ಎಸ್ಸಿ ಮತ್ತು ಎಸ್ಟಿ ಮೀಸಲಾತಿ ಹೆಚ್ಚಳದ ತಾತ್ವಿಕತೆ
ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರು ಜಸ್ಟೀಸ್ ನಾಗಮೋಹನದಾಸ್ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಬೇಕೆಂದು ನಡೆಸುತ್ತಿರುವ ಧರಣಿಯು 235 ದಿನಗಳನ್ನು ದಾಟಿದ್ದರೂ ರಾಜ್ಯ ಸರಕಾರದ ನಿರ್ಲಕ್ಷ್ಯ ಮುಂದುವರಿದಿದೆ. ಈಗ ಅನುಷ್ಠಾನದ ಹೊಣೆಗಾರಿಕೆ ರಾಜ್ಯ ಸರಕಾರದ ಮೇಲಿದೆ. ಸಾಮಾಜಿಕ ಮತ್ತು ಆರ್ಥಿಕವಾಗಿ ಶೋಷಿತರಾದ ಸರ್ವ ಸಮುದಾಯಗಳ ಒಳಗೊಳ್ಳುವಿಕೆಯ ಹೊಣೆಗಾರಿಕೆ ಹೋರಾಟಗಾರರ ಮೇಲಿದೆ.
ಮೀಸಲಾತಿ ಮಾತ್ರದಿಂದಲೇ ‘ಸಂಪೂರ್ಣ ಸಮಾನತೆ’ ಸಾಧ್ಯವಾಗದಿರಬಹುದಾದರೂ ಶೋಷಿತ ಸಮುದಾಯಗಳು ಸಮಾನತೆಯತ್ತ ಸಾಗಲು ಮೀಸಲಾತಿಯು ಒಂದು ಪ್ರಮುಖ ಪಯಣ ಎಂಬುದನ್ನು ಒಪ್ಪಲೇಬೇಕು. ಶೋಷಿತ ಸಮುದಾಯಗಳಿಗೆ ಆಗಿರುವ ಅನ್ಯಾಯ ಮತ್ತು ಅಸಮಾನತೆಯನ್ನು ನೀಗಿಸುವುದು ದೇಶದ ದೊಡ್ಡ ಜವಾಬ್ದಾರಿಯಷ್ಟೇ ಅಲ್ಲ ಕರ್ತವ್ಯವೂ ಹೌದು. ಆದ್ದರಿಂದ ಮೀಸಲಾತಿಯೆಂಬುದು ರಿಯಾಯಿತಿಯಲ್ಲ, ಸಾಮಾಜಿಕ ನ್ಯಾಯದ ಒಂದು ನೀತಿ. ಸಾಮಾಜಿಕ ನ್ಯಾಯವೆಂಬುದು ಅನರ್ಹರಿಗೆ ನೀಡುವ ಕೊಡುಗೆಯಲ್ಲ; ಅನ್ಯಾಯಕ್ಕೊಳಗಾದ ಶೋಷಿತ ಸಮುದಾಯಗಳ ಅರ್ಹರಿಗೆ ಒದಗಿಸುವ ನ್ಯಾಯವೇ ಸಾಮಾಜಿಕ ನ್ಯಾಯ.ಸಂವಿಧಾನ ರಚನಾ ಸಭೆಯಲ್ಲಿ ಡಾ.ಅಂಬೇಡ್ಕರ್ ಅವರು ಇದನ್ನೇ ಪ್ರತಿಪಾದಿಸಿದರು. ಅವಕಾಶ ವಂಚಿತ ಸಮುದಾಯಗಳಿಗೆ ಆಡಳಿತಾದಿಕ್ಷೇತ್ರಗಳಲ್ಲಿ ಆದ್ಯತೆಯ ಮೇಲೆ ಸ್ಥಾನ ನೀಡುವ ಅಗತ್ಯವನ್ನು ಒತ್ತಿ ಹೇಳಿದರು. ಈಗ ನಮ್ಮ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಒತ್ತಾಯ ಬಲವಾಗುತ್ತಿದೆ. ಪರಿಶಿಷ್ಟ ಪಂಗಡದ (ಎಸ್ಟಿ) ಮೀಸಲಾತಿ ಪ್ರಮಾಣವನ್ನು ಹೆಚ್ಚಿಸ ಬೇಕೆಂದು ಧರಣಿ ಆರಂಭಿಸಿದ ವಾಲ್ಮೀಕಿ ಮಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರ ಆಗ್ರಹವು ಈಗ ವಿಸ್ತಾರಗೊಂಡು ಪರಿಶಿಷ್ಟ ಜಾತಿಗಳನ್ನೂ ಒಳಗೊಂಡಿರುವುದು ಒಳ್ಳೆಯ ಬೆಳವಣಿಗೆ. ಇದು ಹೀಗೆಯೇ ವಿಸ್ತರಿಸುತ್ತ, ಒಳಗೊಳ್ಳುತ್ತ ಒಟ್ಟು ಶೋಷಿತರ ಪರವಾದ ಆಂದೋಲನವಾಗುವುದೂ ಅಪೇಕ್ಷಣೀಯ.
ಈಗ ಮುನ್ನೆಲೆಯಲ್ಲಿರುವುದು ಜ.ನಾಗಮೋಹನ್‌ದಾಸ್ ಅವರ ಆಯೋಗವು ಮಾಡಿರುವ ‘ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಶಿಫಾರಸನ್ನು’ ಜಾರಿಗೆ ತರಬೇಕೆಂಬ ಆಗ್ರಹ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳದ ಒತ್ತಾಯಕ್ಕೆ ಸದರಿ ಸಮುದಾಯ ಗಳ ಸಮಕಾಲೀನ ಸಾಮಾಜಿಕ, ಶೈಕ್ಷಣಿಕ ಮತ್ತು ಉದ್ಯೋಗ ಲಭ್ಯತೆಯ ಸ್ಥಿತಿಗತಿಗಳು ಆಧಾರ ಒದಗಿಸುತ್ತವೆ. ಮೀಸಲಾತಿಯಿಂದ ಎಲ್ಲವೂ ದಲಿತರಿಗೇ ದಕ್ಕುತ್ತಿದೆಯೆಂಬ ಭಾವನೆಯನ್ನು ಕೆಲವು ವಲಯಗಳು ಬಿತ್ತುತ್ತಿರುವುದರ ನಡುವೆ, ನಿಗದಿತ ಮೀಸಲಾತಿಯ ಗರಿಷ್ಠ ಮಿತಿಯನ್ನು ದಲಿತ ಸಮುದಾಯಗಳು ಕೆಲವು ಕ್ಷೇತ್ರಗಳಲ್ಲಿ ಇನ್ನೂ ತಲುಪಿಲ್ಲವೆಂಬ ಕಟುವಾಸ್ತವ ಕೂಡ ನಮ್ಮೆದುರು ಇದೆ.
ಪದವಿ ಮತ್ತು ವೃತ್ತಿ ಶಿಕ್ಷಣದಲ್ಲಿ ಎಸ್ಸಿ ಮತ್ತು ಎಸ್ಟಿಗಳ ಪಾಲುದಾರಿಕೆ ಹಿಂದಿಗಿಂತ ಹೆಚ್ಚಾಗಿದ್ದರೂ ಜನಸಂಖ್ಯೆಯ ಪ್ರಮಾಣಕ್ಕೆ ತಕ್ಕುದಾದ ಗರಿಷ್ಠ ಬೆಳವಣಿಗೆ ಕಾಣುತ್ತಿಲ್ಲ. 2020ರ ಕರ್ನಾಟಕ ಸರಕಾರದ ಮಾಹಿತಿಯಂತೆ ಸರಕಾರಿ ಕಾಲೇಜುಗಳಿಗೆ ಸೇರಿದ ಎಸ್ಸಿ ವಿದ್ಯಾರ್ಥಿ ಗಳು ಶೇ. 14.33 ಮತ್ತು ಎಸ್ಟಿ ವಿದ್ಯಾರ್ಥಿಗಳು ಶೇ. 5.41. ಇದು ಸಮಾಧಾನದ ಸಂಗತಿಯಾದರೂ ಖಾಸಗಿ ಕಾಲೇಜುಗಳಲ್ಲಿ ಎಸ್ಸಿ ವಿದ್ಯಾರ್ಥಿಗಳು ಶೇ. 4.68 ಮತ್ತು ಎಸ್ಟಿ ವಿದ್ಯಾರ್ಥಿಗಳು ಶೇ. 1.96ರಷ್ಟುಪ್ರವೇಶ ಪಡೆದಿರುವುದು ನಿರಾಶಾದಾಯಕ. ತಾಂತ್ರಿಕ ವೃತ್ತಿ ಶಿಕ್ಷಣದಲ್ಲಿ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳ ಒಟ್ಟು ಪ್ರಮಾಣ ಶೇ. 12.95 ಮಾತ್ರ. 2019ರ ಮಾಹಿತಿಯಂತೆ ಎಂ.ಬಿ.ಬಿ.ಎಸ್.ಗೆ ಸೇರಿದ ಎಸ್ಸಿ ವಿದ್ಯಾರ್ಥಿ ಗಳು ಶೇ. 10.79 ಮತ್ತು ಎಸ್ಟಿ ವಿದ್ಯಾರ್ಥಿಗಳು ಶೇ. 2.74. ಅಂದರೆ ಪದವಿ ತರಗತಿಯವರೆಗಿನ ಸಾಮಾನ್ಯ ಶಿಕ್ಷಣದಲ್ಲಿ ಈ ಸಮುದಾಯ ಗಳ ಪ್ರಗತಿ ಆಶಾದಾಯಕವಾಗಿದೆ. ವೃತ್ತಿ ಶಿಕ್ಷಣ ಕ್ಷೇತ್ರದಲ್ಲಿ ನಿಗದಿತ ಮೀಸಲಾತಿಯ ಗರಿಷ್ಠ ಮಿತಿಯನ್ನು ತಲುಪಿಲ್ಲ.
ಇನ್ನು ರಾಜ್ಯ ಸರಕಾರದ ಉದ್ಯೋಗದ ವಿಷಯಕ್ಕೆ ಬಂದರೆ, 2018ರ ಮಾಹಿತಿ ಪ್ರಕಾರ ‘ಎ’ ಹಂತದ ಉದ್ಯೋಗಗಳಲ್ಲಿ ಎಸ್ಸಿ ಶೇ.3.74 ಮತ್ತು ಎಸ್ಟಿ ಶೇ. 3.54 ಇದ್ದರೆ, ‘ಬಿ’ ಹಂತದ ಉದ್ಯೋಗ ಗಳಲ್ಲಿ ಕ್ರಮವಾಗಿ ಶೇ. 8.80 ಮತ್ತು ಶೇ. 8.03 ಇದ್ದಾರೆ. ‘ಸಿ’ ಹಂತದ ಉದ್ಯೋಗಗಳಲ್ಲಿ ಎಸ್ಸಿ ಶೇ. 76.55 ಮತ್ತು ಎಸ್ಟಿ ಶೇ. 75.09, ‘ಡಿ’ ಹಂತದಲ್ಲಿ ಕ್ರಮವಾಗಿ ಶೇ. 10.91 ಮತ್ತು ಶೇ. 13.34. ಜಸ್ಟೀಸ್ ನಾಗಮೋಹನದಾಸ್ ಆಯೋಗವು ಈ ಪ್ರಮಾಣದ ಆಧಾರವನ್ನು ಅನುಲಕ್ಷಿಸಿ, ‘ಎ’ ಮತ್ತು ‘ಬಿ’ ಹಂತದಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗ ಗಳಿಗೆ ಕಡಿಮೆ ಅವಕಾಶ ಮತ್ತು ‘ಸಿ’ ಮತ್ತು ‘ಡಿ’ ಹಂತದಲ್ಲಿ ಹೆಚ್ಚು ಅವಕಾಶ ಲಭ್ಯವಾಗಿರುವುದಾಗಿ ತಿಳಿಸಿದೆ. 2019ರ ಮಾಹಿತಿ ಪ್ರಕಾರ ಒಕ್ಕೂಟ (ಕೇಂದ್ರ) ಸರಕಾರದ ಸಚಿವಾಲಯದಲ್ಲಿ ಎಸ್ಸಿ ಮತ್ತು ಎಸ್ಟಿ ಪ್ರಾತಿನಿಧ್ಯ ತುಂಬಾ ಕಡಿಮೆಯಿದೆ. 89 ಜನ ಕಾರ್ಯದರ್ಶಿ ಗಳಲ್ಲಿ ಎಸ್ಸಿ ಜನಾಂಗದ ಒಬ್ಬರು ಮತ್ತು ಎಸ್ಟಿ ಜನಾಂಗದ ಮೂವರು ಇದ್ದಾರೆ. 93 ಹೆಚ್ಚುವರಿ ಕಾರ್ಯದರ್ಶಿಗಳಲ್ಲಿ ಎಸ್ಸಿ 6 ಜನ, ಎಸ್ಟಿ 5 ಜನ ಇದ್ದರೆ, 275 ಜಂಟಿ ಕಾರ್ಯದರ್ಶಿಗಳಲ್ಲಿ ಎಸ್ಸಿ 13 ಜನ, ಎಸ್ಟಿ 9 ಜನ ಇದ್ದಾರೆ. ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಸಾಮಾನ್ಯ ವರ್ಗದ ಪ್ರಾಧ್ಯಾಪಕರು ಶೇ. 95ರಷ್ಟು ಇದ್ದರೆ, ಎಸ್ಸಿ ಶೇ. 3.54 ಮತ್ತು ಎಸ್ಟಿ ಶೇ.0.86ರಷ್ಟು ಇದ್ದಾರೆ. ಸಹ ಪ್ರಾಧ್ಯಾಪಕರಲ್ಲಿ ಸಾಮಾನ್ಯ ವರ್ಗದವರು ಶೇ. 93, ಎಸ್ಸಿ ಶೇ. 5 ಮತ್ತು ಎಸ್ಟಿ ಶೇ. 1 ರಷ್ಟು ಇದ್ದಾರೆ. ಸಹಾಯಕ ಪ್ರಾಧ್ಯಾಪಕರಲ್ಲಿ ಸಾಮಾನ್ಯ ವರ್ಗದ ಶೇ. 66, ಎಸ್ಸಿ ಶೇ.12 ಮತ್ತು ಎಸ್ಟಿ ಶೇ.6ರಷ್ಟು ಇದ್ದಾರೆ. ಐ.ಐ.ಎಂ.ನಲ್ಲಿ ಎಸ್ಸಿ ಶೇ. 0.8ಮತ್ತು ಎಸ್ಟಿ ಶೇ. 0.2 ಪ್ರಮಾಣದ ಉದ್ಯೋಗಿಗಳಿದ್ದರೆ, ಐ.ಐ.ಟಿ. ಯಲ್ಲಿ ಎಸ್ಸಿ ಶೇ. 2.23 ಮತ್ತು ಎಸ್ಟಿ ಶೇ. 0.31ರಷ್ಟು ಇದ್ದಾರೆ. ಈ ಎಲ್ಲ ಅಂಕಿ ಅಂಶಗಳು ಎಸ್ಸಿ ಮತ್ತು ಎಸ್ಟಿಗಳ ಮೀಸಲಾತಿ ಹೆಚ್ಚಳಕ್ಕೆ ತಾತ್ವಿಕ ಮಾನದಂಡವಾಗುತ್ತವೆ. ಕೆಲವು ಕ್ಷೇತ್ರಗಳಲ್ಲಿ ಇರುವ ಪ್ರಮಾಣದ ಅಂತರವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಈ ಸಮುದಾಯಗಳಲ್ಲಿ ಅರ್ಹ ಅಭ್ಯರ್ಥಿಗಳು ಇರಲಿಲ್ಲವೇ ಅಥವಾ ಅರ್ಹರಿದ್ದೂ ಆಯ್ಕೆ ಯಾಗಿಲ್ಲವೇ ಎಂಬ ಅಂಶವನ್ನು ಪರಿಶೀಲಿಸುವ ಅಗತ್ಯವಿದೆ.
1992ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಮೀಸಲಾತಿಯ ಪ್ರಮಾಣವು ಶೇ. 50ರ ಮಿತಿಯಲ್ಲಿ ಇರಬೇಕು. ಆದರೆ ಇದೇ ತೀರ್ಪು ‘ಅಸಾಧಾರಣ’ ಸಂದರ್ಭಗಳಲ್ಲಿ ಮೀಸಲಾತಿ ಹೆಚ್ಚಳಕ್ಕೆ ಅವಕಾಶ ವನ್ನೂ ನೀಡಿದೆ. ಈಗಾಗಲೇ ತಮಿಳುನಾಡಿನಲ್ಲಿ ಶೇ. 69, ಮಹಾರಾಷ್ಟ್ರ ದಲ್ಲಿ ಶೇ. 68, ಛತ್ತೀಸ್‌ಗಡದಲ್ಲಿ ಶೇ. 82, ಮಧ್ಯಪ್ರದೇಶದಲ್ಲಿ ಶೇ. 73, ರಾಜಸ್ಥಾನದಲ್ಲಿ ಶೇ. 64, ಜಾರ್ಖಂಡ್‌ನಲ್ಲಿ ಶೇ. 70 ಮತ್ತು ಉತ್ತರ ಪ್ರದೇಶದಲ್ಲಿ ಶೇ. 60ರಷ್ಟು ಮೀಸಲಾತಿಯಿದೆಯೆಂಬ ಮಾಹಿತಿ ಯಿದೆ. ಕೆಲವು ರಾಜ್ಯಗಳು ಎಸ್ಸಿ ಮತ್ತು ಎಸ್ಟಿ ಮೀಸಲಾತಿ ಪ್ರಮಾಣ ವನ್ನು ಅಗತ್ಯಕ್ಕನುಗುಣವಾಗಿ ಹೆಚ್ಚಿಸಿವೆ.
ತಮಿಳುನಾಡಿನಲ್ಲಿ ಎಸ್ಸಿ ಮೀಸಲಾತಿಯು ಶೇ. 18ರಷ್ಟು ಇದೆ. ಆದರೆ ಎಸ್ಟಿ ಮೀಸಲಾತಿ ತುಂಬಾ ಕಡಿಮೆಯಿದ್ದು ಶೇ. 1ರಷ್ಟು ಮಾತ್ರ ಎಂಬ ಒಂದು ಮಾಹಿತಿಯಿದೆ. ಈ ಜನಾಂಗವೇ ತಮಿಳು ನಾಡಿನಲ್ಲಿ ಕಡಿಮೆ ಯಿರಬಹುದೆ? ಗೊತ್ತಿಲ್ಲ. ಮಹಾರಾಷ್ಟ್ರದಲ್ಲಿ ಎಸ್ಸಿ ಮೀಸಲಾತಿ ಪ್ರಮಾಣ ಶೇ. 13, ಎಸ್ಟಿ ಮೀಸಲಾತಿ ಶೇ. 7ರಷ್ಟಿದೆ. ಮಧ್ಯ ಪ್ರದೇಶದಲ್ಲಿಎಸ್ಸಿಗೆ ಶೇ.15 ಮತ್ತು ಎಸ್ಟಿಗೆ ಶೇ. 21 ರಷ್ಟು ಮೀಸಲಾತಿ ಇದೆ. ರಾಜಸ್ಥಾನದಲ್ಲಿ ಈ ಪ್ರಮಾಣವು ಕ್ರಮವಾಗಿ ಶೇ. 15 ಮತ್ತು ಶೇ. 12ರಷ್ಟಿದೆ. ಉತ್ತರ ಪ್ರದೇಶದಲ್ಲಿ ಎಸ್ಸಿ ಜನಾಂಗಕ್ಕೆ ಶೇ. 21 ಮತ್ತು ಎಸ್ಟಿ ಗೆ ಶೇ. 2ರಷ್ಟು ಮೀಸಲಾತಿಯಿದೆ. ಛತ್ತೀಸ್‌ಗಡ ರಾಜ್ಯದಲ್ಲಿ ಬುಡಕಟ್ಟು ಜನಾಂಗದವರು ಅಪಾರ ಸಂಖ್ಯೆಯಲ್ಲಿದ್ದಾರೆಂಬ ಕಾರಣಕ್ಕೇ ಎಸ್ಟಿ ಸಮುದಾಯದ ಮೀಸಲಾತಿಯು ಶೇ. 32 ರಷ್ಟಿದೆಯೆಂಬ ಮಾಹಿತಿ ಯಿದೆ. ಎಸ್ಸಿ ಜನಾಂಗಕ್ಕೆ ಶೇ.13ರಷ್ಟು ಮೀಸಲಾತಿಯಿದೆ. ಈ ಮಾಹಿತಿ ಗಳು ಮೀಸಲಾತಿ ಹೆಚ್ಚಳಕ್ಕೆ ಪೂರ್ವ ನಿದರ್ಶನ ಒದಗಿಸುತ್ತವೆ. ಆದ್ದರಿಂದ ಕರ್ನಾಟಕ ಸರಕಾರವು ವಿಳಂಬ ಮಾಡುತ್ತಿರುವುದಕ್ಕೆ ಸಕಾರಣಗಳಿಲ್ಲ.
ಜಸ್ಟೀಸ್ ನಾಗಮೋಹನದಾಸ್ ಆಯೋಗವು ಅಪಾರ ಅಧ್ಯಯನ ಮಾಡಿ ಈ ಎಲ್ಲ ವಿವರಗಳನ್ನು ನೀಡಿ ಪರಿಶಿಷ್ಟ ಜಾತಿಗಳಿಗೆ ಶೇ. 15 ರಿಂದ 17 ಮತ್ತು ಪರಿಶಿಷ್ಟ ಬುಡಕಟ್ಟುಗಳಿಗೆ ಶೇ.3 ರಿಂದ ಶೇ.7ರಷ್ಟು ಮೀಸಲಾತಿ ಹೆಚ್ಚಿಸಬೇಕೆಂಬ ಶಿಫಾರಸಿನ ಜೊತೆಗೆ ಜನಸಂಖ್ಯಾಧಾರಿತ ಮೀಸಲಾತಿ, ಶೈಕ್ಷಣಿಕ ಅಭಿವೃದ್ಧಿ, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ನಿಗಮ ಸ್ಥಾಪನೆ, ಒಳ ಮೀಸಲಾತಿ ವಿಚಾರಗಳನ್ನೂ ಪ್ರತಿಪಾದಿಸಿದೆ. ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರು ಜಸ್ಟೀಸ್ ನಾಗಮೋಹನದಾಸ್ ಆಯೋಗದ ಶಿಫಾರಸುಗಳನ್ನು ಜಾರಿಮಾಡಬೇಕೆಂದು ನಡೆಸುತ್ತಿರುವ ಧರಣಿಯು 235 ದಿನಗಳನ್ನು ದಾಟಿದ್ದರೂ ರಾಜ್ಯ ಸರಕಾರದ ನಿರ್ಲಕ್ಷ ಮುಂದುವರಿದಿದೆ. ಈಗ ಅನುಷ್ಠಾನದ ಹೊಣೆಗಾರಿಕೆ ರಾಜ್ಯ ಸರಕಾರದ ಮೇಲಿದೆ. ಸಾಮಾಜಿಕ ಮತ್ತು ಆರ್ಥಿಕವಾಗಿ ಶೋಷಿತರಾದ ಸರ್ವ ಸಮುದಾಯಗಳ ಒಳಗೊಳ್ಳುವಿಕೆಯ ಹೊಣೆಗಾರಿಕೆ ಹೋರಾಟಗಾರರ ಮೇಲಿದೆ.