ಖರ್ಗೆ - ಅಪರೂಪದ ಶ್ರೀಸಾಮಾನ್ಯ
Photo- PTI
ಕರ್ನಾಟಕದಲ್ಲಿ ಸುಮಾರು 350 ಭಾರತೀಯ ಪೊಲೀಸು ಸೇವೆ ಅಧಿಕಾರಿಗಳು ಹಾಗೂ ಸುಮಾರು 300 ಭಾರತೀಯ ಆಡಳಿತ ಸೇವೆ ಅಧಿಕಾರಿ ಗಳು ಇದ್ದರೆ. ಅವರಲ್ಲಿ ಅನೇಕರು ರಾಜ್ಯದ ಎಲ್ಲಾ ಕಂದಾಯ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಇನ್ನು ಕೆಲವರು ಬರೀ ರಾಜಧಾನಿ ಸೇವೆಗೆ ಸೀಮಿತ ಆಗಿದ್ದಾರೆ. ಬೆಂಗಳೂರು ಮೆಟ್ರೊ ಲೈನ್ ಎಲ್ಲಿಗೆ ಮುಗಿಯುತ್ತದೋ ಅಲ್ಲಿಗೆ ಅವರ ಕಲ್ಪನೆಯ ಕರ್ನಾಟಕ ಮುಕ್ತಾಯವಾಗುತ್ತದೆ.
ಆದರೆ ಅವರು ಆಗಾಗ ತುಮಕೂರು, ಕೋಲಾರಗಳಂತಹ ದೂರದ ಊರುಗಳಿಗೆ ಇನ್ಸ್ಪೆಕ್ಷನ್ ಹಾಕಿಕೊಂಡು, ಬೆಳಿಗ್ಗೆ ಹೋಗಿ ಸಂಜೆ ಹಿಂತಿರುಗಿ ಬರುತ್ತಾರೆ. ತಡೆಯಲಾರದ ಒತ್ತಡ ಬಂದು, ಜೀವನ ಮರಣದ ಪ್ರಶ್ನೆ ಉಂಟಾದರೆ ಮಾತ್ರ ಅವರು ಹುಬ್ಬಳ್ಳಿ, ಕಲಬುರ್ಗಿ, ನಿಪ್ಪಾಣಿ, ಹೊಸಪೇಟೆ ಯಂತಹ `ದೇವರೂ ಕೂಡ ಆಸೆ ಕೈ ಬಿಟ್ಟ' (ಗಾಡ್ ಫಾರ್ಸೇಕನ) ಜಾಗಗಳಿಗೆ ಹೋದಾರು.
ರಾಜ್ಯದ ಹಿರಿಯ ಅಧಿಕಾರಿ ಯೊಬ್ಬರ ಜೀವನದಲ್ಲಿ ಈ ರೀತಿಯ ಪ್ರಸಂಗ ಒಂದು ಉಂಟಾಗಿತ್ತು. ಕರ್ನಾಟಕದ ಘನ ಸರ್ಕಾರ ಹಿಂದೊಮ್ಮೆ ಕಲಬುರ್ಗಿ ಯಲ್ಲಿ ಸಚಿವ ಸಂಪುಟ ಸಭೆ ಕರೆಯುವ ಯೋಜನೆ ಹಾಕಿಕೊಂಡಿತು. ಅಲ್ಲಿನ ಕೆಲ ಸ್ಥಳೀಯ ನಾಯಕರ ದೆಸೆಯಿಂದ ಇದು ಕೆಲವು ವರ್ಷ ನಡೆದೂ ನಡೆಯಿತು.
ಇಂತಹ ಒಂದು ಮೀಟಿಂಗ್ ಗೆ ಅಂತ ಸದರಿ ಅಧಿಕಾರಿ ಬಂದಿದ್ದರು. ಅತ್ಯಂತ ತೂಕದ ವ್ಯಕ್ತಿ ಆಗಿದ್ದ ಇವರು : ``ಇಲ್ಲೆಲ್ಲಾ ಹೆಂಗಪ್ಪ ಜನ?’’ ಅಂತ ತಮ್ಮ ಕಿರಿಯ ಅಧಿಕಾರಿ ಯೊಬ್ಬರನ್ನು ಕೇಳಿದರು. ಅದರ ಗೂಡಾರ್ಥ ಏನು ಎಂದರೆ ಇಲ್ಲಿನ ರಾಜಕಾರಣಿ ಗಳು ಹೆಂಗೆ? ಅಂತ.
ಆ ಪ್ರಶ್ನೆ ಗೆ ಉತ್ತರ ನೀಡುವ ಸೌಭಾಗ್ಯ ತಮ್ಮದಾಗಿದ್ದಕ್ಕೆ ಪುಳಕಿತರಾದ ಆ ಕೆಳಗಿನ ಅಧಿಕಾರಿ ``ಇವರೆಲ್ಲ ಸುಮಾರು ಸಾರ್ ಅಂದ್ರು’’. ``ಮತ್ತೆ ಆ ಧರಂ ಸಿಂಗ್ - ಖರ್ಗೆ ಅವರೆಲ್ಲ ತುಂಬಾನೇ ಕೆಲಸ ಮಾಡಿದಾರಂತೆ ಅಂತ ಅಂತರಲ್ಲಪ್ಪಾ,’’ ಅಂತ ಹಿರಿಯರು ಅಂದ್ರು. ``ಅಯ್ಯೋ ಅದೆಲ್ಲಾ ಸುಮ್ನೆ ಸಾ... ಧರಂ ಸಿಂಗ್ ಅವರು ಮಾಡಿ ಕೊಡೋದು ಎನ್ ಇದ್ರೂ ಜನರ ಪರ್ಸನಲ್ ಕೆಲ್ಸ ಗಳು. ಖರ್ಗೆ ಅಲ್ಪ- ಸ್ವಲ್ಪ ಮಾಡಿದ್ದಾರೆ. ಆದರೆ ಇಲ್ಲಿನ ಜನ ಹೇಳೋದು ಏನು ಅಂದರೆ, ಅವರು ಏನು ಮಾಡಿದರೆ ಅಂತ ಹೇಳೋಕೆ ಒಂದು ಗಂಟೆ ಬೇಕು. ಆದರೆ ಏನು ಮಾಡಬೇಕಾಗಿತ್ತು, ಆದರೆ ಮಾಡಿಲ್ಲ ಅಂತ ಹೇಳೋಕೆ ಒಂದು ದಿನ ಬೇಕು ಅಂತ. ಅಲ್ವಾಸಾ,... ’’ ಅಂತ ಹೇಳಿ ಆ ಕಡೆ ಈ ಕಡೆ ನೋಡಿದರು. ಗಣಿತದ ಪೀರಿಯಡ್ ನಲ್ಲಿ ಜಾಣತನದ ಉತ್ತರ ಕೊಟ್ಟ ಚೂಟಿ ಹುಡುಗನೊಬ್ಬ ಮಾಸ್ತರ ಅವರ ಮೆಚ್ಚುಗೆಯ ಮಾತನ್ನು ನಿರೀಕ್ಷಿಸುವಂತೆ ಅವರತ್ತ ನೋಡುವಂತೆ. ``ಅಯ್ಯೋ ಗೊತ್ತಿಲ್ಲಪ್ಪ, ನಾನಂತೂ ಆ ವಯ್ಯನ ಹತ್ರ ಇನ್ನಾ ವರಗೂ ಕೆಲಸ ಮಾಡಿಲ್ಲ, ಮುಂದೇನೂ ಮಾಡಲ್ಲ. ಇದು ಮಾತ್ರಾ ಗ್ಯಾರಂಟಿ,’’ ಅಂದ ನಿವೃತ್ತಿಯ ಅಂಚಿಗೆ ಬಂದಿದ್ದ ಹಿರಿಯ ಅಧಿಕಾರಿ ನಕ್ಕರು, ವಿಷಯ ಬದಲಾಯಿಸಿದರು.
ಖರ್ಗೆ ಅವರ ಬಗ್ಗೆ ಸದಾಕಾಲ ಕೇಳಿ ಬರುವ ಟೀಕೆಗಳಲ್ಲಿ ಇದು ಅತ್ಯಂತ ಮೃದುವಾದದ್ದು ಅಂತ ಅನ್ನಿಸುತ್ತದೆ.
ನಾನು ಕೆಲಸ ಮಾಡುತ್ತಿದ್ದ ಸುದ್ದಿ ಮನೆಯೊಂದರ ಹಿರಿಯ ಸಂಪಾದಕ ರೊಬ್ಬರು ಖರ್ಗೆ ಅವರನ್ನು ಯಾವಾಗಲೂ `ಮಲ್ಲಿಕಾರ್ಜುನ ಕರ್ರ.... ಗೆ' ಅಂತ ತಮಾಷೆ ಮಾಡುತ್ತಿದ್ದರು. ಪ್ರತಿ ಬಾರಿ ಯಾರಾದರೂ ವರದಿಗಾರರರು ಖರ್ಗೆ ಬಗ್ಗೆ ಸುದ್ದಿ ತಂದಾಗಲೂ `ಏನಪ್ಪಾ ಕರ್ರ.... ಗೆ ಸುದ್ದಿ ತಂದೆಯಾ' ಅಂತ ಮುಸಿಮುಸಿ ನಗುತ್ತಿದ್ದರು. ಅವರ ಮೀಸೆಯ ಅಡಿಯಲ್ಲಿ ನೀವೂ ನಗಬೇಕು ಎನ್ನುವ ಸೂಚನೆ ಇರುತ್ತಿತ್ತು. ತಲೆ ತಲಾಂತರ ದಿಂದ ಪತ್ರಿಕೋದ್ಯಮದ ಅನ್ನ ಉಂಡಿದ್ದ ಆ ಖಾನದಾನಿ ಪತ್ರಕರ್ತರು ಖರ್ಗೆ ಅವರ ಕಾರ್ಯ ವೈಖರಿಯ ಬಗ್ಗೆ, ಕೆಲಸದ ಬಗ್ಗೆ, ಸ್ವಭಾವದ ಬಗ್ಗೆ ಮಾತನಾಡಿದ್ದು ನಾನು ಕಾಣಲಿಲ್ಲ. ಅವರ ಹುಸಿ ನಗೆ ಖರ್ಗೆ ಅವರ ಮೈ ಬಣ್ಣದ ಬಗ್ಗೆ ಮಾತ್ರ ಇರುತ್ತಿತ್ತು. ಹಾಗೆಂದು ನಕ್ಕವರೇನೂ ಭಾಳ ಬೆಳ್ಳಗೆ ಇರಲಿಲ್ಲ.
ಕೋಲಾರದ ಕಡೆ ಬಡ ಜನರ ಜಮೀನನ್ನು ಕಿತ್ತು ತಿಂದ ಯುವ ಕಾಂಗ್ರೆಸ್ ನಾಯಕ ರೊಬ್ಬರು ಒಮ್ಮೆ ತಮ್ಮ ಪಕ್ಷ ದ ಬಗ್ಗೆ ಮಾತಾಡಿದ್ದರು. ``ನಮ್ಮ ಪಕ್ಷಕ್ಕೆ ಅರ್ಜೆಂಟ್ ಚಿಕಿತ್ಸೆ ಅಗತ್ಯ ಇದೆ. ನಮ್ಮಲ್ಲಿ ಒಂದು ನೂರು - ಎರಡು ನೂರು ಕೆಜಿ ತೂಕದ ನಾಯಕರು ಇದ್ದಾರೆ. ಅವರಿಗೆ ಅವರ ಪಂಚೆ ಸಹಿತಾ ಬೇರೆಯವರು ಕಟ್ಟಿ ಕೊಡಬೇಕು. ಅಂತವರು ಎಲ್ಲಾ ಇರೋ ತನಕ ಇಲ್ಲಿ ಏನೂ ಬದಲಾಗಲ್ಲ'’, ಅಂತ. ಇದು ಯಾರನ್ನು ಕುರಿತು ಹೇಳಿದ್ದು ಅಂತ ಎಲ್ಲರಿಗೂ ಗೊತ್ತಾಗಿ ಬಿಟ್ಟಿತು . ಎಂಥಾ ಓಪನ್ ಸೀಕ್ರೆಟ್ ಅನ್ನು ಈ ಕ್ರಾಂತಿ ಕಾರಿ ಯುವಕ ಹೇಳಿದ್ದಾನೆ ಅಂತ ಎಲ್ಲರೂ ಅವನನ್ನು ಕೊಂಡಾಡಿದರು. ಆ ನಾಯಕರನ್ನು ಹೀಯಾಳಿಸಿ ನಕ್ಕರು. ಹೀಗೆ ಆಡಿಕೊಂಡು ನಕ್ಕವರಲ್ಲಿ ಬಹುತೇಕರು ಕಾಂಗ್ರೆಸ್ ನಲ್ಲಿ ಇದ್ದವರು. ಈಗ ಆ ಕ್ರಾಂತಿಕಾರಿ ಯುವ ನಾಯಕರು ಆಳುವ ಬಿಜೆಪಿಯಲ್ಲಿ ಇದ್ದಾರೆ.
ಕಾಂಗ್ ಹೈ ಕಮಾಂಡ್ ಖರ್ಗೆ ಅವರನ್ನು ಕೈ ಬಿಟ್ಟು ಎಸ್ ಎಂ ಕೃಷ್ಣ ಅವರನ್ನು ಆಯ್ಕೆ ಮಾಡಿದಾಗ ಹಿರಿಯ ಪತ್ರಕರ್ತ ರೊಬ್ಬರು ಪ್ರಮುಖ ಪತ್ರಿಕೆಯಲ್ಲಿ ಖರ್ಗೆ ಅವರ ಸಂದರ್ಶನ ಮಾಡಿದರು. ಅದರಲ್ಲಿ ಖರ್ಗೆ ``ನನಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತ ಏನೂ ಬೇಸರ ಇಲ್ಲ. `ವ್ಯಕ್ತ ಸೇ ಪೆಹಲೆ , ತಕದೀರ್ ಸೇ ಜ್ಯಾದಾ ಕುಛ ನಹಿ ಮಿಲತಾ' (ಸೂಕ್ತ ಸಮಯಕ್ಕೆ ಮುನ್ನ, ಹಣೆಬರಹಕ್ಕೂ ಹೆಚ್ಚು ಏನೂ ಸಿಗಲಾರದು )’’ ಅಂತ ಪ್ರತಿಕ್ರಯಿಸಿದರು.
ಇದು ರಾಜ್ಯ ಪತ್ರಿಕೋದ್ಯಮ ದಲ್ಲಿಯೇ ಬಹು ಚರ್ಚಿತ ಸಂದರ್ಶನಗಳಲ್ಲಿ ಒಂದಾಗಿ ಪರಿಣಮಿಸಿತು. ಪ್ರೆಸ್ ಕ್ಲಬ್ ನಲ್ಲಿ ಮರು ದಿನ ಭಾರಿ ಚರ್ಚೆ ಆಯಿತು. ಅಲ್ಲಿನ ಒಳಕೋಣೆ ಯಲ್ಲಿ ಕುಳಿತ ಒಬ್ಬರು ``ಪರ್ವಾಗಿಲ್ಲಾರಿ ಈ ಮನಶ್ಯ, ನಾನು ಏನೋ ಅಂತ ತಿಳ್ಕೊಂಡಿದ್ದೇ. ಕೆಟಗರಿ ಜನಾ ಆದರೂ ಸುಮಾರು ಬುದ್ಧಿವಂತ ಇದ್ದಾನೆ'’, ಅಂತ ಒಬ್ಬರು ಸ್ವ- ವಿಮರ್ಶಾತ್ಮಕ ಉದ್ಘಾರ ತೆಗೆದರು.
ತಮ್ಮ ಕೈ ನಡೆಯುವಾಗ ಖರ್ಗೆ ಅವರು ಹೈದರಬಾದು ಕರ್ನಾಟಕ ಹಾಗೂ ಗುಲ್ಬರ್ಗದ ಬೆಳವಣಿಗೆ ತಮ್ಮ ಕೈಲಾದ ಕೊಡುಗೆ ನೀಡಿದ್ದಾರೆ. ಇದು ಅದೇ ಪ್ರದೇಶದಿಂದ ಬಂದ ಇತರ ನಾಯಕರಿಗಿಂತ ಹೆಚ್ಚು. ಇದರಲ್ಲಿ 371 - ಜೆ ಅಡಿಯಲ್ಲಿ ಆ ಏಳು ಜಿಲ್ಲೆ ಗಳ ರಹವಾಸಿ ಗಳಿಗೆ ದೊರೆತ ಪ್ರಾದೇಶಿಕ ಮೀಸಲು ಸೌಲಭ್ಯ, ಪಶು ವೈದ್ಯ ವಿವಿ, ಹೈ ಕೋರ್ಟು ಬೆಂಚು, ಈ ಎಸ್ ಐ ಆಸ್ಪತ್ರೆ ಹಾಗೂ ವೈದ್ಯ ಕಾಲೇಜು, ರಾಜ್ಯ ಸರಕಾರದ ವೈದ್ಯ ಕಾಲೇಜು, ಜಯದೇವ ಆಸ್ಪತ್ರೆ, ಕೇಂದ್ರ ಸರಕಾರದ ಕೆಲವು ಕಚೇರಿ ಗಳು, ರೈಲ್ವೆ ಸೌಲಭ್ಯ, ಇತ್ಯಾದಿ.
``ಉಳಿದಿದ್ದೆಲ್ಲಾ ಓಕೆ, ಆದರೆ ಈ ಎಸ್ ಐ ಆಸ್ಪತ್ರೆ ಹಾಗೂ ವೈದ್ಯ ಕಾಲೇಜು ಮಾಡಿದ್ದು ಮಾತ್ರ ತಪ್ಪು'’. ಅದು `ಕಂಪ್ಲೀಟ್ ರಾಂಗ್ ಮೊವ್, ಐ ಸೇ'’ ಅಂತ ಅಂತ ಒಬ್ಬರು ಸರ್ಕಾರಿ ವೈದ್ಯ ಕಾಲೇಜು ಪ್ರೊಫೆಸರ್ ನನ್ನ ಬಳಿ ಹೇಳಿದರು. ``ಯಾಕೆ ಹಾಂಗ್ ಅಂತೀರಿ ಸಾರ್'’ ಅಂತ ನಾನು ಕೇಳಿದಾಗ. ``ಅದು ಕೇವಲ ತಮ್ಮ ಅಠರಾ ಪರ್ಸೆಂಟ್ ಜನರಿಗೆ ನೌಕರಿ ಕೊಡಬೇಕು ಅಂತ ಮಾಡಿದ್ದು. ಇದು ಭಾಳ ತಪ್ಪು ಕೆಲಸ,’’ ಅಂತ ಅವರು ಅಂದ್ರು. ನೀವು ಈ ಮಾತು ಹೇಳಬಾರದು. ಯಾವ ಜಾತಿಯ ಎಷ್ಟು ಜನ ಅಲ್ಲಿ ಕೆಲಸಕ್ಕೆ ಇದ್ದರೆ ಅನ್ನುವ ಲೆಕ್ಕ - ಪಟ್ಟಿ ಇಟ್ಟುಕೊಂಡು ನೀವು ಮಾತಾಡುತ್ತಾ ಇದ್ದೀರಾ? ನಿಮಗೆ ಸರ್ಕಾರಿ ಕಾಲೇಜು ಅಲ್ಲದೆ ಖಾಸಗಿ ಕಾಲೇಜಿನಲ್ಲಿ ಕೆಲಸ ಇದ್ದರೆ ಎಷ್ಟು ಸಂಬಳ ಬರುತ್ತಿತ್ತು? ಅಂತ ಕೇಳಿದೆ. ಮನುಷ್ಯನ ಮೈ ಎಲ್ಲಾ ಜಾತಿ ದ್ವೇಷದ ರಕ್ತ ಹರಿಯುತ್ತಾ ಇದ್ದಾಗ ಮಾತ್ರ ಈ ರೀತಿ ಮಾತಾಡಲು ಸಾಧ್ಯ ಅಂತ ಅನ್ನಿಸಿತು.
ಇನ್ನು ಖರ್ಗೆ ಅವರ ಬಗ್ಗೆ ಬಹು ಚರ್ಚಿತ ಅಲ್ಲದ ಕೆಲ ವಿಷಯ ಗಳನ್ನು ನೋಡೋಣ.
ಕೆಲವು ವರ್ಷಗಳ ಹಿಂದಿನ ಮಾತು. ಹುಮ್ನಾಬಾದ್ ಹಾಗೂ ಬೀದರ್ ನಡುವೆ ಹೊಸದಾಗಿ ನಿರ್ಮಿಸಿದ ರೈಲ್ವೆ ಹಳಿಯ ಮೇಲೆ ಹೊಸ ಡೆಮು ಟ್ರೈನ್ ಉದ್ಘಾಟನೆ ಕಾರ್ಯಕ್ರಮ ನಡೆಯುತ್ತಿತ್ತು.
ಅಂದಿನ ರೇಲ್ವೆ ಕ್ಯಾಬಿನೆಟ್ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ವೇದಿಕೆಯ ಬಲ ಬದಿಗೆ ಕುಳಿತಿದ್ದರು. ಎಡ ಬದಿಗೆ ಕುಳಿತಿದ್ದ ಕಾಂಗ್ರೆಸ್ ನಾಯಕರೊಬ್ಬರು ತಮ್ಮ ಎದುರಿಗೆ ಇದ್ದ ಮೈಕ್ ನಲ್ಲಿ ಭಾಷಣ ಬಿಗಿಯುತ್ತಿದ್ದರು. ನಮ್ಮ ಜಿಲ್ಲೆಯವರೆ ಅದ ಖರ್ಗೆ ಅವರು ನಮಗೆ ಬಹಳ ಕೊಡುಗೆ ಕೊಟ್ಟಿದಾರು. ಅವರು ಬೀದರ್ ಬೆಂಗಳೂರು ನಡುವೆ ಅತಿ ವೇಗದ ಟ್ರೈನ್ ಶುರು ಮಾಡಿದ್ದಾರ. ಅವರು ಬೀದರ್ - ಹೈದರಾಬಾದ್ ನಡುವೆ ಇಂಟರ್ ಸಿಟಿ ಎಕ್ಸ್ಪ್ರೆಸ್ ಟ್ರೈನ್ ಬಿಟ್ಟಾರ, ನಿಜಾಮರು- ಬ್ರಿಟಿಷರ ಕಾಲದ ನಂತರ ನಮ್ಮ ಪ್ರದೇಶ ದೊಳಗ ಹೊಸ ಹಳಿ ಹಾಕಲಿಕ್ಕೆ ಯಾರಿಂದಲೂ ಆಗಿರಲಿಲ್ಲ. ಆ ಕೆಲಸ ಖರ್ಗೆ ಸಾಹೇಬರು ಮಾಡಿದ್ದಾರ,’’ ಇತ್ಯಾದಿ ಇತ್ಯಾದಿ.
ಖರ್ಗೆ ಅವರು ಭಾಷಣಕಾರರ ಕಡೆ ಕೈ ಸನ್ನೆ ಮಾಡಿ ಅವರನ್ನು ನಿಲ್ಲಿಸಿದರು. ವೇದಿಕೆಯ ಆ ಕಡೆಯಿಂದ ಈ ಕಡೆಗೆ ಎದ್ದು ಬಂದರು. ಭಾಷಣ ಮಾಡುತ್ತಿದ್ದ ಅವರ ಶಿಷ್ಯ ರಿಗೆ ಸಂತೋಷ ವಾಯಿತು. ಸಾಹೇಬರ ಒಳ್ಳೆ ಕೆಲಸ ಗಳ ಬಗ್ಗೆ ನಾನು ಹೇಳುವುದರಲ್ಲಿ ಏನೋ ಕಡಿಮೆ ಆಗಿರಬೇಕು. ಅದಕ್ಕೆ ಸೇರಿಸಲು ಬರುತ್ತಿದ್ದಾರೆ ಎಂದು ಹೇಳಿ ಅವರು ಪಕ್ಕಕ್ಕೆ ಸರಿದು ನಿಂತರು. ಮೈಕ್ ಕಡೆಗೆ ಬಂದ ಖರ್ಗೆ ``ಇವರು ಹೇಳುವುದರಲ್ಲಿ ಒಂದು ಮಾಹಿತಿ ಸರಿ ಇಲ್ಲ. ಹೈದರಬಾದು ಇಂಟರ್ ಸಿಟಿ ಎಕ್ಸ್ಪ್ರೆಸ್ ನಾನು ಶುರು ಮಾಡಿದ್ದು ಅಲ್ಲ. ನಮ್ಮದೇ ಸರಕಾರದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ದಿನೇಶ್ ತ್ರಿವೇದಿ ಅವರು ಆ ಟ್ರೈನ್ ಅನ್ನು ಶುರು ಮಾಡಿದರು. ಭಾರತೀಯ ವಾಯುಸೇನೆ ಯಲ್ಲಿ ಪೈಲಟ್ ಆಗಿದ್ದ ಅವರು ಬಿದರನಲ್ಲಿ ಕೆಲ ಕಾಲ ಕೆಲಸ ಮಾಡಿದ್ದರು. ಆ ಕರಳುಬಳ್ಳಿ ಸಂಬಂಧ ಆ ಕೆಲಸ ಮಾಡಿಸಿತು ಎಂದು ಹೇಳಿ’’, ಮತ್ತೆ ಹೋಗಿ ತಮ್ಮ ಕುರ್ಚಿಯ ಮೇಲೆ ಕೂತರು.
ತಮ್ಮ ಜೀವಿತ ಕಾಲದಲ್ಲಿ ನಡೆದ ಎಲ್ಲಾ ಒಳ್ಳೆ ಕೆಲಸ ಗಳನ್ನು ಮಾಡಿದವನು ನಾನು ಎಂದೂ, ಇಂದಿನ ಹಾಗೂ ಹಿಂದಿನ ಎಲ್ಲಾ ಕೆಟ್ಟ ಕೆಲಸ ಗಳನ್ನು ಮಾಡಿದವರು ವಿರೋಧ ಪಕ್ಷದವರು ಎಂದು ರೈಲು ಬಿಡುತ್ತಲೇ ಇರುವ ರಾಜಕಾರಣಿ ಗಳ ನಡುವೆ ಖರ್ಗೆ ಅಪರೂಪದ ನಾಯಕ. ನಮ್ಮ ನಡುವಿನ ಅಪರೂಪದ ಶ್ರೀಸಾಮಾನ್ಯ .
ಇಂತಹುದೇ ಇನ್ನೊಂದು ಪ್ರಸಂಗ ನೆನಪಿಗೆ ಬರುತ್ತದೆ. ಎಸ್ ಎಂ ಕೃಷ್ಣ ಅವರು ಮುಖ್ಯ ಮಂತ್ರಿ ಆಗಿದ್ದಾಗ ಮಹಾರಾಷ್ಟ್ರದ ಗಡಿ ಯ ಔರಾದ ತಾಲೂಕಿನ ಕೆಲ ಹಳ್ಳಿಗಳಲ್ಲಿ ಪ್ರವಾಹ ಬಂದಿತ್ತು. ಮನೆ - ಮಾರು ಕಳೆದುಕೊಂಡ ಅನೇಕ ಬಡವರು ಗಂಜಿ ಕೇಂದ್ರ ಗಳಲ್ಲಿ ನೆಲೆಸಿದ್ದರು. ಆಗ ಅಲ್ಲಿನ ಸ್ಥಳೀಯ ನಾಯಕರೊಬ್ಬರು ನಾವು ನಮ್ಮ ಪಕ್ಷದ ವತಿಯಿಂದ ನಿಮಗೆ ಉಚಿತವಾಗಿ ಜೋಳ ಹಂಚುತ್ತೇವೆ. ಅದಕ್ಕಾಗಿ ಒಂದು ಟ್ರಕ್ ಜೋಳ ತರಿಸಿದ್ದೇವೆ. ಅಂತ ಹೇಳಿದರು. ಅದೇ ಮಾತನ್ನು ಅಂದಿನ ಮುಖ್ಯ ಮಂತ್ರಿ ಪುನರ್ ಉಚ್ಚರಿಸಿದರು. ಅದನ್ನು ಮರಾಠಿ ಯಲ್ಲಿ ಭಾಷಾಂತರಿಸುವ ಜವಾಬುದಾರಿ ಖರ್ಗೆ ಅವರದು ಆಗಿತ್ತು. ``ಈ ಊರಿಗೆ ಒಂದು ಟ್ರಕ್ ಜೋಳ ತರುವುದಾಗಿ ನಿಮ್ಮ ನಾಯಕರು ಹೇಳುತ್ತಿದ್ದಾರೆ ಅಂತ ಖರ್ಗೆ ಹೇಳಿದರು. ಇಲ್ಲ ಸಾರ್. ಅದು ಆಗಲೇ ಊರ ಅಗಸಿ ಗೆ ಬಂದು ಬಿಟ್ಟೆತಿ. ಇನ್ನೇನು ಕೊಟ್ಟೆ ಬಿಡ್ತೇವಿ,’’ ಅಂತ ಆ ಊರಿನ ನಾಯಕರು ಸಮಝಾಯೀಸಿ ಕೊಡಲು ಹೋದರು. `ಮೀ ತರ ಬಗೀತಲಸ ನಾಹಿ' (ನಾನಂತೂ ನೋಡಿಲ್ಲ ) ಅಂತ ಖರ್ಗೆ ಅಂದ್ರು.
ಒರಿಸ್ಸಾ ಕೆಡರ್ ನ ಯುವ ಐ ಎ ಎಸ್ ಅಧಿಕಾರಿ ಯೊಬ್ಬರು ಕರ್ನಾಟಕದ ಐಪಿಎಸ್ ಅಧಿಕಾರಿಣಿ ಯೊಬ್ಬರನ್ನು ಮದುವೆಯಾಗಿ ಕರ್ನಾಟಕಕ್ಕೆ ಬಂದರು. ಅವರ ಮೊದಲ ಕೆಲಸ ಸಾರಿಗೆ ಸಂಸ್ಥೆಯಲ್ಲಿ. ಕಂಠ ಪೂರ್ತಿ ಕುಡಿದು ಹೊಡೆದಾಡಿಕೊಂಡ ಡ್ರೈವರ್- ಕಂಡಕ್ಟರ್ ಇಬ್ಬರನ್ನು ಅವರು ವಿಚಾರಣೆ ನಂತರ ವಜಾ ಮಾಡಿದರು. ಸಾರಿಗೆ ಸಂಸ್ಥೆ ಅಧ್ಯಕ್ಷರಾದ ಮುಖ್ಯಮಂತ್ರಿ ಆ ಆದೇಶ ವನ್ನು ತಳ್ಳಿ ಹಾಕಿ ಅವರನ್ನು ಪುನರ್ ನೇಮಕ ಮಾಡಿದರು. ಆ ನೇಮಕಾತಿ ಆದೇಶವನ್ನು ಕೈಯಲ್ಲಿ ಇಟ್ಟುಕೊಂಡು ಈ ಐ ಎ ಎಸ್ ಅಧಿಕಾರಿ ಸಾರಿಗೆ ಸಚಿವರಾಗಿದ್ದ ಖರ್ಗೆ ಅವರನ್ನು ಭೇಟಿ ಮಾಡಲು ಹೋದರು. ``ಇವರನ್ನು ವಾಪಸ್ ಕೆಲಸಕ್ಕೆ ತೆಗೆದುಕೊಳ್ಳುವುದರಿಂದ ಸಾರಿಗೆ ನಿಗಮಕ್ಕೆ ಲಾಭವೇ ?’’ ಎಂದು ಖರ್ಗೆ ಇವರನ್ನು ಕೇಳಿದರು. ``ಇಲ್ಲ ಸಾರ್. ಅವರು ಇಬ್ಬರೂ ಕೆಲಸಕ್ಕೆ ಬಾರದವರು. ಹಿಂದೆಯೂ ಈ ರೀತಿ ಮಾಡಿದ್ದಾರೆ. ಏನಾದರೂ ಹೇಳಲು ಹೋದರೆ ನಮಗೆ ರಾಜಕಾರಣಿಗಳ ಬೆಂಬಲ ಇದೆ ಎಂದು ಇತರರನ್ನು ಹೆದರಿಸುತ್ತಾರೆ,’’ ಎಂದು ಅಧಿಕಾರಿ ಉತ್ತರಿಸಿದರು. ``ಹಾಗಾದರೆ ಅವರನ್ನು ಕೆಲಸಕ್ಕೆ ತೆಗೆದು ಕೊಳ್ಳುವುದು ಬೇಡ. ನಿಮಗೆ ಯಾರಾದರೂ ಏನಾದರೂ ಮುಖ್ಯಮಂತ್ರಿ ಅವರ ಕಚೇರಿ ಯಿಂದ ಫೋನು ಬಂದರೆ ಸಾರಿಗೆ ಸಚಿವರ ಹತ್ತಿರ ಮಾತಾಡುವಂತೆ ಹೇಳಿ,’’ ಎಂದರು. ಖರ್ಗೆ ಅವರ ವ್ಯಕ್ತಿತ್ವದ ಪರಿಚಯ ಇದ್ದ ಮುಖ್ಯಮಂತ್ರಿಯ ಕಚೇರಿಯಿಂದ ಆ ಫೋನು ಬರಲಿಲ್ಲ. ಹೊಸದಾಗಿ ರಾಜ್ಯಕ್ಕೆ ಬಂದ ಐಎಎಸ್ ಅಧಿಕಾರಿ ಯ ಮನೋಬಲ ಗಟ್ಟಿಯಾಯಿತು.
ಕರ್ನಾಟಕದ ಪೊಲೀಸ್ ಇತಿಹಾಸದಲ್ಲಿ ದಂತ ಕತೆ ಯಾಗಿರುವ ಐಪಿಎಸ್ ಅಧಿಕಾರಿ ಯೊಬ್ಬರು ಪೊಲೀಸ್ ಅಧಿಕಾರಿ ಗಳನ್ನು ಲಿಖಿತ ಪರೀಕ್ಷೆ ನಂತರ ನೇಮಕ ಮಾಡಿಕೊಳ್ಳಬೇಕು ಎನ್ನುವ ನಿಯಮ ಜಾರಿಗೆ ತಂದರು. ಪೊಲೀಸ್ ಪೇದೆ ಯಾರಾದರೂ ಪದವೀಧರರಾಗಿದ್ದರೆ ಅವರಿಗೂ ಒಂದು ಪರೀಕ್ಷೆ ನಡೆಸಿ ಪದೋನ್ನತಿ ಮಾಡಬಹುದು ಎನ್ನುವ ನಿಯಮ ಜಾರಿಗೊಳಿಸಿದರು.
ಆಗ ಗೃಹ ಸಚಿವರಾಗಿದ್ದ ಖರ್ಗೆ ಅವರ ಗನ್ ಮ್ಯಾನ್ ಪದವೀಧರ ಪೊಲೀಸ್ ಪೇದೆ ಯಾಗಿದ್ದರು. ಅವರಿಗೆ ಪದೋನ್ನತಿ ಆಸೆ ಇತ್ತು. ಅವರಿಗೆ `ಹೇಗಾದರೂ ಮಾಡಿ ಬಡ್ತಿ ಕೊಡಿ' ಅಂತ ಆಗಿನ ಮುಖ್ಯಮಂತ್ರಿ ಹಾಗೂ ಈಗಿನ ಕಾಂಗ್ರೆಸ್ ಅಧ್ಯಕ್ಷರೂ ಸೇರಿದಂತೆ ಅನೇಕ ನಾಯಕರು, ಅಧಿಕಾರಿಗಳು ಆ ಐ ಪಿ ಎಸ್ ಅಧಿಕಾರಿಯವರಿಗೆ ಹೇಳಿದರು. ಆದರೆ ಆ ಗನ್ ಮ್ಯಾನ್ ನೇಮಕಾತಿ ಪರೀಕ್ಷೆ ಪಾಸಾಗಲಿಲ್ಲ. ಅವರ ಬಡ್ತಿ ಆಗಲಿಲ್ಲ. ಆ ನಂತರವೂ ಎರಡು - ಮೂರು ವರ್ಷ ಆ ಅಧಿಕಾರಿ ಅದೇ ಸ್ಥಾನ ದಲ್ಲಿ ಮುಂದುವರಿದರು. ``ಖರ್ಗೆ ಅವರು ನನ್ನ ಮುಂದೆ ಆ ವಿಷಯ ವನ್ನು ಒಂದು ದಿನವೂ ಪ್ರಸ್ತಾಪ ಮಾಡಲಿಲ್ಲ'’ ಅಂತ ಈಗ ನಿವೃತ್ತರಾಗಿರುವ ಆ ಐಪಿಎಸ್ ಅಧಿಕಾರಿ ಹೇಳುತ್ತಾರೆ.
ಬೀದರ್ ಜಿಲ್ಲೆ ಭಾಲ್ಕಿ ತಾಲೂಕು ವರವಟ್ಟಿ ಎಂಬ ಕುಗ್ರಾಮದ ಭೂರಹಿತ ಕೃಷಿ ಕೂಲಿ ಕರ್ಮಿಕ ಮಾಪಣ್ಣ ನ ಮನೆಯಲ್ಲಿ ಖರ್ಗೆ ಹುಟ್ಟಿದವರು. ಒಂದು ಅಂಕಣ ದ ತೆಂಗಿನ ಸೂರಿನ ಆ ಮನೆ ಈಗಲೂ ಇದೆ. ಆ ಊರಿನ ದೈವ ದ ನೆನಪಿನಲ್ಲಿ ಅವರ ತಂದೆ ಅವರಿಗೆ ಹೆಸರು ಇಟ್ಟರು ಅಂತ ಅವರ ಊರಲ್ಲಿ ಇರುವ ಅವರ ಸಂಬಂಧಿಕರು ಹೇಳುತ್ತಾರೆ.
ತನ್ನ ಮೊದಲ ಹೆಂಡತಿ ಸಾಬವ್ವ ಹಾಗೂ ಇಬ್ಬರು ಮಕ್ಕಳನ್ನು ದಂಗೆ ಯೊಂದರಲ್ಲಿ ಕಳೆದುಕೊಂಡ ಮಾಪಣ್ಣ ಖರ್ಗೆ, ಪುಟ್ಟ ಕೂಸಾಗಿದ್ದ ಮಲ್ಲಿಕಾರ್ಜುನ ನನ್ನು ಎತ್ತಿಕೊಂಡು ಗುಲ್ಬರ್ಗಕ್ಕೆ ಓಡಿ ಹೋದರು. ಅಲ್ಲಿನ ಎಂ ಎಸ್ ಕೆ ಮಿಲ್ ನಲ್ಲಿ ಕೂಲಿ ಕೆಲಸ ಮಾಡಿ ಮಗನನ್ನು ವಕೀಲ ನಾಗಿಸಿದರು. ಕಾರ್ಮಿಕ ನಾಯಕ ರಾಗಿ, ಅಂಬೇಡ್ಕರ್ ವಾದಿ ಯಾಗಿ, ಬುದ್ಧನ ಧಮ್ಮ ದಲ್ಲಿ ನಂಬಿಕೆ ಇಟ್ಟುಕೊಂಡು ಬೆಳೆದರು. ಅಂಬೇಡ್ಕರ್ ಅವರ ಆರ್ ಪಿ ಐ ಪಕ್ಷದ ವತಿಯಿಂದ ಸ್ಥಳೀಯ ಸಂಸ್ಥೆ ಚುನಾವಣೆ ಗಳಲ್ಲಿ ಗೆದ್ದು ನಂತರ ಮೂರನೇ ಸಾರ್ವತ್ರಿಕ ಚುನಾವಣೆ ಯಲ್ಲಿ ಕಾಂಗ್ರೆಸ್ ಶಾಸಕರಾದರು.
ನಮ್ಮ ದೂರದ ಸಂಬಂಧಿಯೊಬ್ಬರು ಕೇಂದ್ರ ಸರಕಾರದ ಹಿರಿಯ ಅಧಿಕಾರಿ ಯಾಗಿ ನಿವೃತ್ತಿ ಹೊಂದಿದ ಮೇಲೆ ಹತ್ತಿರದ ಆಶ್ರಮಕ್ಕೆ ಹೋಗಿ ಸನ್ಯಾಸ ಪಡೆದರು. ಆ ನಂತರ ಅನೇಕ ವರ್ಷ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಸರ್ವೋದಯ ಕಾರ್ಯಕರ್ತ ರಾಗಿ ಸೇವೆ ಮಾಡಿದರು. ಕೆಲವು ದಶಕ ಗಳ ಕಾಲ ಅವಿಭಜಿತ ಕರ್ನಾಟಕ- ಮಹಾರಾಷ್ಟ್ರ ಗಳಲ್ಲಿ ಕೆಲಸ ಮಾಡಿದ್ದ ಅವರು ಇಲ್ಲಿನ - ಅಲ್ಲಿನ ರಾಜಕೀಯ ಬಲ್ಲವ ರಾಗಿದ್ದರು. ತಮ್ಮ ತಿಳಿ ಹಾಸ್ಯ ಭರಿತ ಕಠೋರ ಮಾತುಗಳಿಗೆ ಹೆಸರಾಗಿದ್ದ ಅವರು ಆಗಾಗ ಒಂದು ಮಾತು ಹೇಳುತ್ತಿದ್ದರು : `` ಈ ಅಂತುಲೆ ದೇಶ ಭಕ್ತ, ಖರ್ಗೆ ಪ್ರಾಮಾಣಿಕ, ಸಿದ್ದರಾಮಯ್ಯ ಬುದ್ಧಿವಂತ ಅಂತ ಹೇಳಿದರ ಯಾರರ ನಂಬತಾರೇನು ?’’. ಇದು ದೊಡ್ಡ ಜೋಕು ಅಂತ ಭಾವಿಸಿದ ಮಿತ್ರ ಮಂಡಳಿ ಜೋರಾಗಿ ನಗುತ್ತಿತ್ತು. ಇದು ಜೋಕು ಇರಲಿಕ್ಕಿಲ್ಲ ಅಂತ ಅವರು ಯಾರಿಗೂ ಅನ್ನಿಸುತ್ತಿರಲಿಲ್ಲ. ಹೌದೇ, ಹಾಗೂ ಇರಬಹುದೇ ಅಂತ ಎಲ್ಲರೂ ವಿಚಾರ ಮಾಡಿದ್ದರೆ ಇಂದು ನಾವು ಇದನ್ನೆಲ್ಲಾ ಮಾತಾಡುವ ಪ್ರಶ್ನೆಯೇ ಇರುತ್ತಿರಲಿಲ್ಲ, ಅನ್ನಿಸುತ್ತದೆ.
- ಕೃಪೆ- ಹೃಷಿಕೇಶ ಬಹದ್ದೂರ ದೇಸಾಯಿ ಅವರ ಫೇಸ್ ಬುಕ್ ಪೋಸ್ಟ್ ನಿಂದ
-----------------------------------------------------------------------------------------
ಫೇಸ್ ಬುಕ್ ಪೋಸ್ಟ್ ಇಲ್ಲಿದೆ