varthabharthi


ಚಿತ್ರ ವಿಮರ್ಶೆ

ಕಾಂತಾರ: ಸಾಮಾನ್ಯ ಚಿತ್ರಕ್ಕೆ ಅಸಾಮಾನ್ಯ ಚೌಕಟ್ಟು

ವಾರ್ತಾ ಭಾರತಿ : 2 Oct, 2022
ಶಮಿತಾ ಶೆಟ್ಟಿ, ಉಡುಪಿ

ಕಾಡು ಮತ್ತು ನಾಡಿನ ನಡುವಿನ ಸಂಘರ್ಷವನ್ನು ಈಗಾಗಲೇ ಹಲವು ಸಿನೆಮಾಗಳು ಕಟ್ಟಿಕೊಟ್ಟಿವೆ. ನೆಲಮೂಲದ ಜನರ ಸಹಜ ಬದುಕಿನೊಳಗೆ ಆಧುನಿಕತೆ ಹಸ್ತಕ್ಷೇಪ ಮಾಡುವಾಗ, ಅಲ್ಲಿ ಸೃಷ್ಟಿಯಾಗುವ ಸಂಘರ್ಷ, ಹಿಂಸೆ ಇವನ್ನು ಅಷ್ಟೇ ತೀವ್ರವಾಗಿ, ಸ್ಥಳೀಯ ರೂಪಕಗಳ ಮೂಲಕವೇ ಅಭಿವ್ಯಕ್ತಿ ಪಡಿಸುವ ಪ್ರಯತ್ನ ಕನ್ನಡದಲ್ಲಿ ನಡೆದೇ ಇಲ್ಲ. ತಮಿಳು ಸಿನೆಮಾಗಳು ತಮ್ಮ ನೆಲಮೂಲದ ಸಾಂಸ್ಕೃತಿಕ ರೂಪಕಗಳನ್ನು ದೃಶ್ಯಗಳಲ್ಲಿ ದುಡಿಸಿಕೊಂಡಂತೆ ಕನ್ನಡ ಸಿನೆಮಾಗಳು ದುಡಿಸಿಕೊಂಡದ್ದು ತೀರಾ ಕಡಿಮೆ. ರಿಷಬ್ ಶೆಟ್ಟಿಯವರ 'ಕಾಂತಾರ' ಈ ಕಾರಣಕ್ಕಾಗಿ ಮುಖ್ಯವಾಗುತ್ತದೆ.

ದಕ್ಷಿಣ ಕನ್ನಡದ ಶೆಟ್ಟಿ ಸಹೋದರರು ಈ ನಿಟ್ಟಿನಲ್ಲಿ ತಮ್ಮ ಸಿನೆಮಾಗಳ ಮೂಲಕ ಹೊಸ ದಾರಿಯೊಂದನ್ನು ಕನ್ನಡ ಸಿನೆಮಾಗಳಿಗೆ ತೆರೆದುಕೊಡುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೋಳಿಕಟ್ಟ, ಕಂಬಳ, ದೈವ, ಫ್ಯೂಡಲ್ ವ್ಯವಸ್ಥೆ, ಭೂಮಿ ಇವನ್ನು ಸುತ್ತಿಕೊಂಡ ಹಿಂಸೆ, ಕ್ರೌರ್ಯ ಎಲ್ಲವನ್ನೂ ಒಂದು ಚೌಕಟ್ಟಿನೊಳಗೆ ಪೇಟಿಂಗ್‌ನಂತೆ ಕಾಂತಾರ ಕಟ್ಟಿಕೊಡುತ್ತದೆ. 'ದೈವ ಮತ್ತು ಮನುಷ್ಯ'ನ ನಡುವಿನ ಒಪ್ಪಂದ ಮುರಿದು, ಲಾಲಸೆಗೆ ಬಲಿಯಾಗಿ ಮನುಷ್ಯ ಮಾತಿಗೆ ತಪ್ಪಿದಾಗ ದೈವ ಸಿಡಿದೇಳುತ್ತದೆ. ತಲೆತಲಾಂತರಗಳ ಹಿಂದೆ ರಾಜನೊಬ್ಬ ಪಂಜುರ್ಲಿ ದೈವದಿಂದ ಸಿಗುವ ನೆಮ್ಮದಿ ಮತ್ತು ಶಾಂತಿಗೆ ಪರ್ಯಾಯವಾಗಿ ಭೂಮಿಯನ್ನು ಕೊಡುತ್ತಾನೆ. ಅಲ್ಲಿನ ಜನರು ಆ ಕಾಡು, ಭೂಮಿಯ ಜೊತೆಗೆ ಬದುಕಿಕೊಂಡು ಬರುತ್ತಾರೆ. ಆದರೆ ದಶಕಗಳ ಬಳಿಕ, ಆ ರಾಜನ ವಂಶಸ್ಥ ಆ ಭೂಮಿಯನ್ನು ಮರಳಿ ಕೇಳುತ್ತಾನೆ. ಆಗ ದೈವ ಮರು ಪ್ರಶ್ನಿಸುತ್ತದೆ ''ನೀನು ಕೊಟ್ಟ ಭೂಮಿಯನ್ನು ಮರಳಿ ಕೊಡುವೆ. ಆದರೆ ನಾನು ನಿನ್ನ ಕುಟುಂಬಕ್ಕೆ ಕೊಟ್ಟ ನೆಮ್ಮದಿ, ಸಮಾಧಾನವನ್ನು ನೀನು ನನಗೆ ಮರಳಿ ಕೊಡಲು ಸಾಧ್ಯವೆ?''

ಕಾಂತಾರ ನಿಸ್ಸಂಶಯವಾಗಿ ಸಾಮಾನ್ಯ 'ಒಂದು ಎಳೆಯ' ಕತೆಯುಳ್ಳ, ಮಾಸ್ ಪಾತ್ರವೊಂದನ್ನು ಕೇಂದ್ರವಾಗಿಟ್ಟುಕೊಂಡ ಸಿನೆಮಾ. ಆದರೆ ಸಿನೆಮಾ ನಿರೂಪಣಾ ತಂತ್ರದಲ್ಲಿ ನಿರ್ದೇಶಕ ಬಳಸಿಕೊಂಡ ಸ್ಥಳೀಯ ರೂಪಕಗಳು ಸಿನೆಮಾವನ್ನು ವಿಭಿನ್ನವಾಗಿಸಿದೆ. ತಲೆತಲಾಂತರಗಳಿಂದ ಅರಣ್ಯ ಭೂಮಿಯಲ್ಲಿ ತಮ್ಮ ಆದಿ ಸಂಸ್ಕೃತಿ ವೈವಿಧ್ಯಗಳ ಜೊತೆಗೆ ಬದುಕಿಕೊಂಡು ಬಂದ ಕುಟುಂಬಗಳು. ಜೊತೆಗೆ ನಂಬಿದ ಪಂಜುರ್ಲಿ ದೈವ. ಕತಾ ನಾಯಕ ಶಿವನ ತಂದೆ ಭೂತ ಕಟ್ಟುವವನು. ದೈವ ಕೋಲದ ಸಂದರ್ಭದಲ್ಲಿ ಭೂತದ ಜೊತೆಗೆ ಭೂಮಾಲಕನ ಪುತ್ರ ಕೇಳುವ ಪ್ರಶ್ನೆ, ದೈವಕ್ಕೆ ಸವಾಲಾಗುತ್ತದೆ. ನೀಡಿದ ಉತ್ತರ 'ದೈವ ನೀಡಿದ್ದೋ, ದೈವ ಕಟ್ಟಿದವನು ನೀಡಿದ್ದೋ' ಎಂಬ ಪ್ರಶ್ನೆಯನ್ನು ಭೂಮಾಲಕನ ಪುತ್ರ ಕೇಳುತ್ತಾನೆ. ದೈವ ಕೆರಳುತ್ತದೆ. ತನ್ನ ಶಕ್ತಿಯನ್ನು ನಿರೂಪಿಸಲು ಅದು ಕಾಡಿನೆಡೆಗೆ ಓಡುತ್ತಾ ಮಾಯವಾಗುತ್ತದೆ. ಭೂತ ಕಟ್ಟಿದ ಶಿವನ ತಂದೆಯೂ ಕಾಣೆಯಾಗುತ್ತಾನೆ. ಮುಂದಿನ ಕತೆ ಶಿವನದು. ಒಂದೆಡೆ ತನ್ನ ಹಿರಿಯರು ಸ್ಥಳೀಯರಿಗೆ ಕೊಟ್ಟ ಭೂಮಿಯನ್ನು ಮರಳಿ ತನ್ನದಾಗಿಸಿಕೊಳ್ಳಲು ಸಂಚು ನಡೆಸುವ ಭೂಮಾಲಕ.

ಮಗದೊಂದೆಡೆ ರಿಸರ್ವ್ ಫಾರೆಸ್ಟ್ ಗಡಿ ಗುರುತಿಸಿ ಬೇಲಿ ಹಾಕಲು ಮುಂದಾಗಿರುವ ಸರಕಾರ. ಇವೆಲ್ಲದರ ನಡುವೆ ನಲುಗುವ ಸ್ಥಳೀಯರು.ಆ ಸಂಘರ್ಷದಲ್ಲಿ ಮುನ್ನೆಲೆಗೆ ಬರುವ ಶಿವ. ಮುಂದೆ ತೆರೆದುಕೊಳ್ಳುವುದು ಸರಕಾರದ ಜೊತೆಗೆ ಶಿವನ ಸಂಘರ್ಷ ಮತ್ತು ಹಿಂಸೆ. ಹಿಂಸೆ ಮತ್ತು ಕ್ರೌರ್ಯದ ತಾರಕದೊಂದಿಗೇ ಚಿತ್ರ ಕೊನೆಯಾ ಗುತ್ತದೆ. ಚಿತ್ರದ ಕೊನೆಯಲ್ಲಿ ಇಡೀ ಭೂಮಿ ಯಾರಿಗೆ ಸೇರಬೇಕು? ಭೂಮಾಲಕನಿಗೋ? ಸರಕಾರಕ್ಕೋ? ಅಥವಾ ಜನರಿಗೋ? ಚಿತ್ರದಲ್ಲಿ ಸರಕಾರ ಮತ್ತು ಜನರ ನಡುವೆ ಪಂಜುರ್ಲಿ ದೈವ ಮಧ್ಯಸ್ಥಿಕೆ ವಹಿಸುವುದು, ಅವರ ನಡುವೆ ಸಮನ್ವಯಕ್ಕೆ ಕರೆ ಕೊಡುವುದು ವಿಶೇಷ. ಆ ಮೂಲಕ ಸರಕಾರ ಮತ್ತು ಜನರ ನಡುವೆ ನಡೆಯಬಹುದಾದ ಸುದೀರ್ಘ ಸಂಘರ್ಷಕ್ಕೆ ದೈವದಿಂದ ಪರಿಹಾರ ದೊರಕುತ್ತದೆ. ಇದನ್ನು ಶೆಟ್ಟರ 'ಬುದ್ಧಿವಂತಿಕೆ' ಎಂದು ಗುರುತಿಸಬಹುದು. ಈ ಹಿಂದಿನ ಚಿತ್ರಗಳಂತೆಯೇ ಇಲ್ಲಿಯೂ ಶೆಟ್ರುಗಳ ಹೆಗಲೇರಿ ವೈದಿಕ ಭಟ್ರುಗಳು ಕೂತಿದ್ದಾರೆ. ಭೂತಕೋಲದ ಪ್ರಸಾದದಲ್ಲಿ ಸಸ್ಯಾಹಾರಕ್ಕೆ ಆದ್ಯತೆ ಯನ್ನು ನೀಡಲಾಗಿದೆ.

ಅಲ್ಲಲ್ಲಿ ಭೂತ ಕುಣಿಯುವಾಗ ಭಜನೆ ಹಾಡನ್ನು ಹಿನ್ನೆಲೆಯಾಗಿ ನೀಡಿರುವುದು ಇನ್ನೊಂದು ಅಭಾಸವಾಗಿದೆ. ಹಾಗೆಯೇ ಅನಗತ್ಯವಾಗಿ ರಾಂಪ ಮತ್ತು ಕಮಲ ಹೆಸರುಗಳನ್ನು ಜೊತೆಯಾಗಿ ತಂದು 'ರಾಂಪರ ಜೋಕುಗಳಿಗೆ' ತಳಕು ಹಾಕಲಾಗಿದೆ. ಶಿವನ ಪಾತ್ರದ ಮೂಲಕ ಒಂದೆರೆಡು ಬಾರಿ ರಾಂಪ ಮತ್ತು ಕಮಲ ಹೆಸರುಗಳನ್ನು ತಮಾಷೆ ಮಾಡಲಾಗುತ್ತದೆ. ಇದು ತೀರಾ ಅಸೂಕ್ಷ್ಮ ಮತ್ತು ಅನಗತ್ಯವಾಗಿತ್ತು. ಚಿತ್ರದ ಕೊನೆಯಲ್ಲಿ, ಭೂಮಾಲಕರ ಪರವಾಗಿ ಕೇರಳದ ಮಲಯಾಳಿ ಗೂಂಡಾ ಗಳು ಫೈಟಿಂಗ್‌ನಲ್ಲಿ ಭಾಗವಹಿಸುವುದು ಕೂಡ ಕೇರಳಿಗರ ಕುರಿತಂತೆ ಪೂರ್ವಾಗ್ರಹ ಪೀಡಿತ ಧೋರಣೆಯಾಗಿದೆ. ದಕ್ಷಿಣ ಕನ್ನಡದ ಸಾಂಸ್ಕೃತಿಕ ವ್ಯವಸ್ಥೆಯನ್ನು ಸುತ್ತಿಕೊಂಡಿರುವ ಫ್ಯೂಡಲ್ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಳುವ ಅವಕಾಶ ಚಿತ್ರಕ್ಕಿದ್ದರೂ ನಿರ್ದೇಶಕರು ಅದನ್ನು ಉದ್ದೇಶಪೂರ್ವಕವಾಗಿ ಕೈಚೆಲ್ಲಿಕೊಳ್ಳುತ್ತಾರೆ. 'ಮನೆಯೊಳಗೆ ಪ್ರವೇಶ'ದ ಒಂದು ದೃಶ್ಯ, ಇಲ್ಲಿನ ಜಾತೀಯತೆಯನ್ನು ಮೆಲ್ಲಗೆ ಮುಟ್ಟಿದಂತೆ ಮಾಡುತ್ತದೆ.

ಅಜನೀಶ್ ಲೋಕನಾಥ್ ಸಂಗೀತ, ಅರವಿಂದ ಕಶ್ಯಪ್ ಛಾಯಾಗ್ರಹ ಚಿತ್ರದ ಒಳ ಹೂರಣವನ್ನು ಗಟ್ಟಿಯಾಗಿಸಿದೆ. ಕತೆಯೇ ಇಲ್ಲದ ಸಿನೆಮಾಕ್ಕೆ ರಿಷಬ್ ಶೆಟ್ಟಿ ತನ್ನ ಅಭಿನಯದ ಮೂಲಕ ಜೀವ ತುಂಬಿದ್ದಾರೆ. ಕಿಶೋರ್, ಅಚ್ಯುತ್ ಅವರು ರಿಷಬ್ ಪಾತ್ರಕ್ಕೆ ಪೂರಕವಾಗಿ ಮೂಡಿ ಬಂದಿದ್ದಾರೆ. ಭೂತದ ವೇಷ, ಬಣ್ಣ, ಅಬ್ಬರ, ಗಗ್ಗರದ ಧ್ವನಿ, ಪಾಡ್ದನಗಳನ್ನು ಬಳಸಿಕೊಂಡು ಒಂದು ಸಾಮಾನ್ಯ ಚಿತ್ರವನ್ನು ಅಸಾಮಾನ್ಯ ಮಾಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಕೊನೆಯ ಹದಿನೈದು ನಿಮಿಷಗಳ ರಿಷಬ್ ಶೆಟ್ಟಿಯ ಆಂಗಿಕ ಅಭಿನಯ ಚಿತ್ರದ ಹೈಲೈಟ್. ಆದರೆ ಅದಕ್ಕಾಗಿ ಸುಮಾರು 30 ನಿಮಿಷಗಳ ಅತ್ಯಂತ ಭೀಕರ ಯರ್ರಾಬಿರ್ರಿ ಹಿಂಸಾತ್ಮಕ ಫೈಟಿಂಗ್‌ಗಳನ್ನು ಪ್ರೇಕ್ಷಕರು ಸಹಿಸಿಕೊಳ್ಳಬೇಕಾಗುತ್ತದೆ.

ಈ ಅನಿರೀಕ್ಷಿತ ಫೈಟಿಂಗ್‌ಗಳು ಸರಾಗವಾಗಿ ಸಾಗುತ್ತಿದ್ದ ಸಿನೆಮಾವನ್ನು ಏಕಾಏಕಿ ದುರ್ಬಲಗೊಳಿಸಿ ಬಿಡುತ್ತದೆ. ಭೂತದ ಕೋಲ ದೃಶ್ಯವನ್ನು ಸಿನೆಮಾಕ್ಕೆ ಪೂರಕವಾಗಿ ಇಲ್ಲಿ ಬಳಸಿಕೊಂಡಂತೆ ಕಲಾತ್ಮಕವಾಗಿ ಯಾವ ಕನ್ನಡ ಜನಪ್ರಿಯ ಸಿನೆಮಾಗಳೂ ಈವರೆಗೆ ಬಳಸಿಕೊಂಡಂತಿಲ್ಲ. ಕಾಡಿನ ನಿಗೂಢತೆಯೊಂದಿಗೆ ತಳಕು ಹಾಕಿ ಕೊಂಡ ಪಂಜುರ್ಲಿಯ ಕಾರ್ನಿಕ ಚಿತ್ರದ ಆರಂಭದಿಂದ ಕೊನೆಯವರೆಗೂ ಪ್ರವಹಿಸುತ್ತಿರುತ್ತದೆ. ಅದುವೇ ಚಿತ್ರದ ಜೀವಾಳ ಕೂಡ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)