ದಲಿತರ ಮನೆಯ ಊಟದಿಂದ ಅವರ ಉದ್ಧಾರ ಸಾಧ್ಯವೇ?
ಇಪ್ಪತ್ತೊಂದನೇ ಶತಮಾನದಲ್ಲೂ ದಲಿತರಿಗೆ ದೇವಸ್ಥಾನ, ಅಂತರ್ಜಾತಿ ವಿವಾಹ, ಮೇಲ್ವರ್ಗದವರ ಮನೆಯ ಪ್ರವೇಶ ಇವೆಲ್ಲವೂ ನಿರಾಕರಣೆಯಲ್ಲೇ ಇರುವಾಗ ಇತ್ತೀಚೆಗೆ ಕೆಲವು ಹೆಸರಾಂತ ಪತ್ರಿಕೆಗಳಲ್ಲಿ ದೃಶ್ಯ ಮಾಧ್ಯಮಗಳಲ್ಲಿ ರಾಜಕಾರಣಿಗಳು ದಲಿತರ ಮನೆಯಲ್ಲಿ ಊಟ ಮಾಡಿದರು, ಮಾದಿಗರ ಮನೆಯಲ್ಲಿ ಭೋಜನ ಸ್ವೀಕರಿಸಿದರು ಎಂದು ಜಾತಿಯನ್ನೇ ಮುಂದು ಮಾಡಿ ಸುದ್ದಿಯನ್ನು ಪ್ರಕಟಿಸುತ್ತಿರುವುದು ಪತ್ರಿಕಾಧರ್ಮದ ಕನಿಷ್ಠ ಪ್ರಜ್ಞೆಯನ್ನು ಮೀರಿದಂತಿದೆ.
ಕಂಬಾಲಪಲ್ಲಿಯ ದಲಿತ ಕುಟುಂಬವೊಂದರ ಜೀವಂತ ದಹನದ ಘಟನೆಯಿಂದ ಇತ್ತೀಚಿನ ಕೋಲಾರ ಜಿಲ್ಲೆಯ ಉಳ್ಳೇರಹಳ್ಳಿಯ ಬಾಲಕನೊಬ್ಬ ದೇವರ ಗುಜ್ಜು ಕೋಲು ಮುಟ್ಟಿದನೆಂಬ ಕಾರಣಕ್ಕೆ ಅರವತ್ತು ಸಾವಿರ ದಂಡವನ್ನು ವಿಧಿಸಿದ ಪ್ರಕರಣದವರೆಗೆ ಸಾಕಷ್ಟು ಘಟನೆಗಳು ದಲಿತರ ಸ್ವಾತಂತ್ರ್ಯ, ಸಮಾನತೆಯ ಹಕ್ಕನ್ನು ಕಸಿದುಕೊಂಡಿರುವುದಕ್ಕೆ ಸಾಕ್ಷಿಯಾಗಿವೆ. ಇಂತಹ ಘಟನೆಗಳು ನಡೆದಾಗ ಬಾಯಿ ಬಡಿದುಕೊಳ್ಳುವ ದೃಶ್ಯ ಮಾಧ್ಯಮಗಳು ಮತ್ತು ಜಾತಿ, ಧರ್ಮ, ಪೋಷಿತ ಪತ್ರಿಕೆಗಳು ತಮ್ಮ ಜಾಣ ನಡೆಯನ್ನು ತೋರಿಸುವ ಮೂಲಕ ಅದೊಂದು ಸುದ್ದಿಯೇ ಅಲ್ಲ ಎನ್ನುವಂತೆ ವರ್ತಿಸುತ್ತವೆ. ಆದರೆ ರಾಜಕಾರಣಿಗಳು ದಲಿತರ ಬೀದಿಗಳನ್ನು ಅಥವಾ ಮನೆಯನ್ನು ಪ್ರವೇಶ ಮಾಡಿದರೆ ಅದನ್ನು ಬಹುದೊಡ್ಡ ಕ್ರಾಂತಿಯೆಂಬಂತೆ ಬಿಂಬಿಸುತ್ತವೆ. ಈ ಮನೋಧೋರಣೆಗಳು ದಲಿತರ ಬದುಕನ್ನು ಪರಿವರ್ತನೆಯ ಹಾದಿಗೆ ಮರಳಿಸುವ ಬದಲು ಇಕ್ಕಟ್ಟಿಗೆ ಸಿಲುಕಿಸುತ್ತವೆ. ದಲಿತರ ಬೀದಿಯ ಪ್ರವೇಶದಿಂದ ಅಥವಾ ಅವರ ಮನೆಯಲ್ಲಿ ಊಟ ಮಾಡುವುದರಿಂದ, ವಾಸ್ತವ್ಯ ಹೂಡುವುದರಿಂದ ಜಾತಿಯ ತಾರತಮ್ಯಗಳನ್ನು ಹೋಗಲಾಡಿಸಿಬಿಡುತ್ತೇನೆ ಎಂಬ ನಂಬಿಕೆ ಯಾರಿಗೂ ಬೇಡ. ಹಲವು ದಶಕಗಳಿಂದ ದಲಿತರು ಇಂತಹ ನಾಟಕಗಳನ್ನು ನೋಡಿಕೊಂಡು ಬಂದಿದ್ದಾರೆ. ರಾಜಕಾರಣಿಗಳು, ಸ್ವಾಮೀಜಿಗಳು ಇಂತಹ ನಾಟಕ ಮಾಡುವುದರಲ್ಲಿ ಸಿದ್ಧಹಸ್ತರು. ಈಗ ಸರಕಾರ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಕ್ಕೆ ಮೀಸಲಾತಿ ಹೆಚ್ಚಿಸಿ ಅದನ್ನು ನಿಮಗೋಸ್ಕರವೇ ಮಾಡಿದ್ದು ಎನ್ನುತ್ತಿದೆ. ಆದರೆ ಅದು ಕಾನೂನಿನ ರೀತಿ, ಸಂವಿಧಾನದ ಒಂಭತ್ತನೇ ಪರಿಚ್ಛೇದದಲ್ಲಿ ತಿದ್ದುಪಡಿಯಾಗಿ ಜಾರಿಯಾಗುತ್ತದೆಯೇ ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿರುವುದು ಸುಳ್ಳಲ್ಲ. ಕೇವಲ ಕೊಟ್ಟಂತೆ ಮಾಡಿ ವೋಟು ಬ್ಯಾಂಕು ಮಾಡಿಕೊಳ್ಳುವ ಹುನ್ನಾರದಂತೆ ಇದು ಕಾಣುತ್ತಿದೆ. ಇದರ ತಿಳುವಳಿಕೆ ಇಲ್ಲದ ದಲಿತ ಶಾಸಕರು, ಮಂತ್ರಿಗಳು ಮತ್ತವರ ದಲಿತ ಹಿಂಬಾಲಕ ವರ್ಗ ಬಹುಪರಾಕು ಹೇಳುವುದರಲ್ಲಿ ನಿರತವಾಗಿವೆ. ಸಮುದಾಯದ ಧ್ವನಿಯಾಗಬೇಕಾದ ಇಂತಹ ದಲಿತ ನಾಯಕರು ರಾಜಕೀಯ ಪಕ್ಷಗಳ ಧ್ವನಿಯಾಗುತ್ತಿರುವುದು ನಾಚಿಕೆಗೇಡಿನ ಸಂಗತಿ.
ಸರ್ವಜ್ಞ ಒಂದು ಕಡೆ ‘‘ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ, ಜಾತಿ ವಿಜಾತಿ ಎನಬೇಡ, ದೇವನೊಲಿದಾತನೇ ಜಾತ ಸರ್ವಜ್ಞ’’ ಎಂದು ಹೇಳುತ್ತಾನೆ. ಹರಿಹರ ‘‘ದೇವನೊಲಿದ ಕುಲವೇ ಸತ್ಕುಲಂ’’ ಎನ್ನುತ್ತಾನೆ. ಆದರೆ ದಲಿತರನ್ನು ಇನ್ನೂ ದೇವಾಲಯದ ಒಳಗೆ ಬಿಟ್ಟುಕೊಳ್ಳದ ಪರಿಸ್ಥಿತಿಯಲ್ಲಿ ನಾವಿದ್ದೇವೆಂಬುದೇ ಆಕ್ರೋಶ ಹುಟ್ಟಿಸುವ ಸಂಗತಿ.
ಜಾತಿಯನ್ನು ಮಾಡಿದ ನೀಚನಿಗೆ ಜಾತಿಯ ಕಾರಣಕ್ಕೆ ನಿಕೃಷ್ಟತೆಗೆ ಒಳಗಾದವರ ಕಷ್ಟ ಹೇಗೆ ಅರಿವಾಗಲು ಸಾಧ್ಯ. ಹನ್ನೆರಡನೇ ಶತಮಾನದ ಬಸವಣ್ಣ ಜಾತಿ ವಿನಾಶ ಮಾಡಲು ಹೊರಟ ಮಹಾಬಂಡಾಯಗಾರ, ಮಾನವತವಾದಿ. ಸ್ವತಃ ಸಮಗಾರ ಹರಳಯ್ಯನ ಸಂಗಡ ಅತ್ಯಂತ ಪವಿತ್ರವಾದ ಸಂಬಂಧವನ್ನು ಹೊಂದಿದ್ದರು. ಇದರ ನೆನಪಿಗಾಗಿ ಸಮಗಾರ ಹರಳಯ್ಯನ ಮಗ ಶೀಲವಂತನಿಗೂ, ಬ್ರಾಹ್ಮಣಮಂತ್ರಿ ಮಧುವರಸನ ಮಗಳಾದ ಲಾವಣ್ಯವತಿಗೂ ಅಂತರ್ಜಾತಿ ವಿವಾಹವನ್ನು ಮಾಡಿ, ಜಾತಿ ವಿನಾಶದ ಕ್ರಾಂತಿಗೆ ಅಡಿಪಾಯ ಹಾಕಿದ್ದರು ಬಸವಣ್ಣ. ಮಾದಿಗರು ಮತ್ತು ಬ್ರಾಹ್ಮಣರ ನಡುವೆ ಅಂತರ್ಜಾತಿ ವಿವಾಹ ಮಾಡಿಸಿದ್ದಕ್ಕೆ ಬಸವಣ್ಣನ ನಡೆಯನ್ನು, ಕ್ರಾಂತಿಯ ಕಿಡಿಯನ್ನು ಸಹಿಸದ ಪುರೋಹಿತಶಾಹಿಗಳು ಧರ್ಮ ಉಳಿಸಿಕೊಳ್ಳಬೇಕಾದರೆ ಈ ನೀತಿಬಾಹಿರರನ್ನು ಕೊಲ್ಲಬೇಕೆಂದು ಪಣತೊಟ್ಟು ನಿಂತು ಸಾವಿರಾರು ಶಿವಶರಣರನ್ನು ಹತ್ಯೆ ಮಾಡಿದರು. ಕೆಲವರನ್ನು ಘೋರ ಶಿಕ್ಷೆಗೆ ಗುರಿ ಮಾಡಿದರು. ಶರಣರ ವಚನಗಳನ್ನು ಸುಟ್ಟರು, ಕಲ್ಯಾಣದ ಬೀದಿಗಳಲ್ಲಿ ರಕ್ತದೋಕುಳಿಯನ್ನು ನಡೆಸಿದರು. ಈ ಘಟನೆ ನಡೆದದ್ದು ಮಹಾನವಮಿಯ ದಿನವಾದುದರಿಂದ ಮರಣವೇ ಮಹಾನವಮಿ ಎಂದು ಶಿವಶರಣರು ದೇಹತ್ಯಾಗ ಮಾಡಿದರು. ಜಾತಿ ವಿನಾಶದ ಬಗ್ಗೆ ಡಾ.ಬಿ.ಆರ್. ಅಂಬೇಡ್ಕರ್ ಅವರು ತಾಳಿದ ನಿಲುವು ಮತ್ತು ಇಟ್ಟ ಹೆಜ್ಜೆ ಎರಡು ಕೂಡ ಬುದ್ಧ ಮತ್ತು ಬಸವಣ್ಣನ ನಡೆಯನ್ನೇ ಪ್ರತಿಪಾದಿಸುವಂತಿತ್ತು. ಜಾತಿವಿನಾಶದ ಕ್ರಾಂತಿಯನ್ನು ಸಹಿಸದೆ ಶರಣರನ್ನು ಮತ್ತು ಬಸವಣ್ಣನನ್ನು ಹತ್ಯೆ ಮಾಡಿದ ಪಟ್ಟಭದ್ರರು ಇವತ್ತಿಗೂ ಅಂಬೇಡ್ಕರ್ ಚಿಂತನೆಯನ್ನು ವಿರೋಧಿಸುವುದು ಹೊಸದೇನಲ್ಲ. ಶೂದ್ರರ ನಡುವೆ ಶೂದ್ರರನ್ನೇ ಎತ್ತಿಕಟ್ಟುವ ಆ ಮೂಲಕ ತಮ್ಮ ಜಾತಿ ಧ್ವೇಷವನ್ನು ಸಾಕಿ ಸಲಹುವ ಬ್ರಾಹ್ಮಣಶಾಹಿ ಮನೋಧೋರಣೆ ಸಾಮುದಾಯಿಕವಾಗಿ ಬದಲಾಗುತ್ತಿರಬಹುದು, ಆದರೆ ರಾಜಕೀಯವಾಗಿ ಪ್ರಬಲವಾಗುತ್ತಿದೆ. ಇದು ಹೆಚ್ಚು ಅಪಾಯವನ್ನೇ ತರಬಲ್ಲದು.
ಅಂತರ್ಜಾತಿಯ ಮದುವೆಗಳಿಗೆ ಎಚ್ಚರಿಕೆ ಎಂಬಂತೆ ಶೀಲವಂತ ಮತ್ತು ಲಾವಣ್ಯವತಿ ಎಂಬ ನವಜೋಡಿಯನ್ನೇ ಹತ್ಯೆ ಮಾಡಿ ಜಾತಿಯ ವಿಷಯದಲ್ಲಿ ನಾವೆಷ್ಟು ಕ್ರೂರರಾಗುತ್ತೇವೆ ಎಂಬ ಸಂದೇಶ ರವಾನೆ ಮಾಡಿದ್ದು ಇವತ್ತಿಗೂ ನಿಂತಿಲ್ಲ. ಆ ಕ್ರೂರತೆ, ಹತ್ಯಾ ಮನೋಭಾವಗಳು ಬದಲಾಗಿಲ್ಲ. ಇವತ್ತಿಗೂ ದಲಿತ ಯುವಕನೊಬ್ಬ ಮೇಲ್ವರ್ಗದ ಹುಡುಗಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡರೆ ಮರ್ಯಾದೆ ಹತ್ಯೆ ನಡೆದು ಬಿಡುತ್ತದೆ. ಇದಕ್ಕೆ ಯಾವ ರಾಜಕೀಯ ನಾಯಕರೂ ಧ್ವನಿ ಎತ್ತುವುದಿಲ್ಲ. ಮೇಲ್ವರ್ಗದ ಯುವಕ ದಲಿತ ಯುವತಿಯನ್ನು ಪ್ರೀತಿಸುವ ನಾಟಕವಾಡಿ ಅತ್ಯಾಚಾರ ನಡೆಸಿದರೆ ಅದನ್ನು ಪ್ರಶ್ನಿಸುವ ಧೈರ್ಯವನ್ನು ಯಾರೂ ತೋರುವುದಿಲ್ಲ. ಪ್ರತೀ ವರ್ಷ ಸಾವಿರಾರು ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತದೆ. ಇದನ್ನು ತಡೆಯುವುದಕ್ಕೆ ನಮ್ಮ ಕಾನೂನಿಗೆ ಶಕ್ತಿ ಇದ್ದರೂ ರಾಜಕೀಯದ ಮೇಲಾಟದಿಂದ ಅಪರಾಧಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ದಲಿತರ ಶಿಕ್ಷಣಕ್ಕೆ ಮೀಸಲಿಡುವ ಹಣವನ್ನು ಮತ್ತ್ಯಾವುದೋ ಮೇಲ್ವರ್ಗದ ಮಠಕ್ಕೋ, ದೇವಸ್ಥಾನಕ್ಕೋ ಕೊಡುವುದು, ನಿಜವಾದ ಬಡದಲಿತರ ಉದ್ಯೋಗವನ್ನು ಕಿತ್ತುಕೊಂಡು ಉಳ್ಳವನಿಗೆ ಸುಳ್ಳು ಜಾತಿ ಪ್ರಮಾಣಪತ್ರವನ್ನು ಸೃಷ್ಟಿಸಿ ಹುದ್ದೆಯನ್ನು ನೀಡುವುದು ನಿರಂತರವಾಗಿ ನಡೆಯುತ್ತಿದೆ. ಇದನ್ನು ಪ್ರಶ್ನಿಸುವ ಅಧಿಕಾರ ನಮ್ಮ ದಲಿತ ನಾಯಕರಿಗೆ ಇಲ್ಲ. ಮೀಸಲಾತಿ ಎಂಬುದು ದಲಿತರಿಗೆ ವರವೆನ್ನುವುದಕ್ಕಿಂತ ಶಾಪವಾಗುತ್ತಾ ಹೋಗುತ್ತಿದೆ. ಕಾರಣ ಉಳ್ಳದಲಿತರು, ಇಲ್ಲದ ದಲಿತರು ಎಂಬ ಎರಡು ವರ್ಗ ಈಗ ಸೃಷ್ಟಿಯಾಗಿದೆ. ಇದರಲ್ಲಿ ಉಳ್ಳ ದಲಿತರ ಸಂಖ್ಯೆ ಇಲ್ಲದವರಿಗಿಂತ ಅತೀ ಕಡಿಮೆ ಇದೆ. ಆದರೆ ಇಲ್ಲದವರಿಗೆ ಸಿಗಬೇಕಾದ ಸೌಲಭ್ಯ ಉಳ್ಳ ದಲಿತರ ಪಾಲಾಗುತ್ತಿದೆ. ಇದರ ನಡುವೆ ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿ ಉದ್ಯೋಗ, ಶಿಕ್ಷಣ ಪಡೆಯುವ ಮೇಲ್ವರ್ಗದವರ ಪ್ರಮಾಣವೂ ಕಡಿಮೆ ಇಲ್ಲ. ಜಾತಿಯ ಹೆಸರಲ್ಲಿ ಬಹಿಷ್ಕಾರಕ್ಕೆ ಮುಂದಾಗುವ ಮೇಲ್ವರ್ಗದವರಿಗೆ ಸರಕಾರ ನೀಡಿದ ಸೌಲಭ್ಯವನ್ನು ಪಡೆಯುವಾಗ ಯಾಕೆ ನಾಚಿಕೆಯಾಗುವುದಿಲ್ಲ ಎಂಬುದೇ ಪ್ರಶ್ನೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಮೀಸಲಾತಿಯ ಘೋಷಣೆ, ದಲಿತರ ಮನೆಯಲ್ಲಿ ಊಟ ಮಾಡುವ ನಾಟಕ ಅರ್ಥವಾಗದಿರುವಷ್ಟು ದಲಿತರು ದಡ್ಡರಲ್ಲ. ಆದರೆ ಅವರನ್ನು ಮನುಷ್ಯರನ್ನಾಗಿ ಕಾಣುವ ಮನೋಧರ್ಮ ಮೇಲ್ವರ್ಗಗಳಿಗೆ ಯಾಕೆ ಬರುತ್ತಿಲ್ಲ.