ಕೋಲಾರ ಜಿಲ್ಲೆಯ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ: ಡಿಹೆಚ್ಎಸ್ ಖಂಡನೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಅ. 7: ಕೋಲಾರದಲ್ಲಿ ದಲಿತರ ಮೇಲೆ ದೌರ್ಜನ್ಯ ಮಾಡಿದವರನ್ನು `ದೌರ್ಜನ್ಯ ತಡೆ ಕಾಯ್ದೆ’ ಅಡಿ ಬಂಧಿಸಬೇಕು. ಘಟನೆಯನ್ನು ಪರಿಶೀಲಿಸಿ ಕಟ್ಟು ನಿಟ್ಟಿನ ಕ್ರಮ ಜರುಗಿಸಿ, ದಲಿತರಿಗೆ ನ್ಯಾಯ ಒದಗಿಸಬೇಕು ಎಂದು ದಲಿತ ಹಕ್ಕುಗಳ ಸಮಿತಿ(ಡಿಹೆಚ್ಎಸ್) ಕರ್ನಾಟಕ ಒತ್ತಾಯಿಸಿದೆ.
ಈ ಕುರಿತು ಸಮಿತಿಯು ಪ್ರಕಟನೆ ಹೊರಡಿಸಿದ್ದು, ‘ಕೋಲಾರ ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ಸಾಮಾಜಿಕ ನ್ಯಾಯ ಕೇಳಿದರೆ ದಲಿತರ ಮೇಲೆ ದೌರ್ಜನ್ಯ ಮಾಡಲಾಗಿದೆ. ಇದಕ್ಕೆ ಪೊಲೀಸರ ಕುಮ್ಮಕು ನೀಡಲಾಗುತ್ತಿದೆ. ರಾಜೀ ಮಾಡಿಸಿ ದಲಿತರಿಗೆ ಅನ್ಯಾಯ ಮಾಡುವುದು ದಿನನಿತ್ಯದ ಕೃತ್ಯವಾಗಿದೆ ಎಂದು ಆರೋಪಿಸಿದೆ.
ಪೊಲೀಸರು ಈ ಗಲಾಟೆಯನ್ನು ತಡೆಯಲು ವಿಫಲರಾಗಿದ್ದು, ಎರಡು ಕಡೆಯವರ ಮೇಲೆ ಕೇಸ್, ಕೌಂಟರ್ ಕೇಸ್ ಹಾಕಿದ್ದಾರೆ. ದಲಿತರ ಮೇಲೆ ಕೊಲೆ ಕೇಸು ಹಾಕಿರುವುದು ಸರಿಯಲ್ಲ. ದಲಿತರನ್ನು ಅವಮಾನಿಸುವುದು, ಕೆರಳಿಸುವುದು ಇತ್ತೀಚಿನ ವಾಡಿಕೆಯಾಗಿದೆ. ದಲಿತರನ್ನು ಹೊಡೆದರೆ ತಕ್ಷಣ ಎಫ್ಐಆರ್ ಹಾಕುವುದಿಲ್ಲ, ಹಾಕಿದರೂ ಕೌಂಟರ್ ಕೇಸ್ ಹಾಕುತ್ತಾರೆ. ಈ ಮೂಲಕ ಬಿಜೆಪಿ ಸರಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ತಿಳಿಸಿದೆ.