ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರೆ: ಸಂಚಾರಿ ಮಾರ್ಗ ಬದಲಾವಣೆ
ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಅ.14 ಮತ್ತು 15ರಂದು ಭಾರತ್ ಜೋಡೋ ಪಾದಯಾತ್ರೆ, ವಾಸ್ತವ್ಯ, ಬಹಿರಂಗ ಸಭೆ ನಡೆಯಲಿದ್ದು, ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ಹಾಗೂ ಸಂಚಾರಕ್ಕಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅ.14ರಂದು ಸಂಜೆ 4ರಿಂದ ರಾತ್ರಿ 8ರವರೆಗೆ ಹೊಸಪೇಟೆ ಬೈಪಾಸ್ ಹಾಗೂ ಬಳ್ಳಾರಿ ಮುಖಾಂತರ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ಅನಂತಪುರ ರಸ್ತೆಯ ಬೈಪಾಸ್ ಮುಖಾಂತರ ಸಂಚರಿಸಬೇಕು ಎಂದರು.
ಅ.15ರಂದು ಮುನಿಸಿಪಲ್ ಕಾಲೇಜ್ ಆವರಣದಲ್ಲಿ ನಡೆಯುವ ಬಹಿರಂಗ ಸಭೆಯ ಹಿನ್ನೆಲೆಯಲ್ಲಿ ಮೋತಿ ಸರ್ಕಲ್, ರಾಯಲ್ ಸರ್ಕಲ್, ಯು.ಬಿ.ಸರ್ಕಲ್, ದುರ್ಗಮ್ಮ ಗುಡಿ ಸರ್ಕಲ್, ಕೆ.ಇ.ಬಿ.ಸರ್ಕಲ್, ಕೂಲ್‍ಕಾರ್ನರ್ ಸರ್ಕಲ್, ಅನಂತಪುರ ರಸ್ತೆ, ಗೇಸ್ಟ್ ಹೌಸ್ ಸರ್ಕಲ್, ರಾಘವೇಂದ್ರ ಟಾಕೀಸ್ ಸರ್ಕಲ್‍ನಿಂದ ಮುನಿಸಿಪಲ್ ಕಾಲೇಜಿಗೆ ಬರುವ ವಾಹನಗಳ ಸಂಚಾರವನ್ನು ನಿಬರ್ಂಧಿಸಲಾಗಿದೆ ಎಂದು ಅವರು ತಿಳಿಸಿದರು.
ಅ.15ರಂದು ಸಿರುಗುಪ್ಪ ಕಡೆಯಿಂದ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ಎಸ್.ಪಿ.ಸರ್ಕಲ್, ಇನ್‍ಫ್ಯಾಂಟರಿ ರಸ್ತೆ, ಸುಧಾ ಕ್ರಾಸ್, ಹೊಸಪೇಟೆ ಬೈಪಾಸ್ ರಸ್ತೆ ಮುಖಾಂತರ ಸಂಚರಿಸಬೇಕು ಹಾಗೂ ಹೊಸಪೇಟೆ, ಅನಂತಪುರ ಹಾಗೂ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ನಗರದ ಹೊರವಲಯದಲ್ಲಿರುವ ಅನಂತಪುರ-ಹೊಸಪೇಟೆ ರಿಂಗ್ ರಸ್ತೆಯ ಮುಖಾಂತರ ಸಂಚರಿಸಬೇಕು ಎಂದು ರಂಜಿತ್ ಕುಮಾರ್ ಹೇಳಿದರು.
ಸಭೆಗೆ ಬರುವ ಸಾರ್ವಜನಿಕರು ನಿಗದಿಪಡಿಸಿದ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ಕಾರ್ಯಕ್ರಮದ ಸ್ಥಳಕ್ಕೆ ನಡೆದುಕೊಂಡು ಬರಬೇಕು ಎಂದು ಅವರು ಹೇಳಿದರು.