ಮತ್ತೆ ಎಐಸಿಸಿ ಅಧ್ಯಕ್ಷತೆಗೆ ಕನ್ನಡಿಗ
ಕಾಂಗ್ರೆಸ್ ಅಧ್ಯಕ್ಷರಾಗುವತ್ತ ಹಿರಿಯ ಮುತ್ಸದ್ದಿ, ಸಮರ್ಥ ನಾಯಕ ಮಲ್ಲಿಕಾರ್ಜುನ ಖರ್ಗೆ
ಶನಿವಾರದವರೆಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ. ರಾಜಕಾರಣದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಐದು ದಶಕಗಳ ಕಾಲ ಪ್ರಮುಖ ಸ್ಥಾನಗಳನ್ನು ನಿರ್ವಹಿಸಿದ ಸುದೀರ್ಘ ಅನುಭವ. ಕಾಂಗ್ರೆಸ್‌ನ ಹಿರಿಯ ನಾಯಕ. ಗಾಂಧಿ ಕುಟುಂಬಕ್ಕೆ ಅಖಂಡ ನಿಷ್ಠೆ. ಚುನಾವಣಾ ರಾಜಕಾರಣಕ್ಕೆ ಇಳಿದಾಗಿನಿಂದ 2014ರ ಸಾರ್ವತ್ರಿಕ ಚುನಾವಣೆಯ ತನಕವೂ ಸತತವಾಗಿ ಗೆದ್ದ ಹೆಗ್ಗಳಿಕೆ. ಈಗ ರಾಷ್ಟ್ರ ರಾಜಕಾರಣದಲ್ಲಿಯೂ ಬಹಳ ದೊಡ್ಡ ಹೆಸರು. ಇವರೇ ಕರ್ನಾಟಕದ ಮಾಪಣ್ಣ ಮಲ್ಲಿಕಾರ್ಜುನ ಖರ್ಗೆ. ಎಸ್. ನಿಜಲಿಂಗಪ್ಪಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ 5 ದಶಕಗಳ ಬಳಿಕ ಮತ್ತೆ ಕನ್ನಡಿಗರೊಬ್ಬರು ಆ ಸ್ಥಾನಕ್ಕೇರುತ್ತಿದ್ದಾರೆ. ಅಂತಹ ವಿಶಿಷ್ಟ ಗೌರವಕ್ಕೆ ಪಾತ್ರರಾದವರು ಎಂ. ಮಲ್ಲಿಕಾರ್ಜುನ ಖರ್ಗೆ. 50ಕ್ಕೂ ಹೆಚ್ಚು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದರೂ, ಸತತ ಒಂಭತ್ತು ಬಾರಿ ಶಾಸಕನಾಗಿ ಆಯ್ಕೆ ಯಾದರೂ, ಸಚಿವರಾಗಿ ಹಲವಾರು ಮಹತ್ವಪೂರ್ಣ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರೂ, ಹಿರಿಯ ದಲಿತ ನಾಯಕನಾಗಿದ್ದರೂ, ಗಾಂಧಿ ಕುಟುಂಬಕ್ಕೆ ನಿಷ್ಠನಾಗಿದ್ದರೂ, ಸೋನಿಯಾ ಮತ್ತು ರಾಹುಲ್ ಆಪ್ತವಲಯದವರಾಗಿದ್ದರೂ, ರಾಜ್ಯ ರಾಜಕಾರಣದಲ್ಲಿ ಅವರನ್ನು ಇವಾವುದೂ ಸಿಎಂ ಸ್ಥಾನದೆಡೆಗೆ ಕೈಹಿಡಿದು ನಡೆಸದೆ ಹೋದವು ಎಂಬುದೊಂದೇ ಅವರ ಪಾಲಿನ ದುರದೃಷ್ಟ. ಈ ಬಗ್ಗೆ ಅವರಿಗೆ ಬೇಸರವಿದ್ದರೂ, ಅವರ ಆಪ್ತರು ಈ ಕಾರಣಕ್ಕಾಗಿ ಕಾಂಗ್ರೆಸ್ ನಾಯಕತ್ವದ ವಿರುದ್ಧ ಸಿಟ್ಟಾಗಿದ್ದ ಸಂದರ್ಭಗಳಿದ್ದರೂ, ಪಕ್ಷದ ಇತರ ಅನೇಕ ಹಿರಿಯ ನಾಯಕರು ಆಸೆ, ಆಮಿಷಗಳಿಗೆ ಶರಣಾಗಿ ಬಂಡೆದ್ದರೂ ಖರ್ಗೆಯವರು ಮಾತ್ರ ತಮ್ಮ ಅಚಲ ನಿಷ್ಠೆಯನ್ನು ಯಾವತ್ತೂ ಬಿಟ್ಟುಕೊಡದೆ ಪಕ್ಷದಲ್ಲಿ ನಿಂತರು. ಬದಲಾಗಿ ಅತ್ಯಂತ ತಾಳ್ಮೆಯಿಂದಲೇ ಪಕ್ಷದ ನಿರ್ಧಾರಗಳನ್ನೆಲ್ಲ ಸ್ವೀಕರಿಸಿದ್ದು, ಎಲ್ಲ ಸಂದರ್ಭಗಳನ್ನು ಅರ್ಥ ಮಾಡಿಕೊಂಡು ಸಂಯಮ ತೋರಿಸಿದ್ದು, ವಹಿಸಿದ ಜವಾಬ್ದಾರಿಗಳನ್ನೆಲ್ಲ ಸಮರ್ಥವಾಗಿ ನಿರ್ವಹಿಸಿದ್ದು ಖರ್ಗೆಯವರ ಹೆಚ್ಚುಗಾರಿಕೆ. ಪಕ್ಷದ ನಾಯಕತ್ವ ಹಾಗೂ ಸಿದ್ಧಾಂತಕ್ಕೆ ಅಚಲ ನಿಷ್ಠೆ, ಕೊಟ್ಟ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ, ಸಾಧಿಸಿ ತೋರಿಸುವ ಛಲ, ಆಳವಾದ ಅಧ್ಯಯನದಿಂದ ಬಂದಿರುವ ವೈಚಾರಿಕ ಸ್ಪಷ್ಟತೆ, ಕಳಂಕ ರಹಿತ ರಾಜಕೀಯ ಜೀವನ, ಮುತ್ಸದ್ದಿ ನಡೆಗಳು - ಇವೆಲ್ಲವೂ ರಾಷ್ಟ್ರ ರಾಜಕಾರಣದಲ್ಲಿ ಅವರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿವೆ. ಈಗ ಅವರನ್ನು ಕಾಂಗ್ರೆಸ್‌ನ ಅಖಿಲ ಭಾರತ ಅಧ್ಯಕ್ಷ ಹುದ್ದೆಯತ್ತ ತಂದು ತಲುಪಿಸಿವೆ. ಖರ್ಗೆಯವರ ರಾಜಕೀಯ ವೃತ್ತಿಜೀವನ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದಕ್ಕಿಂತಲೂ ಕೆಲವು ವರ್ಷಗಳ ಮುಂಚಿನಿಂದಲೇ ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಆರಂಭವಾಯಿತು. ಕಲಬುರಗಿಯ ಸರಕಾರಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದಾಗಲೇ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತರಾಗಿದ್ದರು. ಅನಂತರ ಅವರು ಕಾರ್ಮಿಕ ಹೋರಾಟಗಳ ನಾಯಕರಾದದ್ದು ಮಹತ್ವದ ತಿರುವು. ಅವರ ತಂದೆ ಗಿರಣಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಕಾರ್ಮಿಕರ ಬದುಕಿನ ಬಗೆಗಿನ ಇಂತಹ ಅರಿವಿನ ಹಿನ್ನೆಲೆಯೂ ಖರ್ಗೆಯವರನ್ನು ನಂತರದ ಹೋರಾಟಗಳಿಗೆ ಪ್ರೇರೇಪಿಸಿರಬೇಕು.
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಪಾರ್ವಟ್ಟಿಯಲ್ಲಿ 1942ರ ಜುಲೈ21ರಂದು ಖರ್ಗೆ ಜನಿಸಿದರು. ಆಗ ಅದು ಬ್ರಿಟಿಷ್ ಆಳ್ವಿಕೆಯ ಹೈದರಾಬಾದ್ ರಾಜ್ಯದಲ್ಲಿತ್ತು. ಬಿಎ ಪದವಿ ಬಳಿಕ ಕಲಬುರಗಿಯ ಸೇಠ ಶಂಕರಲಾಲ ಲಾಹೋಟಿ ಕಾನೂನು ಮಹಾವಿದ್ಯಾನಿಲಯದಿಂದ ಕಾನೂನು ಪದವೀಧರರಾಗಿ, ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರ ಕಚೇರಿಯಲ್ಲಿ ಜೂನಿಯರ್ ಆಗಿ ಕಾನೂನು ವೃತ್ತಿ ಶುರು ಮಾಡಿದರು. ಆಗಲೇ ಕಾರ್ಮಿಕ ಸಂಘಗಳ ಪರವಾದ ಅವರ ಹೋರಾಟವೂ ಶುರುವಾಯಿತು. 1969ರಲ್ಲಿ ಎಂಎಸ್‌ಕೆ ಮಿಲ್ ಕಾರ್ಮಿಕ ಯೂನಿಯನ್‌ನ ಕಾನೂನು ಸಲಹೆಗಾರ ರಾಗಿ ನೇಮಕಗೊಂಡರು. ಸಂಯುಕ್ತ ಮಜ್ದೂರ್ ಸಂಘದ ಪ್ರಭಾವಿ ಹೋರಾಟಗಾರರಲ್ಲಿ ಒಬ್ಬರಾದರು. ಕಾರ್ಮಿಕರ ಹಕ್ಕುಗಳಿಗಾಗಿ ಹಲವು ಆಂದೋಲನಗಳಲ್ಲಿ ತೊಡಗಿಸಿಕೊಂಡರು. ಅದೇ ವರ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ. ಕಲಬುರಗಿ ನಗರ ಘಟಕದ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ. ಅದಾಗಿ ಮೂರೇ ವರ್ಷಕ್ಕೆ 1972ರಲ್ಲಿ ರಾಜಕೀಯ ಬದುಕಿನ ಮೊದಲ ಚುನಾವಣೆಯನ್ನು ಎದುರಿಸಿದ ಖರ್ಗೆ ಗುರುಮಿಟ್ಕಲ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಅಲ್ಲಿಂದ ಶುರುವಾದ ವಿಜಯದ ಓಟ 1978, 1983, 1985, 1989, 1994, 1999, 2004, 2008 ಹೀಗೆ ಒಂಭತ್ತು ಬಾರಿ ಸತತವಾಗಿ ವಿಧಾನಸಭೆಗೆ ಅವರನ್ನು ಕರೆದುಕೊಂಡು ಹೋಯಿತು. 2009ರಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾದಾಗ ಅದು ಅವರ ಸತತ ಹತ್ತನೇ ಗೆಲುವಾಗಿತ್ತು. ಬಳಿಕ 2014ರ ಸಾರ್ವತ್ರಿಕ ಚುನಾವಣೆಯಲ್ಲೂ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಗೆದ್ದರು. ಆ ಗೆಲುವು ಅವರನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ನಾಯಕನನ್ನಾಗಿಸಿತು. ಇಂತಹ ಸತತ ಗೆಲುವಿನ ನಾಯಕ ಮೊದಲ ಬಾರಿಗೆ ಸೋಲು ಕಂಡಿದ್ದು 2019ರ ಲೋಕಸಭಾ ಚುನಾವಣೆಯಲ್ಲಿ. ಆದರೆ ಪಕ್ಷ ಖರ್ಗೆಯವರ ಪಕ್ಷ ನಿಷ್ಠೆ ಹಾಗೂ ಸಾಮರ್ಥ್ಯವನ್ನು ಗೌರವಿಸಿತು. ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಅಲ್ಲಿ ವಿರೋಧಪಕ್ಷದ ನಾಯಕನ ಸ್ಥಾನವನ್ನೂ ಕೊಟ್ಟಿತು. ಈ ನಡುವೆ ಅವರು ನಿರ್ವಹಿಸಿದ ಹೊಣೆಗಾರಿಕೆಗಳು ಹತ್ತು ಹಲವು. 1973ರಲ್ಲಿ ಕರ್ನಾಟಕದ ಪೌರಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸ್ಥಾಪಿಸಲಾದ ಆಕ್ಟ್ರಾಯ್ ತೆರಿಗೆ ನಿರ್ಮೂಲನಾ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. 1974ರಲ್ಲಿ ಚರ್ಮೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದರು. 1985ರಲ್ಲಿ ವಿಧಾನ ಸಭೆಯ ಪ್ರತಿಪಕ್ಷದ ಉಪನಾಯಕನಾಗಿ ಕಾರ್ಯನಿರ್ವಹಿಸಿದರು. 2008ರಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ. 2005ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್‌ಗೆ ಹೊಸ ಚೈತನ್ಯ ತುಂಬಿದರು. ಸಚಿವರಾಗಿ ವಿವಿಧ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದವರು ಖರ್ಗೆ. 1976ರಲ್ಲಿ ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವರಾಗಿ, ಖಾಲಿ ಇದ್ದ 16 ಸಾವಿರ ಎಸ್ಸಿ, ಎಸ್ಟಿ ಬ್ಯಾಕ್ ಲಾಗ್ ಶಿಕ್ಷಕರ ಹುದ್ದೆಗಳನ್ನು ಏಕಕಾಲಕ್ಕೆ ತುಂಬಿ 16 ಸಾವಿರ ಶಿಕ್ಷಕರನ್ನು ನೇರ ನೇಮಕಾತಿ ಮಾಡಿದರು. 1978ರಲ್ಲಿ ದೇವರಾಜ ಅರಸು ಮಂತ್ರಿಮಂಡಲದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವರಾದರು. 1980ರಲ್ಲಿ ಗುಂಡೂರಾವ್‌ರ ಸರಕಾರದಲ್ಲಿ ಕಂದಾಯ ಇಲಾಖೆ ಸಚಿವರಾದರು. ವ್ಯಾಪಕ ಭೂಸುಧಾರಣಾ ಕಾರ್ಯಗಳಿಂದ ರಾಜ್ಯದ ಲಕ್ಷಾಂತರ ಸಣ್ಣ ರೈತರು ಹಾಗೂ ಕೂಲಿಕಾರರಿಗೆ ಭೂಮಿಯ ಹಕ್ಕು ದೊರಕಿದ್ದು ಇದೇ ಅವಧಿಯಲ್ಲಿ. 1990ರಲ್ಲಿ ಬಂಗಾರಪ್ಪನವರ ಸಂಪುಟದಲ್ಲಿಯೂ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹುದ್ದೆ ಒಲಿಯಿತು. 1992ರಿಂದ 1994ರ ಅವಧಿಯಲ್ಲಿ ಮೊಯ್ಲಿ ಸಂಪುಟದಲ್ಲಿ ಸಹಕಾರ, ಸಣ್ಣ ಮತ್ತು ಭಾರೀ ಕೈಗಾರಿಕೆ ಖಾತೆ ಸಚಿವರಾದರು. ಕೃಷ್ಣ ಸಂಪುಟದಲ್ಲಿ ಗೃಹಖಾತೆ ಹೊಣೆಗಾರಿಕೆ ನಿಭಾಯಿಸಿದರು. 2004ರಲ್ಲಿ ಧರಂಸಿಂಗ್ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಸಾರಿಗೆ, ಜಲ ಸಂಪನ್ಮೂಲ ಸಚಿವರಾದರು. ಇದಲ್ಲದೆ, ಕೇಂದ್ರದಲ್ಲಿ ಯುಪಿಎ ಸರಕಾರದ ಅವಧಿಯಲ್ಲಿ ರೈಲ್ವೆ ಖಾತೆ ಸಚಿವರಾಗಿ, ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವರಾಗಿ ಸಮರ್ಥವಾಗಿ ಹೊಣೆ ನಿಭಾಯಿಸಿದವರು ಖರ್ಗೆ. ರಾಜ್ಯದಲ್ಲಿ ಮೂರ್ನಾಲ್ಕು ಬಾರಿ ಸಿಎಂ ಸ್ಥಾನಕ್ಕೆ ಖರ್ಗೆ ಹೆಸರು ಕೇಳಿಬಂದಿತ್ತು. ದಲಿತ ಸಿಎಂ ವಿಚಾರ ಬಂದಾಗಲೂ ಖರ್ಗೆ ಹೆಸರಿನೊಂದಿಗೆ ಚರ್ಚೆಯಾಗುತ್ತಿತ್ತು. ಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ 2004ರಲ್ಲಿ ಸೋತಾಗ ಸಮ್ಮಿಶ್ರ ಸರಕಾರ ರಚನೆ ಹೊತ್ತಲ್ಲಿ ಖರ್ಗೆ ಸಿಎಂ ಆಗುವರೆಂಬ ಮಾತು ಬಲವಾಗಿ ಕೇಳಿಬಂದಿತ್ತು. ಸಿದ್ದರಾಮಯ್ಯ ಸಿಎಂ ಆಗುವುದಕ್ಕೆ ಮೊದಲು ಕೂಡ ಖರ್ಗೆಯವರ ಹೆಸರಿತ್ತು. ಕಳೆದ ಬಾರಿಯ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಹೊತ್ತಲ್ಲೂ ಕುಮಾರಸ್ವಾಮಿ ಸಿಎಂ ಆಗುವ ಮೊದಲು ಖರ್ಗೆಯವರ ಹೆಸರೇ ಕೇಳಿಬಂದಿತ್ತು. ಆದರೆ ಆ ಅವಕಾಶ ಮಾತ್ರ ಈವರೆಗೂ ಅವರಿಗೆ ಒದಗಿಬರಲೇ ಇಲ್ಲ. ಆದರೆ ಅವರ ತಾಳ್ಮೆಗೆ ಎಐಸಿಸಿ ಅಧ್ಯಕ್ಷ ಹುದ್ದೆ ಇದೀಗ ಅವರನ್ನೇ ಅರಸಿಕೊಂಡು ಬಂದಿದೆ. ಚಿಂತಕರ ಚಾವಡಿಯೆಂಬ ಹೆಸರಿರುವ ರಾಜ್ಯಸಭೆಯಲ್ಲಿ ಪ್ರತಿಪಕ್ಷವನ್ನು ಮುನ್ನಡೆಸಿರುವ ಖರ್ಗೆ ಇದೀಗ ಎಐಸಿಸಿ ಅಧ್ಯಕ್ಷ ಹುದ್ದೆಯ ಚುನಾವಣೆಗೆ ಗಾಂಧಿ ಕುಟುಂಬದ ಆಯ್ಕೆಯಾಗಿರುವುದು, ಅವರ ಕಾಂಗ್ರೆಸ್ ನಿಷ್ಠೆಗೆ ಸಿಕ್ಕ ಫಲ. ಕಾಂಗ್ರೆಸ್‌ನ ಹಿರಿಯ ನಾಯಕರಲ್ಲದೆ, ಭಿನ್ನಮತೀಯ ಜಿ-23 ಗುಂಪಿನ ಹಲವರ ಬೆಂಬಲವೂ ಸಿಕ್ಕಿರುವುದು ಖರ್ಗೆಯವರ ಘನತೆಗೆ ಸಾಕ್ಷಿ. ಅವರೇ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗುವ ಅಧಿಕೃತ ಪ್ರಕ್ರಿಯೆ ಹಾಗೂ ಘೋಷಣೆಯಷ್ಟೇ ಬಾಕಿ ಇರುವುದು. ಎಂದೆಂದೂ ಸ್ವಂತ ಸಾಮರ್ಥ್ಯವನ್ನೇ ನೆಚ್ಚಿಕೊಂಡು ಉನ್ನತ ಸ್ಥಾನಕ್ಕೇರುತ್ತ ಬಂದ ಖರ್ಗೆಯವರ ರಾಜಕೀಯ ಬದುಕಿನಲ್ಲಿ ಇದೊಂದು ಅತ್ಯಂತ ಮಹತ್ವದ ಘಟ್ಟ. ಕರ್ನಾಟಕ, ಕನ್ನಡಿಗರಿಗೂ ಖರ್ಗೆಯವರ ಮೂಲಕ ಬಹಳ ದೊಡ್ಡ ಗೌರವ.