ವಿಶ್ವವಿದ್ಯಾನಿಲಯಗಳ ಗುಣಮಟ್ಟ ಕಾಪಾಡಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕಂಡ, ಕಂಡಲ್ಲಿ ವಿಶ್ವವಿದ್ಯಾನಿಲಯಗಳನ್ನು ಮಾಡಿ ಶೈಕ್ಷಣಿಕ ಗುಣಮಟ್ಟ ಈಗಾಗಲೇ ಹಳ್ಳ ಹಿಡಿದಿದೆ. ಈಗ ಮತ್ತೆ ಬೀದರ್, ಬಾಗಲಕೋಟೆ, ಹಾವೇರಿ, ಕೊಪ್ಪಳ, ಕೊಡಗು, ಚಾಮರಾಜನಗರಗಳಿಗೆ ಹೊಸ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ ನೀಡಿದೆ. ಜಿಲ್ಲೆಗೊಂದು ವಿಶ್ವವಿದ್ಯಾನಿಲಯ ಸ್ಥಾಪಿಸುವ ಇಂಗಿತವನ್ನು ಸರಕಾರ ವ್ಯಕ್ತಪಡಿಸಿದೆ. ಆದರೆ ಇದರ ಪರಿಣಾಮಗಳ ಬಗ್ಗೆಯೂ ಸರಕಾರ ಯೋಚಿಸಬೇಕಾಗಿದೆ.
ವಿಧಾನ ಮಂಡಲದಲ್ಲಿ ವಿಧೇಯಕ ತಂದು ಸದನದ ಒಪ್ಪಿಗೆ ಪಡೆದು ಹೊಸ ವಿಶ್ವ ವಿದ್ಯಾನಿಲಯಗಳನ್ನು ಆರಂಭಿಸಬಹುದು. ಆದರೆ, ಅವುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಸರಕಾರ ಆಸಕ್ತಿ ತೋರಿಸದಿದ್ದರೆ ಏನು ಪ್ರಯೋಜನ? ಈಗಾಗಲೇ ಅಸ್ತಿತ್ವದಲ್ಲಿರುವ ವಿಶ್ವವಿದ್ಯಾನಿಲಯಗಳು ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಕೇವಲ ಕೆಲವು ಜನರಿಗೆ ಅಧಿಕಾರ ಸೌಕರ್ಯಗಳನ್ನು ಒದಗಿಸಿಕೊಡುವ ಕೇಂದ್ರಗಳಾಗಿವೆ. ಅನೇಕ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಗುಣಮಟ್ಟ ಕುಸಿದಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದು ವಿಧಾನಸಭೆಯ ಅಧಿವೇಶನದಲ್ಲೂ ಪ್ರಸ್ತಾವವಾಗಿದೆ. ವಿಶ್ವವಿದ್ಯಾನಿಲಯಗಳ ಕುಲಪತಿಯಾಗಲು ಐದರಿಂದ ಹತ್ತು ಕೋಟಿ ರೂಪಾಯಿ ಲಂಚ ನೀಡಬೇಕಾಗಿದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಅಧಿಕಾರದಲ್ಲಿರುವವರ ಪಾದ ಸೇವೆ ಮಾಡಿ, ದಕ್ಷಿಣೆ ನೀಡಿ ಕುಲಪತಿಗಳಾಗಿ ಬರುವವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಇತ್ತೀಚಿನ ವಿಧಾನಸಭಾ ಅಧಿವೇಶನದಲ್ಲಿ ಅನೇಕ ಸದಸ್ಯರು ಪಕ್ಷಭೇದ ಮರೆತು ವಿಶ್ವವಿದ್ಯಾನಿಲಯಗಳ ಅಧ್ವಾನಗಳ ಬಗ್ಗೆ ಮಾತಾಡಿದ್ದಾರೆ. ವಿಶ್ವವಿದ್ಯಾನಿಲಯಗಳಲ್ಲಿ ನೇಮಕಾತಿ, ಭಡ್ತಿ, ಖರೀದಿ ವ್ಯವಹಾರಗಳಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಸದನದಲ್ಲಿ ಅನೇಕ ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಅರ್ಹತೆ ಇಲ್ಲದವರು ಯುಜಿಸಿಯ ಲಕ್ಷಕ್ಕೂ ಹೆಚ್ಚು ರೂಪಾಯಿ ಸಂಬಳಕ್ಕಾಗಿ ಉಪನ್ಯಾಸಕರಾಗಿ ಬರುತ್ತಿದ್ದಾರೆ. ಇದರಿಂದ ವಿಶ್ವವಿದ್ಯಾನಿಲಯಗಳ ಗುಣಮಟ್ಟ ಸಹಜವಾಗಿ ಕುಸಿಯುತ್ತದೆ. ಲಂಚ ಕೊಟ್ಟು ಬಂದವರು ಹಣಗಳಿಸಿಕೊಳ್ಳಲು ಪರೀಕ್ಷೆಗಳಲ್ಲಿ ನಕಲು ಮಾಡಲು ಅವಕಾಶ ಮಾಡಿಕೊಡುತ್ತಾರೆ. ಹೀಗಾಗಿ ಸ್ನಾತಕೋತ್ತರ ಮತ್ತು ಪಿಎಚ್.ಡಿ. ಪದವಿಗಳು ಮೌಲ್ಯ ಕಳೆದುಕೊಂಡಿವೆ. ಬೌದ್ಧಿಕ ಚಟುವಟಿಕೆಗಳ ತಾಣಗಳಾಗಬೇಕಾದ ವಿಶ್ವವಿದ್ಯಾನಿಲಯಗಳಲ್ಲಿ ಹಗರಣಗಳ ದುರ್ವಾಸನೆ ಹರಡಿದೆ.
ವಿಶ್ವವಿದ್ಯಾನಿಲಯಗಳ ದುರವಸ್ಥೆಯಿಂದ ಉನ್ನತ ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವುದನ್ನು ಮೊದಲು ಜನ ಮಾತಾಡಿಕೊಳ್ಳುತ್ತಿದ್ದರು. ಈಗ ಶಾಸಕರು ವಿಧಾನಸಭೆಯಲ್ಲಿ ಪ್ರಸ್ತಾವಿಸುತ್ತಿದ್ದಾರೆ. ಸರಕಾರದಿಂದ ನೇಮಕಾತಿಗೊಳ್ಳುವ ಆಡಳಿತ ಪಕ್ಷದ ಮಂತ್ರಿ ಮತ್ತು ಶಾಸಕರ ಸಂಬಂಧಿಕರು ವಿಶ್ವವಿದ್ಯಾನಿಲಯಗಳಲ್ಲಿ ಪರ್ಯಾಯ ಅಧಿಕಾರ ಕೇಂದ್ರಗಳನ್ನು ಸ್ಥಾಪಿಸಿಕೊಂಡು ದರ್ಬಾರು ನಡೆಸಿದ್ದಾರೆ. ಕುಲಪತಿಗಳಾಗಿ ದಕ್ಷಿಣೆ ಕೊಟ್ಟು ಬರುವವರು ಹಣ ಗಳಿಸುವಲ್ಲಿ ನಿರತರಾಗಿದ್ದಾರೆ. ಈ ಅವ್ಯವಸ್ಥೆಯನ್ನು ಸರಿಪಡಿಸಲು ಸರಕಾರ ಹೊಸ ಕಾನೂನನ್ನು ತರಲು ಹೊರಟಿದೆ. ಹೊಸ ಕಾನೂನು ಸರಕಾರಿ ಹಾಗೂ ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ಅನ್ವಯವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವರು ಸದನದಲ್ಲಿ ಹೇಳಿದ್ದಾರೆ. ಆದರೆ ಕಾನೂನು ತಂದ ಮಾತ್ರಕ್ಕೆ ವಿಶ್ವವಿದ್ಯಾನಿಲಯಗಳ ಅವ್ಯವಸ್ಥೆ ಕೊನೆಯಾಗುವುದಿಲ್ಲ. ವಿಶ್ವವಿದ್ಯಾನಿಲಯಗಳ ಅಧ್ವಾನಕ್ಕೆ ಶೈಕ್ಷಣಿಕ ಕ್ಷೇತ್ರದ ಲೋಪಗಳು ಮಾತ್ರ ಕಾರಣವಲ್ಲ. ವಿಶ್ವವಿದ್ಯಾನಿಲಯಗಳನ್ನು ರಾಜಕೀಯ ಪುಢಾರಿಗಳಿಂದ ಮುಕ್ತ ಗೊಳಿಸಬೇಕಾಗಿದೆ. ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಮತ್ತು ನೈತಿಕ ಅರಿವು ಮೂಡಿಸುವ ಕೆಲಸ ಮೊದಲು ಆಗಬೇಕಾಗಿದೆ.
ಶಿಗ್ಗಾಂವಿಯ ಜಾನಪದ ವಿಶ್ವವಿದ್ಯಾನಿಲಯ ಸೇರಿದಂತೆ ಅನೇಕ ವಿಶ್ವವಿದ್ಯಾನಿಲಯಗಳು ಸಮರ್ಪಕ ಅನುದಾನದ ಕೊರತೆಯಿಂದ ಬಳಲುತ್ತಿವೆ.ಕೆಲವು ವರ್ಷಗಳ ಹಿಂದೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ಮಾಡಿದ್ದ ಹಂಪಿ ವಿಶ್ವವಿದ್ಯಾನಿಲಯ ಕೂಡ ಮುಂಚಿನ ಹೆಸರನ್ನು ಉಳಿಸಿಕೊಂಡಿಲ್ಲ. ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯ ಕೋಮುವಾದಿ ಸಂಘಟನೆಗಳ ಚಟುವಟಿಕೆಗಳ ತಾಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕೆಲ ವಿಶ್ವವಿದ್ಯಾನಿಲಯಗಳಲ್ಲಿ ಕೆಲ ತಿಂಗಳುಗಳಿಂದ ಸರಿಯಾಗಿ ಸಂಬಳ ಪಾವತಿಯಾಗುತ್ತಿಲ್ಲ ಎಂಬ ದೂರುಗಳಿವೆ.ಅಧಿಕಾರದಲ್ಲಿರುವ ಪಕ್ಷ ತನ್ನ ಸಿದ್ಧಾಂತವನ್ನು ವಿಶ್ವವಿದ್ಯಾನಿಲಯಗಳ ಮೇಲೆ ಹೇರುತ್ತಿದೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಇದನ್ನೆಲ್ಲ ಸರಕಾರ ಸರಿಪಡಿಸಬೇಕಾಗಿದೆ.
ಕೆಲ ವಿಶ್ವವಿದ್ಯಾನಿಲಯಗಳು ನೀಡುವ ಗೌರವ ಡಾಕ್ಟರೇಟ್ ಪದವಿಯದು ಇನ್ನೊಂದು ಹಗರಣ. ಮುಂಚೆ ಅಪರೂಪದ ಸಂದರ್ಭಗಳಲ್ಲಿ ನಾಡಿಗೆ, ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಮನ್ನಿಸಿ ಇಂಥ ಪದವಿಯನ್ನು ನೀಡಲಾಗುತ್ತಿತ್ತು. ಆದರೆ ಊರೂರಲ್ಲಿ ಖಾಸಗಿ ಮತ್ತು ಸರಕಾರಿ ವಿಶ್ವವಿದ್ಯಾನಿಲಯಗಳು ತಲೆ ಎತ್ತತೊಡಗಿದ ನಂತರ ಉದ್ಯಮಪತಿಗಳು, ರಿಯಲ್ ಎಸ್ಟೇಟ್ ದಗಾಕೋರರು, ಲಾಭಕ್ಕಾಗಿ ವೈದ್ಯಕೀಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು ಮತ್ತು ವೃತ್ತಿ ನಿರತ ರಾಜಕಾರಣಿಗಳು, ಮಂತ್ರಿ, ಶಾಸಕರು ಈಗ ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾಗುತ್ತಿದ್ದಾರೆ. ಯಾವುದೇ ವ್ಯಕ್ತಿಗೆ ಆತನ ಸಾಧನೆಯನ್ನು ನಾಡಿಗೆ ನೀಡಿರುವ ಕೊಡುಗೆಯನ್ನು ಗುರುತಿಸಿ ಗೌರವಿಸುವುದು ತಪ್ಪಲ್ಲ. ಆದರೆ ನಮ್ಮ ರಾಜ್ಯದ ಕೆಲವು ವಿಶ್ವವಿದ್ಯಾನಿಲಯಗಳು ಆಡಳಿತ ಪಕ್ಷದ ಸಂಸದರು ಹಾಗೂ ಶಾಸಕರಿಗೆ ಮತ್ತು ಆಡಳಿತ ಪಕ್ಷದ ಜೊತೆಗೆ ಒಡನಾಟ ಹೊಂದಿರುವ ಉದ್ಯಮಿಗಳು ಮತ್ತು ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್ ನೀಡುತ್ತಿರುವುದು ಸರಿಯೇ ಎಂದು ಸಂಬಂಧಿಸಿದವರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಬಹುತೇಕ ವಿಶ್ವವಿದ್ಯಾನಿಲಯಗಳ ಕುಲಪತಿಗಳ ನೇಮಕಾತಿಯಲ್ಲಿ ಸಂಬಂಧಿಸಿದವರ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಅರ್ಹತೆಗಿಂತಲೂ ಅವರು ಹೊಂದಿರುವ ರಾಜಕೀಯ ಪ್ರಭಾವ ಮತ್ತು ಹಣಕಾಸಿನ ಶಕ್ತಿಗಳು ಮುಖ್ಯ ಪಾತ್ರವನ್ನು ವಹಿಸುತ್ತವೆ ಎಂಬ ಆರೋಪಗಳು ಕೇಳಿ ಬರುತ್ತಲೇ ಇವೆ. ಗೌರವ ಡಾಕ್ಟರೇಟ್ ಆಯ್ಕೆ ಸಮಿತಿಯ ನೇಮಕದಲ್ಲೂ ಸಿಂಡಿಕೇಟ್ ಸದಸ್ಯರ ಆಯ್ಕೆಯಲ್ಲೂ ವಿದ್ವತ್ತನ್ನು ಕಡೆಗಣಿಸಿ ರಾಜಕೀಯ, ಒಲವು ನಿಲುವುಗಳು ಪ್ರಾಮುಖ್ಯತೆ ಪಡೆಯುತ್ತಿವೆ. ಶೈಕ್ಷಣಿಕ ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಸಂಘ ಪರಿವಾರ ಬಹುತೇಕ ವಿಶ್ವವಿದ್ಯಾನಿಲಯಗಳ ನೇಮಕಾತಿಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಿರುವುದು ಗುಟ್ಟಿನ ಸಂಗತಿಯಲ್ಲ.
ಸರಕಾರ ಈ ಅಂಶಗಳತ್ತ ಗಮನ ಹರಿಸಬೇಕು. ವಿಶ್ವವಿದ್ಯಾನಿಲಯಗಳಿಗಾಗಿ ಹೊಸ ಕಾನೂನನ್ನು ರೂಪಿಸುವಾಗ ಇಂಥ ಲೋಪಗಳನ್ನು ಸರಿಪಡಿಸಬೇಕು. ಬರೀ ಕಾನೂನು ಮಾಡಿದರೆ ಸಾಲದು, ಅದರ ಜಾರಿಯ ಬಗ್ಗೆ ಆಸಕ್ತಿ ತೋರಿಸಬೇಕು. ಆಗ ಮಾತ್ರ ವಿಶ್ವವಿದ್ಯಾನಿಲಯಗಳನ್ನು ಕಾಪಾಡಲು ಸಾಧ್ಯವಾಗುತ್ತದೆ.