ಪರೇಶ್ ಮೇಸ್ತಾ ಸಾವು: ಉತ್ತರ ಕನ್ನಡ ಜಿಲ್ಲೆಗೆ ನ್ಯಾಯ ಸಿಗಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
2017ರಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಕೋಮು ಉದ್ವಿಗ್ನತೆಗೆ ತಳ್ಳಿದ ಹೊನ್ನಾವರದ ಪರೇಶ್ ಮೇಸ್ತಾ ಸಾವಿನ ಪ್ರಕರಣದ ಕುರಿತಂತೆ ಸಿಬಿಐ ಕೊನೆಗೂ ತನ್ನ ತನಿಖೆಯನ್ನು ಮುಗಿಸಿ ವರದಿಯನ್ನು ಸಲ್ಲಿಸಿದೆ. ನಾಲ್ಕೂವರೆ ವರ್ಷಗಳ ಸುದೀರ್ಘ ತನಿಖೆಯ ಆನಂತರ, ಸಿಬಿಐಯು ನ್ಯಾಯಾಲಯಕ್ಕೆ 1,500 ಪುಟಗಳ ವರದಿಯನ್ನು ನೀಡಿದ್ದು, ಪರೇಶ್ ಮೇಸ್ತಾರದ್ದು ಸಹಜ ಸಾವು ಎಂದು ಅದರಲ್ಲಿ ಉಲ್ಲೇಖಿಸಿದೆ. ಪ್ರಕರಣದ ವಿಚಾರಣೆ ಮುಂದುವರಿಯಲಿದೆ. ಕೊಲೆಯ ಹೆಸರಿನಲ್ಲಿ ಸುದ್ದಿಯಾಗಿ, ಸಮಾಜವನ್ನು ಆತಂಕಕ್ಕೆ ತಳ್ಳಿದ ಪ್ರಕರಣವೊಂದು ಇದೀಗ ‘ಸಹಜ ಸಾವು’ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಉತ್ತರ ಕನ್ನಡ ಜಿಲ್ಲೆಯ ಶ್ರೀಸಾಮಾನ್ಯರು ನೆಮ್ಮದಿಯ ನಿಟ್ಟುಸಿರೊಂದನ್ನು ಬಿಟ್ಟಿದ್ದಾರೆ. ಯಾಕೆಂದರೆ, ಈ ಘಟನೆಯನ್ನು ಕೊಲೆಯೆಂದು ಬಿಂಬಿಸಿ ಒಂದು ರಾಜಕೀಯ ಪಕ್ಷ ಉತ್ತರ ಕನ್ನಡ ಜಿಲ್ಲೆಗೆ ಸಾಕಷ್ಟು ಅನ್ಯಾಯಗಳನ್ನು ಮಾಡಿತ್ತು. ಒಂದು ನಿರ್ದಿಷ್ಟ ಸಮುದಾಯದ ತಲೆಗೆ ಈ ಸಾವನ್ನು ಕಟ್ಟಲು ಭಾರೀ ಪ್ರಯತ್ನವನ್ನು ನಡೆಸಿತ್ತು.ಅದರಲ್ಲಿ ಭಾಗಶಃ ಯಶಸ್ಸನ್ನು ಪಡೆದಿತ್ತು. ಇಂತಹ ಸಂದರ್ಭದಲ್ಲಿ ಅಂದಿನ ಸಿದ್ದರಾಮಯ್ಯ ನೇತೃತ್ವದ ಸರಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಸಿಬಿಐಯ ಚುಕ್ಕಾಣಿ ಕೇಂದ್ರದ ಕೈಯಲ್ಲಿರುವುದರಿಂದ, ಬಿಜೆಪಿಯ ನಾಯಕರೂ ಯಾವುದೇ ತಕರಾರು ಮಾಡುವಂತೆ ಇರಲಿಲ್ಲ. ಇದೀಗ ಕೇಂದ್ರ, ರಾಜ್ಯಗಳೆರಡರಲ್ಲೂ ಬಿಜೆಪಿ ಸರಕಾರವಿರುವ ಹೊತ್ತಿಗೇ ಸಿಬಿಐಯ ತನಿಖೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಮತ್ತು ಸಂಘಪರಿವಾರದ ನಾಯಕರ ಎಲ್ಲ ಆರೋಪಗಳನ್ನು ನಿರಾಕರಿಸಿ, ಸಿಬಿಐ ಅಧಿಕಾರಿಗಳು ತಮ್ಮ ವರದಿಯನ್ನು ಸಲ್ಲಿಸಿದ್ದಾರೆ.
ಮೇಸ್ತಾರ ಸಾವನ್ನು ಕೊಲೆ ಎಂದು ಬಿಂಬಿಸಿ, ಕೆಲವು ಸಂಘಟನೆಗಳು, ರಾಜಕೀಯ ಪಕ್ಷಗಳು ಉತ್ತರ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚಲು ಯತ್ನಿಸಿದ್ದವು. ಮೇಸ್ತಾ ಅವರನ್ನು ಹಿಂದೂ ಸಂಘಟನೆಯ ಕಾರ್ಯಕರ್ತನೆಂದು ಬಿಂಬಿಸಿ, ಆ ಕಾರಣಕ್ಕಾಗಿ ಅವರನ್ನು ಒಂದು ನಿರ್ದಿಷ್ಟ ಸಮುದಾಯದ ಜನರು ಕೊಂದು ಹಾಕಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡಿದ್ದರು. ರಾಜಕೀಯ ನಾಯಕರ ಉದ್ವಿಗ್ನಕಾರಿ ಹೇಳಿಕೆಗಳ ಕಾರಣದಿಂದಾಗಿ ಉತ್ತರ ಕನ್ನಡ ಜಿಲ್ಲೆ ಹಲವು ದಿನಗಳ ಕರ್ಫ್ಯೂವನ್ನು ಎದುರಿಸಿತ್ತು. ಜನಸಾಮಾನ್ಯರ ಬದುಕು ಅಸ್ತವ್ಯಸ್ತವಾಗಿತ್ತು.ಇದೀಗ ಸತ್ಯ ಏನು ಎನ್ನುವುದು ಸಿಬಿಐ ತನಿಖೆಯಿಂದ ಬಹಿರಂಗವಾಗಿದೆ. ಆದರೆ ಅಷ್ಟಕ್ಕೇ ಇಡೀ ಪ್ರಕರಣವನ್ನು ಮುಗಿಸಿ ಬಿಡುವಂತೆ ಇಲ್ಲ. ಮೇಸ್ತಾರ ಸಾವನ್ನು ಕೊಲೆ ಎಂದು ಬಿಂಬಿಸಿ ಸಮಾಜವನ್ನು ಒಡೆಯುವುದಕ್ಕೆ ಯತ್ನಿಸಿರುವ ಶಕ್ತಿಗಳ ಬಗ್ಗೆಯೂ ತನಿಖೆಯಾಗಬೇಕಾಗಿದೆ. ಅವರಿಗೆ ಶಿಕ್ಷೆಯಾಗಬೇಕಾಗಿದೆ. ಮೇಸ್ತಾರ ಸಾವನ್ನು ಕೊಲೆ ಎನ್ನುವುದಕ್ಕೆ ಯಾವ ಆಧಾರವೂ ಇಲ್ಲದೆ ಇದ್ದಾಗಲೂ ಕೆಲವು ರಾಜಕಾರಣಿಗಳು ಅದನ್ನು ಕೊಲೆ ಎಂದು ಬಿಂಬಿಸಲು ಏನು ಕಾರಣ? ಸಮಾಜವನ್ನು ಒಡೆಯುವ ವಿಚ್ಛಿದ್ರಕಾರಿ ಶಕ್ತಿಗಳು ಇದರ ಹಿಂದೆ ಕೆಲಸ ಮಾಡಿದ್ದಾರೆಯೆ? ಅಥವಾ ಚುನಾವಣೆಯನ್ನು ಗೆಲ್ಲುವುದಕ್ಕಾಗಿ ಮೇಸ್ತನ ಮೃತದೇಹವನ್ನು ಮುಂದಿಟ್ಟು ರಾಜಕಾರಣಿಗಳು ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡಿದರೆ? ಇದೇ ಸಂದರ್ಭದಲ್ಲಿ, ಪರೇಶ್ ಮೇಸ್ತಾರ ಸಾವಿನ ಬಗ್ಗೆ ಸ್ಥಳೀಯ ಪತ್ರಿಕೆಗಳು ಬಣ್ಣ ಕಟ್ಟಿ ಬರೆದವು. ಕೊಲೆ ಹೇಗೆ ನಡೆಯಿತು ಎಂಬುದನ್ನು ಕಣ್ಣಿಗೆ ಕಟ್ಟಿದಂತೆ ವರ್ಣಿಸಿ ಸಮಾಜವನ್ನು ದಾರಿ ತಪ್ಪಿಸಿದರು. ಇದೀಗ ಸಿಬಿಐ ವರದಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಿದೆ. ಮಾಧ್ಯಮಗಳು ಈಗ ಕನಿಷ್ಠ ಪಕ್ಷ ‘ವಿಷಾದ’ವನ್ನಾದರೂ ತಮ್ಮ ಪತ್ರಿಕೆಗಳಲ್ಲಿ ವ್ಯಕ್ತಪಡಿಸಬೇಕಲ್ಲವೆ?
ಈ ಪ್ರಕರಣದಲ್ಲಿ ಮಾಧ್ಯಮವನ್ನು ರಾಜಕಾರಣಿಗಳು ದಾರಿ ತಪ್ಪಿಸಿರುವುದಲ್ಲ. ರಾಜಕೀಯ ಸಂಘಟನೆಗಳ ಜೊತೆಗೆ ಶಾಮೀಲಾಗಿಯೇ ಪರೇಶ್ ಮೇಸ್ತಾರ ಸಾವಿಗೆ ಮಾಧ್ಯಮಗಳು ಕೊಲೆಯ ರೂಪ ಕೊಟ್ಟಿದ್ದವು. ಈ ಹಿಂದೆ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ‘ನಂದಿತಾ ಆತ್ಮಹತ್ಯೆ’ ಪ್ರಕರಣವನ್ನು ಕೂಡ ಮಾಧ್ಯಮಗಳು ಇಷ್ಟೇ ಬೇಜವಾಬ್ದಾರಿಯಿಂದ ವರದಿ ಮಾಡಿದ್ದವು. ಆತ್ಮಹತ್ಯೆ ಪ್ರಕರಣಕ್ಕೆ, ಸಾಮೂಹಿಕ ಅತ್ಯಾಚಾರ, ಕೊಲೆಯ ರೂಪವನ್ನು ಕೊಟ್ಟು ಮುಖಪುಟದಲ್ಲಿ ಸುದ್ದಿ ಪ್ರಕಟಿಸಿದ್ದವು. ಅತ್ಯಂತ ಪ್ರಚೋದನಾಕಾರಿಯಾದ ಕಪೋಲಕಲ್ಪಿತ ಕತೆಗಳನ್ನು ಸೇರಿಸಿ ಜನರನ್ನು ಪ್ರಚೋದಿಸಿದ್ದವು. ಈ ವರದಿಗಳನ್ನೇ ಮುಂದಿಟ್ಟುಕೊಂಡು ರಾಜಕೀಯ ಪಕ್ಷಗಳು ಮತ್ತು ಸಂಘಪರಿವಾರ ಶಿವಮೊಗ್ಗದಾದ್ಯಂತ ಒಂದು ನಿರ್ದಿಷ್ಟ ಸಮುದಾಯದ ಮೇಲೆ ದ್ವೇಷವನ್ನು ಹಂಚಿದವು. ತೀರ್ಥಹಳ್ಳಿಗೆ ಬೆಂಕಿ ಬಿತ್ತು. ಅಮಾಯಕರ ಅಂಗಡಿ, ಮನೆಗಳನ್ನು ಧ್ವಂಸ ಮಾಡಲಾಯಿತು. ಇದಾದ ಬಳಿಕ ನಂದಿತಾ ಪ್ರಕರಣ ಕೊಲೆ, ಅತ್ಯಾಚಾರವಲ್ಲ, ಅದೊಂದು ಸಾಮಾನ್ಯ ಆತ್ಮಹತ್ಯೆ ಎನ್ನುವುದು ಬೆಳಕಿಗೆ ಬಂತು. ಆದರೆ, ವದಂತಿಗಳನ್ನು ಹರಡಿದ ಪತ್ರಿಕೆಗಳಿಗೆ, ಅದನ್ನು ಮುಂದಿಟ್ಟುಕೊಂಡು ದ್ವೇಷ ಹಂಚಿದ ರಾಜಕಾರಣಿಗಳಿಗೆ ಯಾವ ಶಿಕ್ಷೆಯೂ ಆಗಲಿಲ್ಲ. ಪರೇಶ್ ಮೇಸ್ತಾ ಪ್ರಕರಣದಲ್ಲೂ ಇದು ಪುನರಾವರ್ತನೆಗೊಂಡಿದೆ.
ವಿಪರ್ಯಾಸವೆಂದರೆ, ಸಿಬಿಐ ವರದಿಯನ್ನು ನೀಡಿದ ಬಳಿಕವೂ ಬಿಜೆಪಿ ಮತ್ತು ಸಂಘಪರಿವಾರದ ಕೆಲವು ನಾಯಕರು ‘ಅಡಿಗೆ ಬಿದ್ದರೂ ಮೂಗು ಮೇಲೆ’ ಎಂದು ತಮ್ಮ ಮಾನ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಸಿಬಿಐ ವರದಿಯೇ ಸರಿಯಿಲ್ಲ ಎಂದು ಕೆಲವರು ಹೇಳಿಕೆ ನೀಡುತ್ತಿದ್ದಾರೆ. ಸಾಕ್ಷಗಳನ್ನು ನಾಶ ಮಾಡಲಾಗಿದೆ ಎಂದು ಸಮಜಾಯಿಶಿ ನೀಡುತ್ತ್ತಿದ್ದಾರೆ. ಅವರ ಪ್ರಕಾರ ಸಂಘಪರಿವಾರ ಮತ್ತು ಮಾಧ್ಯಮಗಳು ನೀಡಿದ ತೀರ್ಪೆ ಅಂತಿಮ. ಬಿಜೆಪಿ ಮತ್ತು ಸಂಘಪರಿವಾರ ಒಂದು ಕೊಲೆಯನ್ನು ಖಂಡಿಸಬೇಕಾದರೆ, ಸಂತ್ರಸ್ತ ಮತ್ತು ಕೊಲೆಗಾರ ವಿಭಿನ್ನ ಧರ್ಮಗಳಿಗೆ ಸೇರಿರಬೇಕು. ಹಿಂದೂ ಯುವಕನೊಬ್ಬನನ್ನು ಹಿಂದೂ ಯುವಕನೇ ಕೊಂದರೆ ಬಿಜೆಪಿಯ ಪ್ರಕಾರ ಅದು ಖಂಡನೆಗೆ ಅರ್ಹವಲ್ಲ. ಅದರ ವಿರುದ್ಧ ಧ್ವನಿಯನ್ನು ಎತ್ತಿದ ಯಾವ ಉದಾಹರಣೆಗಳೂ ಇಲ್ಲ. ಪರೇಶ್ ಮೇಸ್ತಾರ ಪ್ರಕರಣದಲ್ಲಂತೂ ಅದು ಇನ್ನೂ ಒಂದು ಹೆಜ್ಜೆ ಮುಂದೆ ಹೋಯಿತು. ಸಹಜ ಸಾವು ಸಂಭವಿಸಿದ ವ್ಯಕ್ತಿಯ ಮೃತದೇಹವನ್ನೇ ಕೊಲೆಯೆಂದು ಸಾಬೀತು ಮಾಡಲು ಹರಸಾಹಸ ನಡೆಸಿತು. ಆ ಸಾವನ್ನು ಕೊಲೆಯೆಂದು ಕಟ್ಟು ಕತೆ ಕಟ್ಟಿ, ಇನ್ನೊಂದು ಧರ್ಮದ ಮೇಲೆ ಸ್ಥಳೀಯರನ್ನು ಎತ್ತಿ ಕಟ್ಟಿತು. ಮೇಸ್ತಾನ ಮೃತದೇಹದ ಬಲದಿಂದಲೇ, ಚುನಾವಣೆಯನ್ನು ಎದುರಿಸಿ ರಾಜಕೀಯ ನಾಯಕರು ಅಧಿಕಾರ ಹಿಡಿದರು. ಇದೀಗ ಸಿಬಿಐಯ ವರದಿಯಿಂದ ಪರೇಶ್ ಮೇಸ್ತಾರ ಕುಟುಂಬಕ್ಕೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಜನರಿಗೆ ನ್ಯಾಯ ದೊರಕಿತು ಎಂದು ಹೇಳಲಾಗದು.
ನ್ಯಾಯ ದೊರಕಲೇಬೇಕಾದರೆ, ಪರೇಶ್ ಮೇಸ್ತಾರ ಮೃತದೇಹವನ್ನು ಮುಂದಿಟ್ಟುಕೊಂಡು ವದಂತಿಗಳನ್ನು ಹರಡಿದ ಮಾಧ್ಯಮಗಳು ಮತ್ತು ರಾಜಕಾರಣಿಗಳ ವಿರುದ್ಧ ಪ್ರಕರಣ ದಾಖಲಾಗಬೇಕು. ಸುಳ್ಳು ಸಾಕ್ಷಗಳನ್ನು ಸೃಷ್ಟಿಸಿ ಜನರನ್ನು ದಾರಿ ತಪ್ಪಿಸಲು ಯತ್ನಿಸಿದ ರಾಜಕಾರಣಿಗಳಿಗೆ ಶಿಕ್ಷೆಯಾಗಬೇಕು. ಇದೇ ಸಂದರ್ಭದಲ್ಲಿ ಜನರಿಗೂ ಪ್ರಕರಣದಲ್ಲಿ ಒಂದು ಎಚ್ಚರಿಕೆಯಿದೆ. ಯಾವುದೇ ಸಾವು ಸಂಭವಿಸಿದಾಗ ರಾಜಕಾರಣಿಗಳ ಪ್ರಚೋದನಾಕಾರಿ ಮಾತು ಕೇಳಿ ಆತುರಕ್ಕೆ ಬುದ್ಧಿ ಕೊಡಬಾರದು. ಈ ಸಂದರ್ಭದಲ್ಲಿ ಗರಿಷ್ಠ ಸಹನೆ, ತಾಳ್ಮೆಯನ್ನು ಪ್ರದರ್ಶಿಸಿ, ಸಮಾಜದ ಶಾಂತಿ, ಸೌಹಾರ್ದವನ್ನು ಕಾಪಾಡಬೇಕು. ನಮ್ಮ ಸಮಾಜಕ್ಕೆ ನಾವೇ ಕೈಯಾರೆ ಬೆಂಕಿ ಹಚ್ಚಿ, ರಾಜಕಾರಣಿಗಳಿಗೆ ಲಾಭ ಮಾಡಿಕೊಡಬಾರದು. ಹಾಗೆಯೇ ಹೆಣಗಳನ್ನು ಮುಂದಿಟ್ಟು ರಾಜಕಾರಣ ನಡೆಸುವ ಯಾವುದೇ ರಾಜಕಾರಣಿಗಳನ್ನು ಚುನಾವಣೆಯಿಂದ ದೂರವಿಡಬೇಕು