ಅಜಾತ ಶತ್ರು ಬಿನ್ನಿ ಕೈಗೆ ಬಿಸಿಸಿಐ ಸಾರಥ್ಯ
ಆಟ-ಕೂಟ
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿ ಮಾಜಿ ಆಟಗಾರ ಕರ್ನಾಟಕದ ರೋಜರ್ ಬಿನ್ನಿ ಆಯ್ಕೆಯಾಗಿದ್ದಾರೆ. ಈ ಸ್ಥಾನಕ್ಕೆ ಬಿನ್ನಿ ಸಮರ್ಥ ಆಯ್ಕೆ. ಭಾರತಕ್ಕೆ ಮೊದಲ ಬಾರಿ ವಿಶ್ವಕಪ್ ತಂದು ಕೊಟ್ಟ ತಂಡದ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದ ರೋಜರ್ ಬಿನ್ನಿ ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಸ್ಥಾನವನ್ನು ತುಂಬಲಿದ್ದಾರೆ.
67ರ ಹರೆಯದ ಬಿನ್ನಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಏಕೈಕ ಅಭ್ಯರ್ಥಿಯಾಗಿದ್ದರು. ಹೀಗಾಗಿ ಅಜಾತ ಶತ್ರು ಬಿನ್ನಿ ಕ್ರಿಕೆಟ್ ಸಂಸ್ಥೆಯ ಉನ್ನತ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾದರು.ಕ್ರಿಕೆಟ್ ಆಡಳಿತದಲ್ಲಿ ಅಪಾರ ಅನುಭವ ಹೊಂದಿರುವ ಬಿನ್ನಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ (ಕೆಎಸ್‌ಸಿಎ) ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು 2019ರಿಂದ ಅವರು ಅಧ್ಯಕ್ಷರಾಗಿದ್ದಾರೆ.
ಬಿನ್ನಿ ಭಾರತದ ಕ್ರಿಕೆಟ್ ಸಂಸ್ಥೆಯ ಉನ್ನತ ಸ್ಥಾನಕ್ಕೆ ಏರಿದ ಮೂರನೇ ಆಟಗಾರ. ನಿರ್ಗಮನ ಅಧ್ಯಕ್ಷ ಸೌರವ್‌ಗಂಗುಲಿ ಮತ್ತು ಮಹಾರಾಜ್‌ಕುಮಾರ್(1954-56) ಬಿಸಿಸಿಐ ಆಡಳಿತದ ಚುಕ್ಕಾಣಿ ಹಿಡಿದಿದ್ದರು. ಶಿವಲಾಲ್ ಯಾದ್ ಮತ್ತು ಸುನೀಲ್ ಗವಾಸ್ಕರ್ ತಾತ್ಕಾಲಿಕವಾಗಿ ಈ ಹುದ್ದೆಯನ್ನಲಂಕರಿಸಿದ್ದರು. ಬಿನ್ನಿ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ಸ್ಕಾಟಿಷ್ ಮೂಲದ ಮೊದಲ ಆಂಗ್ಲೋ-ಇಂಡಿಯನ್. ಅವರ ಮಗ ಸ್ಟುವರ್ಟ್ ಬಿನ್ನಿ ಕೂಡಾ ತಂದೆಯ ಹಾದಿಯಲ್ಲಿ ಹೆಜ್ಜೆ ಇರಿಸಿದ್ದರು. ದೇಶೀಯ ಮಟ್ಟದಲ್ಲಿಯಲ್ಲದೆ ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಆರು ಟೆಸ್ಟ್‌ಗಳು, 14 ಏಕದಿನ ಮತ್ತು ಮೂರು ಟ್ವೆಂಟಿ-20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು ಸ್ಟುವರ್ಟ್.
ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೇರಿದ ಹಿನ್ನೆಲೆಯಲ್ಲಿ ರೋಜರ್ ಬಿನ್ನಿ ಇನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನ ತ್ಯಜಿಸಬೇಕಾಗಿದೆ. 1983ರ ವಿಶ್ವಕಪ್ ವಿಜೇತ ತಂಡದ ಸಹ ಆಟಗಾರ ಸಂದೀಪ್ ಪಾಟೀಲ್ ಭಾರತ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದಾಗ ಬಿನ್ನಿ ಆಯ್ಕೆಗಾರರಾಗಿಯೂ ಸೇವೆ ಸಲ್ಲಿಸಿದರು.
ಆ ಸಮಯದಲ್ಲಿ ತಮ್ಮ ಪುತ್ರ ಸ್ಟುವರ್ಟ್ ಬಿನ್ನಿ ತಂಡಕ್ಕೆ ಆಯ್ಕೆಯ ಚರ್ಚೆ ಬಂದಾಗ ಅವರು ಚರ್ಚೆಯಲ್ಲಿ ಭಾಗವಹಿಸದೆ ನಿರ್ಧಾರವನ್ನು ಉಳಿದ ಸದಸ್ಯರ ವಿವೇಚನಗೆ ಬಿಟ್ಟು ತಾವು ಸಭೆಯಿಂದ ಹೊರಗುಳಿಯುತ್ತಿದ್ದರು ಎಂದು ಅವರ ಆಪ್ತರು ಹೇಳುತ್ತಿದ್ದರು.
ಬಿನ್ನಿ 1983ರ ವಿಶ್ವಕಪ್ ಕ್ರಿಕೆಟ್‌ನಲ್ಲಿ ತಂಡದ ಪರ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ (18 ವಿಕೆಟ್) ಪಡೆದಿದ್ದರು. ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ 29ಕ್ಕೆ 4 ವಿಕೆಟ್ ಪಡೆದಿರುವುದು ಶ್ರೇಷ್ಠ ಪ್ರದರ್ಶನ. ಫೈನಲ್‌ನಲ್ಲಿ ವಿಂಡೀಸ್‌ನ ಪ್ರಮುಖ ವಿಕೆಟ್ ಆಗಿದ್ದ ಕ್ಲೈವ್ ಲಾಯ್ಡೆ ಅವರ ವಿಕೆಟ್ ಪಡೆಯುವ ಮೂಲಕ ವಿಶ್ವಕಪ್ ಗೆಲ್ಲಲು ತಂಡಕ್ಕೆ ನೆರವಾಗಿದ್ದರು. 1985ರಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ವಿಶ್ವ ಸರಣಿ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲೂ 17 ವಿಕೆಟ್ ಪಡೆಯುವ ಮೂಲಕ ಈ ಸಾಧನೆಯನ್ನು ಪುನರಾವರ್ತಿಸಿದ್ದರು.
ಇಪ್ಪತ್ತರ ಹರೆಯದಲ್ಲಿ ಕೇರಳದ ವಿರುದ್ಧ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಬಿನ್ನಿ ಪ್ರವೇಶಿಸಿದರು. ಮುಂದಿನ ವರ್ಷ ಅವರು ತವರಿನಲ್ಲಿ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು 71ರನ್ ಬಾರಿಸಿದ್ದರು. ಕರ್ನಾಟಕ 465 ರನ್ ಕಲೆ ಹಾಕಿತ್ತು. ಆ ಪಂದ್ಯದಲ್ಲಿ ಅಗ್ರ ಸರದಿಯ ನಾಲ್ವರು ಆಟಗಾರರಿಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ 108ಕ್ಕೆ 4 ವಿಕೆಟ್ ಪಡೆದಿದ್ದರು. 1977-78ರಲ್ಲಿ ರಣಜಿಯಲ್ಲಿ 62.55 ಸರಾಸರಿಯಂತೆ 563 ರನ್ ಗಳಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನ ಔಟಾಗದೆ 211 ರನ್. ಕೇರಳ ವಿರುದ್ಧದ ಪಂದ್ಯದಲ್ಲಿ ಸಂಜಯ್ ದೇಸಾಯಿ ಅವರೊಂದಿಗೆ ಕರ್ನಾಟಕದ ಇನಿಂಗ್ಸ್ ಆರಂಭಿಸಿ, ಈ ಜೋಡಿ ವಿಕೆಟ್ ನಷ್ಟವಿಲ್ಲದೆ 451ರನ್ ಕಲೆ ಹಾಕಿ ಇನಿಂಗ್ಸ್ ಡಿಕ್ಲೇರ್ ಮಾಡಲು ನೆರವಾಗಿದ್ದರು. ಕರ್ನಾಟಕ ತಂಡದ ಪರ ಬಿನ್ನಿ 71 ಪ್ರಥಮ ದರ್ಜೆ ಪಂದ್ಯಗಳಲ್ಲಿ 4,394ರನ್, 12 ಶತಕ ಮತ್ತು 21 ಅರ್ಧಶತಕ, 112 ವಿಕೆಟ್ ಪಡೆದಿದ್ದಾರೆ. 22ಕ್ಕೆ 8 ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ತವರಿನ (ಬೆಂಗಳೂರು) ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 1979ರಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಆಡುವ ಮೂಲಕ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ ಬಿನ್ನಿ ತನ್ನ ಮೊದಲ ಟೆಸ್ಟ್‌ನಲ್ಲಿ ಇಮ್ರಾನ್ ಖಾನ್ ಮತ್ತು ಸರ್ಫ್ರಾಝ್ ನವಾಝ್ ಅವರಂತಹ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ಚೊಚ್ಚಲ ಪಂದ್ಯದಲ್ಲಿ 46 ರನ್ ಗಳಿಸಿದ್ದರು. ಉಪಯುಕ್ತ ಸ್ವಿಂಗ್ ಬೌಲರ್ ಆಗಿದ್ದರು ಮತ್ತು 1980ರ ದಶಕದ ಭಾರತೀಯ ತಂಡದಲ್ಲಿ ಉತ್ತಮ ಫೀಲ್ಡರ್‌ಗಳ ಪೈಕಿ ಒಬ್ಬರು.
ಬಿನ್ನಿ ಯಾವ ತಂಡದ ವಿರುದ್ಧ 1979ರಲ್ಲಿ ಚೊಚ್ಚಲ ಟೆಸ್ಟ್ ಆಡಿದ್ದರೋ, ಅದೇ ತಂಡ ಪಾಕಿಸ್ತಾನ ಮಾರ್ಚ್ 1987ರಲ್ಲಿ ಭಾರತಕ್ಕೆ ಬಂದಾಗ ಅದರ ವಿರುದ್ಧ ಆಡುವುದರೊಂದಿಗೆ ತಮ್ಮ ಅಂತರ್‌ರಾಷ್ಟ್ರೀಯ ಟೆಸ್ಟ್ ವೃತ್ತಿಜೀವನವನ್ನು ಸ್ವದೇಶಿ ಸರಣಿಯಲ್ಲಿ ಕೊನೆಗೊಳಿಸಿದ್ದರು. ಅಂತೆಯೇ, ಬಿನ್ನಿ ಅವರು ಡಿಸೆಂಬರ್ 6, 1980 ರಂದು ಮೆಲ್ಬೋರ್ನ್‌ಲ್ಲಿ ಆಸ್ಟ್ರೇಲಿಯ ವಿರುದ್ಧ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ್ದರು. ಅಕ್ಟೋಬರ್ 9, 1987ರಂದು ಚೆನ್ನೈನಲ್ಲಿ ಆಸ್ಟ್ರೇಲಿಯ ವಿರುದ್ಧ ಕೊನೆಯ ಏಕದಿನ ಆಡುವ ಮೂಲಕ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಅವರು 27 ಟೆಸ್ಟ್ ಹಾಗೂ 72 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 47 ವಿಕೆಟ್ ಮತ್ತು 830ರನ್, ಗರಿಷ್ಠ ವೈಯಕ್ಕಿಕ ಸ್ಕೋರ್ 83ರನ್ ಗಳಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ 629 ರನ್, 57 ಗರಿಷ್ಠ ರನ್ ಮತ್ತು 77 ವಿಕೆಟ್ ಗಿಟ್ಟಿಸಿಕೊಂಡವರು. ಬಿನ್ನಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರೂ ದೇಶಿಯ ಕ್ರಿಕೆಟ್‌ನಲ್ಲಿ ಸ್ವಲ್ಪ ಸಮಯ ತಮ್ಮ ಸೇವೆಯನ್ನು ಮುಂದುವರಿಸಿದ್ದರು. ಕರ್ನಾಟಕ ರಣಜಿ ತಂಡದ ನಾಯಕರಾಗಿ ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್ ಮತ್ತು ವೆಂಕಟೇಶ್ ಪ್ರಸಾದ್ ಅವರಂತಹ ಆಟಗಾರರಿಗೆ ಮಾರ್ಗದರ್ಶನ ನೀಡಿದ್ದರು. 2000ರಲ್ಲಿ ಅಂಡರ್ -19 ತಂಡದ ಕೋಚ್ ಆಗಿ ಮುಹಮ್ಮದ್ ಕೈಫ್, ರಿತೆಂದರ್ ಸಿಂಗ್ ಸೋಧಿ, ಯುವರಾಜ್ ಸಿಂಗ್‌ರಂತಹ ಆಟಗಾರರನ್ನು ರೂಪಿಸಿದ್ದರು. ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಪ್ರಶಸ್ತಿ ಗೆದ್ದುಕೊಳ್ಳುವಲ್ಲಿ ತಂಡಕ್ಕೆ ಸಮರ್ಥ ಮಾರ್ಗದರ್ಶನ ನೀಡಿದ್ದರು.
ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಹೊಂದಿರುವ ಬಿನ್ನಿ ಇದೀಗ ಸೌರವ್ ಗಂಗುಲಿ ಉತ್ತರಾಧಿಕಾರಿಯಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿಯನ್ನು ಸಮರ್ಥವಾಗಿ ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಕ್ರೀಡೆಯಲ್ಲಿ ಯಾವುದೇ ಅನುಭವಿಲ್ಲದ ಪ್ರಭಾವಿ ರಾಜಕಾರಣಿಗಳು ಮತ್ತು ರಾಜಕಾರಣಿಗಳ ಮಕ್ಕಳು, ಉದ್ಯಮಿಗಳು ಕ್ರೀಡಾ ಸಂಸ್ಥೆಗಳ ಆಡಳಿತದಲ್ಲಿ ತುಂಬಿದ್ದಾರೆ. ಇಂತಹವರ ನಡುವೆ ಕ್ರಿಕೆಟ್‌ನ ಆಡಳಿತವನ್ನು ಮುನ್ನಡೆಸುವ ಪ್ರಯತ್ನವನ್ನು ಅನುಭವಿ ಕ್ರಿಕೆಟರ್ ಬಿನ್ನಿ ಮುಂದುವರಿಸಲಿದ್ದಾರೆ.