ಜಾನುವಾರು ಚರ್ಮಗಂಟು ರೋಗ ತಡೆಗಟ್ಟಿ ಜಾನುವಾರುಗಳನ್ನು ಉಳಿಸಿ
ವಿಜಯನಗರ ಜಿಲ್ಲೆಯ ನೊಂದ ಗ್ರಾಮಸ್ಥರಿಂದ ಮುಖ್ಯಮಂತ್ರಿಗಳಿಗೊಂದು ಪತ್ರ
1. ತಮಗೆ ತಿಳಿದಿರುವಂತೆ ಕಳೆದ ಕೆಲವು ತಿಂಗಳುಗಳಿಂದ ಜಾನುವಾರುಗಳಲ್ಲಿ ಚರ್ಮ ಗಂಟುರೋಗ ವೇಗವಾಗಿ ಹರಡಿ ಹಬ್ಬುತ್ತಿದೆ. ನಮ್ಮ ವಿಜಯನಗರ ಜಿಲ್ಲೆ ಇದರ ಮುಂಚೂಣಿಯಲ್ಲಿದೆ. ಅಧಿಕೃತ ಅಂಕಿ ಅಂಶದ ಪ್ರಕಾರ ಜಿಲ್ಲೆಯಲ್ಲಿ ಈವರೆಗೆ 401 ಜಾನುವಾರುಗಳು ಮೃತಪಟ್ಟಿದ್ದು 18,284 ಜಾನುವಾರುಗಳು ರೋಗಪೀಡಿತವಾಗಿವೆ. ಆದಾಗ್ಯೂ, ಪ್ರತೀ ದಿನ ಜಾನುವಾರುಗಳು ಅಧಿಕ ಸಂಖ್ಯೆಯಲ್ಲಿ ರೋಗಕ್ಕೆ ತುತ್ತಾಗುತ್ತಿದ್ದು ಮರಣ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ವೇಳೆಗಾಗಲೇ ಗ್ರಾಮವೊಂದಕ್ಕೆ 5-10 ಜಾನುವಾರುಗಳಂತೆ ಮೃತಪಟ್ಟಿವೆ. ಇವುಗಳಲ್ಲಿ ಜವಾರಿ/ಸ್ಥಳೀಯ ತಳಿ ಜಾನುವಾರುಗಳದ್ದೇ ಸಿಂಹಪಾಲು.
2. ಸ್ಥಳೀಯ ಪಶುವೈದ್ಯರು ಅನೇಕ ಔಷಧಿಗಳನ್ನು ಕೊಡುವಂತೆ ಶಿಫಾರಸು ಮಾಡುತ್ತಿದ್ದಾರೆ. ಅವುಗಳೆಂದರೆ: Maxxtol( paracetamol), Amoxicillin (Antibiotics), Poxodin(homeopathy tonic) Calmax(Vitamin tab), ಇತ್ಯಾದಿ. ರೈತರು ಈ ಔಷಧಿಗಳಿಗೆ ಹತ್ತಾರು ಸಾವಿರ ರೂ.ಖರ್ಚು ಮಾಡಿದರೂ ರೋಗಪೀಡಿತ ಆಕಳುಗಳನ್ನು ಮಾತ್ರ ಉಳಿಸಿಕೊಳ್ಳಲಾಗಿಲ್ಲ. ಕೆಎಂಎಫ್ ವತಿಯಿಂದ ಡೈರಿ ಆಕಳು(ಮಿಶ್ರತಳಿ)ಗಳನ್ನು ಹೊಂದಿರುವವರಿಗೆ ಹೆಸರಿಲ್ಲದ ಬಿಳಿ ಗುಳಿಗೆಯನ್ನು ಹೊಂದಿದ ಒಂದು ಉಚಿತ ಕಿಟ್ ಕೊಡುತ್ತಿದ್ದಾರೆ. ಇದು ಹೋಮಿಯೋಪತಿ ಔಷಧಿಯೆಂದೂ, ಇದನ್ನು ರೋಗಪೀಡಿತ ಜಾನುವಾರಿಗೆ ದಿನಕ್ಕೆ ಎರಡು ಬಾರಿ ತಲಾ ಹತ್ತು ಗುಳಿಗೆಯಂತೆ ಐದು ದಿನಗಳ ಕಾಲ ಮತ್ತು ಆರೋಗ್ಯವಂತ ಜಾನುವಾರಿಗೆ ದಿನಕ್ಕೊಮ್ಮೆ ಕೊಡಬೇಕೆಂದು ಹೇಳುತ್ತಿದ್ದಾರೆ. ಈ ಗುಳಿಗೆ ಜವಾರಿ/ಸ್ಥಳೀಯ ಜಾನುವಾರುಗಳಿಗೆ ಲಭ್ಯವಿಲ್ಲ.
3. 'ಭಾರತೀಯ ಕೃಷಿ ಅನುಸಂಶೋಧನಾ ಸಂಸ್ಥೆ'(ICAR)ಯು ಇಝ್ಝತ್ನಗರದ ಭಾರತೀಯ ವೆಟೆನೆರಿ ಸಂಶೋಧನಾ ಸಂಸ್ಥೆಯೊಡಗೂಡಿ ಜಾನುವಾರು ಚರ್ಮಗಂಟು ರೋಗಕ್ಕೆ ಲಸಿಕೆಯನ್ನು ಬಿಡುಗಡೆ ಮಾಡಿದೆ ಎಂದು ದಿನಾಂಕ: 10.08.22ರಂದು ಪತ್ರಿಕೆಯೊಂದು ವರದಿ ಮಾಡಿದೆ. ಇದು ದೇಶದಲ್ಲಿ 30 ಕೋಟಿ ಜಾನುವಾರಿಗೆ ಲಭ್ಯವಿದೆ ಎಂದು ಕೇಂದ್ರ ಪಶು ಸಂಶೋಧನಾ ಸಚಿವರು ಹೇಳಿದ್ದಾರೆ. ಕುರಿ ಮತ್ತು ಮೇಕೆಗಳಿಗೆ ಕೊಡುವ ಲಸಿಕೆಯನ್ನು ಆಧರಿಸಿರುವ ಇದು ಜಾನುವಾರುಗಳಿಗೆ ಭಾಗಶಃ ರಕ್ಷಣೆ ನೀಡುತ್ತದೆ ಎಂದಿದ್ದಾರೆ. ಬಿಡುಗಡೆಯಾಗಿ ಎರಡು ತಿಂಗಳ ಮೇಲಾದರೂ ಇದುವರೆಗೂ ನಮ್ಮ ಗ್ರಾಮಗಳಿಗೆ ಈ ಲಸಿಕೆ ತಲುಪಿಲ್ಲ.
4. ಈ ರೋಗದ ನಂಜಾಣು(ವೈರಸ್) ನೀರು, ಗಾಳಿ, ಮೇವು ಯಾವುದರಿಂದ ಹರಡುತ್ತಿದೆ? ರೈತರು ಈ ರೋಗಕ್ಕೆ ಯಾವ ಮುಂಜಾಗ್ರತಾ ಕ್ರಮ ವಹಿಸಬೇಕು? ಈ ರೋಗ ತಗಲಿದ ಜಾನುವಾರನ್ನು ಪ್ರತ್ಯೇಕಿಸಬೇಕೇ? ಇತ್ಯಾದಿ ಯಾವುದೇ ಮಾರ್ಗದರ್ಶನ ಸ್ಥಳೀಯ ಪಶುವೈದ್ಯ ಇಲಾಖೆಯಿಂದ ಸಿಗುತ್ತಿಲ್ಲ.
ಮಾನ್ಯ ಮುಖ್ಯಮಂತ್ರಿಗಳಲ್ಲಿ ನಾವು ಕೇಳಿಕೊಳ್ಳುವುದು ಏನೆಂದರೆ:
1. ದಿನೇ ದಿನೇ ಜಾನುವಾರುಗಳು ಸೋಂಕಿಗೊಳಗಾಗುವ ಮತ್ತು ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು ಈ ತಕ್ಷಣವೇ ನಮ್ಮ ಜಿಲ್ಲೆಗೆ ಲಸಿಕೆಯನ್ನು ಪೂರೈಸುವ ವ್ಯವಸ್ಥೆ ಮಾಡಬೇಕು.
2. ಈ ರೋಗ ಯಾವುದರಿಂದ ಹರಡುತ್ತಿದೆ, ಇದಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ರೋಗಕ್ಕೆ ತುತ್ತಾದ ಜಾನುವಾರುಗಳ ವಿಷಯದಲ್ಲಿ ಪಾಲಿಸಬೇಕಾದ ಕ್ರಮಗಳನ್ನು ಕುರಿತು ಪಶುವೈದ್ಯ ಇಲಾಖೆಯಿಂದ ಮಾಹಿತಿ ಪತ್ರ ಹೊರಡಿಸಿ ಗ್ರಾಮಗಳಲ್ಲಿ ಹಂಚಬೇಕು. ಕೋವಿಡ್-19 ಸಮಯದಲ್ಲಿ ಮಾಡಿದ ರೀತಿಯಲ್ಲೇ ಗ್ರಾಮಗಳಲ್ಲಿ ಮನೆ ಭೇಟಿ ನೀಡಿ ಸೂಕ್ತ ಮಾರ್ಗದರ್ಶನ ಒದಗಿಸಬೇಕು.
3. ಸೋಂಕು ತಗಲಿದ ಜಾನುವಾರುಗಳನ್ನು ಪ್ರತ್ಯೇಕಿಸಬೇಕಾದ್ದೇ ಆದರೆ, ಎಲ್ಲಾ ರೈತರಿಗೂ ಅದಕ್ಕೆ ಅಗತ್ಯವಾದಷ್ಟು ಜಾಗ ಇರುವುದಿಲ್ಲ. ಕೋವಿಡ್-19 ಸಮಯದಲ್ಲಿ ಮಾಡಿದಂತೆ ಗ್ರಾಮಗಳಲ್ಲಿ ಸೂಕ್ತ ಸ್ಥಳ ಗುರುತಿಸಿ ಸಾಮೂಹಿಕ ಕ್ವಾರೆಂಟೈನ್ ವ್ಯವಸ್ಥೆ ಮಾಡಬೇಕು.
4. ಅಗತ್ಯ ಔಷಧಗಳನ್ನು ಎಲ್ಲಾ ಜಾನುವಾರುಗಳಿಗೂ ಉಚಿತವಾಗಿ ಒದಗಿಸುವ ವ್ಯವಸ್ಥೆ ಮಾಡಬೇಕು.
5. ಈ ರೋಗಕ್ಕೆ ಸ್ಥಳೀಯ/ಜವಾರಿ ತಳಿ ಜಾನುವಾರುಗಳೇ ಹೆಚ್ಚಾಗಿ ತುತ್ತಾಗುತ್ತಿರುವುದರಿಂದ ಮಿಶ್ರತಳಿ ಡೈರಿ ಆಕಳುಗಳಿಗೆ ಒದಗಿಸುತ್ತಿರುವ ವಿಶೇಷ ಔಷಧೋಪಚಾರವನ್ನು ಇವುಗಳಿಗೂ ಲಭ್ಯವಾಗಿಸಬೇಕು.
6. ನಮ್ಮಲ್ಲಿ ಸಿಂಹಪಾಲು ರೈತರು ಜಾನುವಾರುಗಳ ಮೇಲೆ ವಿಮೆ ಮಾಡಿಸಿರುವುದಿಲ್ಲ. ಮಾಡಿಸಿದ್ದರೂ ನವೀಕರಿಸಿರುವುದಿಲ್ಲ. ಅದಕ್ಕೆ ಅನೇಕ ಕಾರಣಗಳಿವೆ. ತಾವು ನಮ್ಮ ಜಾನುವಾರುಗಳ ವಿಮೆಗೆ ವ್ಯವಸ್ಥೆ ಮಾಡಬೇಕೆಂದು ಕಳಕಳಿಯಿಂದ ಕೇಳಿಕೊಳ್ಳುತ್ತೇವೆ.
7. ರೈತರ ಬದುಕಿನ ಅವಿಭಾಜ್ಯ ಅಂಗವಾದ ಜಾನುವಾರುಗಳ ಜೀವವೂ ಮನುಷ್ಯರಷ್ಟೇ ಅಮೂಲ್ಯ. ಜಾನುವಾರುಗಳ ಚರ್ಮಗಂಟು ರೋಗಕ್ಕೆ ಮೀಸಲಾದ ಪ್ರತ್ಯೇಕ ಲಸಿಕೆಯನ್ನು ಶೀಘ್ರವಾಗಿ ಅಭಿವೃದ್ಧಿಪಡಿಸುವಲ್ಲಿ ಕರ್ನಾಟಕ ಸರಕಾರ ನೇತೃತ್ವ ವಹಿಸಲಿ ಎಂದು ಕೇಳಿಕೊಳ್ಳುತ್ತೇವೆ. ಮಾನ್ಯ, ಮುಖ್ಯಮಂತ್ರಿಗಳೇ, ನಮ್ಮ ಪ್ರದೇಶದಲ್ಲಿ ಅತ್ಯುತ್ತಮವಾಗಿ ಬಂದಿದ್ದ ಮುಂಗಾರು ಬೆಳೆಗಳು ಕಟಾವಿಗೆ ಮುನ್ನ ಹುಚ್ಚು ಮಳೆಗೆ ಸಿಕ್ಕಿ ನೆಲ ಕಚ್ಚಿವೆ. ಇದೀಗ ಹಿಂಗಾರು ಬಿತ್ತನೆ ಪ್ರಾರಂಭಿಸಬೇಕು. ಇಲ್ಲಿ ಎತ್ತುಗಳೇ ನಮ್ಮ ಜೀವಾಳ. ಅನೇಕರು ನಮ್ಮ ಜೀವದಂತಿದ್ದ ಎತ್ತುಗಳನ್ನು ಕಳೆದುಕೊಂಡು ಅನಾಥರಂತಾಗಿದ್ದೇವೆ. ನಮ್ಮ ಮನೆ ಲಕ್ಷ್ಮೀಯರಂತಿದ್ದ ದನಗಳು, ಮುದ್ದು ಕರುಗಳು ನಮ್ಮ ಕಣ್ಣ ಮುಂದೆ ಸಂಕಟಪಟ್ಟು ಸಾಯುವುದನ್ನು ನಿಸ್ಸಹಾಯಕರಾಗಿ ನೋಡುತ್ತಿದ್ದೇವೆ. ಇದು ಹೀಗೇ ಮುಂದುವರಿದರೆ ಈಗಾಗಲೇ ಕ್ಷೀಣಿಸಿ ಹೋಗಿರುವ ನಮ್ಮ ಸ್ಥಳೀಯ/ಜವಾರಿ ತಳಿ ಜಾನುವಾರುಗಳು ಪೂರ್ತಿ ಅಳಿಸಿಯೇ ಹೋಗುತ್ತವೆ. ಇದನ್ನು ತಡೆಯುವುದು ಸರಕಾರದ ಚುಕ್ಕಾಣಿ ಹಿಡಿದಿರುವ ತಮ್ಮಿಂದ ಮಾತ್ರ ಸಾಧ್ಯ.
(ಹಲವು ನಾಗರಿಕರ ಸಹಿಗಳಿವೆ)