ವಾರ್ಡನ್ನಿಂದ ಕಿರುಕುಳ ಆರೋಪ : NITK ವಿದ್ಯಾರ್ಥಿಗಳಿಂದ ಪ್ರತಿಭಟನೆ
ಸುರತ್ಕಲ್, ಅ.13: ಇಲ್ಲಿನ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ (ಎನ್ಐಟಿಕೆ)ಯ ಮುಖ್ಯ ವಾರ್ಡನ್ ಪ್ರೊ. ರಾಜ್ ಮೋಹನ್ ಅವರನ್ನು ತಕ್ಷಣಕ್ಕೆ ಬರುವಂತೆ ಅಮಾನತು ಮಾಡಬೇಕು ಸೇರಿದಂತೆ ವಿವಿಧ ಸೌಲಭ್ಯಗಳನನ್ನು ನಿಡಬೇಕೆಂದು ಆಗ್ರಹಿಸಿ ಎನ್ಐಟಿಕೆಯ ಸುಮಾರು 500ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಮಹಾವಿದ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ವೇಳೆ ಘೊಷಣೆಗಳನ್ನು ಕೂಗುತ್ತಿದ್ದ ವಿದ್ಯಾರ್ಥಿಗಳು, ಪ್ರೊ. ರಾಜ್ ಮೊಹನ್ ಅವರನ್ನು ತಕ್ಷಣದಿಂದ ಅಮಾನತು ಮಾಡಬೇಕೆಂದು ಪಟ್ಟು ಹಿಡಿದರು. ಬಳಿಕ ಎನ್ಐಟಿಕೆ ಡೈರೆಕ್ಟರ್ ಪ್ರೊ. ಪ್ರಸಾದ್ ಕೃಷ್ಣ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು.
ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಈಗಾಗಲೇ ಮನವಿಗಳನ್ನು ಆಡಳಿತ ಮಂಡಳಿಗೆ ನೀಡಲಾಗಿತ್ತು. ಆದರೆ, ಈ ವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರಿದರು.
ಈ ವೇಳೆ ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಲು ಯತ್ನಿಸಿದ ಡೈರಕ್ಟರ್ ಅವರು, ಹಿಂದೆ ಆಗಿ ಹೋಗಿರುವುದು ಬೇಡ, ಈಗ ಆಗಬೇಕಿರುವುದನ್ನು ಬರವಣಿಗೆಯಲ್ಲಿ ತಮ್ಮ ವಿದ್ಯಾರ್ಥಿ ನಾಯಕರ ಕೈಯ್ಯಲ್ಲಿ ನೀಡಿದರೆ, ವಿದ್ಯಾಲಯದ ಎಲ್ಲಾ ಸಮಿತಿಗಳ ಜೊತೆ ಸಭೆ ನಡೆಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಆದರೆ, ಅದಕ್ಕೆ ಬಗ್ಗದ ವಿದ್ಯಾರ್ಥಿಗಳು, ಮೊದಲು ವಿದ್ಯಾಲಯದ ಮುಖ್ಯ ವಾರ್ಡನ್ ರಾಜ್ ಮೋಹನ್ ಅವರನ್ನು ಸ್ಥಳಕ್ಕೆ ಕರೆಸಬೇಕು ಮತ್ತು ತಕ್ಷಣ ಅಮಾನತು ಮಾಡಬೇಕು. ಬಳಿಕ ಸಭೆಗೆ ಹಾಜರಾಗುವುದಾಗಿ ಪಟ್ಟು ಹಿಡಿದರು. ಈ ವೇಳೆ ವಿದ್ಯಾರ್ಥಿಗಳನ್ನು ಪ್ರೊಫೆಸರ್ ಗಳು ಸಮಾಧಾನ ಪಡಿಸಿ ಸಭೆಗೆ ಕರೆದುಕೊಂಡು ಹೋದರು ಎಂದು ತಿಳಿದು ಬಂದಿದೆ.
ಈ ವೇಳೆ ವಾರ್ತಾಭಾರತಿಯೊಂದಿಗೆ ಮಾತನಾಡಿದ ವಿದ್ಯಾರ್ಥಿಗಳು, ರಾಜ್ ಮೋಹನ್ ವಿದ್ಯಾರ್ಥಿಗಳ ಜಾತಿ ಮುಂದಿಟ್ಟುಕೊಂಡು ಅವರನ್ನು ನಿಂದಿಸುತ್ತಿರುತ್ತಾರೆ. ವಿದ್ಯಾಲಯದ ಎಲ್ಲಾ ನಿಯಮಗಳನ್ನು ಗಾಲಿಗೆ ತೂರಿದ್ದಾರೆ. ಈ ಕುರಿತು ಸುಮಾರು 18 ವಿದ್ಯಾರ್ಥಿಗಳು ದೂರುಗಳನ್ನು ನೀಡಿದ್ದಾರೆ. ಆದರೆ ಈ ಅವರ ಮೇಲೆ ವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರಿದರು.
ಆಕಸ್ಮಿಕವಾಗಿ ನಡೆದ ಪ್ರತಿಭಟನೆ
ಅಕ್ಟೋಬರ್ 15ರಂದು ಎನ್ಐಟಿಕೆಯಲ್ಲಿ ನಡೆಯಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಮತ್ತು ಪದವಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು ಸಮಾರಂಭಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಆಗಮಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಪೂರ್ವ ತಯಾರಿಗಳನ್ನು ವೀಕ್ಷಿಸುವ ಸಲುವಾಗಿ ಎನ್ಐಟಿಕೆ ಡೈರಕ್ಟರ್ ಪ್ರೊ. ಪ್ರಸಾದ್ ಕೃಷ್ಣ ಅವರು ಎನ್ಐಟಿಕೆಗೆ ಅಗಮಿಸಿದ್ದರು ಎನ್ನಲಾಗಿದೆ. ಇದನ್ನು ಅರಿತ ವಿದ್ಯಾರ್ಥಿಗಳು, ಆಡಳಿತ ಮಂಡಳಿಗೆ ಹಲವು ಬಾರಿ ಮನವಿಗಳನ್ನೂ ನೀಡಿದ್ದರೂ ಅದು ನಿರ್ಲಕ್ಷಿಸುತ್ತಿತ್ತು. ಹಾಗಾಗಿ ಡೈರಕ್ಟರ್ ಅವರು ಬರುವ ದಿನವನ್ನೇ ಆಯ್ದುಕೊಂಡ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು ಎಂದು ತಿಳಿದು ಬಂದಿದೆ.
ಪೊಲೀಸ್ ಭದ್ರತೆ
ಪ್ರತಿಭಟನೆ ನಡೆಯುತ್ತಿರುವ ಕುರಿತು ಮಾಹಿತಿ ತಿಳಿದ ಸುರತ್ಕಲ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಚಂದಪ್ಪ ಅವರ ನೇತೃತ್ವದಲ್ಲಿ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.
ಪೊಲೀಸ್ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿಶ್ವ ವಿದ್ಯಾಲಯದ ಮುಖ್ಯದ್ವಾರದಲ್ಲಿ ಒಂದು ತುಕಡಿ ಕೆಎಸ್ಸಾರ್ಪಿ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.