ನನ್ನ ಬ್ಯಾಂಕ್ ಖಾತೆಯಿಂದ 16 ಲಕ್ಷ ರೂ. ಕಳವುಗೈದಿದ್ದ ಮುಂಬೈ ಹ್ಯಾಕರ್: ಸಂಸದ ಬಿ.ವೈ. ರಾಘವೇಂದ್ರ
ಶಿವಮೊಗ್ಗ, ಅ.12: 'ನನ್ನ ಬ್ಯಾಂಕ್ ಖಾತೆಗೆ ಕನ್ನ ಹಾಕಿ ಮುಂಬೈ ಮೂಲದ ಹ್ಯಾಕರ್ ಒಬ್ಬ 16 ಲಕ್ಷ ರೂ. ಹಣ ದೋಚಿದ್ದ. ಈ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಭೇದಿಸಿದ್ದರು' ಎಂದು ಸಂಸದ ಬಿ.ವೈ ರಾಘವೇಂದ್ರ ಅವರು ತಿಳಿಸಿದ್ದಾರೆ.
ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್, ಕೆನರಾ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಬ್ಯಾಂಕ್ ಡಿಜಟಲ್ ಪಾವತಿ ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ತಮ್ಮ ಬ್ಯಾಂಕ್ ಖಾತೆಯಿಂದ ಸೈಬರ್ ಖದೀಮರು ಹಣ ಲಪಟಾಯಿಸಿದ ಘಟನೆಯನ್ನು ವಿವರಿಸಿದರು.
''ಶಿವಮೊಗ್ಗದ ಇಂಜಿನಿಯರಿಂಗ್ ಕಾಲೇಜಿಗೆ ಸಂಬಂಧಿಸಿದ ನನ್ನ ಬ್ಯಾಂಕ್ ಖಾತೆಯಿಂದ 16 ಲಕ್ಷ ರೂ. ಹಣ ದಿಢೀರ್ ವರ್ಗಾವಣೆಯಾಗಿತ್ತು. ಆದರೆ ಆ ಖಾತೆಯಿಂದ ನಾನು ಯಾವುದೆ ಹಣ ವರ್ಗಾವಣೆ ಮಾಡಿರಲಿಲ್ಲ. ಹಾಗಾಗಿ ಶಿವಮೊಗ್ಗ ಪೊಲೀಸರಿಗೆ ದೂರು ನೀಡಿದ್ದೆ. ತನಿಖೆ ನಡೆಸಿದ ಪೊಲೀಸರು ಮುಂಬೈನಲ್ಲಿ ಹ್ಯಾಕರ್ ಒಬ್ಬನನ್ನು ಪತ್ತೆ ಹಚ್ಚಿ ಬಂಧಿಸಿದರು. ನನ್ನ ಹಾಗೆ ಹಲವರಿಗೆ ಆ ಹ್ಯಾಕರ್ ವಂಚಿಸಿದ್ದ. ಕೊನೆಗೆ ನನ್ನ ಖಾತೆಗೆ ಹಣ ವಾಪಸ್ ಬಂತು'' ಎಂದು ತಿಳಿಸಿದರು.
''ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಅದರ ಜೊತೆಗೆ ಎಚ್ಚರಿಕೆ ಕೂಡ ಅನಿವಾರ್ಯ. ಡಿಜಿಟಲ್ ವ್ಯವಸ್ಥೆ ಕುರಿತು ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆರ್.ಬಿ.ಐ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅತ್ಯಂತ ಸುರಕ್ಷಿತವಾಗಿ ರೂಪಿಸಿದೆ'' ಎಂದು ತಿಳಿಸಿದರು.