ಸರಕಾರವೇ ನಿರ್ವಹಿಸಲಿ
ಮಾನ್ಯರೇ,
ಸರಕಾರ ಓಲಾ-ಉಬರ್ ಆಟೊ ಸಂಚಾರ ನಿಲ್ಲಿಸಿದ ಪರಿಣಾಮವಾಗಿ ಹಲವಾರು ದುಡಿಯುವ ಯುವಕರ ಕೈಗಳಿಂದ ಕೆಲಸ ಕಿತ್ತುಕೊಂಡಂತಾಗಿದ್ದು, ಇದು ನಿರುದ್ಯೋಗ ಸಮಸ್ಯೆಗೆ ಕಾರಣವಾಗುತ್ತದೆ. ಉದ್ಯೋಗ ನೀಡುತ್ತೇವೆ ಎಂದು ಭರವಸೆ ನೀಡಿರುವ ಪ್ರಣಾಳಿಕೆಯ ಸರದಾರರು ದಯವಿಟ್ಟು ಓಲಾ -ಉಬರ್ ಇನ್ನಿತರ ಕಂಪೆನಿಗಳು ನೀಡುವ ಸೇವೆಯನ್ನೇ ಸರಕಾರದ ಒಂದು ಇಲಾಖೆಯೇ ನಿರ್ವಹಿಸಿ, ಈ ಮೂಲಕ ಸಾವಿರಾರು ಯುವಕರಿಗೆ ಉದ್ಯೋಗ ನೀಡುವುದು ಉತ್ತಮ ನಿರ್ಧಾರವೆನಿಸುತ್ತದೆ. ಇಂತಹ ವಾಹನ ಚಾಲಕರಿಗೆ ಕನಿಷ್ಠ ಮಾಸಿಕ ವೇತನ ನಿಗದಿಪಡಿಸಿದರೆ ಸಾವಿರಾರು ಕುಟುಂಬಗಳು ನೆಮ್ಮದಿಯ ಜೀವನ ನಡೆಸಬಹುದು. ಅಲ್ಲದೆ ಇದರಿಂದಾಗಿ ಸಂಚಾರ ವ್ಯವಸ್ಥೆಯೂ ಸುಗಮವಾಗುವುದಲ್ಲದೆ ಇತರ ಯಾವುದೇ ಖಾಸಗಿ ಕಂಪೆನಿಗಳನ್ನು ಜನತೆ ಅವಲಂಬಿಸಬೇಕಾಗುವುದಿಲ್ಲ. ಆದ್ದರಿಂದ ಮಾನ್ಯ ಅಧಿಕಾರಿ ವರ್ಗ, ಸಚಿವರು ಮತ್ತು ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಯೋಚಿಸಿ ಒಂದು ಆಯೋಗ ರಚಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ಇದು ಬಡವರಾದ ಓಲಾ-ಉಬರ್ ಚಾಲಕರಿಗೆ, ದುಡಿಯುವ ಛಲವಿರುವ ಯುವಕರಿಗೆ, ಹೆಚ್ಚಾಗಿ ಸಾರ್ವಜನಿಕರಿಗೆ ಒಳ್ಳೆಯ ಸೇವೆ ಕೊಟ್ಟಂತಾಗುತ್ತದೆ.