ಸೊರಬ ಬಿಜೆಪಿ ಗೊಂದಲ ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗಿದೆ: ಶಾಸಕ ಕುಮಾರ್ ಬಂಗಾರಪ್ಪ
ಶಿವಮೊಗ್ಗ, ಅ.10: ಸೊರಬ ಬಿಜೆಪಿ ಗೊಂದಲವನ್ನು ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಟ್ಟಿದ ಹಿರಿಯ ಪದ್ಮನಾಭ ಭಟ್ ಆ ರೀತಿ ಹೇಳಿಕೆ ಕೊಟ್ಟಿದ್ದು ಸರಿಯಲ್ಲ ಎಂದು ನನ್ನ ಭಾವನೆ ಎಂದರು. ಮುರುಳಿ ಮನೋಹರ್ ಜೋಶಿ, ಅಡ್ವಾಣಿ, ಬಿ.ಬಿ. ಶಿವಪ್ಪ ಅವರ ಬಗ್ಗೆ ಮಧು ಬಂಗಾರಪ್ಪ ಹೇಳಿಕೆ ಖಂಡನಿಯ. ಹಿಂದೊಮ್ಮೆ ಮಧು ಬಂಗಾರಪ್ಪ ಬಿಜೆಪಿಯಲ್ಲಿದ್ದರು ಎಂಬುದನ್ನು ಮರೆಯಬಾರದು. ಅವರು ಬಿಜೆಪಿ, ಸಮಾಜವಾದಿ, ಜೆಡಿಎಸ್ ನಂತರ ಇದೀಗ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಜೆಡಿಎಸ್ ಅನ್ನುಒಡೆದು ಕಾಂಗ್ರೆಸ್ಗೆ ಯಾಕೆ ಸೇರಿದರು ಎಂಬುದನ್ನು ಮಾಜಿ ಸಿಎಂ ಕುಮಾರಸ್ವಾಮಿಯವರು ಸ್ಪಷ್ಟಪಡಿಸಬೇಕು ಎಂದರು.
ಮಧು ಬಂಗಾರಪ್ಪ ಅಧಿಕಾರಾವಧಿಯಲ್ಲಿ ಶಿವಮೊಗ್ಗದ ಶರಾವತಿ ಡೆಂಟಲ್ ಕಾಲೇಜ್ ಹಗರಣ, ಸೊರಬ ತಾಲೂಕಿನಲ್ಲಿ ಬಗರ್ ಹುಕುಂನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು. ತಂದೆಯವರ ಸಮಾಧಿ ಮಾಡಲು ಯೋಗ್ಯತೆ ಇಲ್ಲದವರು ಮಧು ಬಂಗಾರಪ್ಪ ಎಂದು ಟೀಕಿಸಿದ ಕುಮಾರ್ ಬಂಗಾರಪ್ಪ, ಸಿಎಂ ಆಗಿದ್ದ ಯಡಿಯೂರಪ್ಪ ಅವರು ಸಮಾಧಿಯ ಸ್ಮಾರಕಕ್ಕೆ ಅನುದಾನವನ್ನೂ ಕೊಟ್ಟಿದ್ದರು. ಅದು ಸರಿಯಾಗಿ ಬಳಕೆಯಾಗಿಲ್ಲ ಎಂದು ದೂರಿದರು.