ವಿದ್ಯಾರ್ಥಿಗಳ ವಿದೇಶಿ ವಲಸೆಯ ಹಿಂದಿನ ರಾಜಕೀಯ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಉಕ್ರೇನ್ ವಿರುದ್ಧ ರಶ್ಯ ದಾಳಿ ನಡೆಸಿದಾಗ, ಉಕ್ರೇನ್‌ನಂತಹ ಪುಟ್ಟ ದೇಶದಲ್ಲಿ ಹೆಚ್ಚಿನ ಶಿಕ್ಷಣಕ್ಕಾಗಿ ತೆರಳಿದ್ದ ಭಾರತೀಯ ವಿದ್ಯಾರ್ಥಿಗಳು ತೀವ್ರ ಚರ್ಚೆಗೆ ಒಳಗಾದರು. ‘ವೈದ್ಯಕೀಯ ಶಿಕ್ಷಣ ಕಲಿಯಲು ಅಷ್ಟು ದೂರ ಯಾಕೆ ಹೋಗಬೇಕು?’ ಎಂಬ ಪ್ರಶ್ನೆಯನ್ನು ಪ್ರಧಾನಿ ನರೇಂದ್ರ ಮೋದಿಯವರೇ ಅಮಾಯಕರಂತೆ ಕೇಳಿದರು. ಕೆಲವರಂತು ಇದಕ್ಕೆ ಮುಖ್ಯ ಕಾರಣ ದೇಶದಲ್ಲಿರುವ ‘ಮೀಸಲಾತಿ’ ಎಂದು ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡರು. ವಿಪರ್ಯಾಸವೆಂದರೆ, ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಗಳಿಗೆ ತೆರಳುವ ಸಂಖ್ಯೆ ಮಾತ್ರ ಇಳಿಮುಖವಾಗಿಲ್ಲ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎನ್ನುವುದನ್ನು ಅಂಕಿಅಂಶಗಳು ಹೇಳುತ್ತವೆ. ಭಾರತದಲ್ಲಿ ಇತ್ತೀಚೆಗೆ ಬಲಪಂಥೀಯ ಸಂಸ್ಥೆಗಳು ಶಿಕ್ಷಣ ವ್ಯವಸ್ಥೆಯಲ್ಲಿ ನಡೆಸುತ್ತಿರುವ ಹಸ್ತಕ್ಷೇಪದಿಂದಾಗಿ ಜನರು ಭಾರತದ ಶಿಕ್ಷಣ ವ್ಯವಸ್ಥೆಯ ಕುರಿತಂತೆ ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಭಾರತೀಯ ಶಿಕ್ಷಣದ ಹಸ್ತಕ್ಷೇಪದಲ್ಲಿ ಮೇಲ್ಜಾತಿಯ ಜನರ ಪಾತ್ರ ಬಹುದೊಡ್ಡದು. ವಿಪರ್ಯಾಸವೆಂದರೆ, ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಗಳಿಗೆ ತೆರಳುವ ವಿದ್ಯಾರ್ಥಿಗಳಲ್ಲೂ ಮೇಲ್ಜಾತಿಯ ಪ್ರಬಲರೇ ಅಧಿಕ. ಭಾರತದಲ್ಲಿರುವ ಮೀಸಲಾತಿ ವ್ಯವಸ್ಥೆಯಿಂದಾಗಿ ನಾವು ನಮ್ಮ ಮಕ್ಕಳನ್ನು ಅಧ್ಯಯನಕ್ಕಾಗಿ ವಿದೇಶಗಳಿಗೆ ಕಳುಹಿಸುತ್ತಿದ್ದೇವೆ ಎಂಬುದಾಗಿ ಹೆಚ್ಚಿನ ಮೇಲ್ಜಾತಿಯ ಹೆತ್ತವರು ಹೇಳುತ್ತಾರೆ. ಆದರೆ ಇದರಲ್ಲಿ ಎಳ್ಳಷ್ಟೂ ಸತ್ಯಾಂಶವಿಲ್ಲ. ಕಳಪೆ ಗುಣಮಟ್ಟದ ಶಿಕ್ಷಣ ಮತ್ತು ಶೈಕ್ಷಣಿಕ ಸಂಸ್ಥೆಗಳ ರಾಜಕೀಕರಣವು ತಮ್ಮ ಮಕ್ಕಳ ಶೈಕ್ಷಣಿಕ ಬೆಳವಣಿಗೆಯನ್ನು ತಡೆಯುತ್ತದೆ ಎನ್ನುವುದು ಬಹುತೇಕ ಪಾಲಕರ ನಂಬಿಕೆ. ಮಾಧ್ಯಮ ವರದಿಗಳ ಪ್ರಕಾರ, ಮೇಲ್ಜಾತಿಗಳ ಹೆಚ್ಚಿನ ವಿದ್ಯಾರ್ಥಿಗಳು ವಿದೇಶಗಳ ಕಾಲೇಜುಗಳಲ್ಲಿ ಕಲಿಯುತ್ತಿರುವುದು ತಮ್ಮ ಹೆತ್ತವರ ಸಂಪತ್ತಿನಿಂದಾಗಿ. ಶ್ರೀಮಂತ ಮತ್ತು ಧಾರಾಳ ಸಂಪನ್ಮೂಲಗಳನ್ನು ಹೊಂದಿರುವ ಹೆತ್ತವರು ಬ್ಯಾಂಕ್ ಖಾತರಿಗಳನ್ನು ಒದಗಿಸುತ್ತಾರೆ ಹಾಗೂ ಇದರಿಂದಾಗಿ ಅವರ ಮಕ್ಕಳು ಸುಲಭವಾಗಿ ಶಿಕ್ಷಣ ಸಾಲಗಳನ್ನು ಪಡೆಯುತ್ತಾರೆ. ಇದು ಸಮಾಜದ ದುರ್ಬಲ ವರ್ಗಗಳಿಂದ ಬಂದಿರುವ ವಿದ್ಯಾರ್ಥಿಗಳಿಗೆ ಸಾಧ್ಯವಾಗುವುದಿಲ್ಲ.
ಇತ್ತೀಚೆಗೆ, ರಶ್ಯ ದಾಳಿ ಮಾಡಿದಾಗ ವಿದ್ಯಾರ್ಥಿಗಳು ಉಕ್ರೇನ್‌ನಿಂದ ವಾಪಸಾದವರ ಪೈಕಿ ಕೆಳ ವರ್ಗಗಳ ಒಂದೇ ಒಂದು ವಿದ್ಯಾರ್ಥಿ ಇರಲಿಲ್ಲ. ಹೆಚ್ಚಿನ ಭಾರತೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಜಾತಿ-ಆಧಾರಿತ ಹಿಂಸಾಚಾರವು ಕಳೆದ ಒಂದು ದಶಕದಲ್ಲಿ ಹೆಚ್ಚಿದೆ. ದಲಿತ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಮತ್ತು ಬರ್ಬರವಾಗಿ ಕೊಲ್ಲಲಾಗುತ್ತಿದೆ. ಕ್ರೈಸ್ತ, ಮುಸ್ಲಿಮ್ ವಿದ್ಯಾರ್ಥಿಗಳು ಸಾಮಾಜಿಕ ಬಹಿಷ್ಕಾರದ ಬಿಸಿಯನ್ನು ಅನುಭವಿಸುತ್ತಿದ್ದಾರೆ. ಕೆಲವು ಮೇಲ್ಜಾತಿಯ ಪ್ರೊಫೆಸರ್‌ಗಳು, ಇಂಥ ವಿದ್ಯಾರ್ಥಿಗಳ ದರ್ಜೆ (ಗ್ರೇಡ್)ಗಳನ್ನು ಕೆಳ ದರ್ಜೆಗೆ ಇಳಿಸುವ ಮೂಲಕ ಅವರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ರೋಹಿತ್ ವೇಮುಲಾ ಆತ್ಮಹತ್ಯೆ ಕಾಲೇಜುಗಳಲ್ಲಿ ದಲಿತ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ತೆರೆದಿಟ್ಟರೆ, ಸಿಎಎ ಹೋರಾಟದ ಬಳಿಕ ವಿಶ್ವವಿದ್ಯಾನಿಲಯಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳ ಸ್ಥಿತಿಗತಿಯೂ ಚಿಂತಾಜನಕವಾಗಿದೆ. ಕಾಲೇಜುಗಳ ಇಂಥ ವಿಷಮಯ ವಾತಾವಾರಣದಲ್ಲಿ ತಮ್ಮ ಮಕ್ಕಳು ಸುರಕ್ಷಿತರಾಗಿರುತ್ತಾರೆ ಎನ್ನುವ ಭರವಸೆಯನ್ನು ಹೆತ್ತವರು ಹೊಂದಿಲ್ಲ. ಇತ್ತೀಚೆಗೆ ವಾರಣಾಸಿಯ ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠದ ದಲಿತ ಅತಿಥಿ ಉಪನ್ಯಾಸಕರೊಬ್ಬರನ್ನು ಸೇವೆಯಿಂದ ವಜಾ ಗೊಳಿಸಲಾಯಿತು ಹಾಗೂ ಅವರಿಗೆ ವಿಶ್ವವಿದ್ಯಾನಿಲಯದ ಆವರಣ ಪ್ರವೇಶಿಸಲು ಅವಕಾಶ ನಿರಾಕರಿಸಲಾಯಿತು. ಅವರು ಮಾಡಿದ ಅಪರಾಧವೆಂದರೆ, ಮಹಿಳೆಯರು ನವರಾತ್ರಿಯ ಅವಧಿಯಲ್ಲಿ ಉಪವಾಸ ಮಾಡುವ ಬದಲು ಸಂವಿಧಾನ ಮತ್ತು ಹಿಂದೂ ಸಂಹಿತೆ ಕಾನೂನುಗಳನ್ನು ಓದಿದರೆ ಒಳ್ಳೆಯದಾಗುತ್ತದೆ ಎಂಬ ಸಂದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದರು. ಆದರೆ, ವಿಪರ್ಯಾಸವೆಂದರೆ, ಕಳೆದ 75 ವರ್ಷಗಳ ಅವಧಿಯಲ್ಲಿ ಅಸಹಿಷ್ಣುತೆಯಿಂದ ಅಥವಾ ತಾರತಮ್ಯದಿಂದ ನಡೆದುಕೊಂಡಿರುವುದಕ್ಕಾಗಿ ಯಾವೊಬ್ಬ ಮೇಲ್ಜಾತಿಯ ಶಿಕ್ಷಕನನ್ನು ಅಮಾನತುಗೊಳಿಸಿದ ಅಥವಾ ಸೇವೆಯಿಂದ ವಜಾಗೊಳಿಸಿದ ಉದಾಹರಣೆಯಿಲ್ಲ.
ಯಾವ ಜನರು ಈ ದೇಶ, ರಾಷ್ಟ್ರೀಯತೆ ಮೊದಲಾದ ಪದಗಳ ಜೊತೆಗೆ ಬದುಕುತ್ತಿದ್ದಾರೆಯೋ ಅವರ ಮಕ್ಕಳೇ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದೇಶ ತೊರೆಯುತ್ತಿದ್ದಾರೆ. ಮೇಲ್ಜಾತಿಗಳ ಹೆಚ್ಚಿನ ಪುರುಷರು ಮತ್ತು ಮಹಿಳೆಯರು ವಿದೇಶಗಳಲ್ಲಿ ಖಾಯಂ ಆಗಿ ವಾಸಿಸುವ ಬಯಕೆಯನ್ನು ಹೊಂದಿದ್ದಾರೆ ಎನ್ನುವುದನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಅವರ ಉದ್ದೇಶ ಹೆಚ್ಚಿನ ಹಣ ಸಂಪಾದನೆಯಾಗಿದೆ. ಹಾಗೆಯೇ ವಿದೇಶಗಳ ಕುರಿತ ಮೇಲರಿಮೆ, ಭಾರತದ ಕುರಿತಂತೆ ಆಳದಲ್ಲಿರುವ ಕೀಳರಿಮೆ ಮುಖ್ಯ ಕಾರಣ. ಬೇರೆ ಬೇರೆ ಕಾರಣಗಳಿಗಾಗಿ 2015ರ ಬಳಿಕ ವಿದೇಶಕ್ಕೆ ತೆರಳಿದ ಸುಮಾರು 1.30 ಲಕ್ಷಕ್ಕೂ ಅಧಿಕ ಮಂದಿ ವಿದೇಶಿ ಪೌರತ್ವವನ್ನು ಪಡೆದುಕೊಂಡಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪೌರತ್ವವನ್ನು ಪಡೆದುಕೊಂಡ ಭಾರತೀಯರಲ್ಲಿ ಮೇಲ್ಜಾತಿಯ ಜನರೇ ಅಧಿಕ ಎನ್ನುವ ಅಂಶವೂ ವರದಿಯಿಂದ ಬಹಿರಂಗವಾಗಿದೆ. ವಿದೇಶಗಳಲ್ಲಿ ಹೆಚ್ಚಿನ ಅಧ್ಯಯನಕ್ಕೆ ತೆರಳುವ ವಿದ್ಯಾರ್ಥಿಗಳಲ್ಲಿ ಬಹುತೇಕರು ವಿದೇಶಗಳಲ್ಲೇ ನೆಲಸಲು ಇಷ್ಟಪಡುತ್ತಾರೆ ಎಂದು ವರದಿ ಹೇಳುತ್ತದೆ. ಸಂವಿಧಾನ ಎಲ್ಲರಿಗೂ ಶಿಕ್ಷಣದ ಹಕ್ಕನ್ನು ನೀಡಿದೆ. ಇದು ಮೇಲ್ಜಾತಿ ಕೆಳಜಾತಿಗಳ ನಡುವಿನ ಅಂತರವನ್ನು ಕಡಿಮೆ ಗೊಳಿಸಿದೆ. ಒಂದು ರೀತಿಯಲ್ಲಿ ಮೇಲ್ಜಾತಿಯ ಸರಿಸಮಾನರಾಗಿ ಈ ದೇಶದ ಶೋಷಿತರನ್ನು ತಂದು ನಿಲ್ಲಿಸಿದೆ. ಆದರೆ ಶಿಕ್ಷಣದ ಖಾಸಗೀಕರಣ ಮತ್ತೆ ಶಿಕ್ಷಣ ವ್ಯವಸ್ಥೆಯಲ್ಲಿ ಅಸಮಾನತೆಯನ್ನು ಸೃಷ್ಟಿಸಿದೆ. ಶೋಷಿತ ಸಮುದಾಯದ ಬಹುಸಂಖ್ಯಾತ ಜನರು ಸರಕಾರಿ ಶಾಲೆಗಳನ್ನೇ ನೆಚ್ಚಿಕೊಂಡಿದ್ದಾರೆ.
ಇದೀಗ ಸರಕಾರಿ ಶಾಲೆಗಳ ಗುಣಮಟ್ಟವನ್ನು ಸಂಪೂರ್ಣ ಕೆಡಿಸಿ ಹಾಕುವ ಮೂಲಕ ಶೋಷಿತ ಸಮುದಾಯದ ಶಿಕ್ಷಣವನ್ನು ಪರೋಕ್ಷವಾಗಿ ಕಿತ್ತುಕೊಳ್ಳುವ ಸಂಚಿನಲ್ಲಿ ಮೇಲ್ವರ್ಗ ಯಶಸ್ವಿಯಾಗಿದೆ. ಎರಡನೆಯ ಹಂತವಾಗಿ ಸರಕಾರ ದೇಶದ ಒಟ್ಟು ಶಿಕ್ಷಣ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಲು ಮುಂದಾಗಿದೆ. ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಬದಲಾಗಬೇಕು ಎನ್ನುವ ಹುನ್ನಾರದ ನೇತೃತ್ವವನ್ನು ವಹಿಸಿರುವುದೇ ಮೇಲ್ಜಾತಿಯ ಜನರು. ಆದರೆ ಇದೇ ಸಂದರ್ಭದಲ್ಲಿ ಆ ಬದಲಾದ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ಕಲಿಸಲು ಹಿಂದೇಟು ಹಾಕುತ್ತಿರುವುದು ಇದೇ ಮೇಲ್ಜಾತಿಯ ಜನರು. ವಿದೇಶಗಳಲ್ಲಿ ಪೌರತ್ವ ಪಡೆದ ಭಾರತೀಯರೂ ದೇಶದ ಬಲಪಂಥೀಯ ಚಿಂತನೆಗಳಿಗೆ ಹಣವನ್ನು ಹೂಡುತ್ತಿದ್ದಾರೆ. ದೇಶದಲ್ಲಿ ಶೈಕ್ಷಣಿಕ ಅಸಮಾನತೆಯನ್ನು ಮರು ಹುಟ್ಟು ಹಾಕಿದರೆ, ಹಿಂದಿನ ವರ್ಣ ವ್ಯವಸ್ಥೆಯನ್ನು ಮತ್ತೆ ಪ್ರಬಲವಾಗಿ ಜಾರಿಗೆ ತರಬಹುದು ಎನ್ನುವ ಉದ್ದೇಶವೂ ಇದರ ಹಿಂದಿದೆ. ಭಾರತದ ಶಿಕ್ಷಣ ವ್ಯವಸ್ಥೆ ಹದಗೆಡುತ್ತಿದ್ದಂತೆಯೇ, ವಿದೇಶಿ ವಿಶ್ವವಿದ್ಯಾನಿಲಯಗಳು ಭಾರತವನ್ನು ಪ್ರವೇಶಿಸುತ್ತಿವೆ. ಮುಂದೊಂದು ದಿನ ಎಲ್ಲರೂ ವಿದೇಶಿ ವಿವಿಗಳ ಮೂಲಕವೇ ಶಿಕ್ಷಣವನ್ನು ತನ್ನದಾಗಿಸಿಕೊಳ್ಳುವ ಸ್ಥಿತಿ ಬಂದರೆ ಅಚ್ಚರಿಯಿಲ್ಲ.