ಮೆಡಿಕಲ್ ಮಾಫಿಯಾಕ್ಕೆ ಆ್ಯಂಬುಲೆನ್ಸ್ ಚಾಲಕರೂ ಸಾಥ್ ನೀಡುತ್ತಿರುವರೇ...?
ಮಾನ್ಯರೇ,
ಮಂಗಳೂರು ವೈದ್ಯಕೀಯ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ನಗರ. ಹಾಗೆಯೇ ಜೀವ ಉಳಿಸುವ ಶ್ರೇಷ್ಠ ಕಾರ್ಯವಾದ ರಕ್ತದಾನಕ್ಕೆ ಈ ಜಿಲ್ಲೆಯ ನಾಗರಿಕರು ಬಹಳ ಮಹತ್ವ ನೀಡುತ್ತಾರೆ. ಅಪಘಾತಗಳು ಸಂಭವಿಸಿದ ಸಂದರ್ಭಗಳಲ್ಲಿ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಿದ ಹಲವು ಮಂದಿ ಆ್ಯಂಬುಲೆನ್ಸ್ ಚಾಲಕರು ಹಾಗೂ ಈ ಆ್ಯಂಬುಲೆನ್ಸ್ ಸಾಗುವ ದಾರಿಯುದ್ದಕ್ಕೂ ತಮ್ಮ ವಾಹನಗಳನ್ನು ರಸ್ತೆಗಿಳಿಸದೆ ಸಹಕರಿಸಿದ ಸಹೃದಯಿಗಳಿದ್ದಾರೆ ಇಲ್ಲಿ.
ಆದರೆ ಇದೇ ಮಂಗಳೂರು ನಗರದ ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ಮೆಡಿಕಲ್ ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ವ್ಯಾಪಕವಾದ ಆರೋಪಗಳು ಕಳೆದ ಕೋವಿಡ್ ಸಂದರ್ಭದಿಂದ ಕೇಳಿ ಬರುತ್ತಿದ್ದು, ಈ ಕುರಿತು ಹಲವಾರು ದೂರುಗಳು ಈಗಾಗಲೇ ದಾಖಲಾಗಿವೆ. ಕೊರೋನ ಬಾಧಿಸಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಂದ ಲಕ್ಷಾಂತರ ರೂ. ಬಿಲ್ ಮೂಲಕ ವಸೂಲಿ ಮಾಡಿರುವ ಕೆಲವೊಂದು ಖಾಸಗಿ ಆಸ್ಪತ್ರೆಗಳ ಕರ್ಮಕಾಂಡವನ್ನು ಜಿಲ್ಲೆಯ ಜನತೆ ಕಳೆದ ಕೋವಿಡ್ ಸಂದರ್ಭದಲ್ಲಿ ಕಂಡಿದ್ದಾರೆ. ಆದರೆ ರೋಗಿಗಳ ಪಾಲಿನ ಆಪತ್ಬಾಂಧವರೆಂದು ಕರೆಸಿಕೊಳ್ಳುವ ಆ್ಯಂಬುಲೆನ್ಸ್ ಚಾಲಕರಲ್ಲಿ ಬೆರಳೆಣಿಕೆಯ ಮಂದಿ ಕಮಿಷನ್ ಆಸೆಗಾಗಿ ಕೆಲ ಖಾಸಗಿ ಆಸ್ಪತ್ರೆಗಳ ಏಜಂಟರಾಗಿ ಬದಲಾಗಿರುವುದು ಕಳವಳಕಾರಿ ಸಂಗತಿಯಾಗಿದೆ.
ಕಳೆದ ಕೆಲದಿನಗಳ ಹಿಂದೆ ಬಂಟ್ವಾಳ ತಾಲೂಕಿನ ವ್ಯಕ್ತಿಯೋರ್ವರಿಗೆ ಎದೆನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ವ್ಯಕ್ತಿಯನ್ನು ಪರಿಶೀಲಿಸಿ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕುರಿತಂತೆ ಮನಗಂಡ ವೈದ್ಯರು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದರು. ಈ ಕಾರಣದಿಂದ ರೋಗಿಯ ಕುಟುಂಬಿಕರು ಸ್ಥಳೀಯ ಧಾರ್ಮಿಕ ಸಂಘಟನೆಯೊಂದರ ಆ್ಯಂಬುಲೆನ್ಸ್‌ಗೆ ಕರೆಮಾಡಿ ಮಂಗಳೂರಿಗೆ ತಮ್ಮ ರೋಗಿಯನ್ನು ಸಾಗಿಸುವಂತೆ ಕೋರಿದರು. ಅದರಂತೆ ಬಂದ ಆ್ಯಂಬುಲೆನ್ಸ್ ಮಂಗಳೂರಿಗೆ ಸಾಗಿಸುತ್ತಿರುವಾಗ ರೋಗಿಯ ಕುರಿತಂತೆ ಕುಟುಂಬಸ್ಥರಲ್ಲಿ ಎಲ್ಲಾ ಮಾಹಿತಿಯನ್ನು ಪಡೆದುಕೊಂಡ ಆ್ಯಂಬುಲೆನ್ಸ್ ಚಾಲಕ ರೋಗಿಯ ಕುಟುಂಬಿಕರು ತಿಳಿಸಿದ ಆಸ್ಪತ್ರೆಗೆ ಸಾಗಿಸುವ ಬದಲು ಬೇರೊಂದು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾನೆ ಹಾಗೂ ಕುಟುಂಬಿಕರಲ್ಲಿ ಡಿಸ್ಚಾರ್ಜ್ ಸಂದರ್ಭ ತನಗೆ ಕರೆಮಾಡುವಂತೆ ಹೇಳಿರುತ್ತಾನೆ. ಹೇಗಾದರು ರೋಗಿ ಗುಣಮುಖರಾದರೆ ಸಾಕೆಂಬ ಪ್ರಾರ್ಥನೆಯಲ್ಲಿದ್ದ ಕುಟುಂಬಿಕರು ಬೇರೇನೂ ಯೋಚಿಸದೆ ಆ್ಯಂಬುಲೆನ್ಸ್ ಚಾಲಕನ ಮಾತಿಗೆ ವಿರೋಧ ವ್ಯಕ್ತಪಡಿಸಲಿಲ್ಲ.
ಆತ ಬಿಟ್ಟುಹೋದ ಆಸ್ಪತ್ರೆಯಲ್ಲಿ ಬೆಳಗ್ಗೆ 9ಕ್ಕೆ ದಾಖಲಿಸಿದ ಬಳಿಕ ಚಿಕಿತ್ಸೆಯ ಕಡೆ ಗಮನ ಹರಿಸುವುದಕ್ಕಿಂತಲೂ ರೋಗಿಯ ಹಲವು ದಾಖಲೆಗಳನ್ನು ಕೇಳುತ್ತಾ, ಈ ಕೂಡಲೇ ದಾಖಲಾತಿ ಹಣ ಕಟ್ಟಬೇಕೆಂದು ಪೀಡಿಸುತ್ತಾ ಆಸ್ಪತ್ರೆಯ ಅಧಿಕೃತರು ಕುಟುಂಬಿಕರನ್ನು ಸತಾಯಿಸಿದ್ದೇ ಹೆಚ್ಚು. ಇದರ ನಡುವೆ ಮಧ್ಯಾಹ್ನದ ಹೊತ್ತಿಗೆ ರೋಗಿ ಕೊನೆಯುಸಿರೆಳೆದಿದ್ದರೂ ಅದನ್ನು ಕುಟುಂಬಿಕರಿಗೆ ತಿಳಿಸಿದ್ದು ಸಂಜೆಯ ಬಳಿಕ. ಕೊನೆಗೆ ಮೃತದೇಹವನ್ನು ಕುಟುಂಬಿಕರಿಗೆ ಹಸ್ತಾಂತರಿಸುವ ಮೊದಲು ರೂ. ಹತ್ತುಸಾವಿರದ ಬಿಲ್ಲನ್ನು ಕುಟುಂಬಿಕರ ಕೈಗೆ ನೀಡಿ ಹಣ ಕಟ್ಟದಿದ್ದಲ್ಲಿ ಮೃತದೇಹವನ್ನು ಹಸ್ತಾಂತರಿಸಲಾಗದು ಎಂದು ವಾಗ್ವಾದ ನಡೆಸಿದ್ದಾರೆ. ತಮ್ಮವರ ಸಾವಿನಿಂದ ಮೊದಲೇ ದು:ಖಿತರಾಗಿದ್ದ ಕುಟುಂಬಿಕರು ತಮ್ಮಲ್ಲಿದ್ದ ಅರ್ಧಹಣವನ್ನು ನೀಡಿ ಮೃತದೇಹವನ್ನು ಮನೆಗೆ ಕೊಂಡುಹೋಗಿದ್ದಾರೆ. ಇದರಿಂದ ಒಂದಂತೂ ಸ್ಪಷ್ಟ. ರೋಗಿಯ ಸಾವಿನಲ್ಲಿ ಈ ಖಾಸಗಿ ಆಸ್ಪತ್ರೆಯ ಬೇಜವಾಬ್ದಾರಿ ಹಾಗೂ ರೋಗಿಯ ಕುಟುಂಬಿಕರನ್ನು ಅಲೆದಾಡಿಸಿದ ಆ್ಯಂಬುಲೆನ್ಸ್ ಚಾಲಕನ ಪಾಲೂ ಇದೆ. ಜೀವ ಉಳಿಸಬೇಕಾದ ಆಸ್ಪತ್ರೆಗಳು ಹಾಗೂ ಆ್ಯಂಬುಲೆನ್ಸ್ ಚಾಲಕರು ಹಣದಾಸೆಗಾಗಿ ರೋಗಿಗಳ ಜೀವದ ನಡುವೆ ಚೆಲ್ಲಾಟವಾಡುವುದು ಸರಿಯೇ?