ವಾಹನಗಳಲ್ಲಿ ಪ್ರಯಾಣ ಯಾಕಿಷ್ಟು ಅಸುರಕ್ಷಿತ?
ಇತ್ತೀಚಿನ ಅಧ್ಯಯನಗಳ ಪ್ರಕಾರ ಹೆಚ್ಚಿನ ಭೀಕರ ಅಪಘಾತಗಳು ಅತಿಯಾದ ವೇಗದಿಂದ ಮತ್ತು ಸಂಚಾರಿ ನಿಯಮಗಳ ಸೂಚನೆಗಳನ್ನು ಪಾಲಿಸದೆ ಇರುವುದರಿಂದ ನಡೆಯುತ್ತಿದೆಯೆಂದು ಪೊಲೀಸ್ ಮೂಲಗಳು ತಿಳಿಸುತ್ತವೆ. ರಾತ್ರಿ ವೇಳೆ ಕುಡಿದು ವಾಹನ ಚಲಾಯಿಸುವುದು, ರಾತ್ರಿ ವೇಳೆ ಹೈವೇಗಳಲ್ಲಿ ಟ್ರಾಫಿಕ್ ಒತ್ತಡ ಇಲ್ಲದಿರುವುದರಿಂದ ರಾತ್ರಿ ಅತಿವೇಗವಾಗಿ ವಾಹನಗಳನ್ನು ಚಲಾಯಿಸುವುದು, ರಾತ್ರಿಯಿಡೀ ನಿದ್ರೆ ಮಾಡದೇ ವಾಹನ ಚಲಾಯಿಸುವುದು, ವಾಹನದ ಸಾಮರ್ಥ್ಯವನ್ನು ಮೀರಿ ಪ್ರಯಾಣಿಕರನ್ನು ಕರೆದೊಯ್ಯುವುದು, ನಿರಂತರವಾಗಿ ವಿರಾಮವಿಲ್ಲದೆ ವಾಹನವನ್ನು ಚಲಾಯಿಸುವುದು, ಇತರ ವಾಹನಗಳನ್ನು ಹಿಂದಿಕ್ಕುವ ಕೆಟ್ಟ ಹವ್ಯಾಸ, ಸ್ಥಳವನ್ನು ತಲುಪಲು ಅವಸರಿಸುವುದು ಮತ್ತು ಚಾಲಕರ ಅನುಭವದ ಕೊರತೆ ಇವೆಲ್ಲವೂ ಅಪಘಾತಗಳಿಗೆ ಕಾರಣವಾಗುತ್ತದೆ.
ಮೇಲಿನ ಪ್ರಶ್ನೆ ಈಗ ಇಡೀ ಸಮಾಜವನ್ನೇ ಕಾಡಲಾರಂಭಿಸಿದೆ. ಕೆಲವು ದಿನಗಳ ಹಿಂದೆ ಧಾರ್ಮಿಕ ಪ್ರವಾಸ ಮುಗಿಸಿ ಮನೆ ತಲುಪಲು ಎರಡು ಕಿಲೋಮೀಟರ್ ಇರುವಾಗ ಹಾಸನದಲ್ಲಿ ನಡೆದ ಅಪಘಾತ ಒಂದೇ ಕುಟುಂಬದ ಒಂಭತ್ತು ಜನರನ್ನು ಬಾರದ ಲೋಕಕ್ಕೆ ಕರೆದೊಯ್ದಿದೆ. ಆ ದೃಶ್ಯವನ್ನು ಕಂಡರೆ ಎಂಥವರಿಗಾದರೂ ಒಂದು ಕ್ಷಣ ಆಘಾತವಾಗದೇ ಇರದು. ಅಂತಹ ಒಂದು ಭೀಕರ ಘಟನೆ ಇದು ಮೊದಲೂ ಅಲ್ಲ, ಇದು ಕೊನೆಯೂ ಅಲ್ಲ. ಭಾರತದ ರಸ್ತೆಗಳ ಮೇಲೆ ಇಂತಹ ಸಾವಿರಾರು ಅಪಘಾತಗಳು ನಡೆದು ಅಪಘಾತಗಳಲ್ಲಿ ಸಂಪೂರ್ಣ ಕುಟುಂಬಕ್ಕೆ ಕುಟುಂಬವೇ ನಾಶವಾಗಿ ಹೋಗಿದೆ. ಬದುಕಿ ಬಾಳಿದ ಕುಟುಂಬ ಒಂದು ಕ್ಷಣದ ಆಘಾತದಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಸುಟ್ಟು ಬೂದಿಯಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಅಂದರೆ ಒಂದು ಗಂಟೆಗೆ ಸರಿ ಸುಮಾರು 130 ರಿಂದ 140 ಕಿಲೋಮೀಟರ್ ವೇಗದಲ್ಲಿ ಸಂಚರಿಸಲು ಅನುಮತಿ ಇರುವ ರಸ್ತೆಗಳಲ್ಲಿ ದಿನಾ ಇಂತಹ ಹಲವಾರು ಘಟನೆಗಳು ನಡೆಯುತ್ತವೆ ಎನ್ನುವ ಮಾಹಿತಿ ಇವೆ. ಇಂತಹ ಅಪಘಾತಗಳಲ್ಲಿ ಆ ದೇಶಗಳಲ್ಲಿ ಹಲವಾರು ಕುಟುಂಬಗಳು ಹೇಳಹೆಸರಿಲ್ಲದಂತೆ ಬೂದಿಯಾಗಿವೆ. ವಿಶೇಷವಾಗಿ ಮಧ್ಯಪ್ರಾಚ್ಯ ದೇಶಗಳಲ್ಲಿ ಇದು ಬಹಳ ಸಾಮಾನ್ಯ. ಭಾರತದ ರಸ್ತೆ ಸಂಚಾರ ನಿಯಮಗಳ ಪ್ರಕಾರ ಗಂಟೆಗೆ ಸರಾಸರಿ 80 ಕಿಲೋಮೀಟರ್ ವೇಗದಲ್ಲಿ ಸಂಚರಿಸಲು ಮಾತ್ರ ಅನುಮತಿ ಇದೆ. ಕೆಲ ವರ್ಷಗಳ ಹಿಂದೆ ಇಂತಹ ರಸ್ತೆ ಅಪಘಾತಗಳು ದೇಶದಲ್ಲಿ ಬಹಳಷ್ಟು ನಡೆದಾಗ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ಎಲ್ಲಾ ರೀತಿಯ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಸಲು ಸೂಚಿಸಿದ್ದರೂ ಕೆಲವು ವಾಹನ ತಯಾರಕರು ಕಳ್ಳಾಟ ಆಟವಾಡುತ್ತಿವೆ ಎನ್ನುವ ಆರೋಪವಿದೆ. ಒಟ್ಟಿನಲ್ಲಿ ಯಾರ ತಪ್ಪಿಗೆ ಇನ್ನ್ಯಾರೋ ಮುಗ್ಧ ಜೀವಿಗಳು ಬಲಿಯಾಗುತ್ತಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಅನ್ನಬಹುದೇ?
ಇಲ್ಲಿ ಬಹುಮುಖ್ಯ ವಿಚಾರವೆಂದರೆ ಭಾರತದ ಅಪರಾಧ ನಿಯಂತ್ರಣ ಸಂಸ್ಥೆ ವರದಿ ಪ್ರಕಾರ ದೇಶದಲ್ಲಿ ಪ್ರತಿ ವರ್ಷ ಹೆಚ್ಚು ಕಡಿಮೆ ಸುಮಾರು 1,55,000 ಜನರು ವಾಹನ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಅದರಲ್ಲೂ ತಮಿಳುನಾಡಿನ ಚೆನ್ನೈ ಇಡೀ ದೇಶದಲ್ಲಿ ಮುಂದೆ ಇದೆ ಎಂದು ವರದಿ ತಿಳಿಸುತ್ತದೆ. ಅದೇ ರೀತಿ ಕರ್ನಾಟಕ ರಾಜ್ಯದ ಕೆಲವು ಮುಖ್ಯ ಹೆದ್ದಾರಿಗಳಲ್ಲಿ ಇಂತಹ ಅಪಘಾತಗಳು ದಿನನಿತ್ಯವೂ ನಡೆಯುತ್ತಿರುತ್ತವೆ. ಸಾಮಾನ್ಯವಾಗಿ ಬೆಂಗಳೂರು, ತುಮಕೂರು ಮಾರ್ಗವಾಗಿ ಉತ್ತರ ಕರ್ನಾಟಕವನ್ನು ಸೇರಿಸುವ ರಾಜ್ಯ/ರಾಷ್ಟ್ರ ಹೆದ್ದಾರಿಗಳಲ್ಲಿ ನಿರಂತರವಾಗಿ ಭೀಕರ ಅಪಘಾತಗಳು ನಡೆಯುತ್ತಿರುತ್ತವೆ. ಮುಗ್ಧ ಜೀವಿಗಳು ಬಲಿ ಆಗುತ್ತಲೇ ಇರುತ್ತವೆ. ಅಪಘಾತ ನಡೆದ ನಂತರ ಒಂದಿಷ್ಟು ಪರಿಹಾರ ನೀಡಿ ಕೈತೊಳೆದುಕೊಳ್ಳುವ ವ್ಯವಸ್ಥೆ ನಮ್ಮಲ್ಲಿ ಈಗಾಗಲೇ ಆಳವಾಗಿ ಬೇರೂರಿದೆ. ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ಅಪಘಾತಗಳ ಕುರಿತು ಹೇಳುವುದಾದರೆ ಅಲ್ಲಿ ಕೆಲವೊಂದು ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಬಹುದು. ಒಂದೆಡೆ ವಾಹನಗಳ ಸುಸ್ಥಿತಿಯ ವಿಷಯವಾದರೆ, ಇನ್ನೊಂದು ರಸ್ತೆಯ ಗುಣಮಟ್ಟದ ವಿಚಾರ ಅಂದರೆ ನಿತ್ಯ ಒಂದಲ್ಲ ಒಂದು ರಸ್ತೆಯ ಅಗಲೀಕರಣ, ರಸ್ತೆಯ ರಿಪೇರಿ ಹೀಗೆ ನಡೆಯುತ್ತಲೇ ಇರುತ್ತದೆ. ಅದಕ್ಕೆ ಕೊನೆ-ಮೊದಲು ಇರುವುದಿಲ್ಲ. ರಸ್ತೆ ಅಗೆಯುವುದು ಮತ್ತು ಅದನ್ನು ಸರಿ ಮಾಡುವುದು ಇದು ನಮ್ಮಲ್ಲಿ ಮಾಮೂಲಿ ವಿಚಾರ. ಇದು ಚುನಾವಣಾ ವರ್ಷವಾಗಿದೆ. ಇದರಿಂದ ಮತದಾರರ ಮನ ಗೆಲ್ಲಲು ರಸ್ತೆ ಅಗಲೀಕರಣ ಮಾಡುವ ಮತ್ತು ರಸ್ತೆ ‘ಸರಿ ಮಾಡುವ’ ಅಭಿಯಾನವನ್ನೇ ರಾಜಕಾರಣಿಗಳು ಆರಂಭಿಸಿದ್ದಾರೆ! ಇದು ಮತ ಕೇಳಲು ಅವರಿಗೂ ಒಂದು ಸುಲಭವಾದ ದಾರಿ. ಅಪಘಾತಕ್ಕೆ ಇನ್ನೊಂದು ಕಾರಣವೆಂದರೆ ವಾಹನಗಳ ಸುಸ್ಥಿತಿ. ನಿಯಮಗಳ ಪ್ರಕಾರ ಹದಿನೈದು ವರ್ಷ ಕಳೆದ ವಾಹನಗಳು ಹೆಚ್ಚಿನ ಬಾರಿ ಸುಸ್ಥಿತಿಯಲ್ಲಿ ಇರುವುದಿಲ್ಲ. ಆದರೂ ಕೆಲವು ಆರ್‌ಟಿಒ ಕಚೇರಿಗಳಲ್ಲಿ ಮಿತಿಮೀರಿದ ಭ್ರಷ್ಟಾಚಾರದಿಂದ ಚಾಲಕರು ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಪಡೆದು ವಾಹನಗಳನ್ನು ರಸ್ತೆಗೆ ಇಳಿಸುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಸುಮಾರು ನಾಲ್ಕೈದು ವರ್ಷಗಳಿಂದ ಮಂಡ್ಯದ ಬಳಿ ಬಸ್ಸೊಂದು ಕೆರೆಗೆ ಮಗುಚಿ ಸುಮಾರು 22 ಮಂದಿ ಪ್ರಾಣ ಕಳೆದುಕೊಂಡಿದ್ದರು. ಆ ಬಸ್ಸಿಗೆ ಆಗಲೇ ಇಪ್ಪತ್ತು ವರ್ಷ ಆಯಸ್ಸು ಕಳೆದಿತ್ತು ಮತ್ತು ನಾಲ್ಕಾರು ಕೈಗಳನ್ನು ದಾಟಿತ್ತು. ಆದರೂ ಆರ್‌ಟಿಒ ಅಧಿಕಾರಿಗಳು ಅದಕ್ಕೆ ಫಿಟ್ನೆಸ್ ಸರ್ಟಿಫಿಕೇಟನ್ನು ನೀಡಿದ್ದರು. ಹೆಚ್ಚಿನ ಬಾರಿ ಬಡ ಚಾಲಕರ ಬಳಿ ಹಣವಿಲ್ಲದೆ ವಾಹನಗಳನ್ನು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಪ್ರತೀ ವರ್ಷ ವಾಹನಗಳ ಬಿಡಿ ಭಾಗಗಳನ್ನು ಬದಲಿಸಲು ಆಗುವುದಿಲ್ಲ. ವಾಹನಗಳಲ್ಲಿ ಸಮಸ್ಯೆ ಇದ್ದರೂ ಅದನ್ನು ಅಲ್ಪಸ್ವಲ್ಪಸರಿ ಮಾಡಿಕೊಂಡು ರಸ್ತೆಗೆ ತರುತ್ತಾರೆ. ಇವೆಲ್ಲಾ ಯಮನೂರಿಗೆ ಹೋಗಲು ಸಿದ್ಧವಾದ ದಾರಿಗಳು. ಎರಡನೆಯದು ದೇಶದಲ್ಲಿ ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ರಸ್ತೆಗಳು ಲಭ್ಯವಿಲ್ಲ. ಒಂದು ಕಾಲದಲ್ಲಿ ಭಾರತದ ರಸ್ತೆಗಳು ಹೇಗಿದ್ದವೆಂದರೆ ಅದರ ಮೇಲೆ ಗರ್ಭಿಣಿಯೊಬ್ಬಳು ವಾಹನದಲ್ಲಿ ಸಂಚರಿಸಿದರೆ ಆಕೆಗೆ ಅಲ್ಲೇ ಹೆರಿಗೆ ಆಗುವಂತಿತ್ತು. ಆದರೆ ಈಗ ಪರಿಸ್ಥಿತಿ ಸ್ವಲ್ಪ ಸುಧಾರಿಸಿದರೂ ಹೇಳಿಕೊಳ್ಳುವಂತಹ ಗಂಭೀರವಾದ ಗುಣಾತ್ಮಕವಾದ ರಸ್ತೆಗಳು ಹೆಚ್ಚಿನ ಭಾಗದಲ್ಲ್ಲಿ ಇಲ್ಲ. ಅಲ್ಲದೆ ಇತ್ತೀಚಿನ ಅಧ್ಯಯನಗಳ ಪ್ರಕಾರ ಹೆಚ್ಚಿನ ಭೀಕರ ಅಪಘಾತಗಳು ಅತಿಯಾದ ವೇಗದಿಂದ ಮತ್ತು ಸಂಚಾರಿ ನಿಯಮಗಳ ಸೂಚನೆಗಳನ್ನು ಪಾಲಿಸದೆ ಇರುವುದರಿಂದ ನಡೆಯುತ್ತಿದೆಯೆಂದು ಪೊಲೀಸ್ ಮೂಲಗಳು ತಿಳಿಸುತ್ತವೆ. ರಾತ್ರಿ ವೇಳೆ ಕುಡಿದು ವಾಹನ ಚಲಾಯಿಸುವುದು, ರಾತ್ರಿ ವೇಳೆ ಹೈವೇಗಳಲ್ಲಿ ಟ್ರಾಫಿಕ್ ಒತ್ತಡ ಇಲ್ಲದಿರುವುದರಿಂದ ರಾತ್ರಿ ಅತಿವೇಗವಾಗಿ ವಾಹನಗಳನ್ನು ಚಲಾಯಿಸುವುದು, ರಾತ್ರಿಯಿಡೀ ನಿದ್ರೆ ಮಾಡದೇ ವಾಹನ ಚಲಾಯಿಸುವುದು, ವಾಹನದ ಸಾಮರ್ಥ್ಯವನ್ನು ಮೀರಿ ಪ್ರಯಾಣಿಕರನ್ನು ಕರೆದೊಯ್ಯುವುದು, ನಿರಂತರವಾಗಿ ವಿರಾಮವಿಲ್ಲದೆ ವಾಹನವನ್ನು ಚಲಾಯಿಸುವುದು, ಇತರ ವಾಹನಗಳನ್ನು ಹಿಂದಿಕ್ಕುವ ಕೆಟ್ಟ ಹವ್ಯಾಸ, ಸ್ಥಳವನ್ನು ತಲುಪಲು ಅವಸರಿಸುವುದು ಮತ್ತು ಚಾಲಕರ ಅನುಭವದ ಕೊರತೆ ಇವೆಲ್ಲವೂ ಅಪಘಾತಗಳಿಗೆ ಕಾರಣವಾಗುತ್ತದೆ. ಹೆಚ್ಚಿನ ಅಪಘಾತಗಳು ಬೆಳಗ್ಗಿನ ಜಾವದಲ್ಲಿ ಸಂಭವಿಸುವ ಸಾಧ್ಯತೆ ಇರುತ್ತದೆ.
ಇದರೊಂದಿಗೆ ನಾವು ಗಮನಿಸಬೇಕಾದ ಇನ್ನೊಂದು ಬಹುಮುಖ್ಯ ಅಂಶವೆಂದರೆ ಕೌಟುಂಬಿಕ ವಿಚಾರ. ಇದು ಭಾರತದಲ್ಲಿ ಮನೆ ಮಾಡಿರುವ ಪ್ರಬಲ ಭಾವನಾತ್ಮಕ ಅಂಶ. ನಮ್ಮಲ್ಲಿ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ, ಪ್ರವಾಸ ಏನೇ ಇದ್ದರೂ ಕುಟುಂಬದ ಎಲ್ಲರೂ ಒಟ್ಟಿಗೆ ಹೋಗುವುದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿರುವ ವಾಡಿಕೆಯಾಗಿದೆ. ಅದಕ್ಕೆ ಯಾವ ದೇಶದ ಯಾವ ಕುಟುಂಬಗಳೂ ಹೊರತಲ್ಲ. ಕುಟುಂಬದ ಸದಸ್ಯರು ಒಟ್ಟಿಗೆ ಪ್ರಯಾಣ ಮಾಡುವುದು ಒಂದು ಪ್ರಬಲ ಅಭ್ಯಾಸ. ಅಂತಹ ಪ್ರಯಾಣ ಕುಟುಂಬದ ಸದಸ್ಯರ ಮಧ್ಯೆ ಒಂದಿಷ್ಟು ಸಾಮರಸ್ಯ ಮೂಡಿಸುತ್ತದೆ. ಕುಟುಂಬದ ಸದಸ್ಯರ ನಡುವೆ ಮತ್ತಷ್ಟು ಬಾಂಧವ್ಯ ಹೆಚ್ಚಾಗುತ್ತದೆ. ಒಟ್ಟಿಗಿನ ಪಯಣ ಖುಷಿ, ಸಂತೋಷ ಎಲ್ಲವನ್ನೂ ತರುತ್ತದೆ. ಇದರಲ್ಲಿ ಯಾವುದೇ ತಪ್ಪಿಲ್ಲ ಆದರೆ ಈಗ ಮೂಡಿರುವ ಒಂದು ಸೂಕ್ತವಾದ ಧರ್ಮ ಸಂಕಟದ ವಿಚಾರವೆಂದರೆ ಈಗ ನಡೆಯುತ್ತಿರುವ ಅಪಘಾತಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಈ ರೀತಿ ಒಂದೇ ವಾಹನದಲ್ಲಿ ಕುಟುಂಬದ ಎಲ್ಲರೂ ಒಟ್ಟಿಗೆ ಸಂಚರಿಸುವುದು ಕ್ಷೇಮವೇ ಎನ್ನುವ ಬಹುದೊಡ್ಡ ಪ್ರಶ್ನೆ ಹುಟ್ಟಿಕೊಂಡಿದೆ. ಕೆಲ ವರ್ಷಗಳ ಹಿಂದೆ ಒಂದು ಭೀಕರ ವಿಮಾನ ಅಪಘಾತ ಸಂಭವಿಸಿ ನೂರಾರು ಮಂದಿ ಪ್ರಾಣ ಕಳೆದುಕೊಂಡಾಗ ಅಮೆರಿಕದ ಒಂದು ವಿಮಾನ ತಯಾರಿಕಾ ಸಂಸ್ಥೆಯ ಮುಖ್ಯಸ್ಥರು ಒಂದೇ ವಿಮಾನದಲ್ಲಿ ಕುಟುಂಬದ ಎಲ್ಲಾ ಸದಸ್ಯರು ಪ್ರಯಾಣ ಮಾಡುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದಕ್ಕೆ ಅಂದು ಪರ ಮತ್ತು ವಿರೋಧ ಎರಡು ಅಂಶಗಳು ಉಂಟಾಗಿದ್ದವು. ಇಂದಿನ ಅಪಘಾತಗಳನ್ನು ಗಮನಿಸಿದರೆ ಅದರಲ್ಲಿ ಕುಟುಂಬಕ್ಕೆ ಕುಟುಂಬವೇ ನಾಶವಾಗುವುದನ್ನು ನೋಡಿದರೆ ಅವರ ಹೇಳಿಕೆ ಇಂದಿಗೂ ಪ್ರಸಕ್ತ ಎಂದು ಅನ್ನಿಸದೇ ಇರಲಾರದು. ಅಂದ ಮಾತ್ರಕ್ಕೆ ಎಲ್ಲಾ ವಾಹನಗಳ ಅಪಘಾತಗೀಡಾಗುತ್ತವೆ ಅನ್ನುವುದು ಅರ್ಥವಲ್ಲ. ಆದರೆ ಈ ಘಟನೆಗಳನ್ನು ನೋಡಿದರೆ ಒಟ್ಟಿಗೆ ಸಂಚರಿಸುವುದನ್ನು ಸಾಧ್ಯವಾದಷ್ಟು ತಪ್ಪಿಸುವುದೇ ಉತ್ತಮ ಎನ್ನುವುದು ನಮಗೆ ಅನಿಸುವುದಿಲ್ಲವೇ?
ಕುಟುಂಬದ ಎಲ್ಲರೂ ಒಟ್ಟಿಗೆ ಮಾತನಾಡಿಕೊಂಡು ಒಂದೇ ವಾಹನದಲ್ಲಿ ಪ್ರಯಾಣ ಮಾಡುವುದು ಮನಸ್ಸಿಗೆ ಆಹ್ಲಾದಕರ ಅನಿಸಿದರೂ ಹಣೆಬರಹ ಸರಿ ಅಥವಾ ವಿಧಿ ಮುನಿಸಿಕೊಂಡರೆ ಮುಂದಿನ ಫಲಿತಾಂಶವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಇತ್ತೀಚಿನ ಒಂದು ಕುತೂಹಲಕಾರಿ ಸಂಶೋಧನೆ ಪ್ರಕಾರ ಅಪರಿಚಿತ ವ್ಯಕ್ತಿ ವಾಹನ ಚಲಾವಣೆ ಮಾಡುವಾಗ ಇತರ ಪ್ರಯಾಣಿಕರು ಮತ್ತು ಚಾಲಕನ ಮಧ್ಯ ಸಂಭಾಷಣೆ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ಆ ವ್ಯಕ್ತಿ ರಸ್ತೆಯ ಮೇಲೆ ಗಮನವಿಟ್ಟು ಚಲಾಯಿಸುತ್ತಾನೆ. ಅದೇ ಕುಟುಂಬದ ಎಲ್ಲರೂ ಒಂದೇ ವಾಹನದಲ್ಲಿ ಪ್ರಯಾಣ ಮಾಡುವಾಗ ಆ ಕುಟುಂಬದ ಒಬ್ಬ ಸದಸ್ಯ ವಾಹನವನ್ನು ಚಲಾಯಿಸುವಾಗ ಆತನ ಮತ್ತು ಇತರ ಸದಸ್ಯನ ನಡುವೆ ಮಾತುಕತೆಗಳು ಹೆಚ್ಚಾಗಿ ನಡೆಯುವುದರಿಂದ ರಸ್ತೆಯ ಮೇಲೆ ಗಮನ ತಪ್ಪಿ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ ಇನ್ನೂ ಒಂದು ವೈಜ್ಞಾನಿಕ ಅಂಶವೆಂದರೆ ಯಾವುದೇ ಚಾಲಕ ವಾಹನವನ್ನು 2ಗಂಟೆಗಳಿಗಿಂತ ಹೆಚ್ಚು ನಿರಂತರವಾಗಿ ಚಲಾಯಿಸಿದರೆ ಅಂತಹ ಚಾಲಕರಿಗೆ ರಸ್ತೆ ಸಂಮೋಹನ/ ರೋಡ್ ಹಿಪ್ನಾಟಿಸಂ ಉಂಟಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಅಪಘಾತಕ್ಕೆ ಕೆಲವು ನಿಮಿಷಗಳ ಹಿಂದೆ ಆ ಚಾಲಕ ಸಂಪೂರ್ಣ ತನ್ನನ್ನು ತಾನು ಮರೆತು ಹೋಗಿರುತ್ತಾನಂತೆ. ಇಂತಹ ಸಂದರ್ಭಗಳಲ್ಲಿ ಅಪಘಾತಗಳು ನಡೆಯುವುದು ಸರ್ವೇ ಸಾಮಾನ್ಯ ಎಂದು ಕೆಲವು ಪಾಶ್ಚಿಮಾತ್ಯ ವೈಜ್ಞಾನಿಕ ಲೇಖನಗಳು ಹೇಳುತ್ತಿವೆ. ಹಾಗಾಗಿ ಈ ರಸ್ತೆ ಸಂಮೋಹನ ವಿಚಾರ ಎಲ್ಲಾ ಚಾಲಕರಿಗೆ ತಿಳಿದಿರಬೇಕು.
ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಮತ್ತಷ್ಟು ರಸ್ತೆ ಸುರಕ್ಷತೆ ವಿಚಾರಗಳು ಹೆಚ್ಚಾಗಬೇಕಾಗಿದೆ. ಜನಸಂಖ್ಯೆಗನುಗುಣವಾಗಿ ರಸ್ತೆಗಳ ಅಗಲೀಕರಣ, ಆಧುನಿಕ ರಸ್ತೆಗಳ ನಿರ್ಮಾಣ, ರಸ್ತೆಗಳಲ್ಲಿ ಆಧುನಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ವಾಹನಗಳಿಗೆ ಬದಲಾಗಿ ಮನಸ್ಸಿಗೆ ವೇಗನಿಯಂತ್ರಕ ಅಳವಡಿಸಿಕೊಳ್ಳಬೇಕಾಗಿದೆ. ರಾತ್ರಿಯ ವೇಳೆ ಪೊಲೀಸರ ಸಂಚಾರಿ ಗಸ್ತು ವ್ಯವಸ್ಥೆಯನ್ನು ಹೆಚ್ಚು ಮಾಡಬೇಕಾಗಿದೆ. ಹೆದ್ದಾರಿಗಳಲ್ಲಿ ಆ್ಯಂಬುಲೆನ್ಸ್ ಸೇವೆಯನ್ನು ಸದಾ ನೀಡಬೇಕಾಗುತ್ತದೆ. ನಾವೆಲ್ಲ ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ ವಾಹನಗಳು ಇರುವುದು ಸಮಯವನ್ನು ಉಳಿಸುವುದಕ್ಕೆ, ಜೀವಗಳನ್ನು ಬಲಿಕೊಡಲಿಕ್ಕೆ ಅಲ್ಲ. ಹಾಗಾಗಿ ರಸ್ತೆ ಸಂಚಾರ ನಿಯಮಗಳು ಪಾಲಿಸುವುದೇ ನಿಜವಾದ ಆಯುಧಪೂಜೆಯಾಗಿದೆ.