ಬಿಸಿಸಿಐ ಯುಎಇ ಘಟಕದ ವತಿಯಿಂದ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಗೆ ಸನ್ಮಾನ
ದುಬೈ: ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷ ಬಿ.ಎ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಇವರನ್ನು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಯುಎಇ ಘಟಕದ ವತಿಯಿಂದ ದುಬೈನಲ್ಲಿ ಸನ್ಮಾನಿಸಲಾಯಿತು.
ದುಬೈನ ಫಾರ್ಚ್ಯೂನ್ ಏಟ್ರಿಎಂ ಸಭಾಂಗಣದಲ್ಲಿ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರೊಂದಿಗೆ ನಡೆದ ಸಂವಾದ ಕಾರ್ಯಕ್ರಮಕ್ಕೆ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ನ ಅಶ್ರಫ್ ಷಾ ನಂತೂರ್ ಕಿರಾಅತ್ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಯುಎಇಯಲ್ಲಿ ಹೊಸದಾಗಿ ಕಾರ್ಯರೂಪಕ್ಕೆ ಬರಲಿರುವ ವಿಸಾ ವ್ಯವಸ್ಥೆ ಉದ್ಯಮಿಗಳಿಗೆ, ಸಣ್ಣ ಹೂಡಿಕೆದಾರರಿಗೆ, ಉದ್ಯೋಗಾಕಾಂಕ್ಷಿಗಳಿಗೆ ಯಾವ ರೀತಿ ಸಹಕಾರಿ ಆಗಲಿದೆ, ಸಮುದಾಯದ ಉದಯೋನ್ಮುಖ ಉದ್ಯಮಿಗಳಿಗೆ ಯುಎಇಯಲ್ಲಿ ವೇದಿಕೆ ಕಲ್ಪಿಸುವ ಕೊಂಡಿಯಾಗಿ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಹೇಗೆ ಸಹಕರಿಸಬಹುದು ಎಂಬ ಕುರಿತು ಉಪಯುಕ್ತ ಸಲಹೆ, ಚರ್ಚೆ ನಡೆಯಿತು.
ಬಿಸಿಸಿಐ ಯುಎಇ ಉಪಾಧ್ಯಕ್ಷ ಹಿದಾಯತ್ ಅಡ್ಡೂರ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಿಸಿಸಿಐ ಕೇಂದ್ರ ಸಮಿತಿಯಿಂದ ಉದ್ಯಮಿ ಆಸೀಫ್ ಸೂಫಿ ಖಾನ್ ಭಾಗವಹಿಸಿದ್ದು, ಯುಎಇ ಘಟಕದ ಅನ್ವರ್ ಹುಸೇನ್, ಹಂಝ ಅಬ್ದುಲ್ ಖಾದರ್, ಬಶೀರ್ ಕಿನ್ನಿಂಗಾರ್, ಇಮ್ರಾನ್ ಖಾನ್ ಎರ್ಮಾಳ್, ರಾಫಿ, ಸಮೀರ್ ಉದ್ಯಾವರ, ಅನ್ಸಾರ್ ಬಾರ್ಕೂರು, ಫಿರೋಝ್ ಉಪಸ್ಥಿತರಿದ್ದರು.