ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ಆರೋಪ: ಬಿಜೆಪಿ ಶಾಸಕ ಉದಯ್ ಗರುಡಾಚಾರ್ಗೆ ಜೈಲು ಶಿಕ್ಷೆ, ಜಾಮೀನು
ಬಿಜೆಪಿ ಶಾಸಕ ಉದಯ್ ಗರುಡಾಚಾರ್
ಬೆಂಗಳೂರು: ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಪ್ರಕರಣದಲ್ಲಿ ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್ಗೆ (Uday B.Garudachar) 2 ತಿಂಗಳ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ನ್ಯಾಯಾಲಯ ಆದೇಶ ನೀಡಿದೆ. ಶಿಕ್ಷೆ ಪ್ರಕಟಿಸಿದ ನ್ಯಾಯಪೀಠ ತಕ್ಷಣ ಜಾಮೀನು ಮಂಜೂರು ಮಾಡಿದೆ.
ಗುರುವಾರ 42ನೆ ಎಸಿಎಂಎ ಕೋರ್ಟ್ ಈ ಕುರಿತು ಆದೇಶ ಪ್ರಕಟಿಸಿದೆ. ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಾಸಕ ಗರುಡಾಚಾರ್ಗೆ 10 ಸಾವಿರ ರೂ. ದಂಡ ಹಾಗೂ ಜೈಲು ಶಿಕ್ಷೆ ವಿಧಿಸಿದೆ.
ಕೋರ್ಟ್ ಜೈಲು ಶಿಕ್ಷೆ ವಿಧಿಸುತ್ತಿದ್ದಂತೆ ಉದಯ್ ಗರುಡಾಚಾರ್ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶ ಜಿ. ಪ್ರೀತ್ ಜಾಮೀನು ಮಂಜೂರು ಮಾಡಿದರು.
3 ವರ್ಷಕ್ಕಿಂತ ಕಡಿಮೆ ಶಿಕ್ಷೆಯಾಗಿರುವ ಹಿನ್ನೆಲೆ 42ನೆ ಎಸಿಎಂಎ ಕೋರ್ಟ್ ತಕ್ಷಣ ಜಾಮೀನು ನೀಡಿದೆ. 25 ಸಾವಿರ ರೂ. ಬಾಂಡ್, ಶ್ಯೂರಿಟಿ ಒದಗಿಸಲು ಸೂಚನೆ ನೀಡಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು. ಇದರಿಂದ, ಬಿಜೆಪಿ ಶಾಸಕ ಉದಯ್ ಗರುಡಾಚಾರ್ಗೆ ಸದ್ಯ ರಿಲೀಫ್ ಸಿಕ್ಕಂತಾಗಿದೆ.
ಎಂ. ಪ್ರಕಾಶ್ ಶೆಟ್ಟಿ ಎಂಬುವವರು ಶಾಸಕರ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 2018ರ ಚುನಾವಣೆಗೆ ಸ್ಪರ್ಧಿಸುವಾಗ ಪ್ರಮಾಣ ಪತ್ರದಲ್ಲಿ ಉದಯ್ ಗರುಡಾಚಾರ್ ತಮ್ಮ ವಿರುದ್ಧದ ಕ್ರಿಮಿನಲ್ ಕೇಸ್ಗಳ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದರು. ದೂರಿನಲ್ಲಿರುವ ಆರೋಪ ಸಾಬೀತಾದ ಹಿನ್ನಲೆಯಲ್ಲಿ ನ್ಯಾಯಾಲಯ 2 ತಿಂಗಳ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿತು.