ರಾಹುಲ್ ಗಾಂಧಿ ಬಿಎಸ್‍ವೈ ರೀತಿ ಚೆಕ್ ಮೂಲಕ ಲಂಚ ಪಡೆದಿಲ್ಲ: ಬಿ.ಕೆ. ಹರಿಪ್ರಸಾದ್
ಚಿತ್ರದುರ್ಗ, ಅ.12: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಂತೆ ಚೆಕ್ ಮೂಲಕ ಲಂಚ ತೆಗೆದುಕೊಂಡು ಕಾಂಗ್ರೆಸ್ಸಿನ ಯುವ ನಾಯಕ ರಾಹುಲ್ ಗಾಂಧಿ ಕುಖ್ಯಾತರಾಗಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.
ಬುಧವಾರ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗಿರಿಯಮ್ಮನಹಳ್ಳಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಯನ್ನು ಬಚ್ಚಾ ಎಂದು ಕರೆದಿರುವ ಯಡಿಯೂರಪ್ಪ ವಿರುದ್ಧ ಕಿಡಿಗಾರಿದರು. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರುವ ಯಡಿಯೂರಪ್ಪಗೆ ಬುದ್ಧಿ ಭ್ರಮಣೆಯಾಗಿದೆ. ಸವಕಲು ನಾಣ್ಯವಾಗಿ ಅವರು ಬಿಜೆಪಿ ಪಕ್ಷದಲ್ಲಿದ್ದಾರೆ. ರಾಹುಲ್ ಗಾಂಧಿಯನ್ನು ಟೀಕಿಸಿ ಪ್ರಚಾರ ಪಡೆಯಲು ಯತ್ನಿಸುತ್ತಿದ್ದಾರೆ. ಮುಸ್ಸಂಜೆಯ ರಾಜಕೀಯದಲ್ಲಿ ಇರುವ ಯಡಿಯೂರಪ್ಪ ಈ ರೀತಿಯ ಹೇಳಿಕೆಗಳನ್ನು ನೀಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ಮೋದಿ ಪಾದದ ಧೂಳಿಗೂ ಸಿದ್ಧರಾಮಯ್ಯ ಸಮ ಅಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅವರು ಎಷ್ಟು ಧೂಳು ಕುಡಿದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಯಡಿಯೂರಪ್ಪ ಇಂತಹ ಭಟ್ಟಂಗಿತನದ ಕೀಳು ಮಟ್ಟಕ್ಕಿಳಿಯುತ್ತಾರೆಂದು ನಾನು ನಿರೀಕ್ಷಿಸಿರಲಿಲ್ಲ ಎಂದು ಹರಿಪ್ರಸಾದ್ ಕಿಡಿಗಾರಿದರು.
ಯಡಿಯೂರಪ್ಪ ಮೇಲೆ ಈ.ಡಿ, ಐಟಿಯಲ್ಲಿ ಪ್ರಕರಣಗಳು ಇವೆ. ಕಾಂಗ್ರೆಸ್ ಆಡಳಿತದಲ್ಲಿ ಹಗರಣಗಳು ನಡೆದಿದ್ದರೆ ಅದನ್ನು ಬಯಲು ಮಾಡಲಿ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಿ. ಅವರನ್ನು ತಡೆದಿರುವವರು ಯಾರು? ನಾವು ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಹಗರಣಗಳನ್ನು ಮಾಡಿರುವವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಅವರು ಹೇಳಿದರು.
ಬಳ್ಳಾರಿಯಲ್ಲಿ ಆಗುತ್ತಿದ್ದ ಲೂಟಿಯನ್ನು ನಾವು ಅಧಿಕಾರಕ್ಕೆ ಬಂದು ನಿಲ್ಲಿಸಿದೆವು. ಈಗ ಮತ್ತೇನು ಮಾಡುತ್ತಾರೋ ಅನ್ನೋ ಭಯ ಶ್ರೀರಾಮುಲುಗೆ ಕಾಡುತ್ತಿದೆ. ಆದುದರಿಂದಲೆ, ರಾಹುಲ್ ಗಾಂಧಿಗೆ ಬಳ್ಳಾರಿ ಏಕೆ ನೆನಪಾಯಿತು ಎಂದು ಕೇಳುತ್ತಿದ್ದಾರೆ ಎಂದು ಹರಿಪ್ರಸಾದ್ ವ್ಯಂಗ್ಯವಾಡಿದರು.
ಮುಂದಿನ ಸಿಎಂ ಸಿದ್ದರಾಮಯ್ಯ ಘೋಷಣೆ: ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ ಐಕ್ಯತಾ ಯಾತ್ರೆಯೂ ಚಳ್ಳಕೆರೆ ತಾಲೂಕಿನ ಗರಣಿ ಕ್ರಾಸ್ ಬಳಿ ಬಂದಾಗ ಕಾಂಗ್ರೆಸ್ ಕಾರ್ಯಕರ್ತರು, ಅನ್ನ ಭಾಗ್ಯ ನೀಡಿದ ಸಿದ್ದರಾಮಯ್ಯ ಮುಂದಿನ ಸಿಎಂ ಆಗಬೇಕು ಎಂದು ಘೋಷಣೆಗಳನ್ನು ಕೂಗಿದರು.