ಕಾಂಗರೂ ನಾಡಿನಲ್ಲಿ ಚುಟುಕು ಕ್ರಿಕೆಟ್ ವಿಶ್ವಕಪ್
ಆಟ-ಕೂಟ
ಎಂಟನೇ ಆವೃತ್ತಿಯ ಪುರುಷರ ಐಸಿಸಿ ಟ್ವೆಂಟಿ-20 ವಿಶ್ವಕಪ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಕ್ಕೆ ಚಾಂಪಿಯನ್ ಪಟ್ಟವನ್ನು ತವರಿನಲ್ಲಿ ಉಳಿಸಿಕೊಳ್ಳುವ ಹೋರಾಟಕ್ಕೆ ಅವಕಾಶ ಒದಗಿ ಬಂದಿದೆ. ಬದಲಾದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹಾಲಿ ಚಾಂಪಿಯನ್ ಪಟ್ಟಕ್ಕೆ ಈ ಬಾರಿ ಪ್ರಶಸ್ತಿ ಎತ್ತಲು ಅಷ್ಟೊಂದು ಸುಲಭವಿಲ್ಲ. ಸಾಂಪ್ರದಾಯಿಕ ಎದುರಾಳಿಗಳಾಗಿರುವ ಭಾರತ ಮತ್ತು ಇಂಗ್ಲೆಂಡ್ ತಂಡದ ಕಠಿಣ ಸವಾಲನ್ನು ಅದು ಎದುರಿಸಬೇಕಾಗಿದೆ.
2007ರಲ್ಲಿ ಭಾರತ ಚೊಚ್ಚಲ ಚಾಂಪಿಯನ್ ಆಗಿತ್ತು. ಆ ಬಳಿಕ ಇನ್ನೊಮ್ಮೆ ಪ್ರಶಸ್ತಿ ಜಯಿಸಲು ಭಾರತ ಪ್ರಯತ್ನ ನಡೆಸುತ್ತಲೇ ಇದೆ. ಆದರೆ ಪ್ರಯತ್ನ ಕೈಗೂಡಿಲ್ಲ. ಕಳೆದ ಬಾರಿ ಯುಎಇಯಲ್ಲಿ ಗ್ರೂಪ್ ಹಂತದಲ್ಲೇ ಅಭಿಯಾನ ಕೊನೆಗೊಳಿಸಿದ್ದ ಭಾರತ ಈ ಬಾರಿ ಹೊಸ ಕೋಚ್ ಹಾಗೂ ಹೊಸ ನಾಯಕನ ನೇತೃತ್ವದಲ್ಲಿ ಪ್ರಶಸ್ತಿಯ ಬರ ನೀಗಿಸಲು ಕಾಂಗರೂ ನಾಡಿಗೆ ಲಗ್ಗೆ ಇಟ್ಟಿದೆ.
ವೆಸ್ಟ್‌ಇಂಡೀಸ್ ಮಾತ್ರ ಈ ವರೆಗೆ ಎರಡು ಬಾರಿ ಪ್ರಶಸ್ತಿ ಎತ್ತಿದ ತಂಡವಾಗಿದೆ. ಆದರೆ ಸತತ ಎರಡು ಬಾರಿ ಪ್ರಶಸ್ತಿ ಎತ್ತಲು ಯಾವುದೇ ತಂಡಕ್ಕೆ ಸಾಧ್ಯವಾಗಲಿಲ್ಲ. 2012ರಲ್ಲಿ ಶ್ರೀಲಂಕಾದಲ್ಲಿ ಮತ್ತು 2016ರಲ್ಲಿ ಭಾರತದಲ್ಲಿ ನಡೆದ ಟೂರ್ನಮೆಂಟ್‌ನಲ್ಲಿ ವಿಂಡೀಸ್ ಪ್ರಶಸ್ತಿ ಜಯಿಸಿತ್ತು. ಭಾರತ (2007), ಪಾಕಿಸ್ತಾನ(2009), ಇಂಗ್ಲೆಂಡ್ (2010), ಶ್ರೀಲಂಕಾ (2014) ಮತ್ತು ಆಸ್ಟ್ರೇಲಿಯ (2021) ತಲಾ ಒಂದು ಬಾರಿ ಚುಟುಕು ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟವನ್ನಲಂಕರಿಸಿವೆ.
ಈ ವರೆಗೆ ನಡೆದ 7 ಆವೃತ್ತಿಗಳ ಪೈಕಿ ಎರಡು ಫೈನಲ್‌ಗಳಲ್ಲಿ ಅಂತಿಮ ಓವರ್‌ನಲ್ಲಿ ಮ್ಯಾಜಿಕ್ ಕಂಡು ಬಂದಿತ್ತು. ಮೊದಲ ಆವೃತ್ತಿಯಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಮಣಿಸಿ 5 ರನ್‌ಗಳ ರೋಮಾಂಚಕಾರಿ ಜಯ ದಾಖಲಿಸಿತ್ತು. 2016ರಲ್ಲಿ ಕೋಲ್ಕತಾದಲ್ಲಿ ನಡೆದ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಬೆನ್‌ಸ್ಟೋಕ್ಸ್ ಅವರ ಅಂತಿಮ ಓವರ್‌ನಲ್ಲಿ ಕಾರ್ಲೊಸ್ ಬ್ರಾಥ್‌ವೇಟ್ ಅವರು 4 ಸಿಕ್ಸರ್‌ಗಳನ್ನು ಸಿಡಿಸಿ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ವಿಂಡೀಸ್‌ಗೆ ಕಪ್ ಎತ್ತಲು ನೆರವಾಗಿದ್ದರು. ಇದೊಂದು ರೋಚಕ ಫೈನಲ್ ಎನಿಸಿಕೊಂಡಿದೆ.
ವಿಶ್ವಕಪ್‌ನ ಕ್ವಾಲಿಫೈಯರ್ ಹಣಾಹಣಿ ಅ.16ರಂದು ಆರಂಭಗೊಳ್ಳಲಿದೆ. ನಮೀಬಿಯ ಮತ್ತು ಶ್ರೀಲಂಕಾ ಸೆಣಸಾಡುವುದರೊಂದಿಗೆ ವಿಶ್ವಕಪ್‌ಗೆ ಚಾಲನೆ ದೊರೆಯಲಿದೆ. ಅದೇ ದಿನ ಇನ್ನೊಂದು ಪಂದ್ಯದಲ್ಲಿ ಯುಎಇ ಮತ್ತು ನೆದರ್‌ಲ್ಯಾಂಡ್ಸ್ ಹಣಾಹಣಿ ನಡೆಸಲಿದೆ. ಈ ಬಾರಿ 7 ಕ್ರೀಡಾಂಗಣಗಳಲ್ಲಿ 45 ಪಂದ್ಯಗಳು ನಡೆಯಲಿದೆ. ಅಡಿಲೇಡ್, ಬ್ರಿಸ್ಬೇನ್, ಹೋಬರ್ಟ್, ಪರ್ತ್ ಮತ್ತು ಸಿಡ್ನಿಯಲ್ಲಿ ಪಂದ್ಯಗಳು ನಿಗದಿಯಾಗಿದೆ. ನಂತರ ಸೂಪರ್ 12 ಹಂತ ಅಕ್ಟೋಬರ್ 22 ರಂದು ಪ್ರಾರಂಭವಾಗುತ್ತದೆ. ಆಸ್ಟ್ರೇಲಿಯ ತಂಡವು ಕಳೆದ ವರ್ಷದ ರನ್ನರ್ ಅಪ್ ನ್ಯೂಝಿಲ್ಯಾಂಡ್‌ನ್ನು ಎದುರಿಸಲಿದೆ.
ಪ್ರತೀ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಮುನ್ನಡೆಯುತ್ತವೆ ಮತ್ತು ಫೈನಲ್ ನವೆಂಬರ್ 13ರಂದು ನಿಗದಿಯಾಗಿದೆ.2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಆರಂಭಗೊಂಡ ಟ್ವೆಂಟಿ-20 ವಿಶ್ವಕಪ್ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ದೂರ ಸಾಗಿದೆ. ಕಳೆದ 15 ವರ್ಷಗಳಲ್ಲಿ ನಡೆದ ಟೂರ್ನಮೆಂಟ್‌ಗಳಲ್ಲಿ ಫೈನಲ್‌ನಲ್ಲಿ ಐದು ಬಾರಿ ಎದುರಾಳಿ ತಂಡ ನೀಡಿದ ಸವಾಲನ್ನು ಬೆನ್ನಟ್ಟಿ ವಿಜಯ ಸಾಧಿಸಿತ್ತು ಎನ್ನುವುದು ಇಲ್ಲಿ ಗಮನಿಸತಕ್ಕ ವಿಚಾರವಾಗಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ (2012) ಮಾತ್ರ ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿ ವಿಜಯ ಪತಾಕೆ ಹಾರಿಸಿದೆ.
ಕೊಲಂಬೊದಲ್ಲಿ ಶ್ರೀಲಂಕಾದ ವಿರುದ್ಧ ವಿಂಡೀಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟದಲ್ಲಿ 137 ರನ್ ಗಳಿಸಿತ್ತು. ಆದರೆ ಶ್ರೀಲಂಕಾ 101 ಗಳಿಸಲಷ್ಟೇ ಶಕ್ತವಾಗಿತ್ತು. ವಿಂಡೀಸ್ 36 ರನ್‌ಗಳ ಗೆಲುವು ದಾಖಲಿಸಿತು. ಕಳೆದ ಆವೃತ್ತಿಯ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ 4 ವಿಕೆಟ್ ನಷ್ಟದಲ್ಲಿ 172 ರನ್ ಗಳಿಸುವ ಮೂಲಕ ಕಠಿಣ ಸವಾಲು ವಿಧಿಸಿತ್ತು. ಆಸ್ಟ್ರೇಲಿಯಕ್ಕೆ ಈ ಸವಾಲನ್ನು ಬೆನ್ನಟ್ಟಲು ಕಷ್ಟವಾಗಲಿಲ್ಲ. ಮಿಚೆಲ್ ಮಾರ್ಷ್ ಔಟಾಗದೆ ಗಳಿಸಿದ 77 ರನ್‌ಗಳ ನೆರವಿನಲ್ಲಿ ಆಸ್ಟ್ರೇಲಿಯ 2 ವಿಕೆಟ್‌ಗಳ ನಷ್ಟದಲ್ಲಿ ಇನ್ನೂ ಏಳು ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಗುರಿ (173) ತಲುಪಿತ್ತು. ಇದು ವಿಶ್ವಕಪ್ ಇತಿಹಾಸದಲ್ಲಿ ತಂಡವೊಂದು ದಾಖಲಿಸಿದ ಗರಿಷ್ಠ ಸ್ಕೋರ್ ಆಗಿದೆ.
ವೆಸ್ಟ್ ಇಂಡೀಸ್‌ನ ಮಾಜಿ ಬ್ಯಾಟರ್ ಮರ್ಲಾನ್ ಸ್ಯಾಮ್ಯುಯೆಲ್ಸ್ ಎರಡು ಬಾರಿ (2012 ಮತ್ತು 2016) ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮತ್ತು ಭಾರತದ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಎರಡು ಬಾರಿ (2014 ಮತ್ತು 2016) ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಸರಣಿಶ್ರೇಷ್ಠ (2007) ಮತ್ತು ಪಂದ್ಯಶ್ರೇಷ್ಠ (2009) ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ವಿಂಡೀಸ್‌ನ ಡರೆನ್ ಸಮ್ಮಿ ಎರಡು ಬಾರಿ ಪಂದ್ಯಾವಳಿಯನ್ನು ಗೆದ್ದ ಏಕೈಕ ನಾಯಕನಾಗಿದ್ದು, ಧೋನಿ, ಯೂನಿಸ್ ಖಾನ್, ಪಾಲ್ ಕಾಲಿಂಗ್‌ವುಡ್, ಲಸಿತ್ ಮಾಲಿಂಗ ಮತ್ತು ಆರೋನ್ ಫಿಂಚ್ ತಮ್ಮ ದೇಶಗಳನ್ನು ವಿಶ್ವಚಾಂಪಿಯನ್ ಪಟ್ಟದತ್ತ ಮುನ್ನಡೆಸಿದ್ದಾರೆ.
ಈ ಬಾರಿ ಕೆಲವು ಪ್ರಮುಖ ಆಟಗಾರರು ಇಲ್ಲದಿದ್ದರೂ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಆಸೀಸ್‌ಗೆ ಪ್ರಬಲ ಸ್ಪರ್ಧೆ ನೀಡುವುದನ್ನು ನಿರೀಕ್ಷಿಸಲಾಗಿದೆ.ಡೇವಿಡ್ ವಾರ್ನರ್, ಪ್ಯಾಟ್ ಕಮ್ಮಿನ್ಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಒಳಗೊಂಡ ಆಸ್ಟ್ರೇಲಿಯನ್ನರು ಮತ್ತೊಮ್ಮೆ ಟ್ರೋಫಿಯ ಮೇಲೆ ಕಣ್ಣಿಟ್ಟಿದ್ದಾರೆ.ಇತ್ತೀಚೆಗಷ್ಟೇ ಟ್ವೆಂಟಿ-20 ಆಟದ ಮೇಲೆ ಹೆಚ್ಚು ಗಮನಹರಿಸಲು ಏಕದಿನ ನಾಯಕತ್ವದಿಂದ ಕೆಳಗಿಳಿದಿರುವ ಫಿಂಚ್ ಚಾಂಪಿಯನ್‌ಪಟ್ಟ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ವಿಶ್ವಕಪ್‌ನಿಂದ ಹೊರಗುಳಿದ ಭಾರತದ ಪಾಲಿಗೆ ಹಿನ್ನಡೆಯಾಗಿದೆ. ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಪಾಲಿಗೆ ಇದು ಕೊನೆಯ ಟ್ವೆಂಟಿ-20 ವಿಶ್ವಕಪ್ ಆಗುವ ಸಾಧ್ಯತೆ ಇದೆ. ಆಸ್ಟ್ರೇಲಿಯದಲ್ಲಿ ಭಾರತ ಈ ಬಾರಿ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಬಹುದು ಎನ್ನುವ ವಿಶ್ವಾಸದಲ್ಲಿದ್ದಾರೆ ಭಾರತದ ಕ್ರಿಕೆಟ್ ಪ್ರಿಯರು.