃಷ್ಣಪ್ರಸಾದ್ ತಳಿಯ ಕೆಲಸದ ಕಷ್ಟ- ಸುಖಗಳನ್ನು ಹೇಳುವುದಿದೆ. ಇದೇ ವೇಳೆಗೆ ವನಜಾ ಈ ತಳಿ ವೃದ್ಧಿಯ ಕೆಲಸ ಸಂಶೋಧನಾ ಕೇಂದ್ರದ ಮಾದರಿಯಲ್ಲಿ ಮಾಡಿ ಗಂಟು ಕಟ್ಟಿಟ್ಟರೆ ಏನು ಸುಖ ಎಂದು ತೀರ್ಮಾನಿಸಿ ಮಹಿಳೆಯರನ್ನೇ ಮುಂಚೂಣಿಯಲ್ಲಿಟ್ಟು ಸಮುದಾಯ ಬೀಜ ಬ್ಯಾಂಕ್ ಎಂಬ ಪರಿಕಲ್ಪನೆಯನ್ನು ಆರಂಭಿಸಿದರು. ಆಯಾ ಹಳ್ಳಿಯಲ್ಲಿರುವ ವೈವಿಧ್ಯಮಯ ತಳಿಗಳನ್ನು ಆಯಾ ಹಳ್ಳಿಯ ಹೆಣ್ಣುಮಕ್ಕಳೇ ಸಂಗ್ರಹಿಸಿ ಉಳಿಸಿ ವೃದ್ಧಿಸಿ ಸಮುದಾಯಕ್ಕೆ ಹಂಚುವ ಕೆಲಸ ಇದು.
ಕೃಷ್ಣಪ್ರಸಾದ್ ಇದರ ಸಲುವಾಗಿ ರಾಜ್ಯಾದ್ಯಂತ ಓಡಾಡಿ ಹತ್ತಾರು ಕಡೆ ಇಂತಹ ಬೀಜ ಬ್ಯಾಂಕುಗಳನ್ನು ಸ್ಥಾಪಿಸಲು ಗ್ರೀನ್ ಫೌಂಡೇಶನ್ ಪರವಾಗಿ ಕೆಲಸ ಮಾಡಿದರು.
ಕಾರಣಾಂತರಗಳಿಂದ ಕೃಷ್ಣಪ್ರಸಾದ್ ಗ್ರೀನ್ ಫೌಂಡೇಶನ್ ಬಿಟ್ಟು ಸಹಜ ಸಮೃದ್ಧ ಆರಂಭಿಸಿದಾಗಲೂ ಆವರು ಆಯ್ಕೆ ಮಾಡಿದ್ದು ವನಜಾ ಕಲಿಸಿ ಬೆರಳು ತೋರಿದ ತಳಿ ಸಂರಕ್ಷಣೆಯ ಕ್ಷೇತ್ರವನ್ನೇ.
ತಳಿ ಅಭಿವೃದ್ಧಿ ಎಂಬುದು ರಾಕೆಟ್ ವಿಜ್ಞಾನ ಅಲ್ಲ ಎಂದು ಹೇಳುತ್ತಿದ್ದ ವನಜಾ ರೈತರೇ ಇದನ್ನು ಮಾಡಬಹುದು ಎಂಬುದನ್ನು ತೋರಿಸಿ ಕೊಟ್ಟರು. ನಮ್ಮ ರೈತರು ಅದರಲ್ಲೂ ಹೆಣ್ಣುಮಕ್ಕಳ ಪಾರಂಪರಿಕ ಜ್ಞಾನದ ಮೇಲೆ ನಂಬಿಕೆ ಇಟ್ಟಿದ್ದ ಅವರು ವ್ಯವಸ್ಥಿತವಾಗಿ ಅವರಿಗೆ ವೈಜ್ಞಾನಿಕವಾಗಿ ತಳಿ ವೃದ್ಧಿ ಮಾಡುವ ಸೂತ್ರಗಳನ್ನು ಕಲಿಸಿ ಕೊಟ್ಟರು. ಅದಕ್ಕೆ ಬೇಕಾದ ಚಿತ್ರ, ಪ್ರಯೋಗ, ವೈಜ್ಞಾನಿಕ ಪರೀಕ್ಷೆಗಳನ್ನು ರೈತರ ಹಂತಕ್ಕೆ ತಲುಪಿಸಿದರು.
ತಳಿ ಶುದ್ಧ ಮಾಡಿದರೆ ಸಾಲದು, ಅವುಗಳನ್ನು ರೈತರು ಬಳಸಬೇಕು. ನಮ್ಮ ಅಪೌಷ್ಟಿಕತೆಗೆ ಇದರಲ್ಲಿ ಪರಿಹಾರವಿದೆ ಎಂದು ನಂಬಿದ್ದ ಅವರು ಪೌಷ್ಟಿಕತೆಯ ಪೂರೈಕೆಗೆ ದೇಸೀ ತಳಿಗಳು ಎಷ್ಟು ಮುಖ್ಯ ಎಂದು ಸಿದ್ಧಪಡಿಸಿ ತೋರಿಸಿಕೊಟ್ಟರು.
ದೇಸೀ ತಳಿಗಳ ಅಡುಗೆಯನ್ನು ಆವಿಷ್ಕರಿಸಿದರು. ರಾಸಾಯನಿಕ ರಹಿತ ಕೃಷಿ ಹೇಗೆ ದೇಸಿ ತಳಿಗಳ ಅವಿನಾಭಾವ ಅಂಶ ಎಂದು ಮಂಡಿಸಿದರು.
ಮೂರು ದಶಕಗಳ ಕಾಲ ನಾಟೀ ತಳಿ- ರೈತ ಮಹಿಳೆ, ಸಾವಯವ ಕೃಷಿ- ಪೌಷ್ಟಿಕತೆ- ಮಣ್ಣಿನ ಆರೋಗ್ಯ ಇವುಗಳನ್ನೆಲ್ಲಾ ಒಂದೇ ಸೂತ್ರದಲ್ಲಿ ಹೆಣೆದು ಪರ್ಯಾಯದ ಮಾದರಿಯೊಂದನ್ನು ಮುಂದಿಟ್ಟರು.
ಕೃಷ್ಣಪ್ರಸಾದ್, ಸೀಮಾ, ಹೊಸಪಾಳ್ಯ, ಡಾ. ನಾಡಗೌಡ, ಶಿವಕುಮಾರ್, ಶ್ರೀಕಾಂತ್- ಹೀಗೆ ಈ ಪಟ್ಟಿ ಬೆಳೆಯುತ್ತದೆ.ರಾಜ್ಯದ ಬಹುತೇಕ ಪರ್ಯಾಯ ಕೃಷಿ ಸಾಧಕರಿಗೆ ಗ್ರೀನ್ ಜೊತೆಗೆ ಒಂದಲ್ಲ ಒಂದು ರೀತಿಯ ಸಂಬಂಧವಿತ್ತು.
ಶ್ರೀ ಪದ್ಧತಿ ಭತ್ತಕ್ಕೆ ಜನಪ್ರಿಯವಾದಾಗ ವನಜಾ ರಾಗಿಯಲ್ಲೂ ಅದು ಸಾಧ್ಯ ಎಂದು ತೋರಿಸಿಕೊಟ್ಟರು. ಸಾವಯವ ಭೀಷ್ಮ ದಿ. ನಾರಾಯಣ ರೆಡ್ಡಿಯವರಿಗೆ ಇದನ್ನು ವಿವರಿಸಿ ಅವರು ಈ ಪ್ರಯೋಗವನ್ನು ಮಾಡಿ ಯಶ ತಂದು ಕೊಟ್ಟರು. ಇಂದು ಗುಳಿ ವಿಧಾನ ಎಂದು ಈ ಬಿತ್ತನೆ ಜನಪ್ರಿಯವಾಗಿದೆ.
ಮಹಿಳೆಯರ ಜೊತೆ ಕೆಲಸ ಮಾಡುತ್ತಿದ್ದಾಗ ಈ ಎಲ್ಲಾ ಪ್ರಯೋಗ-ಪ್ರಕ್ರಿಯೆಗಳನ್ನು ವೈಜ್ಞಾನಿಕವಾಗಿ ದಾಖಲಿಸುವುದನ್ನು ಕಲಿಸಿದ್ದು ವನಜಾ. ಕೃಷಿ ವಿಜ್ಞಾನಿಗಳೆದುರು ತಾತ್ಸಾರಕ್ಕೊಳಗಾಗುವುದು ಇದೇ ಕಾರಣಕ್ಕೆ. ಇದರ ಅರಿವಿದ್ದ ವನಜಾ ಇಡೀ ತಳಿ ಅಭಿವೃದ್ಧಿಯ ಪ್ರಕ್ರಿಯೆಯನ್ನು ದಾಖಲಿಸುವುದನ್ನು ಕಲಿಸಿ ಕೊಟ್ಟರು. ಹಸಿರು ಕ್ರಾಂತಿಯ ಹರಿಕಾರರೆದುರು ನಾಟೀ ತಳಿಗಳ ಸಾಧನೆಯನ್ನು ಮುಂದಿಟ್ಟು ಸವಾಲೆಸೆದರು.
ಹೈಬ್ರಿಡ್, ಕುಲಾಂತರಿಗಳನ್ನು ನಖಶಿಖಾಂತ ವಿರೋಧಿಸಿದರು. ಖಾಸಗಿ ಕಂಪೆನಿಗಳ ಕೈಗೆ ಬೀಜೋತ್ಪಾದನೆ ನೀಡುವುದನ್ನು ವಿರೋಧಿಸಿದರು.
ಗ್ರೀನ್ ಫೌಂಡೇಶನ್ ತನ್ನ ಕೆಲಸಕ್ಕೆ ಅಂತರ್‌ರಾಷ್ಟ್ರೀಯ ಮನ್ನಣೆ ಪಡೆದಾಗಲೂ, ರಾಶಿ ರಾಶಿ ಅನುದಾನ ಪಡೆಯಬೇಕೆನ್ನಿಸಲಿಲ್ಲ. ಅಷ್ಟೇಕೆ ಫೌಂಡೇಶನ್ ಹೆಸರಿಗೆ ಸ್ಥಿರಾಸ್ತಿ ಮಾಡಲಿಲ್ಲ. ತನ್ನ ಬಳಿಕ ತನ್ನ ಕುಟುಂಬದವರೇ ಅದನ್ನು ಮುಂದುವರಿಸಬೇಕೆಂದು ಬಯಸಲಿಲ್ಲ. ತನ್ನಿಂದ ಇನ್ನು ನಿರ್ವಹಣೆ ಕಷ್ಟ ಅಂದಾಗ ವಾನಪ್ರಸ್ಥಕ್ಕೆ ಸರಿದರು.
ಅವರ ನೈತಿಕ ಸ್ಥೈರ್ಯ ಎಂಥಾದ್ದೆಂದರೆ ಭಾರತದ ಅಂದಿನ ರಾಷ್ಟ್ರಪತಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ವನಜಾ ರಾಷ್ಟ್ರಪತಿಯವರಿಗೆ ಗ್ರೀನ್ ಫೌಂಡೇಶನ್‌ನ ಪ್ರಕಟಣೆಗಳನ್ನು ಕೊಟ್ಟರು. ಆ ರಾಷ್ಟ್ರಪತಿ ಕುಲಾಂತರಿ ಇತ್ಯಾದಿಗಳ ಬಗ್ಗೆ ವಕಾಲತ್‌ನ ಮಾತಾಡಿದಾಗ ವನಜಾ, ‘‘ಹಾಗಿದ್ದರೆ ನಿಮಗೆ ನಮ್ಮ ಪುಸ್ತಕ ಓದುವ ಅರ್ಹತೆ ಇಲ್ಲ!’’ ಎಂದು ನಿರ್ದಾಕ್ಷಿಣ್ಯವಾಗಿ ಅವರ ಕೈಯಿಂದ ಆ ಪುಸ್ತಕಗಳ ಸೆಟ್ ಕಿತ್ತುಕೊಂಡರು!
ನಮ್ಮ ಸರಕಾರ ಅವರನ್ನು ಗುರುತಿಸಲಿಲ್ಲ. ಗೌರವಿಸಲಿಲ್ಲ. ಸಮಾಜಕ್ಕೆ ಅವರ ಕೆಲಸ ರೋಚಕವಾದದ್ದಾಗಿರಲಿಲ್ಲ. ಸಮಾಜವೊಂದು ಕೃತಘ್ನವಾಗುವುದು ಹೀಗೆ.
ಕನ್ನಡದ ಕೊರವಂಜಿ ಪತ್ರಿಕೆ ಮಾಸಿ ಕಣ್ಮರೆಯಾದಾಗ ರಾಶಿಯವರು ಒಂದು ವ್ಯಂಗ್ಯ ಚಿತ್ರ ಪ್ರಕಟಿಸಿದ್ದರು. ‘‘ನೀನಿದ್ದಿದ್ದೇ ಗೊತ್ತಾಗಲಿಲ್ಲವಲ್ಲಾ?’’ ಅನ್ನುವ ಅರ್ಥದ ವಾಕ್ಯ ಸಹಿತ. ವನಜಾ ಅವರು ತೋರಿದ ದಿಕ್ಕಿನಲ್ಲಿ ನಡೆಯುವ ಹತ್ತು ಹಲವು ಸಂಗಾತಿಗಳು ಅವರನ್ನು ಸ್ಮರಿಸುತ್ತಲೇ ಅವರ ಆಶಯಗಳನ್ನು ವಿಸ್ತರಿಸಬೇಕು. ಅದು ಈ ದೇಶದ ರೈತರನ್ನೂ, ಪರಿಸರವನ್ನೂ ಆರ್ಥಿಕತೆಯನ್ನೂ ಉಳಿಸುವ ಬಗೆ.