ಮರೆಯಾದ ಮುಲಾಯಂ
ಕೋಮುವಾದದ ವಿರುದ್ಧದ ಗಟ್ಟಿ ಧ್ವನಿ, ರಾಷ್ಟ್ರ ರಾಜಕೀಯದ ಪ್ರಭಾವಿ ನಾಯಕನ ನಿರ್ಗಮನ
ನವೆಂಬರ್ 22, 1939ರಲ್ಲಿ ಪಶ್ಚಿಮ ಮಧ್ಯ ಉತ್ತರ ಪ್ರದೇಶದ ಈಗಿನ ಇಟಾವಾ ಜಿಲ್ಲೆಯ ಸೈಫೈ ಎಂಬಲ್ಲಿ ಬಡ ರೈತ ಕುಟುಂಬದಲ್ಲಿ ಆರು ಮಕ್ಕಳಲ್ಲಿ ಒಬ್ಬರಾಗಿ ಹುಟ್ಟಿದ, ಮೂರು ಬಾರಿಯ ಮುಖ್ಯಮಂತ್ರಿ ಮತ್ತು ಆರು ಬಾರಿಯ ಲೋಕಸಭಾ ಸದಸ್ಯ, ಮಾಜಿ ರಕ್ಷಣಾ ಮಂತ್ರಿ ಮುಲಾಯಂ ಸಿಂಗ್-ಉತ್ತರ ಪ್ರದೇಶ ಮಾತ್ರವಲ್ಲ, ಇಡಿಯ ರಾಷ್ಟ್ರ ರಾಜಕಾರಣದಲ್ಲಿ ಒಬ್ಬ ಪ್ರಭಾವಿ ಮತ್ತು ನೆನಪಿನಲ್ಲಿ ಉಳಿಯುವ ನಾಯಕರಾಗಿ ಬೆಳೆದುದು ಒಂದು ಬಹುದೊಡ್ಡ ಸಾಧನೆ.
ಬಿಹಾರ ರಾಜಕೀಯದಲ್ಲಿ ಲಾಲೂ ಪ್ರಸಾದ್ ಯಾದವ್ ಹೇಗೋ, ಹಾಗೆಯೇ ಹೆಚ್ಚು ಕಡಿಮೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್. ಈ ಇಬ್ಬರು ಯಾದವ ಮೂಲದ ನಾಯಕರ ನಡುವೆ ಸಾಮ್ಯವಿರುವಷ್ಟು ವ್ಯತ್ಯಾಸಗಳಿಲ್ಲ. ಇಬ್ಬರೂ ರಾಮ ಮನೋಹರ ಲೋಹಿಯಾರಿಂದ ಪ್ರಭಾವಿತರು. ಇಬ್ಬರೂ ತುರ್ತುಪರಿಸ್ಥಿತಿಯ ವೇಳೆ ಕಾಂಗ್ರೆಸ್ ವಿರೋಧವನ್ನು ಬೆಳೆಸಿಕೊಂಡವರು. ನಂತರದಲ್ಲಿ ಬಿಜೆಪಿಗೆ ಸೆಡ್ಡು ಹೊಡೆದು ಇತರ ಪಕ್ಷಗಳ ಜೊತೆ ಕೈಜೋಡಿಸಿದವರು. ಇಬ್ಬರೂ ಜನಪ್ರಿಯ ಮತ್ತು ತಳಮಟ್ಟದ ಸಂಪರ್ಕ ಇರುವ ನಾಯಕರು. ಇಬ್ಬರೂ ಹಳ್ಳಿರಾಜಕೀಯದ ನಾಡಿ ಮಿಡಿತ ಬಲ್ಲವರು. ಇಬ್ಬರೂ ತಮ್ಮ ತಮ್ಮ ರಾಜ್ಯಗಳಲ್ಲಿ ಬಹುಕಾಲ ಮುಖ್ಯಮಂತ್ರಿಗಳಾಗಿದ್ದವರು. ಇಬ್ಬರೂ ಲೋಕಸಭೆ ಯಲ್ಲಿ ತಮ್ಮ ಛಾಪು ಮೂಡಿಸಿದವರು. ಲಾಲು ಕೇಂದ್ರದಲ್ಲಿ ರೈಲ್ವೇ ಮಂತ್ರಿಯ ಸ್ಥಾನವನ್ನು ನಿರ್ವಹಿಸಿದರೆ, ಮುಲಾಯಂ ರಕ್ಷಣಾ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಇಬ್ಬರೂ ವಿವಾದಗಳ ಸುಳಿಯಲ್ಲಿ ಸಿಕ್ಕಿದವರು, ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದ ಆರೋಪಗಳಿಗೆ ಒಳಗಾದವರು. ಇಬ್ಬರೂ ಮೇಲು ಮತ್ತು ಮಧ್ಯಮ ವರ್ಗಗಳ ಜನರಲ್ಲಿ ಮತ್ತು ಮಾಧ್ಯಮಗಳಲ್ಲಿ ಅಶಿಕ್ಷಿತರಂತೆ, ಹಳ್ಳಿಯ ಗಮಾರರಂತೆ ಚಿತ್ರಿತರಾಗಿದ್ದರೂ, ಇಬ್ಬರೂ ಉನ್ನತ ಶಿಕ್ಷಣ ಪಡೆದವರು. ಕೋಮುವಾದದ ವಿರುದ್ಧದ ಹೋರಾಟದಲ್ಲಿ ಇಬ್ಬರೂ ಪ್ರಮುಖ ಪಾತ್ರ ವಹಿಸಿದವರು. ಇವರಿಬ್ಬರೂ ಬಿಜೆಪಿಗೆ ಯಾವತ್ತೂ ಮಗ್ಗುಲ ಮುಳ್ಳಾಗಿದ್ದರೂ, ಮುಲಾಯಂ ಒಮ್ಮೆ ಬಿಜೆಪಿಯ ಬಾಹ್ಯ ಬೆಂಬಲದಿಂದ ಸರಕಾರ ರಚಿಸಿದ್ದರು. ವ್ಯತ್ಯಾಸವೆಂದರೆ, ಲಾಲು ಒಂದು ರೀತಿಯ ಉಡಾಫೆಯ, ತಮಾಷೆಯ, ರಂಗು ರಂಗಿನ ವ್ಯಕ್ತಿತ್ವ ಬೆಳೆಸಿಕೊಂಡಿದ್ದರೆ, ಮುಲಾಯಂ ಗಂಭೀರ ಸ್ವಭಾವದವರು.
ನವೆಂಬರ್ 22, 1939ರಲ್ಲಿ ಪಶ್ಚಿಮ ಮಧ್ಯ ಉತ್ತರ ಪ್ರದೇಶದ ಈಗಿನ ಇಟಾವಾ ಜಿಲ್ಲೆಯ ಸೈಫೈ ಎಂಬಲ್ಲಿ ಬಡ ರೈತ ಕುಟುಂಬದಲ್ಲಿ ಆರು ಮಕ್ಕಳಲ್ಲಿ ಒಬ್ಬರಾಗಿ ಹುಟ್ಟಿದ, ಮೂರು ಬಾರಿಯ ಮುಖ್ಯಮಂತ್ರಿ ಮತ್ತು ಆರು ಬಾರಿಯ ಲೋಕಸಭಾ ಸದಸ್ಯ, ಮಾಜಿ ರಕ್ಷಣಾ ಮಂತ್ರಿ ಮುಲಾಯಂ ಸಿಂಗ್-ಉತ್ತರ ಪ್ರದೇಶ ಮಾತ್ರವಲ್ಲ, ಇಡಿಯ ರಾಷ್ಟ್ರ ರಾಜಕಾರಣದಲ್ಲಿ ಒಬ್ಬ ಪ್ರಭಾವಿ ಮತ್ತು ನೆನಪಿನಲ್ಲಿ ಉಳಿಯುವ ನಾಯಕರಾಗಿ ಬೆಳೆದುದು ಒಂದು ಬಹುದೊಡ್ಡ ಸಾಧನೆ.
ಚಿಕ್ಕ ಪ್ರಾಯದಲ್ಲಿ ತಾನೊಬ್ಬ ಪೈಲ್ವಾನ್ ಆಗಬೇಕೆಂದು ಆಸೆಪಟ್ಟಿದ್ದ ಮುಲಾಯಂ, ಮುಂದೆ ರಾಜಕೀಯ ಅಖಾಡಕ್ಕೆ ಇಳಿದು ಹಲವಾರು ವಿರೋಧಿಗಳನ್ನು ‘ಚಿತ್’ ಮಾಡಿದ್ದು, ಆಕಸ್ಮಿಕವೇನಲ್ಲ. ತನ್ನ ಆಸೆಗೆ ಹೊರತಾಗಿ ಅವರು ಶಿಕ್ಷಣ ಪಡೆದು ಆಗ್ರಾ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ವಿಷಯದಲ್ಲಿ ಪದವಿ ಮತ್ತು ರಾಜಕೀಯ ಶಾಸ್ತ್ರ ಹಾಗೂ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದರು. ಹದಿನೈದನೇ ವರ್ಷದಲ್ಲಿಯೇ ರಾಮ ಮನೋಹರ ಲೋಹಿಯಾ ಅವರ ವಿಚಾರಗಳಿಂದ ಪ್ರಭಾವಿತರಾಗಿದ್ದ ಅವರು, ಎಳೆಯ ಪ್ರಾಯದಲ್ಲಿಯೇ ರಾಜಕಾರಣದಲ್ಲಿ ತೊಡಗಿಕೊಂಡರು. ಜಾತ್ಯತೀತವಾದ, ವ್ಯಕ್ತಿಸಮಾನತೆ ಮತ್ತು ಸಾಮಾಜಿಕ ನ್ಯಾಯದ ಕುರಿತ ಲೋಹಿಯಾ ಅವರ ವಿಚಾರಧಾರೆಗಳು- ಕೆಳಜಾತಿಗಳ ಹಿಂದೂಗಳು ಮತ್ತು ಮುಸ್ಲಿಮರ ಹಕ್ಕುಗಳಿಗಾಗಿ ಹೋರಾಡುವ ಸ್ವಂತ ಸಂಕಲ್ಪವೂ ಸೇರಿಕೊಂಡು ಅವರ ಮುಂದಿನ ರಾಜಕೀಯ ಜೀವನಕ್ಕೆ ಒಂದು ಭದ್ರ ನೆಲೆ ಒದಗಿಸಿದವು.
ಕೆಲಕಾಲ ಶಿಕ್ಷಕರೂ ಆಗಿದ್ದ ಅವರು, ಪೈಲ್ವಾನರೂ ಆಗಿದ್ದು, ನಂತರ ಸಕ್ರಿಯ ರಾಜಕೀಯ ಅಖಾಡಕ್ಕೆ ಇಳಿದರು. ಚುನಾವಣಾ ರಾಜಕಾರಣದಲ್ಲಿ ಅವರ ಮೊದಲ ಯಶಸ್ಸು 1967ರಲ್ಲಿ ಬಂತು. ಅವರು ಉತ್ತರ ಪ್ರದೇಶ ವಿಧಾನಸಭೆಗೆ ಆಯ್ಕೆಯಾದರು. ಮುಂದೆ 1974ರಲ್ಲಿ ಅವರು ಪುನರಾಯ್ಕೆಗೊಂಡರೂ, 1975ರಲ್ಲಿ ತುರ್ತುಪರಿಸ್ಥಿತಿಯ ವೇಳೆ ಅವರ ಅವಧಿ ಜೈಲುವಾಸದಲ್ಲಿ ಕಳೆಯಿತು. ಆಗ ಬಂಧಿತರಾದ ರಾಜಕೀಯ ನಾಯಕರಲ್ಲಿ ಮುಲಾಯಂ ಸಿಂಗ್ ಯಾದವ್ ಒಬ್ಬರಾಗಿದ್ದು, 19 ತಿಂಗಳು ಜೈಲಿನಲ್ಲಿ ಕಳೆದರು. 1977ರಲ್ಲಿ ಬಿಡುಗಡೆಯಾದ ಅವರು, ಮರಳಿ ಸ್ಪರ್ಧಿಸಿ ತನ್ನ ಸ್ಥಾನವನ್ನು ಗೆದ್ದುಕೊಂಡರು. ಮಾತ್ರವಲ್ಲ, ರಾಜ್ಯ ಮಂತ್ರಿಯೂ ಆದರು. ಅದೇ ವರ್ಷ ಅವರು ಉತ್ತರ ಪ್ರದೇಶದಲ್ಲಿ ಲೋಕದಳದ ಅಧ್ಯಕ್ಷರಾದರು. ಪಕ್ಷವು ನಂತರ ವಿಭಜನೆಗೊಂಡಾಗ ಅವರು ಲೋಕದಳ-ಬಿ ಬಣದ ಅಧ್ಯಕ್ಷರಾದರು.
1980ರಲ್ಲಿ ಮುಲಾಯಂ ಅವರು ಉತ್ತರ ಪ್ರದೇಶದಲ್ಲಿ ಜನತಾದಳದ ಅಧ್ಯಕ್ಷರಾಗಿ ಆಯ್ಕೆಯಾದರೂ ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಸೋಲಬೇಕಾಯಿತು. ಆದರೆ, 1982ರಲ್ಲಿ ಅವರು ವಿಧಾನ ಪರಿಷತ್ ಪ್ರವೇಶಿಸಿ 1985ರ ತನಕ ಅಲ್ಲಿ ಪ್ರತಿಪಕ್ಷ ನಾಯಕರಾಗಿದ್ದರು. 1985ರಲ್ಲಿ ಮತ್ತೆ ವಿಧಾನಸಭೆ ಪ್ರವೇಶಿಸಿದ ಅವರು, 1987ರ ತನಕ ಅಲ್ಲಿಯೂ ಪ್ರತಿಪಕ್ಷ ನಾಯಕರಾಗಿದ್ದರು.
1989ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮುಲಾಯಂ ನೇತೃತ್ವದಲ್ಲಿ ಜನತಾದಳವು ಸಾಕಷ್ಟು ಯಶಸ್ಸು ಗಳಿಸಿತು. ಅವರು ಬಿಜೆಪಿಯ ಬಾಹ್ಯ ಬೆಂಬಲದೊಂದಿಗೆ ಸರಕಾರ ರಚಿಸಿ ಮೊದಲ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರು. 1990ರಲ್ಲಿ ಬಾಬರಿ ಮಸೀದಿ ವಿವಾದದಲ್ಲಿ ಹಿಂದುತ್ವವಾದಿ ಗುಂಪುಗಳು ಮತ್ತು ಪೊಲೀಸರ ನಡುವೆ ಘರ್ಷಣೆಗಳು ನಡೆದಾಗ, ಮುಲಾಯಂ ದೃಢವಾಗಿ ಬಾಬರಿ ಮಸೀದಿ ಪರ ನಿಂತ ಪರಿಣಾಮವಾಗಿ ಬಿಜೆಪಿ ತನ್ನ ಬೆಂಬಲ ಹಿಂದೆಗೆದುಕೊಂಡಿತು. ಆದರೂ ಸರಕಾರವು ಕಾಂಗ್ರೆಸ್ ಬೆಂಬಲದೊಂದಿಗೆ 1991ರ ತನಕ ಉಳಿದುಕೊಂಡಿತು. ಕೊನೆಗೆ ಕಾಂಗ್ರೆಸ್ ಕೂಡಾ ಬೆಂಬಲ ಹಿಂದೆಗೆದುಕೊಂಡ ಪರಿಣಾಮವಾಗಿ ಅವರ ಸರಕಾರ ಉರುಳಿ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂತು. ಮುಂದೆ ಬಾಬರಿ ಮಸೀದಿ ಧ್ವಂಸಕ್ಕೆ ಕಾರಣವಾದ ದೊಡ್ಡ ಘಟನೆಗಳಲ್ಲಿ ಇದೂ ಒಂದು.
1992ರ ಅಕ್ಟೋಬರ್ ತಿಂಗಳಲ್ಲಿ ಮುಲಾಯಂ ತನ್ನದೇ ಆದ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. 1992ರ ಡಿಸೆಂಬರ್ 6ರಂದು ಹಿಂದುತ್ವವಾದಿ ಶಕ್ತಿಗಳು 16ನೇ ಶತಮಾನದ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿ ಭಾರತದ ಜನಮಾನಸದಲ್ಲಿ ಆಳವಾದ ವಿಭಜನೆ ಉಂಟುಮಾಡಿ, ವ್ಯಾಪಕ ಕೋಮುಗಲಭೆಗಳಿಗೆ ಕಾರಣವಾದಾಗ, ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಸಮಾಜವಾದಿ ಪಕ್ಷದ ದಿಕ್ಕು ಬದಲಿಸಿತು. ಅವರು ಮುಸ್ಲಿಮರ ಪರ ದೃಢವಾಗಿ ನಿಂತಿದ್ದರು. ಇದೇ ಹೊತ್ತಿಗೆ ಕೇಂದ್ರದಲ್ಲಿ ಪಿ.ವಿ. ನರಸಿಂಹರಾವ್ ನೇತೃತ್ವದ ಸರಕಾರ ನಿಷ್ಕ್ರಿಯವಾಗಿ ಕುಳಿತು, ಬಾಬರಿ ಮಸೀದಿ ಧ್ವಂಸಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ ಪರಿಣಾಮವಾಗಿ ಮುಸ್ಲಿಮರು ಭಾರೀ ಪ್ರಮಾಣದಲ್ಲಿ ಸಮಾಜವಾದಿ ಪಕ್ಷವನ್ನು ಬೆಂಬಲಿಸಿದರು. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಅವನತಿಗೆ ಪ್ರಮುಖ ಕಾರಣವೂ ಇದೇ ಆಯಿತು. ಅದಕ್ಕಾಗಿಯೇ ಬಿಜೆಪಿ ತೀರಾ ಇತ್ತೀಚಿನವರೆಗೂ ಅವರನ್ನು ಮುಲ್ಲಾ ಮುಲಾಯಂ ಎಂದು ಹೀಯಾಳಿಸುತ್ತಿತ್ತು.
1993ರ ನವೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಮಾಯಾವತಿಯವರ ಬಹುಜನ ಸಮಾಜ ಪಾರ್ಟಿ ಬೆಂಬಲದೊಂದಿಗೆ ಸಮ್ಮಿಶ್ರ ಸರಕಾರ ರಚಿಸುವಷ್ಟು ಸ್ಥಾನಗಳನ್ನು ಗಳಿಸಿಕೊಂಡಿತು. ಮುಲಾಯಂ ಸಿಂಗ್ ಯಾದವ್ ಮತ್ತೆ ಮುಖ್ಯಮಂತ್ರಿಯಾದರು. ಆದರೆ ಅವರ ಅವಧಿ ಎರಡು ವರ್ಷವೂ ಬಾಳಲಿಲ್ಲ. 1995ರಲ್ಲಿ ಮಾಯಾವತಿ ಬೆಂಬಲ ಹಿಂದೆಗೆದುಕೊಂಡು, ಸ್ವತಃ ಬಿಜೆಪಿ ಬೆಂಬಲದೊಂದಿಗೆ ಸರಕಾರ ರಚಿಸಿ ಮುಖ್ಯಮಂತ್ರಿಯಾದರು. ಇದು ಮುಂದೆ ಮುಲಾಯಂ ಮತ್ತು ಮಾಯಾವತಿ ನಡುವೆ ವೈಯಕ್ತಿಕ ಎನ್ನಬಹುದಾದಷ್ಟು ಶತ್ರುತ್ವಕ್ಕೆ ಕಾರಣವಾಗಿ, ಕೋಮುವಾದದ ವಿರುದ್ಧದ ಹೋರಾಟಕ್ಕೆ ದೊಡ್ಡ ಹೊಡೆತ ನೀಡುವಲ್ಲಿ ಸಂಘ ಪರಿವಾರ ಸಫಲವಾಗಿತ್ತು. ಬಿಜೆಪಿಯ ಮರುಚೇತರಿಕೆಗೂ ಇದು ಕಾರಣವಾಯಿತು.
ಆ ಹೊತ್ತಿಗೆ ರಾಜ್ಯದಲ್ಲಿ ತನ್ನ ಸಮಾಜವಾದಿ ಪಕ್ಷವು ಬದಿಗೆ ಸರಿಸಲ್ಪಟ್ಟಾಗ ಮುಲಾಯಂ ರಾಷ್ಟ್ರ ರಾಜಕಾರಣದತ್ತ ತನ್ನ ಗಮನಹರಿಸಿದರು. 1996ರಲ್ಲಿ ಅವರು ಲೋಕಸಭೆಗೆ ಆಯ್ಕೆಯಾದರು. ಅವರ ಸಮಾಜವಾದಿ ಪಕ್ಷವು ಯುನೈಟೆಡ್ ಫ್ರಂಟ್ ಅಥವಾ ಸಂಯುಕ್ತ ರಂಗ ಮೈತ್ರಿಕೂಟದ ಭಾಗವಾಗಿತ್ತು. ಆಗಿನ ರಾಜಕೀಯ ಗೊಂದಲಗಳ ಸಂದರ್ಭದಲ್ಲಿ ಮುಲಾಯಂ ಪ್ರಧಾನಮಂತ್ರಿ ಸ್ಥಾನದ ಹತ್ತಿರಕ್ಕೂ ಬಂದಿದ್ದರು. ಆದರೆ ಕೊನೆಗೆ ಎಚ್.ಡಿ. ದೇವೇಗೌಡ ಅವರು ಎಲ್ಲರ ಒಪ್ಪಿಗೆಯ ಅಭ್ಯರ್ಥಿಯಾಗಿ ಮೂಡಿಬಂದಾಗ, ಮುಲಾಯಂ ರಕ್ಷಣಾ ಮಂತ್ರಿ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಆ ಸರಕಾರ 1998ರ ತನಕ ಅಸ್ತಿತ್ವದಲ್ಲಿತ್ತು. 1998 ಮತ್ತು 1999ರ ಲೋಕಸಭಾ ಚುನಾವಣೆಗಳಲ್ಲೂ ಅವರು ಜಯಗಳಿಸಿದರು.
ಮತ್ತೆ 2002ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ನಾಟಕೀಯವಾದ ಚೇತರಿಕೆ ಕಂಡು ಅತ್ಯಂತ ದೊಡ್ಡ ಪಕ್ಷವಾದರೂ, ಸರಕಾರ ರಚಿಸುವಷ್ಟು ಸ್ಥಾನಗಳನ್ನು ಪಡೆಯಲಿಲ್ಲ. ಸ್ವಲ್ಪಕಾಲ ಅಸ್ತಿತ್ವದಲ್ಲಿದ್ದ ಬಿಜೆಪಿ-ಬಿಎಸ್ಪಿಕೂಟದ ಸರಕಾರ ಕುಸಿದಾಗ, ಸಮಾಜವಾದಿ ಪಕ್ಷದ ನೇತೃತ್ವದ ಸರಕಾರ ಅಧಿಕಾರ ಹಿಡಿದು, ಮುಲಾಯಂ ಸಿಂಗ್ ಯಾದವ್ ಮೂರನೇ ಬಾರಿಗೆ ಮುಖ್ಯಮಂತ್ರಿಯಾದರು.
2007ರಲ್ಲಿ ಬಿಎಸ್ಪಿಯು ಸಮಾಜವಾದಿ ಪಕ್ಷವನ್ನು ಬಗ್ಗುಬಡಿದ ನಂತರ ಮುಲಾಯಂ, 2009ರ ತನಕ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದರು. 2009ರಲ್ಲಿ ಅವರು ಮತ್ತೆ ಲೋಕಸಭೆಗೆ ಆಯ್ಕೆಯಾದರು. 2012ರ ಆರಂಭದಲ್ಲಿ ಸಮಾಜವಾದಿ ಪಕ್ಷವು ಸ್ವತಂತ್ರವಾಗಿ ಬಹುಮತ ಗಳಿಸಿದಾಗ ಮುಲಾಯಂ ಪಕ್ಷದ ನೇತೃತ್ವವನ್ನು ತನ್ನಲ್ಲೇ ಇರಿಸಿಕೊಂಡರೂ, ಪುತ್ರ ಅಖಿಲೇಶ್ ಯಾದವ್ ಮುಖ್ಯಮಂತ್ರಿ ಆಗುವುದಕ್ಕೆ ದಾರಿ ಬಿಡಬೇಕಾಯಿತು. ಸ್ವತಃ ಅಖಿಲೇಶ್ ಯಾದವ್ ತಂದೆಯನ್ನು ಬದಿಗೆ ಸರಿಸಿ ಅಧಿಕಾರಕ್ಕೆ ಬಂದರು ಎಂದೂ ಬಿಜೆಪಿ ಮತ್ತು ಬಿಎಸ್ಪಿಸಹಿತ ವಿರೋಧಿಗಳು ಈ ಸಂದರ್ಭದಲ್ಲಿ ಆರೋಪಿಸಿದ್ದರು. ಇದು ಬಹುಮಟ್ಟಿಗೆ ನಿಜವೂ ಹೌದು. 2014ರ ಲೋಕಸಭಾ ಚುನಾವಣೆಯಲ್ಲಿ ಅವರು ಪುನರಾಯ್ಕೆಯಾದರೂ, ಅವರ ಪಕ್ಷಕ್ಕೆ ದೊರಕಿದ್ದು ಕೇವಲ ಐದು ಸ್ಥಾನಗಳು ಮಾತ್ರ. 2019ರ ಚುನಾವಣೆಯಲ್ಲಿ ಮತ್ತೆ ಮೈನ್‌ಪುರಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದರೂ, ವಯಸ್ಸು ಮತ್ತು ಅನಾರೋಗ್ಯದ ಕಾರಣದಿಂದ ರಾಷ್ಟ್ರ ಮತ್ತು ರಾಜ್ಯ ರಾಜಕಾರಣ ಎರಡರಲ್ಲೂ ಮಸುಕಾಗುತ್ತಲೇ ಬಂದರು. ಕಳೆದ ಉತ್ತರಪ್ರದೇಶ ಚುನಾವಣೆಯಲ್ಲಿಯೂ ತನ್ನ ಹೆಸರಿನ ಪ್ರಭಾವದ ಹೊರತಾಗಿ, ಹೆಚ್ಚೇನೂ ಕೊಡುಗೆ ನೀಡಲು ಅವರಿಗೆ ಸಾಧ್ಯವಾಗಿರಲಿಲ್ಲ.
ವೈಯಕ್ತಿಕ ಜೀವನ
ಮುಲಾಯಂ ಅವರ ವೈಯಕ್ತಿಕ ಜೀವನ ಸುಖಕರವಾಗಿ ಏನೂ ಇರಲಿಲ್ಲ. ಅವರು ಎರಡು ಬಾರಿ ಮದುವೆಯಾಗಿದ್ದರು. ಅವರ ಮೊದಲ ಪತ್ನಿ ಮಾಲತಿ ದೇವಿ. ಅವರು 1973ರಲ್ಲಿ ಏಕೈಕ ಪುತ್ರ ಅಖಿಲೇಶ್ ಯಾದವ್ ಅವರಿಗೆ ಜನ್ಮ ನೀಡುವ ಸಂದರ್ಭದಲ್ಲಿ ಉಂಟಾದ ಸಮಸ್ಯೆಯಿಂದ ದೈಹಿಕವಾಗಿ ಸಂಪೂರ್ಣವಾಗಿ ನಿಶ್ಚಲರಾದವರು, ಮೇ 2003ರಲ್ಲಿ ನಿಧನರಾಗುವ ತನಕ ಮೂವತ್ತು ವರ್ಷಗಳ ಕಾಲ ಹಾಗೆಯೇ ಮಲಗಿದ್ದಲ್ಲೇ ಪ್ರಜ್ಞೆಯಿಲ್ಲದ ಸ್ಥಿತಿಯಲ್ಲಿಯೇ ಇದ್ದರು. 1990ರ ದಶಕದಲ್ಲಿ ಮುಲಾಯಂ ಅವರು, ಸಾಧನಾ ಗುಪ್ತಾ ಎಂಬವರೊಂದಿಗೆ ಸಂಬಂಧ ಹೊಂದಿದ್ದರು. ಇದು ಹೆಚ್ಚಿನವರಿಗೆ ಗೊತ್ತಿರಲಿಲ್ಲ. 2007ರ ಫೆಬ್ರವರಿಯಲ್ಲಿ ಮುಲಾಯಂ ಸುಪ್ರೀಂ ಕೋರ್ಟಿನಲ್ಲಿ ತನ್ನ ಈ ಮದುವೆಯನ್ನು ಒಪ್ಪಿಕೊಳ್ಳುವ ವರೆಗೆ ಈ ಸಂಬಂಧ ಗುಪ್ತವಾಗಿಯೇ ಉಳಿದಿತ್ತು. ಸಾಧನಾ ಗುಪ್ತಾ ಅವರಿಗೆ ಮೊದಲ ಪತಿಯಿಂದ 1988ರಲ್ಲಿ ಜನಿಸಿದ ಪ್ರತೀಕ್ ಯಾದವ್ ಎಂಬ ಮಗನಿದ್ದು, ಕಳೆದ ವಿಧಾನಸಭಾ ಚುನಾವಣೆಯ ವೇಳೆ ಭಾರೀ ಪ್ರಚಾರದೊಂದಿಗೆ ಬಿಜೆಪಿ ಸೇರಿದ ಮುಲಾಯಂ ಸೊಸೆ ಅಪರ್ಣಾ ಯಾದವ್ ಈ ಪ್ರತೀಕ್ ಯಾದವ್ ಅವರ ಪತ್ನಿ.
ಆರೋಪ ಮತ್ತು ವಿವಾದಗಳು
ಮುಲಾಯಂ ಸಿಂಗ್ ಯಾದವ್ ಅವರು ಲಾಲು ಪ್ರಸಾದ್ ಅವರಷ್ಟು ಗಂಭೀರವಾದ ಭ್ರಷ್ಟಾಚಾರದ ಆರೋಪಗಳಿಗೆ ಗುರಿಯಾಗದಿದ್ದರೂ, ಸ್ವಜನ ಪಕ್ಷಪಾತದ ಆರೋಪಗಳಿಗೆ ಮತ್ತು ವಿವಾದಗಳ ಸುಳಿಗೆ ಸಿಲುಕಿದ್ದರು. ಉತ್ತರ ಪ್ರದೇಶದಲ್ಲಿ ಗೂಂಡಾಗಳಿಗೆ ಬಹಿರಂಗ ಪ್ರೋತ್ಸಾಹ ನೀಡಿದ ಆರೋಪ ಅವರ ಮೇಲಿದೆ. ಆದರೂ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ಅಂತಹ ಆರೋಪ ಹೊತ್ತಿರದ ಯಾವುದೇ ಪಕ್ಷವು ಹಿಂದಿ ಪ್ರದೇಶದ ರಾಜ್ಯಗಳಲ್ಲಿ ಇಲ್ಲ. ಅಖಿಲೇಶ್ ಯಾದವ್ ಮುಲಾಯಂ ಸಿಂಗ್ ಅವರ ಮಗನಾಗಿದ್ದರೂ, ತನ್ನ ಸಹೋದರರು, ಅವರ ಮಕ್ಕಳನ್ನು ಬೆಳೆಸಿ ಸ್ವಜನ ಪಕ್ಷಪಾತ ತೋರಿದ ಆರೋಪವೂ ಮುಲಾಯಂ ಮೇಲಿದೆ.
ಜೊತೆಗೆ ಹಲವಾರು ವಿವಾದಗಳನ್ನೂ ಅವರು ಮೈಮೇಲೆ ಎಳೆದುಕೊಂಡಿದ್ದರು. ಇವುಗಳಲ್ಲಿ ಅವರಿಗೆ ಅತ್ಯಂತ ಕೆಟ್ಟ ಹೆಸರು ತಂದುಕೊಟ್ಟದ್ದು- 2012ರ ದಿಲ್ಲಿ ಸಾಮೂಹಿಕ ಅತ್ಯಾಚಾರದ ಸಂದರ್ಭದಲ್ಲಿ ಅತ್ಯಾಚಾರಕ್ಕೆ ಮರಣದಂಡನೆ ವಿಧಿಸುವ ಕಾಯ್ದೆಯ ಕುರಿತು ಚರ್ಚೆ ನಡೆಯುತ್ತಿದ್ದಾಗ ಅವರು ನೀಡಿದ್ದ ಹೇಳಿಕೆ. ‘‘ಹುಡುಗರು ಹುಡುಗರೇ, ಹುಡುಗರಿಂದ ತಪ್ಪುಗಳಾಗುತ್ತವೆ’’ ಎಂದು ಅವರು ಹೇಳಿದ್ದರು. ಎರಡು ವರ್ಷಗಳ ನಂತರ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಮೂನ್ ಕೀ ಬಾನ್ ಅವರೂ ಇದನ್ನು ಉಲ್ಲೇಖಿಸಿ, ಹುಡುಗರು ಹುಡುಗರೇ ಎಂಬ ವಾದವನ್ನು ಒಪ್ಪಲಾಗದು ಎಂದು ಟೀಕಿಸಿದ್ದರು. ತನ್ನೆಲ್ಲಾ ಜಾತ್ಯತೀತತೆಗೆ ಹೊರತಾಗಿಯೂ ಭಾರತೀಯ ಮನೋಭಾವದ ಕೆಲವು ಪ್ರತಿಗಾಮಿ, ಪುರುಷ ಪ್ರಧಾನ, ಸಾಂಪ್ರದಾಯಿಕ ಪೂರ್ವಾಗ್ರಹಗಳು ಅವರಲ್ಲಿ ಉಳಿದಿದ್ದವು ಎಂಬುದಕ್ಕೆ ಇದು ಸಾಕ್ಷಿ.
ಟಿಬೆಟಿನ ಸ್ವಾತಂತ್ರ್ಯಕ್ಕೆ ಭಾರತ ಬೆಂಬಲ ನೀಡಬೇಕು ಮತ್ತು ದಲೈಲಾಮಾ ಅವರನ್ನು ಪ್ರೋತ್ಸಾಹಿಸಬೇಕು ಎಂದೂ, ಚೀನಾ ಭಾರತದ ಶತ್ರುವಾಗಿದ್ದು, ಪಾಕಿಸ್ತಾನದಿಂದ ಅಪಾಯವಿಲ್ಲ ಎಂದು ಅವರು ಹೇಳಿದ್ದನ್ನು ದೊಡ್ಡ ವಿವಾದವನ್ನಾಗಿ ಮಾಡಲಾಗಿತ್ತು.
ಮುಲಾಯಂ ಜೀವನದ ಕೊನೆಯ ಹೋರಾಟ ಅವರ ಕುಟುಂಬದ ಒಳಗೆಯೇ ನಡೆದದ್ದು ಕುತೂಹಲಕಾರಿಯಾಗಿದೆ. 2012ರಲ್ಲಿ ಅಖಿಲೇಶ್ ಯಾದವ್ ಅವರು ಮುಲಾಯಂ ಅವರ ಸಹೋದರ ಶಿವಪಾಲ್ ಸಿಂಗ್ ಅವರನ್ನು ಹಿಂದಿಕ್ಕಿ ಮುಖ್ಯಮಂತ್ರಿ ಆದಾಗ ಯಾದವ್ ಕುಟುಂಬವು ಎರಡು ಪ್ರತಿಸ್ಪರ್ಧಿ ಗುಂಪುಗಳಾಗಿ ಒಡೆದು ಯಾದವೀ ಕಲಹವಾಯಿತು. ಅಖಿಲೇಶ್‌ಗೆ ಮುಲಾಯಂ ದಾಯಾದಿ ಹಾಗೂ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಬೆಂಬಲ ನೀಡಿದರೆ, ಸ್ವತಃ ಮುಲಾಯಂ, ಸಹೋದರ ಶಿವಪಾಲ್ ಬೆಂಬಲಕ್ಕೆ ನಿಂತಿದ್ದರು. ಅಖಿಲೇಶ್ ಎರಡು ಬಾರಿ ಶಿವಪಾಲ್‌ರನ್ನು ತನ್ನ ಸಂಪುಟದಿಂದ ಹೊರಹಾಕಿದರೆ, ಮುಲಾಯಂ, 2016 ಸೆಪ್ಟಂಬರ್‌ನಲ್ಲಿ ಮಗ ಅಖಿಲೇಶ್ ಮತ್ತು ದಾಯಾದಿ ರಾಮ್ ಗೋಪಾಲ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತು ಮಾಡಿದರೂ, 24 ಗಂಟೆಗಳಲ್ಲಿ ಅದನ್ನು ಹಿಂದೆಗೆದುಕೊಂಡಿದ್ದರು. ಬದಲಾಗಿ ಅಖಿಲೇಶ್, 2017ರ ಜನವರಿಯಲ್ಲಿ ರಾಷ್ಟ್ರೀಯ ಸಮಾವೇಶ ಕರೆದು, ತನ್ನ ತಂದೆಯಿಂದ ಪಕ್ಷಾಧ್ಯಕ್ಷ ಪದ ಕಿತ್ತುಕೊಂಡು ತಾನೇ ಪಕ್ಷದ ಸಂಚಾಲಕ ಎಂದು ಘೋಷಿಸಿದ್ದರು. ಇದನ್ನು ಕಾನೂನು ಬಾಹಿರ ಎಂದು ಘೋಷಿಸಿದ ಮುಲಾಯಂ ಸ್ವತಃ ಸಮಾವೇಶ ಕರೆದು, ಅಖಿಲೇಶ್ ಮತ್ತು ರಾಮ್ ಗೋಪಾಲ್ ಇಬ್ಬರನ್ನೂ ಪಕ್ಷದಿಂದ ವಜಾಗೊಳಿಸಿದರು. ಆದರೆ, ಚುನಾವಣಾ ಆಯೋಗವು ಮುಲಾಯಂ ಆದೇಶ ರದ್ದು ಮಾಡಿ ಅಖಿಲೇಶ್ ಪಕ್ಷದ ಮುಖ್ಯಸ್ಥ ಎಂದು ಅಧಿಕೃತವಾದ ಬಳಿಕ ಮುಲಾಯಂ ರಾಜಕಾರಣದ ತೆರೆಮರೆಗೆ ಸರಿದಿದ್ದರು.
ಜನರೊಂದಿಗೆ ಸದಾ ಬೆರೆಯುತ್ತಿದ್ದ ಗ್ರಾಮೀಣ ಸೊಗಡಿನ ನಾಯಕ ಮುಲಾಯಂ ಅವರ ಜೀವನ ಆಧರಿತ ಸುವೇಂದು ರಾಜ್ ಘೋಷ್ ನಿರ್ದೇಶನದ ‘ಮೈ ಮುಲಾಯಂ ಸಿಂಗ್’ ಎಂಬ ಹಿಂದಿ ಚಿತ್ರ 2021ರಲ್ಲಿ ಬಿಡುಗಡೆ ಆಗಿತ್ತು. ‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದಲ್ಲೂ ಮುಲಾಯಂ ಪಾತ್ರವಿದ್ದು, ಅಮಿತ್ ಸೇಥಿ ಆ ಪಾತ್ರವಹಿಸಿದ್ದಾರೆ.
ಏನೇ ಇತಿಮಿತಿಗಳಿದ್ದರೂ, ಭಾರತದ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಿಕೊಂಡು ಬಂದಿರುವ, ಅತೀ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದ ರಾಜಕಾರಣದಲ್ಲಿ ಮೇಲ್ಜಾತಿಯ ಪ್ರಾಬಲ್ಯವೇ ಹೆಚ್ಚಿದ್ದ ಸಂದರ್ಭದಲ್ಲಿ- ಯಾದವರು ಮತ್ತಿತರ ಹಿಂದುಳಿದ ಜಾತಿಗಳು ಮತ್ತು ಮುಸ್ಲಿಮರ ಹಕ್ಕುಗಳನ್ನು ಕೋಮುವಾದದ ಛಾಯೆ ಇಲ್ಲದೆ ಎತ್ತಿಹಿಡಿದ ಜನಪ್ರಿಯ ನೇತಾರನಾಗಿ ಮುಲಾಯಂ ಸಿಂಗ್ ಯಾದವ್ ಇತಿಹಾಸದ ನೆನಪಿನಲ್ಲಿ ಉಳಿಯುತ್ತಾರೆ.
ಪುತ್ರ ಅಖಿಲೇಶ್ ಮತ್ತು ಸಹೋದರ ಶಿವಪಾಲ್ ಸಿಂಗ್ ಜೊತೆ...