ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ರಾಜ್ ಅಧಿನಿಯಮಕ್ಕೆ ಸರಕಾರದಿಂದ ತಿದ್ದುಪಡಿ
ಗ್ರಾಪಂ ಅಧ್ಯಕ್ಷರ ಅಧಿಕಾರಕ್ಕೆ ಕತ್ತರಿ; ಚೆಕ್ ಸಹಿ ಅಧಿಕಾರ ಪಿಡಿಓಗೆ
ದೇವಿಪ್ರಸಾದ್ ಶೆಟ್ಟಿ
ಉಡುಪಿ, ಅ.6: ಅಧಿಕಾರದ ವಿಕೇಂದ್ರಿಕರಣದ ಮಹತ್ವದ ಆಶಯದೊಂದಿಗೆ ಜಾರಿಗೆ ಬಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993ಕ್ಕೆ ಮಹತ್ವದ ತಿದ್ದುಪಡಿಗಳನ್ನು ಮಾಡಿರುವ ಸರಕಾರ, ಗ್ರಾಮ ಪಂಚಾಯತ್ಗಳಲ್ಲಿ ಇದುವರೆಗೆ ಅಧ್ಯಕ್ಷರಿಗಿದ್ದ ಹಣಕಾಸು ನಿರ್ವಹಣೆಯೂ ಸೇರಿದಂತೆ ಹಲವು ಮಹತ್ವದ ಜವಾಬ್ದಾರಿಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ಒಪ್ಪಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಸರಕಾರದ ಅಪರ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಕಳೆದ ಆ.19ರಂದು ನಡೆದ ಸಭೆಯಲ್ಲಿ ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ರಾಜ್ ಅಧಿನಿಯಂ1993ರ ಪ್ರಕರಣಗಳಿಗೆ ತಿದ್ದುಪಡಿ ಹಾಗೂ ಗ್ರಾಮ ಪಂಚಾಯತ್ ನೌಕರರ ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ನಡಾವಳಿಗಳನ್ನು ರೂಪಿಸಲಾಗಿದ್ದು, ಅವುಗಳನ್ನು ಜಾರಿಗೊಳಿಸುವಂತೆ ಸರಕಾರ ಆದೇಶ ಹೊರಡಿಸಿದೆ. ಹಾಗೂ ಕೈಗೊಂಡ ಕ್ರಮದ ಬಗ್ಗೆ ಅನುಪಾಲನಾ ವರದಿ ಸಲ್ಲಿಸುವಂತೆ ಇಲಾಖೆಯ ಅಧೀನ ಕಾರ್ಯದರ್ಶಿಯವರಿಗೆ ನಿರ್ದೇಶಿಸಿದೆ.
ಚೆಕ್ ಸಹಿ ಅಧಿಕಾರವಿಲ್ಲ: ತಿದ್ದುಪಡಿಯಲ್ಲಿ ಮಾಡಲಾದ ಪ್ರಮುಖ ಬದಲಾವಣೆಗಳಲ್ಲಿ ಇದುವರೆಗೆ ಗ್ರಾಪಂಗಳ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಚೆಕ್ಗಳಿಗೆ ಸಹಿ ಹಾಕುವ ಅಧಿಕಾರವನ್ನು ಗ್ರಾಪಂ ಅಧ್ಯಕ್ಷರಿಂದ ಕಿತ್ತುಕೊಂಡಿರುವುದು. ಅದನ್ನೀಗ ಗ್ರಾಪಂನ ಪಿಡಿಒ ಹಾಗೂ ದ್ವಿತೀಯ ದರ್ಜೆ ಸಹಾಯಕರಿಗೆ ನೀಡಲಾಗಿದೆ. ಅದಕ್ಕೆ ಎರಡು ಕಾರಣಗಳನ್ನು ನೀಡಲಾಗಿದೆ.
ಗ್ರಾಪಂಗಳ ಅಧ್ಯಕ್ಷರು ವಿಳಂಬವಾಗಿ ಯೋಜನೆ, ಕಾರ್ಯಕ್ರಮಗಳ ಬಿಲ್ ಪಾವತಿ ಮಾಡುತ್ತಿರುವುದು ಸರಕಾರದ ಗಮನಕ್ಕೆ ಬಂದಿರುವುದರಿಂದ ಹಾಗೂ ಗ್ರಾಪಂ ಅಧ್ಯಕ್ಷರು ಚುನಾಯಿತ ಪ್ರತಿನಿಧಿಯಾಗಿರುವುದರಿಂದ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಉತ್ತರದಾಯಿತ್ವ ಹೊಂದಿಲ್ಲದಿರುವುದರಿಂದ ಗ್ರಾಪಂಗಳ ಹಣಕಾಸಿನ ವ್ಯವಹಾರವನ್ನು ಜಂಟಿಯಾಗಿ ಸರಕಾರಿ ನೌಕರರಾದ ಪಿಡಿಒ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ನಿರ್ವಹಿಸುವಂತೆ ತಿಳಿಸಲಾಗಿದೆ.
ಒಂದು ವೇಳೆ ಗ್ರಾಪಂಗಳಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಲಭ್ಯವಿಲ್ಲದಿದ್ದಲ್ಲಿ ಪಿಡಿಒ ಹಾಗೂ ಗ್ರಾಪಂ ಕಾರ್ಯದರ್ಶಿ ಗ್ರೇಡ್-1/ಗ್ರೇಡ್-2 ನಿರ್ವಹಿಸಲು ಅಧಿಸೂಚನೆ ಹೊರಡಿಸಲಾಗುವುದು ಎಂದು ನಡಾವಳಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ (ಗ್ರಾಪಂ ಆಯವ್ಯಯ ಹಾಗೂ ಲೆಕ್ಕಪತ್ರಗಳು) ನಿಯಮಗಳಿಗೆ 2006ರಲ್ಲಿ ತಂದ ತಿದ್ದುಪಡಿಯಂತೆ ಗ್ರಾಪಂನ ಹಣಕಾಸಿನ ವ್ಯವಹಾರವನ್ನು ಸರಕಾರ ಅಧಿಸೂಚಿಸುವ ಅಧಿಕಾರಿ ಅಥವಾ ಪ್ರಾಧಿಕಾರ ನಿರ್ವಹಿಸಲು ಉಪಬಂಧವಿದ್ದು, ಅದರಂತೆ ಅಧಿಸೂಚನೆ ಮೂಲಕ ಗ್ರಾಪಂಯ ಹಣಕಾಸಿನ ವ್ಯವಹಾರವನ್ನು ಗ್ರಾಪಂ ಅದ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಂಟಿಯಾಗಿ ನಿರ್ವಹಸಲು ಅವಕಾಶ ಕಲ್ಪಿಸಲಾಗಿತ್ತು.
ರಾಜ್ಯದ ಗ್ರಾಪಂಗಳ ಅಧ್ಯಕ್ಷರು ಗ್ರಾಪಂನ ವಿವಿಧ ಯೋಜನೆಗಳು/ ಕಾರ್ಯಕ್ರಮಗಳ ಬಿಲ್ ಪಾವತಿ ಮಾಡಲು ಅಕ್ರಮ ಸಂಭಾವನೆ ಸ್ವೀಕರಿಸುವಾಗ ಲೋಕಾಯುಕ್ತ ಟ್ರ್ಯಾಪ್ಗೆ ಒಳಗಾದ ಸಂದರ್ಭಗಳಲ್ಲಿ ಗ್ರಾಪಂಗಳ ಪಿಡಿಒ ಹಣಕಾಸಿನ ವ್ಯವಹಾರವನ್ನು ನಿರ್ವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಅದನ್ನೀಗ ಹೊಸ ನಡಾವಳಿ ಮೂಲಕ ಬದಲಾಯಿಸಲಾಗಿದೆ.
ಲೈಸನ್ಸ್ ಅಧಿಕಾರವೂ ಪಿಡಿಒಗೆ: ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ರಾಜ್ ಅಧಿನಿಯಮ 1993ರ ಪ್ರಕರಣ 64ರಿಂದ 70ರವರೆಗೆ ಕಟ್ಟಡಗಳಿಗೆ ಲೈಸನ್ಸ್, ಕಾರ್ಖಾನೆಗಳನ್ನು ಸ್ಥ್ಥಾಪಿಸಲು ಅನುಮತಿ, ಹೊಟೇಲ್ ಮತ್ತು ಅಂಗಡಿಗಳಿಗೆ ಲೈಸನ್ಸ್ ನೀಡಲು ಗ್ರಾಪಂಗಳಿಗೆ ಅಧಿಕಾರವಿತ್ತು. ಆದರೆ ಕೆಲವು ಕಡೆ ಗ್ರಾಪಂಗಳ ಸಭೆ ಸಕಾಲದಲ್ಲಿ ನಡೆಯದಿರುವುದರಿಂದ ಲೈಸನ್ಸ್ ನೀಡಲು ತೊಂದರೆಯಾಗುತಿದ್ದು, ಇದರಿಂದ ನಿಯಮಗಳಿಗೆ ತಿದ್ದುಪಡಿ ತಂದು ಲೈಸನ್ಸ್ ನೀಡುವ ಅಧಿಕಾರವನ್ನು ಪಿಡಿಒಗೆ ನೀಡಲಾಗಿದೆ. ಆತ ಮುಂದಿನ ಗ್ರಾಮ ಸಭೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಇ-ಸ್ವತ್ತು ತೆರಿಗೆ ನಿರ್ಧಾರವೂ ಇಲ್ಲ: ಇ-ಸ್ವತ್ತು ತಂತ್ರಾಂಶದ ಮೂಲಕ ತೆರಿಗೆ ನಿರ್ಧರಣೆ ಪಟ್ಟಿ (ನಮೂನೆ-9, 11ಎ ಮತ್ತು 11ಬಿ)ಗಳನ್ನು ವಿತರಿಸಲು ಪಂಚಾಯತ್ರಾಜ್ ನಿಯಮಗಳು 2006ರ ನಮೂನೆಗಳಲ್ಲಿ ಗ್ರಾಪಂ ನಿರ್ಣಯ ಸಂಖ್ಯೆ ಮತ್ತು ದಿನಾಂಕಗಳನ್ನು ನಮೂದಿಸಲು ಅವಕಾಶವಿತ್ತು. ಆದರೆ ಗ್ರಾಪಂ ಸಭೆಗಳನ್ನು ಸಕಾಲದಲ್ಲಿ ನಡೆಸದಿರುವುದರಿಂದ ನಮೂನೆಗಳನ್ನು ವಿತರಿಸಲು ತೊಂದರೆಯಾಗಿದ್ದು, ಅದನ್ನು ನಮೂನೆಯಿಂದ ಕೈಬಿಡಲು ತಿದ್ದುಪಡಿ ತಂದು ಪಿಡಿಒಗೆ ಅದನ್ನು ನೀಡಲಾಗಿದೆ. ಹೀಗಾಗಿ ಪಿಡಿಒ ನಮೂನೆಗಳನ್ನು ವಿತರಿಸಿ, ಮುಂದಿನ ಗ್ರಾಪಂ ಸಭೆಗೆ ಮಾಹಿತಿ ನೀಡಬಹುದಾಗಿದೆ ಎಂದು ನಡಾವಳಿ ಸೂಚಿಸಿದೆ.
ಇನ್ನು ಪಿಡಿಒಗೆ ರಾಜ್ಯಮಟ್ಟದಲ್ಲಿ ವರ್ಗಾವಣೆ: ಪ್ರಸ್ತುತ ಪಿಡಿಒ ವೃಂದವು ಜಿಲ್ಲಾ ವೃಂದವಾಗಿದ್ದು, ಜಿಲ್ಲೆಯು ಒಂದು ಘಟಕವಾಗಿದೆ. ಜಿಪಂನ ಸಿಇಒ ಅವರು ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರವಾಗಿದ್ದು, ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪಿಡಿಒಗೆ ವರ್ಗಾವಣೆ ಮಾಡಲು ಅವಕಾಶವಿದ್ದಿರಲಿಲ್ಲ. ಇದೀಗ ತಿದ್ದುಪಡಿ ಬಳಿಕ ಪಿಡಿಒ ವೃಂದವನ್ನು ರಾಜ್ಯ ವೃಂದವನ್ನಾಗಿ ನಿಗದಿಪಡಿಸಲು, ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಹಾಗೂ ಪಿಡಿಒಗಳನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲು ಕಾಯ್ದೆ ರೂಪಿಸುವಂತೆ ತಿಳಿಸಲಾಗಿದೆ.
ರಾಜ್ಯದಲ್ಲಿ ಸದ್ಯ 5963 ಗ್ರಾಪಂಗಳಿದ್ದು, ಸದ್ಯಕ್ಕೆ 68,068 ಮಂದಿ ಗ್ರಾಪಂ ಸದಸ್ಯರು ರಾಜ್ಯದಲ್ಲಿದ್ದಾರೆ.
ಗ್ರಾಮಸ್ವರಾಜ್ಗೆ ಕೊಡಲಿಯೇಟು: ದೇವಿಪ್ರಸಾದ್ ಶೆಟ್ಟಿ
ವ್ಯವಸ್ಥಿತ ಪಿತೂರಿ ಮೂಲಕ ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿಗಳ ಮೂಲಕ ಆದೇಶವೊಂದನ್ನು ಎಲ್ಲಾ ಗ್ರಾಪಂಗಳಿಗೂ ಕಳುಹಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಗ್ರಾಪಂ ಅಧ್ಯಕ್ಷ ಹಾಗೂ ಜನಪ್ರತಿನಿಧಿಗಳ ಅಧಿಕಾರವನ್ನು ಮೊಟಕು ಗೊಳಿಸಿದೆ ಎಂದು ಬೆಳಪು ಗ್ರಾಪಂನ ಸುದೀರ್ಘ ಅವಧಿ ಅಧ್ಯಕ್ಷ ಹಾಗೂ ರಾಜ್ಯ ಪಂಚಾಯತ್ ರಾಜ್ ಪ್ರತಿನಿಧಿಗಳ ಒಕ್ಕೂಟದ ಉಪಾಧ್ಯಕ್ಷ ರಾಗಿರುವ ಬೆಳಪು ದೇವಿಪ್ರಸಾದ್ ಶೆಟ್ಟಿ ಟೀಕಿಸಿದ್ದಾರೆ.
ಈ ಮೂಲಕ ಗ್ರಾಮಸ್ವರಾಜ್ ಕನಸಿಗೆ ಬಿಜೆಪಿ ಸರಕಾರ ಕೊಡಲಿಯೇಟು ನೀಡಿದೆ ಎಂದವರು ಆರೋಪಿಸಿದರು. ಅಧಿಕಾರದ ವಿಕೇಂದ್ರಿಕರಣದ ಆಶಯದೊಂದಿಗೆ ಪಂಚಾಯತ್ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು. ವಿಧಾನಸಭೆಯ ತೀರ್ಮಾನದಂತೆ ಗ್ರಾಮಸರಕಾರದ ನಿರ್ಧಾರವೂ ಕಾನೂನಾತ್ಮಕವಾಗಿ ಅನುಷ್ಠಾನ ಗೊಳ್ಳುತ್ತಿತ್ತು. ಇದೀಗ ರಾಜ್ಯ ಸರಕಾರ ಕಾಯ್ದೆಗೆ ತಿದ್ದುಪಡಿ ತಂದು ಗ್ರಾಪಂ ಅಧ್ಯಕ್ಷ ಹಾಗೂ ಜನಪ್ರತಿನಿಧಿಗಳಿಗೆ ಇರುವ ಅಧಿಕಾರ ವನ್ನೇ ಕಿತ್ತುಕೊಂಡಿದೆ. ಈ ಮೂಲಕ ಅಧಿಕಾರಶಾಹಿ ವ್ಯವಸ್ಥೆಗೆ ಸರಕಾರ ಪರೋಕ್ಷವಾಗಿ ಮಣಿದಂತಾಗಿದೆ ಎಂದವರು ಆರೋಪಿಸಿದರು.
ಇದೊಂದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದ್ದು, ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.