varthabharthi


ಅನುಗಾಲ

ಸಾಹಿತ್ಯಕ್ಕೊಂದು ನಿಯಂತ್ರಣ ಪ್ರಾಧಿಕಾರ

ವಾರ್ತಾ ಭಾರತಿ : 29 Sep, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಇದು ಸಾಹಿತ್ಯ ಬಾಹುಳ್ಯದ ಕಾಲ. ದಿನಕ್ಕೆ ಎಷ್ಟೊಂದು ಪುಸ್ತಕಗಳು ಪ್ರಕಟವಾಗುತ್ತವೆಂದು ಮತ್ತು ಸಾಹಿತ್ಯದ ಹೆಸರಿನಲ್ಲಿ ಎಷ್ಟೊಂದು ಕಾರ್ಯಕ್ರಮಗಳು ನಡೆಯುತ್ತವೆಂದು ಲೆಕ್ಕವಿಟ್ಟವರಿಲ್ಲ. ಸಾಹಿತಿಗಳು ಅನಧಿಕೃತ/ಅನಭಿಷಿಕ್ತ ಜನಪ್ರತಿನಿಧಿಗಳು. ವೈಯಕ್ತಿಕವಾಗಿ ಒಬ್ಬನ ಪ್ರತಿಭೆ, ಪಾಂಡಿತ್ಯವು ಬೆಳಕಿಗೆ ಬರಲೇಬೇಕು ಮತ್ತು ಅವನ್ನು ಬೆಳಕು ಕಾಣಿಸುವುದು ಸಮಾಜದ ಕರ್ತವ್ಯ. ಆದರೆ ಇಂದು ಸಾಮೂಹಿಕವಾಗಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಿಗೆ ಲಗಾಮಿಲ್ಲ. ಸಮ್ಮೇಳನಗಳ, ಕಮ್ಮಟಗಳ, ಸಂಕಿರಣಗಳ ಅತಿವೃಷ್ಟಿಯಿಂದ ಎಲ್ಲರೂ ಬಳಲುತ್ತಿದ್ದಾರೆ. ಆದರೆ ಮಾನಹಾನಿ, ಸಾಮಾಜಿಕ ಗೊಂದಲ ಸೃಷ್ಟಿ ಮತ್ತು ಅಶ್ಲೀಲತೆಯ ಹೊರತಾಗಿ ಅಪ್ರಸಕ್ತತೆಯನ್ನು, ಕಳಪೆ ಗುಣಮಟ್ಟವನ್ನು, ನಿಯಂತ್ರಿಸುವವರಿಲ್ಲ.

ಕೇಂದ್ರ ಸರಕಾರವು ಇ-ಕಾಮರ್ಸ್ ಕುರಿತ ವಿಮರ್ಶೆಗಳನ್ನು ನಿಯಂತ್ರಿಸಲು ಯೋಜನೆಯೊಂದನ್ನು  ಹಾಕಿಕೊಂಡಿದೆ. ಇದರನ್ವಯ ಯಾವುದೇ ಉದ್ಯಮ/ಸಂಸ್ಥೆಯ ಹಣಕಾಸಿನ ವ್ಯವಹಾರಗಳ ಭವಿಷ್ಯದ, ಕುರಿತು ವಿಮರ್ಶಿಸಬೇಕಾದರೆ ಅದು ಒಂದು ನಿಗದಿತ ಪ್ರಾಧಿಕಾರದಿಂದ ಅನುಮೋದಿಸಲ್ಪಡಬೇಕು. ಪಕ್ಷಪಾತ ಧೋರಣೆಯ, ಪೂರ್ವಗ್ರಹಪೀಡಿತ ವಿಮರ್ಶೆಗಳಿಂದಾಗಿ ಉದ್ಯಮಕ್ಕೆ ತೊಂದರೆಯಾಗುತ್ತದೆ ಎಂಬುದು ಸರಕಾರದ ಅಂಬೋಣ. ಪ್ರಾಯಃ ಸರಕಾರದ ಮುಂದಿದ್ದುದು ಈಚೆಗೆ ಅದಾನಿಯ ಉದ್ಯಮದ ಕುರಿತು ಇಂತಹ ಒಂದು ಟೀಕಾವರದಿಯು ಮಾಡಿದ ವ್ಯಾವಹಾರಿಕ ಹಾನಿ. ಸಂಬಂಧಿತ ಟೀಕಾವರದಿಯಿಂದಾಗಿ ಒಮ್ಮೆಗೇ ಅದಾನಿ ಉದ್ಯಮದ ಶೇರುಗಳು ಬೆಲೆ ಕಳೆದುಕೊಂಡವು. ಇದು ಮಾತ್ರವಲ್ಲ, ಸರಕಾರವು ತನ್ನ ಕುರಿತ ಟೀಕೆಗಳನ್ನು ನಿಯಂತ್ರಿಸಲು ಸಾಮಾಜಿಕ ಜಾಲತಾಣದ ಮೇಲೆ ನಿಯಂತ್ರಣವನ್ನು ಸಾಧಿಸಲು ಅಗತ್ಯವುಳ್ಳ ಅನೇಕ ಆದೇಶಗಳನ್ನು ಮಾಡಿದೆ. ಇವೆಲ್ಲವೂ ಸರಿಯೆಂದಲ್ಲ. ಆದರೆ ಮಿತಿಮೀರಿದಾಗ, ಹೆಜ್ಜೆತಪ್ಪಿದಾಗ ಯಾವುದೇ ಮಾಧ್ಯಮವನ್ನು ನಿಯಂತ್ರಿಸಲು ವ್ಯವಸ್ಥೆಯಲ್ಲಿ ಯಾವುದಾದರೊಂದು ಪರಿಹಾರ ಬೇಕಾಗಿದೆ. ಇದು ಸಾಮಾಜಿಕ, ಸಾಂಸ್ಕೃತಿಕ ಸಮಸ್ಯೆ. ಇದನ್ನು ಅಧಿಕಾರವುಳ್ಳವರು ಮಾತ್ರ ವಿಧಿಸಲು ಶಕ್ತರು.ಇದನ್ನು ಸ್ವಾರ್ಥ ರಾಜಕಾರಣವೆನ್ನಲೂಬಹುದು.

ಇಂತಹದೇ ವ್ಯವಸ್ಥೆಯು ಅಂತರ್ ರಾಷ್ಟ್ರೀಯ ಜ್ಞಾನ-ವಿಜ್ಞಾನ ನಿಯತಕಾಲಿಕೆಗಳಲ್ಲೂ ಇದೆೆ. ಯಾವುದೇ ಲೇಖನ-ಸಂಶೋಧನಾ ರಚನೆಯು ಪ್ರಕಟವಾಗುವ ಮುನ್ನ ಅದು ಸಮಿತಿಯೊಂದರಿಂದ ಪರಿಶೀಲನೆಗೆ ಒಳಪಡಬೇಕಾಗಿದೆ. ಇದರಿಂದ ಗುಣಮಟ್ಟ ಹೆಚ್ಚುವುದಲ್ಲದೆ, ಕೃತಿಚೌರ್ಯ ಮುಂತಾದ ಕೊರತೆಗಳು, ಅಪವಾದಗಳು ಇಲ್ಲವಾಗುತ್ತವೆ.

ಇಂದು ಸಾಹಿತ್ಯದಲ್ಲಿ ಮತ್ತು ಮುಖ್ಯವಾಗಿ ಸಾಹಿತ್ಯ ಸಂಬಂಧಿ ಚಟುವಟಿಕೆಗಳನ್ನು, ಮೌಲ್ಯಮಾಪನವನ್ನು ಗಮನಿಸಿದರೆ ಇಂತಹ ಒಂದು ನಿಯಂತ್ರಣ ಪ್ರಾಧಿಕಾರವು ಸಾಹಿತ್ಯಕ್ಷೇತ್ರಕ್ಕೂ ಬೇಕೆನಿಸಬಹುದು. ಇದು ಸಾಹಿತ್ಯ ಬಾಹುಳ್ಯದ ಕಾಲ. ದಿನಕ್ಕೆ ಎಷ್ಟೊಂದು ಪುಸ್ತಕಗಳು ಪ್ರಕಟವಾಗುತ್ತವೆಂದು ಮತ್ತು ಸಾಹಿತ್ಯದ ಹೆಸರಿನಲ್ಲಿ ಎಷ್ಟೊಂದು ಕಾರ್ಯಕ್ರಮಗಳು ನಡೆಯುತ್ತವೆಂದು ಲೆಕ್ಕವಿಟ್ಟವರಿಲ್ಲ. ಸಾಹಿತಿಗಳು ಅನಧಿಕೃತ/ಅನಭಿಷಿಕ್ತ ಜನಪ್ರತಿನಿಧಿಗಳು. ವೈಯಕ್ತಿಕವಾಗಿ ಒಬ್ಬನ ಪ್ರತಿಭೆ, ಪಾಂಡಿತ್ಯವು ಬೆಳಕಿಗೆ ಬರಲೇಬೇಕು ಮತ್ತು ಅವನ್ನು ಬೆಳಕು ಕಾಣಿಸುವುದು ಸಮಾಜದ ಕರ್ತವ್ಯ. ಆದರೆ ಇಂದು ಸಾಮೂಹಿಕವಾಗಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಿಗೆ ಲಗಾಮಿಲ್ಲ. ಸಮ್ಮೇಳನಗಳ, ಕಮ್ಮಟಗಳ, ಸಂಕಿರಣಗಳ ಅತಿವೃಷ್ಟಿಯಿಂದ ಎಲ್ಲರೂ ಬಳಲುತ್ತಿದ್ದಾರೆ. ಆದರೆ ಮಾನಹಾನಿ, ಸಾಮಾಜಿಕ ಗೊಂದಲ ಸೃಷ್ಟಿ ಮತ್ತು ಅಶ್ಲೀಲತೆಯ ಹೊರತಾಗಿ ಅಪ್ರಸಕ್ತತೆಯನ್ನು, ಕಳಪೆ ಗುಣಮಟ್ಟವನ್ನು, ನಿಯಂತ್ರಿಸುವವರಿಲ್ಲ.

ದಿನವೂ ಎಂಬಂತೆ ಸಾಹಿತ್ಯಕಮ್ಮಟಗಳು ನಡೆಯುತ್ತವೆ. ಬದುಕಿರುವ ಹಿರಿಯ ಸಾಹಿತಿಯೊಬ್ಬನ ಸಾಧನೆಗಳು, ಅಳಿದ ಹಿರಿಯ ಸಾಹಿತಿಗಳ ಹುಟ್ಟುಹಬ್ಬ, ಪುಣ್ಯತಿಥಿಗಳು ಆತನ ಕುರಿತ ಚರ್ಚೆಗೆ ವೇದಿಕೆಯನ್ನು ಸೃಷ್ಟಿಸುತ್ತಿದ್ದ ಕಾಲವಿತ್ತು. ಈಗ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಸಾಹಿತಿಯ ಪ್ರತೀ ಹುಟ್ಟುಹಬ್ಬಕ್ಕೂ ಒಂದು ಕಾರ್ಯಕ್ರಮ ಸಿದ್ಧಪಡಿಸುವ ಏಜಂಟರಿದ್ದಾರೆ. ಹೀಗೆ ಪ್ರತೀ ವರ್ಷವೂ ಹಬ್ಬವನ್ನು ಏರ್ಪಡಿಸುವಾಗ ಅಥವಾ ಅಭಿನಂದನಾ ಗ್ರಂಥವನ್ನು ಪ್ರಕಟಿಸುವ  ವೆಚ್ಚವನ್ನೂ ಆ ಸಾಹಿತಿಯೇ ಅಥವಾ ಆತನ ಪ್ರಭಾವವಲಯದ ಯಾರಾದರೊಬ್ಬ ಉದ್ಯಮಿ ಮಾಡುತ್ತಾನೆಂಬುದು ಅನೇಕರಿಗೆ ಗೊತ್ತಿರುವುದಿಲ್ಲ. ತಮಾಷೆಗೆ ‘‘ನೀವು ಮುಂದಿನ ಹುಟ್ಟುಹಬ್ಬವನ್ನು ಆಚರಿಸುವಾಗ ಕೇಕಿನ ಬದಲು ನಿಮ್ಮದೊಂದು ಪುಸ್ತಕವನ್ನೇ ಕತ್ತರಿಸಿ ಹಂಚಿ; ಅದನ್ನೆಷ್ಟು ಜೀರ್ಣಿಸಿಕೊಳ್ಳುತ್ತಾರೆಂದು ನೋಡೋಣ’’ ಎನ್ನಬಹುದು.

ಗ್ರಾಮಪಂಚಾಯತ್‌ನಲ್ಲಿ, ಶಾಲಾಕಾಲೇಜುಗಳಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಹೆಚ್ಚೆಂದರೆ ಹತ್ತಾರು ಮಂದಿ ಸಾಹಿತ್ಯಾಸಕ್ತರು ಭಾಗವಹಿಸುತ್ತಾರೆ. ಉಳಿದವರೆಲ್ಲ ಮುಗ್ಧರು; ಇಲ್ಲವೇ ಮೂರ್ಖರು; ಇಲ್ಲವೇ ಧೂರ್ತರು. ಮಾಮೂಲಾಗಿ ಸಂಬಂಧಿತ ಸಂಸ್ಥೆಯ ಮುಖ್ಯಸ್ಥರು ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮಕ್ಕೆ ಹಣಸಹಾಯ ಮಾಡಿದವರು ಅಥವಾ ಸಾಹಿತ್ಯಪ್ರಭಾವಿಗಳು ಮುಖ್ಯ ಅತಿಥಿಯಾಗಿ ನಡೆಯುವ ಇಂತಹ ಕಾರ್ಯಕ್ರಮಗಳಿಗೆ ‘ಜಿಲ್ಲಾಮಟ್ಟ’ದಿಂದ ‘ರಾಷ್ಟ್ರಮಟ್ಟ’ದ ವರೆಗೆ ಯಾವ ಮಟ್ಟವನ್ನೂ ಹಾಕಬಹುದು. ನಡೆಯುವ ವಿಚಾರ ಸಂಕಿರಣದಲ್ಲಿ ಭಾಗವಹಿಸುವವರೂ ಇಂಥವರೇ. ತಾವೇ ಸಾಹಿತ್ಯವನ್ನು ನಡೆಸುತ್ತಿದ್ದೇವೆಂದು ನಂಬುವ ಅನೇಕರಿದ್ದಾರೆ. ‘ಓಡುವ ಗಾಡಿಯ ಕೆಳಗಡೆಯೊಳು ತೂರಿ ಹೋಗುತಲಿದ್ದುದು ಶುನಕ| ತಾನೇ ಗಾಡಿಯನೆಳೆವೆನೆಂದು ಅದು ಬಡಬಡಿಪುದು ಕೊನೆ ತನಕ॥’ ಎಂಬ ಎಸ್.ವಿ. ಪರಮೇಶ್ವರ ಭಟ್ಟರು ಅನುವಾದಿಸಿದ ಸುಭಾಷಿತದ ಸಾಲುಗಳು ನೆನಪಾಗುತ್ತವೆ. ಅನೇಕರು ಹೇಗಾದರೂ ಮಾಡಿ ಇಂತಹ ಕಾರ್ಯಕ್ರಮಗಳಲ್ಲಿ ವೇದಿಕೆಯನ್ನು ಗಿಟ್ಟಿಸುತ್ತಾರೆ. ಅವರಾಡಿದ ಮಾತುಗಳಲ್ಲಿ ತಿರುಳಿದೆಯೋ ಎಂದು ಯೋಚಿಸುವ ಮಂದಿ ಅಪರೂಪವಾದರೂ ಹೊಗಳುವ ಕಂಠಗಳಿಗೆ ಬರಗಾಲವಿರುವುದಿಲ್ಲ. ಭಾಗವಹಿಸುವ ಪ್ರತಿಯೊಬ್ಬರನ್ನೂ ‘ಖ್ಯಾತ’, ‘ಹೆಸರಾಂತ’, ‘ಹಿರಿಯ’ ಎಂದು ಉಲ್ಲೇಖಿಸುವುದು ಈಗ ಪರಿಪಾಠವಾಗಿದೆ. ಹೀಗಾಡಿದ ಮಾತುಗಳು ಎಲ್ಲ ಮಾಧ್ಯಮಗಳ ಆಯಾಯ ಪ್ರಾದೇಶಿಕ ಆವೃತ್ತಿಗಳಲ್ಲೂ ಒಂದೇ ರೀತಿಯಲ್ಲಿ ವರದಿಯಾಗುತ್ತವೆ. ಇವನ್ನು ಆಯಾಯ ಭಾಷಣಕಾರರು ಕತ್ತರಿಸಿಟ್ಟುಕೊಂಡು ತಾವು ರಾಷ್ಟ್ರಮಟ್ಟದ ಖ್ಯಾತಿಯನ್ನು ಪಡೆದೆವೆಂದು ಭ್ರಮಿಸುತ್ತಾರೆ.

ಅದರಲ್ಲೂ ಹಣಕಾಸಿನ ಹೊಣೆಯನ್ನು ಅಕಾಡಮಿ, ಪ್ರಾಧಿಕಾರ, ವಿಶ್ವವಿದ್ಯಾನಿಲಯ ಮುಂತಾದವು ವಹಿಸಿಕೊಂಡಲ್ಲಿ ಎಲ್ಲವೂ ಸುರಳೀತ. ಮೃಷ್ಟಾನ್ನ ಭೋಜನ, ಒಳ್ಳೆಯ ಸಂಭಾವನೆ, ಹಾರ ತುರಾಯಿ ಸಹಿತ ಸ್ಮರಣಿಕೆ, ಹೀಗೆ ಪುಗಸಟ್ಟೆ ಸಂಪಾದನೆ ಯಾರಿಗೆ ಬೇಡ? ಇವುಗಳ ಪೈಕಿ ಮನೆಯ ವರೆಗೆ ಕೊಂಡೊಯ್ಯಲು ಕಷ್ಟ್ಟಕರವಾಗುವುದೆಂದರೆ ಸ್ಮರಣಿಕೆ. ಇದರ ಬಗ್ಗೆ ಈಗಂತೂ ಯಾರಿಗೂ ಗೌರವವಿಲ್ಲ. ಸಮ್ಮೇಳನಗಳಲ್ಲಿ ಸಮ್ಮೇಳನಾಧ್ಯಕ್ಷರಿಂದ ಕೊನೆಯ ಲೈಟ್‌ಬಾಯ್‌ವರೆಗೂ ಒಂದೇ ವಿನ್ಯಾಸದ (ಕೆಲವು ಬಾರಿ ಮಾತ್ರ ಭಿನ್ನ ಗಾತ್ರದ) ಸ್ಮರಣಿಕೆಗಳನ್ನು ಸಗಟು ಖರೀದಿ ಮಾಡಿ ತಂದು ಹಂಚಲಾಗುತ್ತದೆ. ಇವನ್ನು ಕೊಡು-ಕೊಳ್ಳುವಾಗ ಒಂದು ಫೋಟೋ. ಅದು ಮದುವೆ ಆಲ್ಬಮ್‌ನಂತೆ ಪಡೆದವನಿಗಷ್ಟೇ ಮುಖ್ಯ. ಕೊಟ್ಟವನಿಗೆ ತಾನು ಯಾರಿಗೆ ಯಾಕೆ ಯಾವುದನ್ನು ಕೊಟ್ಟಿದ್ದೇನೆಂಬುದೇ ಮರೆತುಹೋಗಿರುತ್ತದೆ. ಈಗ ಗತಿಸಿದ ಕನ್ನಡದ ಒಳ್ಳೆಯ ಕವಿಗಳಾಗಿದ್ದ ನನ್ನ ಗೆಳೆಯರೊಬ್ಬರು ಇದರಿಂದ ರೋಸಿಹೋಗಿ ತಮಗೆ ಸಿಕ್ಕಿದ ಅಷ್ಟೂ ಸ್ಮರಣಿಕೆಗಳನ್ನು ಒಂದು ಗೋಣಿ ಚೀಲದಲ್ಲಿ ತುಂಬಿಟ್ಟರೆಂದೂ ಅನಂತರ ಯಾವಾಗಲೋ ಗುಜರಿಗೆ ನೀಡಿದರೆಂದೂ ಕೇಳಿದ್ದೇನೆ. ನನ್ನಲ್ಲೂ ಒಂದಿಷ್ಟಿವೆ. ಅವಿನ್ನೂ ನನ್ನಲ್ಲೇ ಉಳಿಯುವ ಕನಸು ಕಾಣುತ್ತಿವೆಯೇನೋ ಗೊತ್ತಿಲ್ಲ.

ಈಗಷ್ಟೇ ಮೈಸೂರಿನ ದಸರಾ ಕವಿಗೋಷ್ಠಿಯು ಸಾಹಿತ್ಯೇತರ ಕಾರಣಗಳಿಗಾಗಿ ಸಾಕಷ್ಟು (ಕು)ಪ್ರಸಿದ್ಧಿ ಪಡೆದಿದೆ. ಕೀರ್ತಿಶೇಷರನ್ನು ವೇದಿಕೆಯಲ್ಲಿ ಕೂರಿಸುವ ಸಿದ್ಧತೆ ನಡೆದಿದೆ. ಹಿಂದೆಲ್ಲ ಯಾವುದೇ ಕಾರ್ಯಕ್ರಮದ ಉದ್ಘಾಟಕರ, ಅಧ್ಯಕ್ಷರ ಜೊತೆ ಇಡೀ ಕಾರ್ಯಕ್ರಮದ ರೂಪುರೇಷೆಗಳನ್ನು ಚರ್ಚಿಸುವ ಸೌಜನ್ಯವಿತ್ತು ಈಗ ಹಾಗಿಲ್ಲ. ಬೇಕಾದರೆ ಬನ್ನಿ ಎಂಬ ಧೋರಣೆಯೇ ಹೆಚ್ಚು. ಸಮಾರಂಭದ ಆಮಂತ್ರಣ ಪತ್ರಿಕೆ ಕೊನೇ ಘಳಿಗೆಯಲ್ಲಿ ತಲುಪುವುದರಿಂದ ಈ ಮುಖ್ಯರಿಗೆ ಕಾರ್ಯಕ್ರಮದ ಆಭಾಸಗಳು ಪರಿಚಯವಾಗುವುದೇ ಇಲ್ಲ; ಅವು ಘಟಿಸುವಾಗಲೇ ಅರಿವಾಗುವುದು.

ಸಾಹಿತ್ಯಕ್ಕೆ ಹನುಮದ್ವಿಕಾಸದಂತೆ ಎಲ್ಲೆಯಿಲ್ಲ. ಆದರೆ ಸಾಹಿತ್ಯದ ಹೃದಯ, ಮೆದುಳು, ಮನಸ್ಸು, ಚಿಂತನೆ ವಿಕಾಸಗೊಳ್ಳುವ ಬದಲು ಬಾಲವಷ್ಟೇ ಬೆಳೆಯುವುದನ್ನು ಈಗ ಕಾಣುತ್ತೇವೆ. ಪ್ರತಿಯೊಬ್ಬನಿಗೂ ಪ್ರಖ್ಯಾತಿಯ ಕನಸು. ಈಗ ನಡೆಯುವ ಸಾಹಿತ್ಯ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಗಳೆಂದರೆ ಒಂದೊಂದು ಬಳಗದ ಪ್ರವೀಣರು. ಅವರೆದುರು ‘ಕರ್ತಾರ’ನೂ ಸೋಲಬೇಕು.

ಇಂದು ಹಾಸ್ಯ ಕವಿಗೋಷ್ಠಿಯೇ ಬೇಕೆಂದಿಲ್ಲ. ಎಲ್ಲ ಗೋಷ್ಠಿಗಳೂ ಹಾಸ್ಯಗೋಷ್ಠಿಗಳಾಗಿ ಪರಿಣಮಿಸುತ್ತವೆ. (೧೯೯೦ರ ದಶಕದಲ್ಲಿ ಪ್ರಕಟವಾದ ನಾಡಿಗ್ ಅವರ ವ್ಯಂಗ್ಯ ಚಿತ್ರವೊಂದರಲ್ಲಿ ‘‘ಅವರ ಖಳನಾಯಕ ಪಾತ್ರವನ್ನು ನೋಡಿ ನಕ್ಕೂನಕ್ಕೂ ಸುಸ್ತಾದೆ’’ ಎಂಬ ಮಾತಿದೆ!) ಯಾವುದೇ ಸಾಹಿತ್ಯಗೋಷ್ಠಿಗಳಲ್ಲೂ ನಗುವುದಕ್ಕೆ ಬೇಕಷ್ಟು ಅವಕಾಶಗಳಿವೆ.ಜನಪ್ರಿಯತೆಯ ಮತ್ತು ಶ್ರೇಷ್ಠತೆಯ ಮೋಹ-ವ್ಯಾಮೋಹ ಎಂಥವರನ್ನೂ ಬಲಿತೆಗೆದುಕೊಳ್ಳುತ್ತದೆ. ಹೇಗಾದರೂ ವೇದಿಕೆ ಮತ್ತು ಪ್ರಚಾರ ಸಿಗಬೇಕು, ಎಂಬುದೇ ಎಲ್ಲ ವಯೋಮಾನದ ಆಸೆ.

ಇವೆಲ್ಲವನ್ನೂ ಮೀರಿಸುವ ಯತ್ನವೆಂದರೆ ಕೃತಿವಿಮರ್ಶೆ. ಪತ್ರಿಕೆಯಲ್ಲಿ ಸಾದರ ಸ್ವೀಕಾರದಿಂದ ಮೊದಲ್ಗೊಂಡು ದೀರ್ಘ ವಿಮರ್ಶೆಯ ವರೆಗೆ(ಸತ್ಯನಾರಾಯಣ ಪೂಜೆಯಿಂದ ಮದುವೆ ಸಮಾರಂಭದ ವರೆಗೆ ಎಂಬಂತೆ!) ಬರೆಯುವ ಅನೇಕರು ವಸ್ತುನಿಷ್ಠೆಯನ್ನೇ ಮರೆತಂತಿದೆ. ಸಾವಿರಾರು ವರ್ಷಗಳ ಇತಿಹಾಸದ ಕನ್ನಡ ಸಾಹಿತ್ಯದಲ್ಲಿ ಉಳಿದವರು ಕೆಲವೇ ಮಂದಿ. ಕಳೆದ ಶತಮಾನದ ಆದಿಯಿಂದ ಈ ಸಂಖ್ಯೆಯು ಸಹಜವಾಗಿಯೇ ಅಂದರೆ ಪ್ರಾಯಃ ಮುದ್ರಣದ ಅನುಕೂಲದಿಂದಾಗಿ ಹೆಚ್ಚಾಯಿತು. ಆದರೂ ಕೃತಿಯ ಗುಣಮಟ್ಟದ ಬಗ್ಗೆ ಲೇಖಕರು ಸ್ವಲ್ಪವಾದರೂ ಚಿಂತಿತರಾಗಿದ್ದರು. ಪಂಥಗಳೇನೇ ಇರಲಿ, ಓದಿಸಿಕೊಂಡು ಹೋಗುವ ಪುಸ್ತಕಗಳ ಸಂಖ್ಯೆ ಸಾಕಷ್ಟಿದ್ದುದರಿಂದ ಮನೆಮನೆಯಲ್ಲೂ ಪ್ರಾಮಾಣಿಕವಾದ ಸಾಹಿತ್ಯಾಸಕ್ತಿ ಮತ್ತು ಕೆಲವು ಮನೆಗಳಲ್ಲಾದರೂ ಸಾಹಿತ್ಯಾಭಿವ್ಯಕ್ತಿಯಿರುತ್ತಿತ್ತು. ಈಗ ಹಿರೀಕರನೇಕರು ನೆನಪಿನಲ್ಲುಳಿಯದಂತಾಗಿದೆ. ಪಂಥ-ಪಂಗಡಗಳ ಹೆಸರಿನಲ್ಲಿ ಅನೇಕರನ್ನು ಮರೆಸಲು ಯತ್ನಿಸಲಾಗುತ್ತಿದೆ. ಇಂದು ಜನಪ್ರಿಯರಾಗಲೆತ್ನಿಸುವ ಅನೇಕರು ಇದಕ್ಕಾಗಿ ವಿಮರ್ಶೆಯ ಕಲೆ-ಕಲಿಗಳನ್ನು ಸೃಷ್ಟಿಸುತ್ತಿದ್ದಾರೆ. ಪತ್ರಿಕಾ ವಿಮರ್ಶೆಗಳು ಬಹುಪಾಲು ಅಭಿನಂದನಾ ಭಾಷಣದಂತಿರುತ್ತವೆ. ‘ನಾನೇರುವೆತ್ತರಕೆ ನೀನೇರಬಲ್ಲೆಯಾ?’ ಎಂದು ಕುವೆಂಪು ಸೂಚ್ಯವಾಗಿ ಚುಚ್ಚಿದರೂ ಈಗ ಅನೇಕರು ವಿಮರ್ಶಕರುಗಳ ಹೆಗಲೇರಿ ಕುಳಿತು ಮೆರವಣಿಗೆಗೊಳ್ಳುತ್ತಿರುವುದು ಸುಳ್ಳೇನಲ್ಲ. ಪಲ್ಲಕ್ಕಿ ಮೆರವಣಿಗೆಯು ಮಠಾಧಿಪತಿಗಳಷ್ಟೇ ಅಲ್ಲ, ನಮ್ಮ ಅನೇಕ ಸಾಹಿತಿಗಳಿಗೂ ಇಷ್ಟ. ಇದಕ್ಕೆ ಸಹಕರಿಸುವವರನ್ನೂ ವಿಮರ್ಶಕರೆಂದು ಹೇಳಲಾಗುತ್ತಿದೆ. ಅಪವಾದಗಳನ್ನು ಹೊರತುಪಡಿಸಿದರೆ ಪರಿಚಯವಿಲ್ಲದ, ಬಳಗಕ್ಕೆ ಸೇರದ, ಗೆಳೆಯರಲ್ಲದ ಯಾವ ಜೀವಂತ ಬರಹಗಾರನ ಕೃತಿಯೂ ವಿಮರ್ಶೆಗೊಳಪಡುವುದಿಲ್ಲ. ಬರೆದವರು ಶಿಕ್ಷಕರೋ, ಪ್ರಾಧ್ಯಾಪಕರೋ ಆದರೆ ಮುಗಿಯಿತು- ಅವರ ಶಿಷ್ಯರೆಲ್ಲರೂ ಅವರ ಕೃತಿಗಳ ಬಗ್ಗೆ ಬರೆಯುತ್ತಾರೆ, ಹಾಡಿ ಹೊಗಳುತ್ತಾರೆ. ಇದು ಓದಲೇಬೇಕಾದ ಪುಸ್ತಕವೆಂದು ಬಣ್ಣಿಸುತ್ತಾರೆ. ಅಂಥವರೇ ಲೇಖಕರ ದೃಷ್ಟಿಯಲ್ಲಿ ಉತ್ತಮ ಗ್ರಹಿಕೆಯ ಓದುಗರಾಗುತ್ತಾರೆ. ಹೀಗಾಗಿ ಕಳೆದ ಒಂದೆರಡು ದಶಕಗಳಲ್ಲಿ ಬಹುಪಾಲು ಲೇಖಕರು ತಮ್ಮ ಪುಸ್ತಕದ ಬಗ್ಗೆ ಬರೆದವನೇ ಶ್ರೇಷ್ಠ ವಿಮರ್ಶಕ ಎಂದು ಭಾವಿಸಿದ್ದಾರೆ. ಇದರಿಂದ ವಂಚಿತರಾದ ಲೇಖಕರು, ವಂಚಿತವಾದ ಕೃತಿಗಳು ಬೇಕಷ್ಟಿವೆ. ಅವರಲ್ಲಿ ಕೆಲವರಾದರೂ ಭವಭೂತಿಯಂತೆ ಕಾಲಾಂತರದ ಮೌಲ್ಯನಿರ್ಣಯಕ್ಕೆ ಕಾಯಬೇಕಿದೆ.

ಕೊನೆಗೂ ಉಳಿಯಬೇಕಾದ್ದೇನು? ಕಳೆದ ಸುಮಾರು ಸಾವಿರಕ್ಕೂ ಮೀರಿದ ಸಾಹಿತ್ಯ ಇತಿಹಾಸದಲ್ಲಿ ಉಳಿದವರು ಕೆಲವೇ ಮಂದಿ. ಅವರನ್ನು ಓದಿದವರು ಇನ್ನೂ ಕೆಲವರು. ಓದಿ ಜೀರ್ಣಿಸಿದವರು ತೀರಾ ಕಡಿಮೆ. ಓದಲೇ ಬೇಕೆಂದಿಲ್ಲ. ತಮ್ಮ ಪಾಡಿಗೆ ತಾವು ಬದುಕುವ ಮಂದಿಗೆ ಸಾಹಿತ್ಯ-ಸಂಗೀತ ಅಥವಾ ಯಾವುದು ಬದುಕಿಗೆ ಬಹು ಮುಖ್ಯವೆಂದು ಸ್ವಘೋಷಿತ ಬುದ್ಧಿವಂತರು ತಿಳಿಯುತ್ತಾರೋ ಅವನ್ನು ಮರೆತು ಸುಖೀ ಬದುಕನ್ನು ಬಾಳಬಲ್ಲ ಜನರೇ ಹೆಚ್ಚು. ಅವರು ಈ ಎಲ್ಲ ಗೊಂದಲ-ತಳಮಳವನ್ನು ಅಲಕ್ಷಿಸುತ್ತಾರೆ. ಅನ್ನ, ವಸತಿ ಮತ್ತು ಬಟ್ಟೆಯಿಂದ ಆಚೆಗೆ ಸೀಮಿತ ಮನರಂಜನೆಯನ್ನಷ್ಟೇ ಅವರು ಬಯಸುತ್ತಾರೆ. ಇವುಗಳ ಪೈಕಿ ಪ್ರಕೃತಿದತ್ತ ಮನರಂಜನೆಯನ್ನು ಅನುಭವಿಸುವವರೇ ಹೆಚ್ಚು. ಮಕ್ಕಳ ಅಳು-ನಗು, ಆಟ-ಪಾಠ ಲಾಲನೆ-ಪಾಲನೆ ಇವುಗಳಲ್ಲೇ ಬಹುಪಾಲು ಹೆತ್ತವರ ಕಾಲ ಕಳೆಯುತ್ತದೆ. ರಸ್ತೆಯಲ್ಲಿ ಹೋಗುವಾಗ ಕಾಣುವ ಒಂದು ಕುತೂಹಲದ ಸಂಗತಿಯೆಂದರೆ ಮರದ ನೆರಳಲ್ಲೋ, ಕಟ್ಟೆ-ದಿಬ್ಬಗಳಲ್ಲೋ, ಪೂಜಾಸ್ಥಾನದ ಹೊರಗಿನ ಕಟ್ಟೆಗಳಲ್ಲೋ, ಗೂಡಂಗಡಿಗಳ ಹೊರಗೋ ಕುಳಿತು ಚಿಂತೆಯಿಲ್ಲದೆ ಬೀಡಿ ಸೇದಿಕೊಂಡು ಗಂಟೆಗಟ್ಟಲೆ ಸಮಯ ಹರಟುವ ಜನರಿಗೆ ಜಗತ್ತಿನ ಇತರ ವಿದ್ಯಮಾನಗಳ ಬಗ್ಗೆ ಆಸಕ್ತಿಯಿರುವುದಿಲ್ಲ. ಸಮುದ್ರದೆದುರು, ನದಿ-ಹೊಳೆಗಳ ಎದುರು ಇಡೀ ದಿನ ಕುಳಿತು ಆನಂದಿಸುವ ಜನರಿದ್ದಾರೆ. ಪ್ರಕೃತಿಯೊಂದಿಗೆ ತಲ್ಲೀನರಾಗುವ ಜನರಿಗೆ ಲೌಕಿಕದ ಮಹದಾಸೆಗಳೇ ಇರುವುದಿಲ್ಲ. ಕಾಡ ಸಮೀಪ ವಾಸವಿರುವ ಹಾಡಿಗಳ ಜನರು ಅಮಲಿನಲ್ಲೂ ತಮ್ಮ ಪಾಡಿಗೆ ತಾವು ನಗುತ್ತ, ಅಳುತ್ತ, ಹಾಡುತ್ತ ಅಧ್ಯಯನಶೀಲರ, ಸಂಶೋಧಕರ ಪಾಲಿಗೆ ಕೂಳಾಗುತ್ತಾರೆ. ತಮ್ಮ ಹೆಸರಿನ ಆಧಾರದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸಾಹಿತ್ಯೋದ್ಯಮಗಳು ಬೇರೆಬೇರೆ ಕಡೆ ಚಿಗುರುವುದು ಅವರಿಗೆ ಗೊತ್ತಿರುವುದಿಲ್ಲ. ಜಾನಪದ ಹಾಡು-ಕುಣಿತಗಳು ಮಾಧ್ಯಮಗಳಲ್ಲಿ ವಿಶ್ವದೆಲ್ಲೆಡೆ ಅಥವಾ ದೇಶಾದ್ಯಂತ ಭರ್ಜರಿಯಾಗಿ ಪ್ರಸಾರವಾಗುವಾಗ ಹೀಗೆ ಹಾಡಿದವರು, ಕುಣಿದವರು, ಈ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆಯೇ ಎಂದು ಯಾರೂ ಲೆಕ್ಕಿಸುವುದಿಲ್ಲ. ಅನುಭವಿಸುವವರು ಮತ್ತು ಅನುಭವಕ್ಕೆ ತಲೆಕೊಟ್ಟ ಎರಡು ಗುಂಪುಗಳು ಪ್ರತ್ಯೇಕ. ಇದು ಸಹಜ ಮುಗ್ಧ ಬದುಕು. ಇವರನ್ನು ಯಾರೂ ನೀವೇಕೆ ನಮ್ಮ ಸಾಂಸ್ಕೃತಿಕ ಬದುಕಿನಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಕೇಳಲಾಗದು.

ಯಾವುದೇ ವಿಚಾರ-ವಿವಾದದ ಕುರಿತು ನೀಡಬಲ್ಲ ಅತ್ಯಂತ ಕೃತಘ್ನ ಪ್ರತಿಕ್ರಿಯೆಯೆಂದರೆ ಅದು ತನಗೆ ಸಂಬಂಧಿಸಿಲ್ಲವೆಂದು ವರ್ತಿಸಿ ಅಲಕ್ಷಿಸುವುದು. ಇಂದು ನಮ್ಮ ಸುತ್ತ ನಡೆಯುವ ಅಸಂಖ್ಯ ಅಕ್ರಮಗಳ ಕುರಿತು ಹಣ, ಮದ್ಯ, ಮತ್ತಿತರ ಆಮಿಷಗಳಿಗೆ ತುತ್ತಾಗಿ ತಾವೇನು ಮಾಡುತ್ತಿದ್ದೇವೆಂಬ ಹಾಗೂ ತಮ್ಮ ನಡೆನುಡಿಯ ಪರಿಣಾಮದ ಅರಿವೇ ಇಲ್ಲದೆ ಕಾರ್ಯವನ್ನೆಸಗುವವರು ಒಂದು ವರ್ಗವಾದರೆ ತಾವು ಮಾಡದಿರುವ ಮತ್ತು ಮಾಡುತ್ತಿರುವ ಸಂಗತಿಗಳ ಪೂರ್ಣ ಅರಿವಿದ್ದೂ ಸ್ವಾರ್ಥಕ್ಕಾಗಿಯೋ, ಪ್ರಚಾರಕ್ಕಾಗಿಯೋ, ಪ್ರವೃತ್ತರಾಗುವ, ಸುಮ್ಮನಿರುವ ಮಂದಿ ಅಪಾಯಕಾರಿ. ಮೌನವೇ ಆಭರಣವಾಗಿರುವವರಿದ್ದಾರೆ; ಆದರೆ ದ್ರೌಪದೀ ವಸ್ತ್ರಾಪಹಾರಕ್ಕೆ ಬೆನ್ನುಹಾಕುವ ಭೀಷ್ಮದ್ರೋಣರಿಗೆ ಏನು ಹೇಳೋಣ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)