ಹೃದಯಕ್ಕೊಂದು ದಿನ
ಸಾಂದರ್ಭಿಕ ಚಿತ್ರ (PTI)
ಹೃದಯದ ಅರೋಗ್ಯ ಕಾಳಜಿ ಕುರಿತು ವಿಶ್ವದ ಜನರಿಗೆ ಅರಿವು ಮೂಡಿಸಲು ಜಾಗತಿಕವಾಗಿ ಪ್ರತಿವರ್ಷ ಸೆಪ್ಟೆಂಬರ್ 29ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ಹೃದ್ರೋಗ ಜಾಗತಿಕ ಮಟ್ಟದಲ್ಲಿ ನಂ.1 ಮಾರಣಾಂತಿಕ ರೋಗ ಎಂಬ ಬಗ್ಗೆ ಜಗತ್ತಿನಾದ್ಯಾಂತ ಜನರಿಗೆ ಮಾಹಿತಿ ನೀಡಲು ಮತ್ತು ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಹೃದಯ ಒಕ್ಕೂಟವೂ ವಿಶ್ವ ಹೃದಯ ದಿನದ ಪರಿಕಲ್ಪನೆಯನ್ನು ಸೃಷ್ಟಿಸಿದೆ.
ಹೃದಯಾಘಾತ ಮತ್ತು ಹೃದಯಾಘಾತದಿಂದ ಉಂಟಾಗುವ ಆಕಸ್ಮಿಕ ಮರಣಗಳು ಆಧುನಿಕ ಸಮಾಜದ ಬಹು ದೊಡ್ಡ ಪಿಡುಗಾಗಿದೆ. ಕೋಟ್ಯಂತರ ಜನರು ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಸೂಕ್ತ ಮುಂಜಾಗ್ರತ ಕ್ರಮ ಕೈಗೊಳ್ಳದಿದ್ದರೆ ಈ ಶತಮಾನ ತುಂಬುವುದರೊಳಗೆ ಭಾರತದಲ್ಲಿ ಪ್ರತಿ ಇಬ್ಬರಲ್ಲಿ ಒಬ್ಬರು ಹೃದಯಾಘಾತಕ್ಕೆ ತುತ್ತಾಗುವ ಸಂಭವವಿದೆಯಂದು ತಿಳಿದು ಬಂದಿದೆ.
ಹೃದಯಾಘಾತವು ಇಷ್ಟು ಪ್ರಮಾಣದಲ್ಲಿ ಹರಡಲು ಕಾರಣವೇನು?
ಇತ್ತೀಚಿನ ವರ್ಷಗಳಲ್ಲಿ ಜನರ ಜೀವನ ಶೈಲಿಯೇ ಬದಲಾಗಿದ್ದು, ಹೃದಯಾಘಾತವನ್ನು ತಡೆಗಟ್ಟಬೇಕಾದರೆ ವೈಯಕ್ತಿಕವಾಗಿಯೂ, ಸಾಮೂಹಿಕವಾಗಿಯೂ ಇಡೀ ಜನಾಂಗವೇ ಎಚ್ಚೆತ್ತು ದಿನನಿತ್ಯದ ಶೈಲಿಯನ್ನು ಕೂಡಲೇ ಬದಲಾಯಿಸಿಕೊಳ್ಳಬೇಕು. ಹೃದ್ರೋಗಕ್ಕೆ ಮುಖ್ಯವಾದ ಕಾರಣಗಳು ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ರೋಗಗಳು. ಅದರಲ್ಲೂ ಅಧಿಕ ರಕ್ತದೊತ್ತಡವು ಗುಪ್ತವಾಗಿ ಹೃದಯಕ್ಕೆ ಹಾನಿ ಮಾಡುತ್ತಾ ಬರುತ್ತದೆ. ಸದ್ದಿಲ್ಲದೇ ಒಂದು ವಯಸ್ಸಿನ ನಂತರ ಪ್ರತಿಯೊಬ್ಬರೂ ಕಾಲ ಕಾಲಕ್ಕೆ ರಕ್ತದೊತ್ತಡ, ರಕ್ತ ಮತ್ತು ಮೂತ್ರದ ಸಕ್ಕರೆ ಅಂಶ ಪರೀಕ್ಷೆ ಮಾಡಿಸಿಕೊಂಡು ಈ ರೋಗಗಳು ಕಂಡು ಬಂದಲ್ಲಿ ಸೂಕ್ತ ವೈದ್ಯ ಸಲಹೆಯಿಂದ ಈ ರೋಗಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು.
ಧೂಮಪಾನ, ಮದ್ಯಪಾನ ಹೃದಯಾಘಾತಕ್ಕೆ ಅಹ್ವಾನ
ಧೂಮಾಪಾನಿಗಳು ಸಂಪೂರ್ಣವಾಗಿ ಈ ಚಟವನ್ನು ಬಿಡಬೇಕು. ಮದ್ಯಪಾನವನ್ನು ನಿಷೇಧಿಸಬೇಕು. ಕೆಲವು ಬಗೆಯ ಮದ್ಯಪಾನಗಳು ಹೃದಯ ಬೇನೆಗೆ ಒಳ್ಳೆಯದು ಎಂಬ ಊಹಪೋಹಗಳು ಕೇಳುತ್ತೇವೆ. ಮದ್ಯಪಾನ ಮಾಡದೆ ಇರುವುದು ಜಾಣತನ.
ಕುಳಿತಲ್ಲೇ ಕುಳಿತು ದೈಹಿಕ ಚಟುವಟಿಕೆ ಇಲ್ಲದಿರುವಿಕೆ ಕೂಡಾ ಹೃದಯಾಘಾತ ತಂದುಕೊಡುವ ರೋಗಗಳಿಗೂ ತವರುಮನೆ. ಮಿತವಾಗಿ ತಿನ್ನಬೇಕು. ಶರೀರದ ಬೊಜ್ಜನ್ನು ಕರಸಗಿಸಬೇಕು. ದೈಹಿಕ ವ್ಯಾಯಾಮವನ್ನು ಪ್ರತಿದಿನ ಚಾಚುತಪ್ಪದೆ ಮಾಡಬೇಕು. ದೈಹಿಕ ಶ್ರಮ ಬೊಜ್ಜನ್ನು ಕರಗಿಸುತ್ತದೆ,ರಕ್ತದೊತ್ತಡ ಮಧುಮೇಹ ರೋಗಗಳನ್ನು ಇಳಿಸುತ್ತದೆ. ರಕ್ತದಲ್ಲಿನ ಕೊಲೆಸ್ಟ್ರೋಲ್ ಅನ್ನು ಕಡಿಮೆ ಮಾಡುತ್ತದೆ. ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಮನಸ್ಸಿಗೆ ಆಹ್ಲಾದಕರವನ್ನುಂಟು ಮಾಡುತ್ತದೆ. ಹೃದಯಾಘಾತವನ್ನು ಹಿಮ್ಮೆಟ್ಟುತ್ತದೆ. ರಕ್ತದಲ್ಲಿ ಕೊಲೆಸ್ಟ್ರೋಲ್ ಅಧಿಕವಾಗಿರುವವರಲ್ಲಿ ಹೃದಯಾಘಾತ ಹೆಚ್ಚು. ಫಾಸ್ಟ್ ಫುಡ್, ಬೇಕರಿ ತಿಂಡಿಗಳು, ಹೆಪ್ಪುಗಟ್ಟುವ ಜಿಡ್ದುಗಳನ್ನು ಕಡಿಮೆ ಪ್ರಮಾಣದಲ್ಲಿ ತಿನ್ನುವುದರಿಂದಲೂ, ಕೆಲವು ಮದ್ದುಗಳ ಪ್ರಯೋಗದಿಂದಲೂ ರಕ್ತದಲ್ಲಿ ಕೊಲೆಸ್ಟ್ರೋಲ್ ಕಡಿಮೆ ಮಾಡಿಕೊಳ್ಳಬಹುದು.
ಆಧುನಿಕ ಜೀವನ, ಅದರಲ್ಲೂ ನಗರ ಪ್ರದೇಶಗಳ ಜೀವನ ತರಾತುರಿ ಜೀವನ, ಕೂರಲು ಸಮಯವಿಲ್ಲ ನಿಲ್ಲಲು ಸಮಯವಿಲ್ಲ, ಮಲಗಿ ವಿಶ್ರಮಿಸಲು ವ್ಯವಧಾನವಿಲ್ಲ. ದುಡಿಯಬೇಕು ದುಡಿಯುತ್ತಲೇ ಇರಬೇಕು. ಸಾಧಿಸಬೇಕು, ಸಾಧಿಸಿ ಗೆಲ್ಲಬೇಕು. ಅದು ತುರ್ತಾಗಿ ಆಗಬೇಕು. ಇದು ಸಮಾಜದ ಆಗ್ರಹ. ಜೀರ್ಣಿಸಿಕೊಳ್ಳುವ ಶಕ್ತಿ ಇರಲಿ ಇಲ್ಲದಿರಲಿ ತಿನ್ನಬೇಕು. ತಿನ್ನುತ್ತಲೇ ಇರಬೇಕು. ಫಲಿತಾಂಶ ಸದಾ ಜಿಜ್ಞಾಸೆ, ಅದರಿಂದ ಹೃದಯಾಘಾತ. ತರಾತುರಿಗೆ ಬಲಿಯಾಗಬಾರದು. ತಮ್ಮ ದೈಹಿಕ, ಮಾನಸಿಕ ಶಕ್ತಿ ಇರುವಷ್ಟು ಕಷ್ಟ ಪಡಬೇಕು. ಮನಶಾಂತಿ ಕಳೆದುಕೊಳ್ಳಬಾರದು. ದೇಹಕ್ಕೂ, ಮನಸ್ಸಿಗೂ ನಿತ್ಯ ತಕ್ಕಷ್ಟು ವಿಶ್ರಾಂತಿ ಬೇಕೇ ಬೇಕು. ಹೀಗೆ ತಾಯಿಯ ಗರ್ಭದಿಂದ ನಮ್ಮ ಉಸಿರಿನ ಕೊನೆಯವರೆಗೂ ಕೆಲಸ ಮಾಡುವ ಹೃದಯವನ್ನು ಜೋಪಾನ ಮಾಡಿಕೊಳ್ಳಬೇಕು.
ವಿಶ್ವ ಹೃದಯ ಒಕ್ಕೂಟದ ಪ್ರಕಾರ, ಅನಾರೋಗ್ಯಕರ ಆಹಾರ, ತಂಬಾಕು ಸೇವನೆ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಆಲ್ಕೋಹಾಲ್ ಬಳಕೆಯಂತಹ ನಾಲ್ಕು ಪ್ರಮುಖ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸುವ ಮೂಲಕ 80% ಅಕಾಲಿಕ ಮರಣಗಳನ್ನು (ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ) ರಕ್ಷಿಸಬಹುದು. ಜನಸಾಮಾನ್ಯರು ಹೃದಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು ಪಡೆದು ಅಕಾಲಿಕವಾಗಿ ಸಂಭವಿಸುವ ಸಾವುಗಳು ಎದುರಾಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು.