ಮನೋರೋಗ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಗೆ ‘ಗಾಂಧಿ ಸೇವಾ ಪ್ರಶಸ್ತಿ'
ಬೆಂಗಳೂರು, ಸೆ. 29: ಮನೋರೋಗ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಅವರನ್ನು 2022ನೆಸಾಲಿನ ಪ್ರತಿಷ್ಠಿತ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ'ಗೆ ಆಯ್ಕೆ ಮಾಡಲಾಗಿದೆ.
ಹೈಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯ ತೀರ್ಮಾನವನ್ನು ಅಂಗೀಕರಿಸಿ ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಆದೇಶ ಹೊರಡಿಸಿದೆ. ಅ.2ರ ಗಾಂಧಿ ಜಯಂತಿಯಂದು ನಗರದ ಗಾಂಧಿ ಭವನದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮನೋರೋಗ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಅವರಿಗೆ 5ಲಕ್ಷ ರೂ.ನಗದು ಒಳಗೊಂಡ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರೂ ಆಗಿರುವ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಅವರೂ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ವ್ಯಕ್ತಿ ಚಿತ್ರ: ರಾಷ್ಟ್ರೀಯ ಮಾನಸಿಕ ಮತ್ತು ನರರೋಗಗಳ ವಿಜ್ಞಾನ ಸಂಸ್ಥೆ(ನಿಮ್ಹಾನ್ಸ್)ಯಲ್ಲಿ 45ಕ್ಕೂ ಹೆಚ್ಚು ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿ ಹಾಗೂ ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ಶಿಕ್ಷಣಧಾರೆ ಎರೆದಿರುವ ಡಾ.ಸಿ.ಆರ್.ಚಂದ್ರಶೇಖರ್ ಅವರು 50ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ. ಅಲ್ಲದೆ, ಡಾ.ಸಿ.ಆರ್.ಚಂದ್ರಶೇಖರ್ ಅವರು 40ಸಾವಿರಕ್ಕೂ ಹೆಚ್ಚು ಜನರಿಗೆ ಪತ್ರ ಮುಖೇನ ವೈದ್ಯಕೀಯ ಸಲಹೆ ಕೊಟ್ಟಿದ್ದಾರೆ.
ಅಂತೆಯೇ, 30ಸವಿರಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ ಹಾಗೂ 20ಸಾವಿರಕ್ಕೂ ಹೆಚ್ಚು ಜನರಿಗೆ ಆಪ್ತ ಸಮಾಲೋಚಕರ ತರಬೇತಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ತಾವು ಸೇವೆ ಸಲ್ಲಿಸಿದ ನಿಮ್ಹಾನ್ಸ್ ಸಂಸ್ಥೆಗೆ 1.09ಲಕ್ಷ ರೂ.ಗಳನ್ನು ದೇಣಿಗೆ ನೀಡಿ ಮಾನವತೆ ಮೆರೆದಿರುವ ಡಾ.ಸಿ.ಆರ್.ಚಂದ್ರಶೇಖರ್ ಅವರು 1 ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಕನ್ನಡ ಭಾಷೆಯಲ್ಲಿ 280 ಮತ್ತು ಆಂಗ್ಲಭಾಷೆಯಲ್ಲಿ 40 ಪುಸ್ತಕಗಳನ್ನು ಬರೆದಿದ್ದಾರೆ.
ಈ ಎಲ್ಲ ಗಮನಾರ್ಹ ಸಾಧನೆಗಳನ್ನು ಪರಿಗಣಿಸಿ ಡಾ.ಸಿ.ಆರ್.ಚಂದ್ರಶೇಖರ್ ಅವರಿಗೆ ಅತ್ಯಂತ ಅಭಿಮಾನ ಹಾಗೂ ಗೌರವಪೂರ್ವಕವಾಗಿ 2022ನೆಸಾಲಿನ ರಾಜ್ಯ ಸರಕಾರದ ಪ್ರತಿಷ್ಠಿತ ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ.ಪಿ.ಎಸ್.ಹರ್ಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.