ದ್ವೇಷ ಭಾಷಣ: ಯಾರು ಹೊಣೆಗಾರರು?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದ್ವೇಷ ಭಾಷಣ ಪ್ರಸಾರ ಮಾಡುವುದಕ್ಕೆ ಸಂಬಂಧಿಸಿ ಇತ್ತೀಚೆಗೆ ಸುಪ್ರೀಂಕೋರ್ಟ್ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ‘ದ್ವೇಷ ಭಾಷಣಗಳನ್ನು ಪ್ರಸಾರ ಮಾಡುವ ಸಂದರ್ಭದಲ್ಲಿ ಮಾಧ್ಯಮಗಳು ಹೊಣೆಗಾರಿಕೆಯನ್ನು ಮರೆಯಬಾರದು’ ಎಂದು ಅದು ಕಟು ಭಾಷೆಯಲ್ಲಿ ಎಚ್ಚರಿಸಿತ್ತು. ಇದೀಗ ದ್ವೇಷ ಭಾಷಣದ ಕುರಿತಂತೆ ಸುಪ್ರೀಂಕೋರ್ಟ್ ಮತ್ತೊಮ್ಮೆ ಕಿಡಿಕಾರಿದೆ. ‘ದ್ವೇಷ ಭಾಷಣಗಳಿಂದ ದೇಶ ಹದಗೆಡುತ್ತಿದೆೆ’ ಎಂದು ಆತಂಕ ವ್ಯಕ್ತಪಡಿಸಿದೆ. ದ್ವೇಷ ಭಾಷಣದ ವಿರುದ್ಧ ಸರಕಾರವು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ತನ್ನ ಕಳವಳವನ್ನು ಹೇಳಿಕೊಂಡಿದೆ. ದ್ವೇಷ ಭಾಷಣವನ್ನು ಲಾಭದಾಯಕ ಉದ್ಯಮವಾಗಿ ಮಾರ್ಪಡಿಸಲಾಗಿದೆ ಎಂದು ಅರ್ಜಿದಾರರು ದೂರಿನಲ್ಲಿ ಆರೋಪಿಸಿದ್ದರು.
ಸಾಧಾರಣವಾಗಿ ಎಲ್ಲ ರಾಜಕಾರಣಿಗಳು ರಾಜಕೀಯೇತರ ಸಭೆಗಳಲ್ಲಿ ‘ಶಾಂತಿ, ಸೌಹಾರ್ದ’ಗಳ ಬಗ್ಗೆ ಉಪನ್ಯಾಸ ನೀಡುವವರೇ ಆಗಿರುತ್ತಾರೆ. ‘ದ್ವೇಷದಿಂದ ಏನೆಲ್ಲ ಹಾನಿಯಿದೆ, ದೇಶಕ್ಕೆ ಅದರಿಂದ ಆಗುವ ನಾಶ ನಷ್ಟಗಳೇನು?’ ಎನ್ನುವುದರ ಬಗ್ಗೆ ಅವರು ಸಾಕಷ್ಟು ಉಪದೇಶಗಳನ್ನು ಜನರಿಗೆ ನೀಡುತ್ತಾ ಬರುತ್ತಿದ್ದಾರೆ. ಆದರೆ, ರಾಜಕೀಯ ವೇದಿಕೆಯಲ್ಲಿ ಮಾತ್ರ ತಾವೇ ನೀಡಿರುವ ಉಪದೇಶಗಳನ್ನು, ಉಪನ್ಯಾಸಗಳನ್ನು ಮರೆತು ಒಂದು ಸಮುದಾಯದ ವಿರುದ್ಧ ಇನ್ನೊಂದು ಸಮುದಾಯವನ್ನು ಎತ್ತಿ ಕಟ್ಟುವ, ಅವರ ನಡುವೆ ದ್ವೇಷಗಳನ್ನು ಬಿತ್ತುವ ಭಾಷಣಗಳನ್ನು ಮಾಡುತ್ತಾರೆ. ‘‘ಸಂಘರ್ಷಕ್ಕೆ ದಾರಿ ಮಾಡುವ ಧರ್ಮ ಸಲ್ಲ’’ ಎಂದು ಮುಖ್ಯಮಂತ್ರಿ ಬೊಮ್ಮಾಯಿಯವರು ರಾಷ್ಟ್ರೀಯ ಬಸವ ಪ್ರತಿಷ್ಠಾನದ ಸರ್ವಧರ್ಮ ಸಂಸತ್‌ನಲ್ಲಿ ಬೋಧನೆ ಮಾಡುತ್ತಾರೆ. ಆದರೆ ಯಾವುದೋ ಅಮಾಯಕ ಯುವಕರ ಕೊಲೆಯಾದಾಗ ಮುಖ್ಯಮಂತ್ರಿಯಾಗಿಯೂ ನ್ಯಾಯ ಪಾಲಿಸದೆ, ಧರ್ಮ ನೋಡಿ ಸಂತ್ರಸ್ತರ ಮನೆಗೆ ಭೇಟಿ ನೀಡುತ್ತಾರೆ. ಅಮಾಯಕರ ಮೇಲೆ ಹಲ್ಲೆ ನಡೆದರೆ ‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ’ ಎಂದು ಹಿಂಸೆಗೆ ಕುಮ್ಮಕ್ಕು ನೀಡುತ್ತಾರೆ.
ವಿಪರ್ಯಾಸವೆಂದರೆ, ನಮ್ಮ ನ್ಯಾಯಾಲಯ ಕೂಡ ಇದಕ್ಕೆ ಹೊರತಾಗಿಯೇನೂ ಇಲ್ಲ. ದ್ವೇಷ ಭಾಷಣದಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಯಾರಾದರೂ ದೂರು ಹಿಡಿದುಕೊಂಡು ಹೋದರೆ, ತಕ್ಷಣ ‘ದ್ವೇಷ ಭಾಷಣಗಳಿಂದ ಆಗುವ ಅನಾಹುತಗಳ ಬಗ್ಗೆ, ದೇಶಕ್ಕೆ ಅದರಿಂದ ಆಗುತ್ತಿರುವ ಹಾನಿಯ ಬಗ್ಗೆ’ ಉಪನ್ಯಾಸ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ಮಾಧ್ಯಮಗಳಿಗೆ ಅದರ ಹೊಣೆಗಾರಿಕೆಯನ್ನು ನೆನಪಿಸುತ್ತದೆ. ಸರಕಾರದ ವಿರುದ್ಧ ಬಾಯಿ ಮಾತಿನ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತದೆ. ಆದರೆ ದ್ವೇಷ ಭಾಷಣ ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ಮಾತ್ರ ಮೃದುವಾಗಿ ಬಿಡುತ್ತದೆ. ‘ದ್ವೇಷ ಭಾಷಣದ ವಿರುದ್ಧ ಸರಕಾರ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ’ ಎಂದು ಇಲ್ಲಿ ಅರ್ಜಿದಾರರು ನ್ಯಾಯಾಲಯದ ಮುಂದೆ ತೋಡಿಕೊಂಡಿದ್ದಾರೆ. ಆದರೆ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ? ಎನ್ನುವುದನ್ನು ಅರಿಯಲಾಗದಷ್ಟು ನಮ್ಮ ನ್ಯಾಯ ವ್ಯವಸ್ಥೆ ಅಮಾಯಕವಲ್ಲ. ದ್ವೇಷ ಭಾಷಣಗಳ ಮೂಲಕ ನಾಯಕರಾಗಿ ಹೊರ ಹೊಮ್ಮಿ, ಚುನಾವಣೆ ಎದುರಿಸಿ ಗೆದ್ದು ಗದ್ದುಗೆ ಹಿಡಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ರಾಜಕೀಯ ನಾಯಕರು ಅಭಿವೃದ್ಧಿಯ ಹೆಸರಿನಲ್ಲಿ ಮತಗಳನ್ನು ಯಾಚಿಸುವುದಿಲ್ಲ. ಯಾಕೆಂದರೆ ಅಭಿವೃದ್ಧಿಯ ಬಗ್ಗೆ ಮಾತನಾಡಿ ಚುನಾವಣೆ ಎದುರಿಸುವುದಕ್ಕಿಂತ, ದ್ವೇಷ ಭಾಷಣಗಳ ಮೂಲಕ ಚುನಾವಣೆ ಎದುರಿಸಿ ಗೆಲ್ಲುವುದು ಸುಲಭ ಎನ್ನುವುದನ್ನು ಅವರು ಮನಗಂಡಿದ್ದಾರೆ. ಆದುದರಿಂದಲೇ ದೇಶ ಅಭಿವೃದ್ಧಿಯ ವಿಷಯದಲ್ಲಿ ಹಿಂದುಳಿದಿದೆ. ದಂಗೆ, ಗಲಭೆಗಳಿಗಾಗಿ ಸುದ್ದಿ ಮಾಡುತ್ತಿದೆ. ಸರಕಾರವೇ ದ್ವೇಷ ಭಾಷಣಗಳ ತಳಹದಿಯ ಮೇಲೆ ನಿಂತಿರುವಾಗ, ಅದೇ ಸರಕಾರ ದ್ವೇಷ ಭಾಷಣದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನಿರೀಕ್ಷಿಸಿದರೆ ಅದು ಸಾಧ್ಯವಾಗುವ ಮಾತೆ? ಉಳಿದಂತೆ ನಮ್ಮ ಪೊಲೀಸರು ದ್ವೇಷ ಭಾಷಣದ ಹಿಂದಿರುವ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಆದರೆ ಆ ಪೊಲೀಸರ ನಿಯಂತ್ರಣ ಮತ್ತೆ ಸರಕಾರದ ಕೈಯಲ್ಲೇ ಇದೆ. ಗೃಹ ಸಚಿವರೇ ‘ದ್ವೇಷ ಭಾಷಣ’ಗಳಿಗಾಗಿ ಕುಖ್ಯಾತಿಯನ್ನು ಪಡೆದಿರುವಾಗ, ಆ ಗೃಹ ಸಚಿವರ ಅಧೀನದಲ್ಲಿ ಕೆಲಸ ಮಾಡುವ ಪೊಲೀಸ್ ಇಲಾಖೆ ದ್ವೇಷ ಭಾಷಣಕಾರರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಸಾಧ್ಯವಿದೆಯೆ?
ಈಗಾಗಲೇ ಹಲವು ರಾಜ್ಯಗಳು ‘ದ್ವೇಷ ಭಾಷಣ’ದ ಮೊಕದ್ದಮೆಗಳನ್ನು ಎದುರಿಸುವ ರಾಜಕೀಯ ನಾಯಕರಿಗೆ ಕ್ಲೀನ್‌ಚಿಟ್ ನೀಡಿವೆ. ಅಂದರೆ ಸರಕಾರವೇ ದ್ವೇಷ ಭಾಷಣಕಾರರ ಬೆನ್ನಿಗೆ ನಿಂತಿದೆ ಎನ್ನುವುದನ್ನು ಇದು ಹೇಳುತ್ತದೆ. ಪೊಲೀಸ್ ಇಲಾಖೆಗಳು ದ್ವೇಷ ಭಾಷಣಗಳಿಗೆ ಸಂಬಂಧಿಸಿ ಕ್ರಮ ತೆಗೆದುಕೊಳ್ಳಲು ಸರಕಾರ ಬಿಡುತ್ತಿಲ್ಲ. ಒಂದು ವೇಳೆ ಕ್ರಮ ತೆಗೆದುಕೊಂಡರೂ, ಸರಕಾರ ಅದರಲ್ಲಿ ಹಸ್ತಕ್ಷೇಪ ನಡೆಸುತ್ತದೆ. ಒಂದು ನಿರ್ದಿಷ್ಟ ಸಮುದಾಯದ ಮೇಲಿನ ದ್ವೇಷದಿಂದಲೇ ಹತ್ಯೆ, ಅತ್ಯಾಚಾರಗಳನ್ನು ಎಸಗಿದ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದರೂ ಸರಕಾರವೇ ಮುಂದೆ ನಿಂತು ಅವರನ್ನು ಬಿಡುಗಡೆ ಮಾಡುತ್ತದೆ. ವಿಶ್ವ ಮಟ್ಟದಲ್ಲಿ ಇದರ ವಿರುದ್ಧ ಆಕ್ಷೇಪಗಳು ಬಂದಿವೆಯಾದರೂ, ನಮ್ಮ ನ್ಯಾಯವ್ಯವಸ್ಥೆಗೆ ಮಾತ್ರ ಆ ಸುದ್ದಿ ಇನ್ನೂ ಮುಟ್ಟಿದಂತಿಲ್ಲ. ಹೀಗಿರುವಾಗ ದ್ವೇಷ ಭಾಷಣಗಳ ವಿರುದ್ಧ ನಿಜಕ್ಕೂ ಕ್ರಮ ತೆಗೆದುಕೊಳ್ಳಬೇಕಾದವರು ಯಾರು?
ಇಂದು ದ್ವೇಷ ಭಾಷಣದಿಂದ ದೇಶವನ್ನು ರಕ್ಷಿಸುವ ಹೊಣೆಗಾರಿಕೆ ನ್ಯಾಯ ವ್ಯವಸ್ಥೆಯದ್ದಾಗಿದೆ. ದ್ವೇಷ ಭಾಷಣಗಳ ವಿರುದ್ಧ ನ್ಯಾಯಾಲಯವೇ ಸ್ವಯಂ ಆಸಕ್ತಿ ವಹಿಸಿ ಮಧ್ಯ ಪ್ರವೇಶಿಸಬೇಕಾಗಿದೆ. ಮೊತ್ತ ಮೊದಲು, ದ್ವೇಷ ಭಾಷಣಕಾರರ ಮೇಲಿನ ಪ್ರಕರಣಗಳನ್ನು ಅತ್ಯಂತ ನ್ಯಾಯ ನಿಷ್ಠುರವಾಗಿ ನ್ಯಾಯಾಲಯ ನಿಭಾಯಿಸಬೇಕು. ಅವುಗಳ ಶೀಘ್ರ ವಿಚಾರಣೆಗೆ ಆದ್ಯತೆ ನೀಡಬೇಕು. ಅವರಿಗೆ ಜಾಮೀನು ನೀಡುವ ವಿಷಯದಲ್ಲಿ ಕಠಿಣ ನಿಲುವನ್ನು ಅನುಸರಿಸಬೇಕು. ಇದೇ ಸಂದರ್ಭದಲ್ಲಿ ದ್ವೇಷ ಭಾಷಣಗಳಲ್ಲಿ ತೊಡಗಿಕೊಂಡ ಆರೋಪಿಗಳಿಗೆ ಸರಕಾರವೇ ಕ್ಲೀನ್ ಚಿಟ್ ನೀಡುತ್ತಿರುವುದರ ವಿರುದ್ಧ ನ್ಯಾಯಾಲಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಬೇಕು. ಹಾಗೆಯೇ ದ್ವೇಷ ಭಾಷಣಗಳ ವಿರುದ್ಧ ಸರಕಾರ ಹಾಗೂ ಕಾನೂನು ವ್ಯವಸ್ಥೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳಬೇಕು. ಯಾವುದೇ ರಾಜಕಾರಣಿಯ ದ್ವೇಷ ಭಾಷಣಗಳಿಂದ ಸಮಾಜಕ್ಕೆ ದೊಡ್ಡ ಮಟ್ಟದಲ್ಲಿ ಹಾನಿಯಾಗಿದ್ದೂ ಆತನ ವಿರುದ್ಧ ಪೊಲೀಸ್ ಇಲಾಖೆ ಅಥವಾ ಸರಕಾರ ಕ್ರಮ ತೆಗೆದುಕೊಂಡಿಲ್ಲ ಎಂದಾದರೆ, ನ್ಯಾಯಾಲಯ ಅದನ್ನು ಪ್ರಶ್ನಿಸಬೇಕು. ದ್ವೇಷ ಭಾಷಣಗಳ ಕುರಿತಂತೆ ನ್ಯಾಯಾಲಯದ ಕಾಳಜಿ ಕೇವಲ ಉಪನ್ಯಾಸಗಳಿಗೆ ಸೀಮಿತವಾಗದೆ, ಅದು ತನ್ನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದಾಗ ಇತರ ಅಂಗಗಳೂ ತಮ್ಮ ಹೊಣೆಗಾರಿಕೆಗಳ ವಿಷಯದಲ್ಲಿ ಎಚ್ಚೆತ್ತುಕೊಳ್ಳುತ್ತವೆ. ಬಾಯಿ ಮಾತಿನ ಉಪಚಾರದ ಮಾತುಗಳಿಂದ ದ್ವೇಷ ಭಾಷಣಗಳನ್ನು ತಡೆಯುವುದಕ್ಕೆ ಸಾಧ್ಯವಿಲ್ಲ. ಇದು ಸ್ವತಃ ಸುಪ್ರೀಂಕೋರ್ಟಿಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ.