varthabharthi


ಅನುಗಾಲ

ಭಾರತ್ ಜೋಡೊ

ವಾರ್ತಾ ಭಾರತಿ : 6 Oct, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಗುಜರಾತ್, ಕರ್ನಾಟಕ ಮತ್ತಿತರ ರಾಜ್ಯಗಳ ಚುನಾವಣೆಯತ್ತ ಗಮನಹರಿಸುವ ಬದಲು ರಾಹುಲ್ ಗಾಂಧಿ ‘ಭಾರತ್ ಜೋಡೊ’ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಪ್ರಶಂಸಾರ್ಹ ಹೌದೋ ಅಲ್ಲವೋ ಎನ್ನುವುದರ ಬದಲು ಗಮನಾರ್ಹವೆನ್ನಬಹುದು. ಇದರ ಸ್ಪಷ್ಟ ಸಂಕೇತ ಎರಡು: 1. 2024ರ ಚುನಾವಣೆಯ ಕುರಿತಂತೆ ಒಂದು ವೈಯಕ್ತಿಕ ಹಾಗೂ ಪಕ್ಷನೆಲೆಯ ಜನಪ್ರಿಯತೆಯ ಪ್ರಯೋಗ ಅಥವಾ ಒಗ್ಗಟ್ಟಿನ ಆತ್ಮವಿಶ್ಲೇಷಣೆ; 2. ಪಕ್ಷದೊಳಗೆ ತನ್ನ ಅಸ್ತಿತ್ವವನ್ನು ಮತ್ತು ಆ ಮೂಲಕ ತನ್ನ ಹಾಗೂ ಪಕ್ಷದ ಆತ್ಮಸ್ಥೈರ್ಯವನ್ನು ಮತ್ತು ಒಳಜಗಳವನ್ನು ಹತ್ತಿಕ್ಕಿ ಒಗ್ಗಟ್ಟನ್ನು ಹೆಚ್ಚಿಸಿಕೊಳ್ಳುವುದು. ಈ ಎರಡೂ ಅಂಶಗಳನ್ನು ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಯೋಚಿಸಿದರೆ ರಾಹುಲ್ ಗಾಂಧಿಯ ಯಾತ್ರೆಗೊಂದು ಅರ್ಥ ಬರಬಹುದು. ‘ಭಾರತ್ ಜೋಡೊ’ ‘ಕಾಂಗ್ರೆಸ್ ಜೋಡೊ’ವನ್ನೂ ತನಗರಿವಿಲ್ಲದೆಯೇ ಒಳಗೊಂಡಿದೆ.


ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಮುಂದಾಳುತನದಲ್ಲಿ ‘ಭಾರತ್ ಜೋಡೊ’ ಎಂಬ ಕಾರ್ಯಕ್ರಮ ನಡೆಯುತ್ತಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಯೋಜಿಸಿದ ಈ ಯಾತ್ರೆಗೆ ಮುದ್ರಣ ಮಾಧ್ಯಮಗಳಲ್ಲಿ ನಿರೀಕ್ಷಿತ ಪ್ರಚಾರ ಸಿಗದಿದ್ದರೂ ಜನಮನ್ನಣೆಯನ್ನು ಗಳಿಸಿದಂತೆ ಸಾಮಾಜಿಕ ಮಾಧ್ಯಮಗಳಿಂದ ವರದಿಯಾಗುತ್ತಿದೆ. ತಮಿಳುನಾಡಿನಿಂದ ಕೇರಳ ಮೂಲಕ ಸಾಗಿದ ಈ ಯಾತ್ರೆಯು ಮತ್ತೆ ತಮಿಳುನಾಡಿನ ಮೂಲಕ ಕರ್ನಾಟಕವನ್ನು ಪ್ರವೇಶಿಸಿದೆ. ಮುಂದೆ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರಗಳ ಮೂಲಕ ಉತ್ತರಾಯಣ ಮುಂದುವರಿಯಲಿದೆ. 134 ದಿವಸಗಳ ಈ ಜಾಥಾವು ಕೊನೆಗೂ ಏನು ಸಾಧಿಸುತ್ತದೆಯೆಂಬುದನ್ನು ಈಗಲೇ ಹೇಳಲಾಗದು; ರಾಜಕೀಯದಲ್ಲಿ ಯಾವುದೇ ದಿಕ್ಸೂಚಿಯೂ ಕರಾರುವಾಕ್ಕಾದ ನಿರ್ಣಯವನ್ನು ಹೇಳದು. ಎಲ್ಲವನ್ನೂ ಭವಿಷ್ಯವು ನಿರ್ಧರಿಸಲಿದೆ.

ಕಾಂಗ್ರೆಸ್ ಪಕ್ಷದ ಮಟ್ಟಿಗೆ ಇದೊಂದು ಹೊಸ ಪ್ರಯೋಗವೇನಲ್ಲ. ಸ್ವಾತಂತ್ರ್ಯಪೂರ್ವ ಕಾಂಗ್ರೆಸ್ ಗಾಂಧೀಜಿಯವರ ನೇತೃತ್ವದಲ್ಲಿ ಬೇಕಷ್ಟು ಯಾತ್ರೆಗಳನ್ನು ಕಂಡಿವೆ. ಈ ಯಾತ್ರೆಗಳು ಬ್ರಿಟಿಷರನ್ನು ಈ ನೆಲದಿಂದ ಓಡಿಸಿ ಭಾರತವನ್ನು ಸೃಷ್ಟಿಸಿತೋ ಮತ್ತು ಸ್ವಾತಂತ್ರ್ಯವನ್ನು ತಂದುಕೊಟ್ಟಿತೋ ಎಂದರೆ ಅವುಗಳೊಂದಿಗೆ ಅನೇಕಾನೇಕ ಚಳವಳಿಗಳು ನಡೆದದ್ದೂ ಕಾರಣವೇ. ಆದರೆ ಯಾತ್ರೆಯೆಂಬ ಚಲನೆಯು ಜನಜಾಗೃತಿಯನ್ನು ಸೃಷ್ಟಿಸುವುದಂತೂ ನಿಜ. ಗಾಂಧೀಜಿ ನಡೆಸಿದ ದಂಡಿಯಾತ್ರೆ ಉಪ್ಪನ್ನು ಒಂದು ಸಂಕೇತವಾಗಿಟ್ಟುಕೊಂಡ ಮುಷ್ಕರ. ಸಾಮಾನ್ಯವಾಗಿ ಮುಷ್ಕರವೆಂದರೆ ಮಾಡಬೇಕಾದ್ದನ್ನು ಮಾಡದಿರುವುದು ಎಂಬ ತಿಳಿವಳಿಕೆಯಿದೆ. ಆದರೆ ಗಾಂಧೀಜಿ ಈ ಕಲ್ಪನೆಯನ್ನು ತಿರುಗಾಮುರುಗಾ ಮಾಡಿದರು. ಉಪ್ಪನ್ನು ಏಕಪಕ್ಷೀಯವಾಗಿ ಅಂದರೆ ಸರಕಾರದ ಅನುಮತಿ, ಪರವಾನಿಗೆ, ಇವುಗಳನ್ನು ಪಡೆಯದೆ ತಯಾರಿಸಲು ಗಾಂಧೀಜಿ ನಿರ್ಧರಿಸಿದರು. ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂಬುದು ಹಳೆಯ ಹೇಳಿಕೆ. ಇವುಗಳಲ್ಲಿ ಮೊದಲನೆಯದರ ನಡುವೆ ಸರಕಾರ ಸುಂಕದ ರೀತಿಯ ನಿರ್ಬಂಧವನ್ನು ವಿಧಿಸಿತು. ಹೊಳೆನೀರಿಗೆ ದೊಣ್ಣೆನಾಯಕನ ಅಪ್ಪಣೆಯೇ? ಗಾಂಧೀಜಿ ಇದನ್ನು ಅನನ್ಯವಾಗಿ ಧಿಕ್ಕರಿಸಿದರು. ಇದೊಂದು ರೀತಿಯ ಸೃಜನಾತ್ಮಕ ಪ್ರತಿಕ್ರಿಯೆ. ಆಗಿನ ಕಾಲಕ್ಕೆ ಮತ್ತು ಸಂದರ್ಭಕ್ಕೆ ಹೊಸಪರಿಯ ಉಲ್ಲಂಘನೆ. ಮುಂದೆ ಅಸಹಕಾರ, ಖಾದಿ, ಭಾರತ ಬಿಟ್ಟು ತೊಲಗಿ ಮುಂತಾದ ಹಲವಾರು ಸ್ವದೇಶಾದರ್ಶ ಮಾದರಿಯ ಚಳವಳಿಗಳು ನಡೆದರೂ ಮತ್ತು ದೇಶಾದ್ಯಂತ ಹಬ್ಬಿದರೂ ಅವ್ಯಾವುದೂ ತಾತ್ವಿಕವಾಗಿ ದಂಡಿಯಾತ್ರೆಯ ಹೊಳಪನ್ನು ಹೊಂದಲಿಲ್ಲ.

ಸ್ವತಂತ್ರ ಭಾರತದಲ್ಲಿ ನಡೆದ ರಾಜಕೀಯ ಯಾತ್ರೆಗಳಲ್ಲಿ ಲಾಲ್ ಕೃಷ್ಣ ಅಡ್ವಾಣಿಯವರು ಸೋಮನಾಥದಿಂದ ಅಯೋಧ್ಯೆಗೆ ಕೈಗೊಂಡ ಯಾತ್ರೆ ಬಿಹಾರದಲ್ಲಿ ಕೊನೆ ಕಂಡಿತಾದರೂ ಭಾರತದ ರಾಜಕೀಯದ ದಿಕ್ಕನ್ನೇ ಬದಲಾಯಿಸಿತು. ಪ್ರಾಯಃ ಅಲ್ಲಿಯವರೆಗೆ ಭಾರತದಲ್ಲಿ ಮತೀಯ ಧ್ರುವೀಕರಣಕ್ಕಾಗಿ ಈ ಪರಿಯ ಯಾತ್ರೆ ನಡೆದಿರಲಿಲ್ಲ. ಯಾತ್ರೆಯು ಅಪೂರ್ಣವಾದರೂ ಅಡ್ವಾಣಿ ಮತೀಯ ಜಾಗೃತಿ (ಇದನ್ನು ‘ಜಾಗೃತಿ’ಯೆನ್ನುವುದಕ್ಕಿಂತಲೂ ‘ಪ್ರಚೋದನೆ’ ಇಲ್ಲವೇ ‘ಸಮೂಹ ಸನ್ನಿ’ಯೆನ್ನಬಹುದೇನೋ?) ಇದು ಕೊನೆಗೆ ಅಯೋಧ್ಯೆಯಲ್ಲಿನ ಬಾಬರಿ ಮಸೀದಿಯನ್ನು ನಿರ್ನಾಮಗೊಳಿಸಿತೆಂಬುದಕ್ಕಿಂತಲೂ ಮತ್ತು ಅಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ರಾಮಮಂದಿರದ ಪರವಾಯಿತೆನ್ನುವುದಕ್ಕಿಂತಲೂ ಭಾರತೀಯ ಜನತಾ ಪಕ್ಷಕ್ಕೆ ಒಂದು ಹಿಂದೂ ಮತಬ್ಯಾಂಕನ್ನು ಸೃಷ್ಟಿಸಲು ನೆರವಾಯಿತು ಎನ್ನುವುದೇ ಭಾರತದ ರಾಜಕೀಯ ಚರಿತ್ರೆಯಲ್ಲಿ ಗಮನಿಸಬೇಕಾದ ಅಂಶ.

ಈ ಜೀರ್ಣೋದ್ಧಾರ ಭಾರತೀಯ ಜನತಾ ಪಕ್ಷಕ್ಕೆ ಅಗತ್ಯವಾಗಿತ್ತು. ಅನಿರ್ವಾಯವಾಗಿತ್ತೆಂದೂ ಹೇಳಬಹುದು. ಏಕೆಂದರೆ ಜನತಾಪಕ್ಷವನ್ನು ಸೃಷ್ಟಿಸಲು ತನ್ನ ‘ಜನಸಂಘ’ವನ್ನು ಬಲಿಕೊಟ್ಟ ಬಳಿಕ, ಜನತಾ ಪಕ್ಷದ ಅಂಗಪಕ್ಷದ ನೆಲೆಯ ಬುನಾದಿಯ ಮೇಲೆ ಮರುಜನ್ಮ ತಳೆದು ‘ಭಾರತೀಯ ಜನತಾ ಪಕ್ಷ’ವಾದ ಈ ಸಂಘ ಪ್ರಣೀತ ರಾಜಕೀಯ ಹಿಂದೂ ಸಂಘಟನೆಯು ರಾಷ್ಟ್ರೀಯತೆಯನ್ನು ತನ್ನ ದಾಳವಾಗಿ ಒಡ್ಡಿದರೂ ಅದಕ್ಕೆ ಸ್ವೀಕಾರಾರ್ಹತೆ ಸಿಗಬೇಕಾದರೆ ಎರಡು ದಶಕಗಳೇ ಬೇಕಾದವು. 20ನೇ ಶತಮಾನದ ಕೊನೆಯ ಮತ್ತು ಈ ಶತಮಾನದ ಮೊದಲ ಬೆರಳೆಣಿಕೆಯ ವರ್ಷಗಳಲ್ಲಿ ಹಾಗೂ ಹೀಗೂ ಅಧಿಕಾರವನ್ನು ಪಡೆದ ಭಾಜಪವು ಮುಂದೆ 2004ರಿಂದ 2014ರ ವರೆಗೆ ಹೀನಾಯ ಅಜ್ಞಾತವನ್ನು ಅನುಭವಿಸಿತು. ಮೋದಿ ಮತ್ತು ಮತಾಂಧತೆಯೇ ಕಾರಣವಾಗಿ ಕಳೆದ ಸುಮಾರು 8 ವರ್ಷಗಳ ಕಾಲ ಬಹುತೇಕ ಸರ್ವಾಧಿಕಾರದಲ್ಲಿರುವ ಭಾಜಪವು ಮುಂದೆ ಯಾವ ನೆಪಗಳನ್ನು ಮುಂದೊಡ್ಡಿ ಹಿಂದೂ ಮತಬ್ಯಾಂಕನ್ನು ಉಳಿಸಿಕೊಳ್ಳುತ್ತದೆಯೆಂಬುದನ್ನು 2024 ನಿರ್ಧರಿಸಬಹುದು.

ಇದಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ನಿತ್ರಾಣವಾಗುತ್ತಲೇ ಹೋಯಿತು. ಪ್ರಾದೇಶಿಕ ಪಕ್ಷಗಳು ಶಕ್ತಿಯುತವಾಗುವುದೆಂದರೆ ಅದೊಂದು ಪ್ರಾದೇಶಿಕ ಪ್ರಕ್ರಿಯೆಯಾಗಬೇಕೇ ಹೊರತು ರಾಷ್ಟ್ರೀಯವಾಗುವುದಲ್ಲ. ಹಿಂದೆಲ್ಲ ಯಾವುದೇ ಪ್ರಾದೇಶಿಕ ಪಕ್ಷವೂ ತನ್ನ ನೆಲೆಯನ್ನು ರಾಷ್ಟ್ರೀಯವಾಗಿ ಪ್ರದರ್ಶಿಸಬೇಕಾದರೆ ಅದಕ್ಕೆ ರಾಷ್ಟ್ರೀಯ ಪಕ್ಷವೊಂದರ ಬೆಂಬಲ ಅನಿರ್ವಾಯವಾಗಿತ್ತು. ರಾಷ್ಟ್ರೀಯ ಪಕ್ಷಕ್ಕೂ ಇದು ಬೇಕಿತ್ತು. ಇದೊಂದು ರೀತಿಯಲ್ಲಿ ಕೊಡುಕೊಳ್ಳುವ ಯೋಜನೆಯಂತಿತ್ತು. ಆದರೆ ಭಾಜಪವು ಕೇಂದ್ರದಲ್ಲಿ ಅಧಿಕಾರ ಹಿಡಿದ ಬಳಿಕ ಒಂದೊಂದೇ ಪ್ರಾದೇಶಿಕ ಪಕ್ಷಗಳನ್ನು ನಿತ್ರಾಣಗೊಳಿಸಲು ಯತ್ನಿಸಿತ್ತಾದರೂ ಅವುಗಳಲ್ಲಿ ಕೆಲವಾದರೂ (ಮುಖ್ಯವಾಗಿ ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಮತ್ತು ಇತರೆಡೆ ಒಡಿಶಾ, ದಿಲ್ಲಿ, ಪಶ್ಚಿಮ ಬಂಗಾಳ ಹೀಗೆ) ಉಳಿದವು. ಈ ಯೋಜನೆಯ ಅಥವಾ ಅದರ ವೈಫಲ್ಯದ ಲಾಭ ಪಡೆಯಲು ಕಾಂಗ್ರೆಸ್ ಶಕ್ತವಾಗದಿದ್ದುದು ಅದರ ದುರಂತ. ಇದಕ್ಕೆ ಕಾರಣಗಳು ಹಲವಾರಿದ್ದರೂ ಮುಖ್ಯವಾಗಿ ಅದು ವಂಶಪಾರಂಪರ್ಯ ಆಡಳಿತದ ಕಪ್ಪುಕಲೆ ಮತ್ತು ಇಂದಿರಾಯುಗದ ತುರ್ತುಪರಿಸ್ಥಿತಿಯೇ ಆಗಿತ್ತು. ಇತರ ಪಕ್ಷಗಳಲ್ಲೂ ಇಂತಹ ಆನುವಂಶಿಕತೆಯ ಕಾಯಿಲೆಯಿದ್ದರೂ ಅವಕ್ಕೆ ಕೆಲವೇ ವರ್ಷಗಳ, ದಶಕಗಳ ಇತಿಹಾಸವಿರುವುದರಿಂದ ಅವಿನ್ನೂ ಜನಮನದಲ್ಲಿ ಅಚ್ಚೊತ್ತಿಲ್ಲ. ಇದೂ ಅಲ್ಲದೆ ಕಾಂಗ್ರೆಸ್ ತನ್ನೊಳಗಿನ ಒಡಕನ್ನು ಸರಿಪಡಿಸಲು ಯಾವ ಪರಿಣಾಮಕಾರಿ ಕ್ರಮವನ್ನೂ ಕೈಗೊಳ್ಳುತ್ತಿಲ್ಲ.

ಮಧ್ಯಪ್ರದೇಶದಲ್ಲಿ ಸಿಂಧಿಯಾ, ಪಂಜಾಬಿನಲ್ಲಿ ಅಮರಿಂದರ್, ಕಾಶ್ಮೀರದಲ್ಲಿ ಗುಲಾಮ್ ನಬಿ ಆಝಾದ್, ದಿಲ್ಲಿಯಲ್ಲಿ ಕಪಿಲ್ ಸಿಬಲ್- ಹೀಗೆ ಪ್ರಮುಖ ನಾಯಕರ ನಿರ್ಗಮನ, ರಾಜಸ್ಥಾನದಲ್ಲಿ ಗೆಹ್ಲೊಟ್-ಸಚಿನ್ ಪೈಲಟ್ ನಡುವಣ ಒಡಕು, ಗೋವಾದಲ್ಲಿನ ರಾಜಕೀಯ ಇವುಗಳಲ್ಲಿ ಹೈಕಮಾಂಡ್ ನಡೆದುಕೊಂಡ ರೀತಿ, ಹೀಗಾಗಿ ಕಾಂಗ್ರೆಸ್ ತನ್ನ ದೋಷಗಳಿಂದ ದಣಿಯಿತೇ ಹೊರತು ತನ್ನ ಜ್ವಲಂತ ಇತಿಹಾಸದ ಮೆರುಗನ್ನು ಉಳಿಸಿಕೊಳ್ಳಲು ಅಸಮರ್ಥವಾಯಿತು. ಯಾವುದೇ ರಾಜ್ಯದಲ್ಲೂ ಒಬ್ಬನೇ ನಾಯಕನನ್ನು ಒಮ್ಮತದಿಂದ ಸ್ಥಾಪಿಸಲು ಕಾಂಗ್ರೆಸ್ ಅಶಕ್ತವಾಗಿದೆ. ಇದರ ಒಟ್ಟು ಪರಿಣಾಮವೆಂದರೆ ಕಾಂಗ್ರೆಸ್ ಈಗ ತನ್ನ ರಾಷ್ಟ್ರೀಯ ಸ್ಥಾನಮಾನವನ್ನು ಉಳಿಸಿಕೊಳ್ಳಲು ಹೆಣಗುತ್ತಿದೆ. ಕೇಜ್ರಿವಾಲ್ ನಾಯಕತ್ವದ ಆಪ್ ಪಕ್ಷವು ಕಾಂಗ್ರೆಸ್ ಪಕ್ಷದ ವೈಫಲ್ಯವನ್ನು ತನ್ನ ಅವಕಾಶವಾಗಿ ಪರಿವರ್ತಿಸಲು ಶಕ್ತವಾಗುತ್ತಿರುವುದು ಕಾಂಗ್ರೆಸ್ ಪಕ್ಷದ ಪಾಲಿಗೆ ಬಹುದೊಡ್ಡ ಸವಾಲು. ಗುಜರಾತ್ ಮಾತ್ರವಲ್ಲ, ಕರ್ನಾಟಕದಲ್ಲೂ ಮತ್ತು ಇನ್ನೂ ಕೆಲವು ರಾಜ್ಯಗಳಲ್ಲಿ ಚುನಾವಣೆ ಸನ್ನಿಹಿತವಾಗಿದೆ. ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಕಾಂಗ್ರೆಸ್ ಅಪ್ರಸ್ತುತವಾಗುವ ಆತಂಕ ಅವರಿಗೆ ಮಾತ್ರವಲ್ಲ, ಭಾಜಪವನ್ನು ವಿರೋಧಿಸುವ ಜಾತ್ಯತೀತ ರಾಷ್ಟ್ರೀಯ ಪಕ್ಷವೊಂದರ ಅಗತ್ಯ ಈ ದೇಶಕ್ಕಿದೆಯೆಂದು ಯೋಚಿಸುವ ಅನೇಕರಿಗಿದೆ. 2024ರಲ್ಲಿ ಲೋಕಸಭೆಯ ಚುನಾವಣೆ ಎದುರಾಗಲಿದೆ.

ಈಗ ಪ್ರಜಾಪ್ರಭುತ್ವಕ್ಕಿರುವ ಆತಂಕದಲ್ಲಿ, ರಾಜಕೀಯ ಪಕ್ಷಗಳ ಮೇಲಾಟದಲ್ಲಿ, ಪ್ರಜ್ಞಾವಂತರು ಪ್ರತಿಪಕ್ಷಗಳ ಪೈಕಿ ಯಾವುದು ರಾಷ್ಟ್ರೀಯ ಪಕ್ಷವಾಗಿ ಉಳಿಯಬೇಕೆಂಬುದನ್ನು ಗಾಢವಾಗಿ ಚಿಂತಿಸಬೇಕಿದೆ. ಕಾಂಗ್ರೆಸ್ ಇದನ್ನು ಯೋಚಿಸದೆ ಇರಲಾರದು. ಅದರ ಹಿರಿಯ ನಾಯಕರ ಪೈಕಿ 23 ಮಂದಿ (ಇವರನ್ನು ಜಿ-23 ಎಂದದ್ದೂ ಇದೆ!) ಪಕ್ಷದ ಉಳಿವಿಗೋ ತಮ್ಮ ಭವಿಷ್ಯಕ್ಕೋ ಅಂತೂ ಪಕ್ಷದ ವಂಶಪಾರಂಪರ್ಯ ಲಕ್ಷಣವು ಅಳಿಯಬೇಕೆಂದು ಅದರ ಸಂವಿಧಾನವೇ ಬದಲಾಗಬೇಕೆಂದು ಬಹಿರಂಗವಾಗಿ ತಮ್ಮ ಅನಿಸಿಕೆಗಳನ್ನು ಪ್ರಕಟಿಸಿದರು. ಇತರರು ಇದನ್ನು ವಿರೋಧಿಸಿದರು. ಇದಕ್ಕೆ ಈ ಅಭಿಪ್ರಾಯಗಳು ತಪ್ಪೆಂಬುದಕ್ಕಿಂತಲೂ ಎಲ್ಲಿ ಪಕ್ಷದ ಕೇಂದ್ರವು ಇಂದಿರಾ ಕುಟುಂಬದಿಂದ ದೂರ ಸರಿಯುತ್ತದೆಯೆಂಬ ಮತ್ತು ಆ ಮೂಲಕವಾಗಿ ತಮ್ಮ ಭವಿಷ್ಯವು ಕಮರಿಹೋಗಬಹುದೆಂಬ ಭಯವಿದ್ದಿರಲೂಬಹುದು. ಈ 23ರ ಕ್ರಾಂತಿ ಒಮ್ಮೆ ವಿಫಲವಾಯಿತೆಂದನ್ನಿಸಿದರೂ ಅದರ ಫಲಶ್ರುತಿ ಈಗ ಕಾಣತೊಡಗಿದೆ. ಪಕ್ಷದ ಅಧ್ಯಕ್ಷೀಯ ಚುನಾವಣೆ ಮತ್ತು ಅದರಲ್ಲಿ ಸೋನಿಯಾ ಕುಟುಂಬವು ಪಾಲ್ಗೊಳ್ಳದಿರುವುದು ಇದರ ಸ್ಪಷ್ಟ ಸಂಕೇತ. ಆದರೆ 2004ರಲ್ಲಿ ಪ್ರಣವ್‌ಮುಖರ್ಜಿಯವರ ಬದಲು ಮನಮೋಹನ್‌ಸಿಂಗ್ ಪ್ರಧಾನಿಯಾದಂತೆ ಈ ಬಾರಿ ಮಲ್ಲಿಕಾರ್ಜುನ ಖರ್ಗೆಯವರ ಪ್ರವೇಶವಾಗಿದೆಯೇನೋ ಎಂದು ಅನ್ನಿಸುತ್ತದೆ. ಹಾಗೇನಾದರೂ ಆದರೆ ಕಾಂಗ್ರೆಸ್ ಮತ್ತೆ ಒಂದನೇ ಚೌಕಕ್ಕೆ ಮರಳುವುದು ನಿಶ್ಚಿತ.

ಈ ಹಂತದಲ್ಲಿ ಗುಜರಾತ್, ಕರ್ನಾಟಕ ಮತ್ತಿತರ ರಾಜ್ಯಗಳ ಚುನಾವಣೆಯತ್ತ ಗಮನಹರಿಸುವ ಬದಲು ರಾಹುಲ್ ಗಾಂಧಿ ‘ಭಾರತ್ ಜೋಡೊ’ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಪ್ರಶಂಸಾರ್ಹ ಹೌದೋ ಅಲ್ಲವೋ ಎನ್ನುವುದರ ಬದಲು ಗಮನಾರ್ಹವೆನ್ನಬಹುದು. ಇದರ ಸ್ಪಷ್ಟ ಸಂಕೇತ ಎರಡು: 1. 2024ರ ಚುನಾವಣೆಯ ಕುರಿತಂತೆ ಒಂದು ವೈಯಕ್ತಿಕ ಹಾಗೂ ಪಕ್ಷನೆಲೆಯ ಜನಪ್ರಿಯತೆಯ ಪ್ರಯೋಗ ಅಥವಾ ಒಗ್ಗಟ್ಟಿನ ಆತ್ಮವಿಶ್ಲೇಷಣೆ; 2. ಪಕ್ಷದೊಳಗೆ ತನ್ನ ಅಸ್ತಿತ್ವವನ್ನು ಮತ್ತು ಆ ಮೂಲಕ ತನ್ನ ಹಾಗೂ ಪಕ್ಷದ ಆತ್ಮಸ್ಥೈರ್ಯವನ್ನು ಮತ್ತು ಒಳಜಗಳವನ್ನು ಹತ್ತಿಕ್ಕಿ ಒಗ್ಗಟ್ಟನ್ನು ಹೆಚ್ಚಿಸಿಕೊಳ್ಳುವುದು. ಈ ಎರಡೂ ಅಂಶಗಳನ್ನು ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಯೋಚಿಸಿದರೆ ರಾಹುಲ್ ಗಾಂಧಿಯ ಯಾತ್ರೆಗೊಂದು ಅರ್ಥ ಬರಬಹುದು. ‘ಭಾರತ್ ಜೋಡೊ’ ‘ಕಾಂಗ್ರೆಸ್ ಜೋಡೊ’ವನ್ನೂ ತನಗರಿವಿಲ್ಲದೆಯೇ ಒಳಗೊಂಡಿದೆ.

ರಾಹುಲ್ ಗಾಂಧಿಯ ಈ ‘ಭಾರತ್ ಜೋಡೊ’ ಪ್ರಯೋಗವು ತಕ್ಕ ಮಟ್ಟಿನ ಯಶಸ್ಸನ್ನು ಪಡೆದಿದೆಯೆನ್ನಬಹುದು. ‘ತಕ್ಕಮಟ್ಟಿನ’ ಏಕೆಂದರೆ ವ್ಯಕ್ತಿಪ್ರಶಂಸೆಯ ಮೋದಿಯುಗದ ಸ್ವಾ(ಸರ್ವಾ)ಧಿಕಾರದೊಳಗೆ ಪ್ರತಿಪಕ್ಷದ ಯಾವ ಯೋಜನೆಯನ್ನೂ ನಿರರ್ಥಕಗೊಳಿಸುವ ಸಾಂಘಿಕ ಶಕ್ತಿ ಭಾಜಪಕ್ಕಿದೆ. ಅದನ್ನು ಮೀರಿ ಜನಪ್ರಿಯವಾಗುವುದು ಸುಲಭಸಾಧ್ಯವಲ್ಲ. ಮೇಲಾಗಿ ರಾಹುಲ್ ಗಾಂಧಿ ತನ್ನೆಲ್ಲ ಮೂರ್ತ ಒಳ್ಳೆಯತನದ ಹೊರತಾಗಿಯೂ ಕೆಲವೊಮ್ಮೆ ಮುಗ್ಧರಂತೆ ಕಂಡರೆ, ಇನ್ನು ಕೆಲವೊಮ್ಮೆ ಪೆದ್ದುತನದಿಂದಲೂ, ಮೂರ್ಖತನದಿಂದಲೂ ಹಿನ್ನಡೆಯನ್ನು ಅನುಭವಿಸುವುದನ್ನು ಕಾಣಬಹುದು. ಇದರ ಪರಿಣಾಮವಾಗಿ ಅವರು ತಮ್ಮ ವಿರೋಧಪಕ್ಷಗಳಿಗೆ ಟೀಕೆಯ ಸುಗ್ರಾಸವನ್ನು ನೀಡಿದ್ದಾರೆ. ‘ಪಪ್ಪು’ ಎಂಬುದು ಒಂದು ಉದಾಹರಣೆ ಅಷ್ಟೇ.

ಆದರೆ ಈ ಬಾರಿಯ ರಾಹುಲ್ ಯಾತ್ರೆ ಅವರ ಮತ್ತು ಕಾಂಗ್ರೆಸ್‌ನ ನಿರೀಕ್ಷೆಯನ್ನು ಮೀರಿ ಯಶಸ್ಸನ್ನು ಪಡೆದಿದ್ದರೆ ಅದಕ್ಕೆ ಅದರ ಕಾಯಕರ್ತರಷ್ಟೇ ಅಲ್ಲ, ಭಾಜಪವನ್ನು ವಿರೋಧಿಸುವ ಇಲ್ಲವೇ ಭಾಜಪವನ್ನು ನಿಯಂತ್ರಿಸಬೇಕೆಂಬ ಹಂಬಲದ ಹಲವಾರು ಗುಂಪುಗಳು ಸಾಮೂಹಿಕವಾಗಿ ಅದನ್ನು ಬೆಂಬಲಿಸಿದ್ದೇ ಆಗಿದೆ. ಅದೀಗ ಯಾತ್ರೆಯಾಗಿ ಉಳಿಯದೆ ಜಾತ್ರೆಯಾಗಿ ಬೆಳೆದಿದೆ. ಈ ಯಶಸ್ಸನ್ನು ಭಾಜಪವೂ ಅಳೆದಿದೆ. ಇದರ ಗಾಂಭೀರ್ಯವನ್ನು ಅದು ಕಂಡಿದೆ. ಇದನ್ನು ವಿರೋಧಿಸಲು ಅದು ತನ್ನೆಲ್ಲ ಅಂಗೋಪಾಂಗಗಳೊಂದಿಗೆ ಕ್ರಮಕೈಗೊಂಡಿದೆ.

ಆದರೆ ದೇಶವಿಡೀ ಆರ್ಥಿಕ ವೈಫಲ್ಯ, ನಿರುದ್ಯೋಗ ಮುಂತಾದ ಮೂಲಭೂತ ಸಮಸ್ಯೆಗಳಿಂದ ತೊಳಲಾಡುತ್ತಿರುವಾಗ ಮತ್ತು ತನ್ನದೆನ್ನಲು ಏನೂ ಇಲ್ಲದಿರುವುದರಿಂದ ಅದು ಸಹಜವಾಗಿಯೇ ರಾಜಕೀಯ ಪಕ್ಷವೊಂದು ತಲುಪಬಹುದಾದ ತಳಮಟ್ಟಕ್ಕಿಳಿಯುತ್ತಿದೆ. ಇದಕ್ಕಾಗಿ ವ್ಯಕ್ತಿಗತ ಟೀಕೆಗಳನ್ನು ಮಾಡಲು ಅದು ಹಿಂಜರಿಯುತ್ತಿಲ್ಲ. ರಾಜಕೀಯದಲ್ಲಿ ಪರಸ್ಪರ ಟೀಕೆಗಳಷ್ಟೇ ಸತ್ಯವೆಂಬ ಮಾತಿದೆಯಾದರೂ ರಾಹುಲ್ ಗಾಂಧಿಯ ಕುರಿತು ಟೀಕಿಸಬೇಕಾದರೆ ನೆಹರೂ ಹೆಸರನ್ನು ಎಳೆದು ತರುವುದು, ಮಹಿಳೆಯರನ್ನು ಗೌರವಿಸಬೇಕೆಂಬ ತನ್ನ ಘೋಷಿತ ಸಿದ್ಧಾಂತದ ಬದಲು ಸೋನಿಯಾಗಾಂಧಿಯ ವೈಯಕ್ತಿಕ ಬದುಕನ್ನು ಹಳಿಯುವುದು, ಇವೆಲ್ಲ ಭಾರತೀಯತೆಯ ಪ್ರಜ್ಞೆಯನ್ನು ಅವಮಾನಿಸಿದಂತೆ ಎಂಬುದು ಭಾಜಪಕ್ಕೆ ಮತ್ತು ಅದರ ಬೆಂಬಲಿಗರಿಗೆ ಹಾಗೂ ಸ್ವಘೋಷಿತ ದೇಶಭಕ್ತರಿಗೆ, ರಾಷ್ಟ್ರೀಯರಿಗೆ, ಅರ್ಥವಾಗದಿರುವುದು ಈ ದೇಶವನ್ನು ಯಾವ ರಸಾತಳದಲ್ಲಿ ಮುಳುಗಿಸಲು ಅದು ಮತ್ತು ಸಂಘಪರಿವಾರ ಸಿದ್ಧವಾಗಿದೆಯೆಂಬುದನ್ನು ತೋರಿಸುತ್ತದೆ. ಇನ್ನೂ ದುರಂತವೆಂದರೆ ಈ ಎಲ್ಲ ಕೌಶಲಗಳು ಕೆಳಹಂತದಲ್ಲಿ ನಡೆಯದೆ ದೇಶದ ಅತ್ಯುಚ್ಚ ಸ್ಥಾನದಲ್ಲಿರುವವರ ಅನುಗ್ರಹದಿಂದಲೇ ನಡೆಯುತ್ತಿರುವುದು.

ಹೀಗಿದ್ದರೂ ‘ಭಾರತ್ ಜೋಡೊ’ ತನ್ನ ನಿಶ್ಚಿತ ಗುರಿಯನ್ನು ತಲುಪಿದರೆ ಅದು ಕಾಂಗ್ರೆಸ್ ಪಕ್ಷಕ್ಕೂ ಒಳ್ಳೆಯದು; ಪ್ರಜ್ಞಾವಂತ ಸಮಾಜಕ್ಕೂ ಒಳ್ಳೆಯದು. ಏಕೆಂದರೆ ದೇಶದ ಸದ್ಯದ ಅಗತ್ಯವೆಂದರೆ ಮತಾಂಧತೆಯನ್ನು ತೊಲಗಿಸಿ ಒಂದು ಜಾತ್ಯತೀತ, ಭ್ರಷ್ಟಾಚಾರ ರಹಿತ, ಆರ್ಥಿಕವಾಗಿ ಸುದೃಢವಾದ ಸಮಾನತೆಯ ಸಮಾಜವನ್ನು, ದೇಶವನ್ನು ಕಟ್ಟಲು ಜನರು ಒಟ್ಟಾಗುವುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)