ಒಳಚರಂಡಿ ಕಾರ್ಮಿಕರ ಸಾವುಗಳು ಮರುಕಳಿಸುತ್ತಲೇ ಇವೆ!
ಉತ್ತರಪ್ರದೇಶ, ತಮಿಳುನಾಡು, ದಿಲ್ಲಿ ಹಾಗೂ ಹರ್ಯಾಣ ರಾಜ್ಯಗಳಲ್ಲಿ ಇಂತಹ ಸಾವುಗಳು ಅತ್ಯಧಿಕ ಸಂಖ್ಯೆಯಲ್ಲಿ ವರದಿಯಾಗಿರುವುದಾಗಿ ಅಧಿಕೃತ ದತ್ತಾಂಶಗಳ ಸಮೀಕ್ಷೆ ತಿಳಿಸಿದೆ. ಆದರೆ ಒಂದು ವೇಳೆ ಈ ಪರಿಸ್ಥಿತಿಯನ್ನು ರಾಜ್ಯದ ಒಟ್ಟು ಜನಸಂಖ್ಯೆಯ ಆಧಾರದಲ್ಲಿ ಪರಿಗಣಿಸುವುದಾದರೆ, ದಿಲ್ಲಿ ಅತಿ ದೊಡ್ಡ ದೋಷಿಯಾಗಿದೆ. ಹರ್ಯಾಣ ಎರಡನೇ ಸ್ಥಾನದಲ್ಲಿದೆ.
ಹರ್ಯಾಣದ ಫರೀದಾಬಾದ್‌ನಲ್ಲಿ ಅಕ್ಟೋಬರ್ 5ರಂದು ನಡೆದ ಅತ್ಯಂತ ದಾರುಣ ಅವಘಡವೊಂದರಲ್ಲಿ ಆಸ್ಪತ್ರೆಯೊಂದರ ಒಳಚರಂಡಿಯನ್ನು ಸ್ವಚ್ಛಗೊಳಿಸಲು ಹೋಗಿದ್ದ ನಾಲ್ವರು ಕಾರ್ಮಿಕರು, ವಿಷಾನಿಲ ಸೇವನೆಗೊಳಗಾಗಿ ಸಾವನ್ನಪ್ಪಿದ್ದರು. ಮೃತರಲ್ಲಿ ಇಬ್ಬರು ಒಡಹುಟ್ಟಿದ ಸಹೋದರರಾಗಿದ್ದು, ವಿಧವೆಯೊಬ್ಬರ ಪುತ್ರರಾಗಿದ್ದಾರೆ.
ಆಸ್ಪತ್ರೆಯು ಈ ಕಾರ್ಮಿಕರ ಸೇವೆಗಳನ್ನು ಗುತ್ತಿಗೆ ಏಜೆನ್ಸಿಯ ಮೂಲಕ ಪಡೆದುಕೊಳ್ಳುತ್ತಿತ್ತು. ಈ ಅವಘಡಕ್ಕೆ ಯಾರನ್ನು ದೂಷಿಸಬೇಕೆಂಬ ವಿಚಾರದಲ್ಲಿ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಯಿತು. ಈ ನಾಲ್ವರು ಕಾರ್ಮಿಕರೂ ಯಾವುದೇ ನಿಯಮಿತವಾದ ಉದ್ಯೋಗವಿರುವವರಾಗಿರಲಿಲ್ಲ ಹಾಗೂ ಅವರು ದಿನಗೂಲಿಯ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಅತ್ಯಧಿಕವಾದ ಅಪಾಯ ಹಾಗೂ ಅನಾರೋಗ್ಯಕರವಾದ ಈ ಕೆಲಸಕ್ಕಾಗಿ ಅವರಿಗೆ ದಿನಕ್ಕೆ ಕೇವಲ 400 ರೂ.ಯಿಂದ 450ರೂ. ವರೆಗೆ ನೀಡಲಾಗುತ್ತಿತ್ತು. ತಮ್ಮ ಅತ್ಯಂತ ಶೋಚನೀಯವಾದ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ಮಾತ್ರವೇ ಅವರು ವಿಧಿಯಿಲ್ಲದೆ ಇಂತಹ ಕೆಲಸವನ್ನು ಮಾಡಲು ಮುಂದೆ ಬರುತ್ತಾರೆ. ಮೃತರಲ್ಲೊಬ್ಬಾತ ಈ ಹಿಂದೆ ಉತ್ತಮ ಉದ್ಯೋಗದಲ್ಲಿದ್ದನಾದರೂ ತೀರಾ ಇತ್ತೀಚೆಗೆ ಅದನ್ನು ಕಳೆದುಕೊಂಡಿದ್ದರಿಂದ, ಆತನಿಗೆ ಈ ಕೆಲಸವನ್ನು ಅನಿವಾರ್ಯವಾಗಿ ಕೈಗೆತ್ತಿಕೊಳ್ಳಬೇಕಾದಂತಹ ಪರಿಸ್ಥಿತಿ ಬಂದಿತ್ತು.
ಒಳಚರಂಡಿಯ ಸ್ವಚ್ಛತಾ ಕಾರ್ಯವು ಆಸ್ಪತ್ರೆಯಲ್ಲಿ ನಡೆಸಿದ ಹೊರತಾಗಿಯೂ, ಇಂತಹ ಅಪಾಯಕಾರಿ ಕೆಲಸವನ್ನು ಕೈಗೆತ್ತಿಕೊಳ್ಳದಂತೆ ಅವರನ್ನು ತಡೆಯಲು ಯಾರೂ ಕೂಡಾ ಮುಂದಾಗದಿರುವುದು ಹಾಗೂ ವೈದ್ಯಕೀಯ ನೆರವು ಕೂಡಾ ಅವರಿಗೆ ವೇಗವಾಗಿ ಲಭ್ಯವಾಗದಿರುವುದು ಆಶ್ಚರ್ಯಕರವಾಗಿದೆ.
ಈ ಹಿಂದೆ ಸೆಪ್ಟಂಬರ್ 10ರಂದು ಹರ್ಯಾಣದ ರೋಹ್ಟಕ್‌ನಲ್ಲಿ ನಡೆದ ದುರಂತವೊಂದರಲ್ಲಿ, ಒಳಚರಂಡಿಯನ್ನು ಪ್ರವೇಶಿಸಿದ್ದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದರು. ಅತ್ಯಂತ ಅಪಾಯಕಾರಿಯಾದ ಈ ಕೆಲಸವನ್ನು ಕೈಗೊಳ್ಳದೆ ಇದ್ದಲ್ಲಿ ನೀವು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆಯೆಂದು ಈ ನತದೃಷ್ಟ ಕಾರ್ಮಿಕರಿಗೆ ಬೆದರಿಕೆ ಹಾಕಲಾಗಿತ್ತೆಂದು ಪ್ರಮುಖ ದಿನಪತ್ರಿಕೆ (ಅಮರ್ ಉಜಲಾ, ಸೆ.11ರ ಸಂಚಿಕೆ)ಯೊಂದು ವರದಿ ಮಾಡಿತ್ತು.
ಸಂಸತ್‌ನಲ್ಲಿ 2022ರ ಜುಲೈ ಮಧ್ಯಂತರದಲ್ಲಿ ಸರಕಾರವು ಒದಗಿಸಿದ ಮಾಹಿತಿಯ ಪ್ರಕಾರ 2017ರಿಂದ 2022ರವರೆಗಿನ ಅವಧಿಯಲ್ಲಿ (2022ರ ಜುಲೈವರೆಗೆ) ಭಾರತದಲ್ಲಿ ಶೌಚಗುಂಡಿಗಳನ್ನು ಹಾಗೂ ಒಳಚರಂಡಿಗಳನ್ನು ಸ್ವಚ್ಛಗೊಳಿಸುತ್ತಿದ್ದ ಸಂದರ್ಭದಲ್ಲಿ 347 ಕಾರ್ಮಿಕರು ಸಾವನ್ನಪ್ಪಿದ್ದಾರೆ. ನೈರ್ಮಲ್ಯ ಕಾರ್ಮಿಕರಿಗಾಗಿನ ರಾಷ್ಟ್ರೀಯ ಆಯೋಗವು ಒದಗಿಸಿದ ದತ್ತಾಂಶಗಳ ಪ್ರಕಾರ 1993-2020ರ ಅವಧಿಯಲ್ಲಿ ಒಳಚರಂಡಿಗಳನ್ನು ಹಾಗೂ ಶೌಚಗುಂಡಿಗಳನ್ನು ಸ್ವಚ್ಛಗೊಳಿಸಿದ ಸಂದರ್ಭದಲ್ಲಿ ಸುಮಾರು 920 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಆದಾಗ್ಯೂ ಸಾಮಾಜಿಕ ಕಾರ್ಯಕರ್ತ ಬೆಜವಾಡ ವಿಲ್ಸನ್ ಅವರು ಒದಗಿಸಿದ ದತ್ತಾಂಶಗಳ ಪ್ರಕಾರ 27 ವರ್ಷಗಳ ಈ ಅವಧಿಯಲ್ಲಿ ಹೆಚ್ಚುಕಮ್ಮಿ 2 ಸಾವಿರ ಕಾರ್ಮಿಕರು ಒಳಚರಂಡಿ ಹಾಗೂ ಶೌಚಗುಂಡಿಗಳ ಸ್ವಚ್ಛತೆಯ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆಂದು ತಿಳಿದುಬರುತ್ತದೆ.
ಉತ್ತರಪ್ರದೇಶ, ತಮಿಳುನಾಡು, ದಿಲ್ಲಿ ಹಾಗೂ ಹರ್ಯಾಣ ರಾಜ್ಯಗಳಲ್ಲಿ ಇಂತಹ ಸಾವುಗಳು ಅತ್ಯಧಿಕ ಸಂಖ್ಯೆಯಲ್ಲಿ ವರದಿಯಾಗಿರುವುದಾಗಿ ಅಧಿಕೃತ ದತ್ತಾಂಶಗಳ ಸಮೀಕ್ಷೆ ತಿಳಿಸಿದೆ. ಆದರೆ ಒಂದು ವೇಳೆ ಈ ಪರಿಸ್ಥಿತಿಯನ್ನು ರಾಜ್ಯದ ಒಟ್ಟು ಜನಸಂಖ್ಯೆಯ ಆಧಾರದಲ್ಲಿ ಪರಿಗಣಿಸುವುದಾದರೆ, ದಿಲ್ಲಿ ಅತಿ ದೊಡ್ಡ ದೋಷಿಯಾಗಿದೆ. ಹರ್ಯಾಣ ಎರಡನೇ ಸ್ಥಾನದಲ್ಲಿದೆ. ಇತರ ಸ್ಥಳಗಳಿಗೆ ಹೋಲಿಸಿದಲ್ಲಿ ಸುರಕ್ಷತಾ ಪರಿಸ್ಥಿತಿಯು ತಕ್ಕಮಟ್ಟಿಗೆ ಉತ್ತಮವೆನ್ನಬಹುದಾದ ಸ್ಥಳಗಳಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಯಿರುವುದು ಆಶ್ಚರ್ಯಕರವಾಗಿದೆ. ಇನ್ನೊಂದೆಡೆ, ಅಧಿಕೃತ ದತ್ತಾಂಶಗಳು ಅತ್ಯಧಿಕವಾಗಿ ಕೆಲವೇ ರಾಜ್ಯಗಳಲ್ಲೇ ಕೇಂದ್ರೀಕೃತವಾಗಿರುವುದು ಇತರ ರಾಜ್ಯಗಳಲ್ಲಿ ಸಂಭವಿಸಿರುವ ನೈರ್ಮಲ್ಯ ಕಾರ್ಮಿಕರ ಸಾವಿನ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ವರದಿಯಾಗುತ್ತಿಲ್ಲ. ಈ ಕಳವಳಕಾರಿ ಸಮಸ್ಯೆಯ ಬಗ್ಗೆ ವಿಶ್ವಸನೀಯ ಹಾಗೂ ತಾಜಾತನದಿಂದ ಕೂಡಿದ ರಾಷ್ಟ್ರೀಯ ಮಟ್ಟದ ದತ್ತಾಂಶದ ಸಂಗ್ರಹಣೆಯಲ್ಲಿ ಸರಕಾರ ಸಮರ್ಪಕವಾದ ಗಮನವನ್ನು ನೀಡುತ್ತಿಲ್ಲವೆಂಬುದು ಇದರಿಂದ ವ್ಯಕ್ತವಾಗುತ್ತದೆ ಎಂದು ಬೆಜವಾಡ ವಿಲ್ಸನ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಶೌಚಗುಂಡಿ ಅಥವಾ ಒಳಚರಂಡಿ ಸ್ವಚ್ಛತೆ ವೇಳೆ ಸಂಭವಿಸುವ ಸಾವುಗಳಿಗೆ ಯಾರು ಹೊಣೆಗಾರರಾಗುತ್ತಾರೆಂಬುದನ್ನು ನಿಗದಿಪಡಿಸಬೇಕು ಹಾಗೂ ನಿರ್ಲಕ್ಷಕ್ಕಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಮತ್ತು ಸುಪ್ರೀಂಕೋರ್ಟ್ ನಿಗದಿಪಡಿಸಿದಂತಹ ಸೂಕ್ತ ಪರಿಹಾರವನ್ನು ಸಂತ್ರಸ್ತ ಕುಟುಂಬಗಳಿಗೆ ಒದಗಿಸಬೇಕೆಂಬ ಬೇಡಿಕೆಗೂ ಹೆಚ್ಚು ಬಲ ಬರತೊಡಗಿದೆ.
ಆದಾಗ್ಯೂ, ಇಂತಹ ಪ್ರಕರಣಗಳಲ್ಲಿ ಸಂತ್ರಸ್ತ ಕುಟುಂಬಗಳಿಗೆ ಸಕಾಲದಲ್ಲಿ ಪರಿಹಾರ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿರುವ ಹೊರತಾಗಿಯೂ, ಅದು ಇನ್ನೂ ಹಲವಾರು ಕುಟುಂಬಗಳಿಗೆ ತಲುಪದೆ ಇರುವುದು ವಿಷಾದಕರ.
ಒಳಚರಂಡಿಗಳ ಸ್ವಚ್ಛತೆಗೆ ಯಾವೆಲ್ಲಾ ಉಪಕರಣಗಳು ಲಭ್ಯವಿದೆಯೋ ಅವುಗಳನ್ನು ತುರ್ತಾಗಿ ಖರೀದಿಸಬೇಕೆಂಬ ಸಲಹೆಗಳನ್ನು ಕೆಲವರು ನೀಡುತ್ತಾರಾದರೂ, ಅವು ಹೆಚ್ಚು ಉಪಯುಕ್ತವೆನಿಸಲಾರದು. ನಾವು ಭಾರತದಲ್ಲಿ ಪ್ರಚಲಿತದಲ್ಲಿರುವ ಕೆಲಸದ ಪರಿಸ್ಥಿತಿಗೆ ಯೋಗ್ಯವಾದ ಉಪಕರಣಗಳು ಹಾಗೂ ತಾಂತ್ರಿಕತೆಯನ್ನು ವಿಕಸನಗೊಳಿಸುವ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗಿದೆ.
ಒಳಚರಂಡಿಗಳ ಸ್ವಚ್ಛತೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಹಿರಿಯ ಕಾರ್ಮಿಕರು ಹಾಗೂ ಮೇಲ್ವಿಚಾರಕರಿಗೆ ತುಂಬಾ ನಿಕಟವಾದ ಹಾಗೂ ದೈನಂದಿನ ಅನುಭವವಿರುವುದರಿಂದ ನೈರ್ಮಲ್ಯ ಕಾರ್ಮಿಕರ ಸುರಕ್ಷತೆಗೆ ಸಂಬಂಧಿಸಿ ಅವರಿಂದ ಸಲಹೆಯನ್ನು ಪಡೆಯುವುದು ಹೆಚ್ಚು ಸೂಕ್ತವಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಹಾಗೂ ಬೃಹತ್ ಯಂತ್ರಗಳು ಹೆಚ್ಚು ಪರಿಣಾಮಕಾರಿಯೆಂದೂ ಹೇಳುವಂತಿಲ್ಲ.
ನೈರ್ಮಲ್ಯ ಕಾರ್ಮಿಕರ ರಕ್ಷಣೆಯನ್ನು ನಾವು ಖಾತರಿಪಡಿಸಬೇಕಾದ ಅಗತ್ಯವಿದೆ. ಈ ಕಾರ್ಮಿಕರ ಆರೋಗ್ಯಕ್ಕೆ ಸಂಬಂಧಿಸಿದ ಅಪಾಯಗಳನ್ನು ಕನಿಷ್ಠಗೊಳಿಸುವುದಲ್ಲದೆ, ಪರಿಣಾಮಕಾರಿತ್ವವನ್ನು ಬಲಿಕೊಡದೆ ವೆಚ್ಚಗಳನ್ನು ಕಡಿಮೆಗೊಳಿಸುವುದೇ ನಮ್ಮ ಅಗತ್ಯವಾಗಿದೆ. ಒಂದು ವೇಳೆ ಒಳಚರಂಡಿ, ಶೌಚಗುಂಡಿಗಳ ಸುರಕ್ಷತೆಗೆ ಸಂಬಂಧಿಸಿದ ಉಪಕರಣಗಳನ್ನು ಸ್ಥಳೀಯವಾಗಿ ಸಣ್ಣ ಘಟಕಗಳಲ್ಲಿ ತಯಾರಿಸಿದ್ದರೂ, ಸ್ಥಳೀಯ ಉದ್ಯೋಗಗಳನ್ನು ಸೃಷ್ಟಿಸುವುದಕ್ಕೆ ಇದರಿಂದ ಸಹಕಾರಿಯಾಗಲಿದೆ.
ನೈರ್ಮಲ್ಯ ಕಾರ್ಮಿಕರ ಸುರಕ್ಷತೆಯನ್ನು ಅಭಿವೃದ್ಧಿಪಡಿಸಲು ಹಾಗೂ ಅಪಾಯಗಳನ್ನು ಕಡಿಮೆಗೊಳಿಸಲು ಭಾರತದಲ್ಲಿ ತರಬೇತಿ ಘಟಕಗಳ ಸ್ಥಾಪನೆಯಾಗಬೇಕಾಗಿದೆ. ಸುರಕ್ಷತೆಯ ಹೆಸರಿನಲ್ಲಿ ಬೃಹತ್ ವಾಹನಗಳನ್ನು ಖರೀದಿಸುವ ಮೂಲಕ ಅನಗತ್ಯವಾಗಿ ಬೃಹತ್ ಉಪಕರಣಗಳನ್ನು ಖರೀದಿಸಲು ಒಮ್ಮೆಗೆ ಧಾವಿಸಬೇಕಾದ ಅಗತ್ಯವಿಲ್ಲ. ಹಿರಿಯ ಹಾಗೂ ನಿವೃತ್ತ ಕಾರ್ಮಿಕರು ಹಾಗೂ ಮೇಲ್ವಿಚಾರಕರನ್ನು ಒಳಪಡಿಸಿಕೊಂಡು ಸುರಕ್ಷತಾ ಉಪಕರಣಗಳ ತಂತ್ರಜ್ಞಾನ, ವಿನ್ಯಾಸ, ಸಂಶೋಧನೆ, ಉತ್ಪಾದನೆ, ತರಬೇತಿ ಕುರಿತು ಹೆಚ್ಚು ವಿಸ್ತೃತವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕಾಗಿದೆ. ಇದರ ಜೊತೆಗೆ ಈ ಯೋಜನೆಗಳಿಗೆ ಸಮರ್ಪಕ ಪ್ರಮಾಣದಲ್ಲಿ ನಿಧಿಗಳು ಲಭ್ಯವಾಗುವಂತೆಯೂ ಮಾಡಬೇಕಾಗಿದೆ. ಅಲ್ಲದೆ ಸುರಕ್ಷತೆಯ ವಿಚಾರಕ್ಕೆ ಬಂದಾಗ ಬಜೆಟ್ ಎಂದೂ ಕೂಡಾ ಅಡ್ಡಗಾಲಾಗಬಾರದು.
ಕೃಪೆ: countercurrents.org