ಸರಕಾರಿ ಶಾಲೆಗಳು ಗೋಶಾಲೆಗಳಿಗಿಂತ ನಿಕೃಷ್ಟವೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸರಕಾರಿ ಶಾಲೆಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳಿಗೆ ಬೇಕಾದ ಖರ್ಚು ವೆಚ್ಚಗಳಿಗಾಗಿ ಪೋಷಕರಿಂದಲೇ ಮಾಸಿಕ 100 ರೂಪಾಯಿ ದೇಣಿಗೆಯನ್ನು ಪಡೆಯಲು ಸರಕಾರ ಸುತ್ತೋಲೆಯನ್ನು ಹೊರಡಿಸಿರುವುದು ಸಾರ್ವಜನಿಕರ ತೀವ್ರ ಆಕ್ಷೇಪಗಳಿಗೆ ಕಾರಣವಾಗಿದೆ. ಈ ಹಿಂದೆ ಶಾಲಾ ಮಕ್ಕಳ ಶೂ ಖರೀದಿಸಲು ದಾನಿಗಳಿಂದ ನೆರವು ಪಡೆಯಲು ಸೂಚಿಸಿದ್ದ ಸರಕಾರ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತರಗತಿಗಳಿಗೆ ಬೇಕಾದ ಡೆಸ್ಕ್, ಶಾಲೆಯ ವಿದ್ಯುತ್ ಬಿಲ್, ಇನ್ನಿತರ ಪರಿಕರಗಳ ವೆಚ್ಚ ಭರಿಸಲು ವಿದ್ಯಾರ್ಥಿಗಳ ಪೋಷಕರಿಂದಲೇ ಮಾಸಿಕ ದೇಣಿಗೆ ಪಡೆಯುವ ಸಲಹೆಯನ್ನು ನೀಡಿದೆ. ಸಂಗ್ರಹಿಸಿದ ಅನುದಾನ ಯಾವ ಯಾವ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಬೇಕು ಎನ್ನುವ ಕುರಿತು ಆದ್ಯತಾ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ರಸೀದಿ ನೀಡುವ, ಪ್ರತ್ಯೇಕ ಲೆಕ್ಕಪತ್ರ ಇಡುವ, ಹಣಕಾಸಿನ ನಿರ್ವಹಣೆಯ ಹೊಣೆಗಾರಿಕೆಯನ್ನು ಎಸ್‌ಡಿಎಂಸಿ ಕಾರ್ಯದರ್ಶಿಗೆ ನೀಡಲಾಗಿದೆ. ಈ ಮೂಲಕ ಸರಕಾರಿ ಶಾಲೆಗಳ ಹೊಣೆಗಾರಿಕೆಗಳಿಂದ ಸರಕಾರ ಹಂತಹಂತವಾಗಿ ಜಾರಿಕೊಳ್ಳುವ ಪ್ರಯತ್ನದಲ್ಲಿದೆ. ಸರಕಾರದ ಸುತ್ತೋಲೆಗೆ ಈಗಾಗಲೇ ಶಿಕ್ಷಣ ತಜ್ಞರು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದು, ಇದು ಶಿಕ್ಷಣದ ಮೂಲಭೂತ ಹಕ್ಕಿನ ಉಲ್ಲಂಘನೆ, ಕಡ್ಡಾಯ ಶಿಕ್ಷಣ ಹಕ್ಕು ಮೊಟಕುಗೊಳಿಸುವ ಹುನ್ನಾರ ಎಂದು ಆರೋಪಿಸಿದ್ದಾರೆ.
ಈಗಾಗಲೇ ರಾಜ್ಯ ಸರಕಾರ ನೂರಾರು ಸರಕಾರಿ ಶಾಲೆಗಳನ್ನು ‘ವಿದ್ಯಾರ್ಥಿಗಳ ಕೊರತೆ’ಯ ಹೆಸರಿನಲ್ಲಿ ಮುಚ್ಚಿಸಿದೆ. ಇರುವ ಸರಕಾರಿ ಶಾಲೆಗಳು ಶಿಕ್ಷಕರ ಕೊರತೆ, ಮೂಲಭೂತ ಸೌಕರ್ಯಗಳ ಕೊರತೆಗಳಿಂದ ನರಳುತ್ತಿವೆ. ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರಕುತ್ತಿಲ್ಲ ಎಂದು ಮಧ್ಯಮವರ್ಗದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಆದರೆ ಇಂದಿಗೂ ಬಡ, ಶೋಷಿತ ಸಮುದಾಯದ ಮಕ್ಕಳು ಸರಕಾರಿ ಶಾಲೆಗಳನ್ನೇ ಶಿಕ್ಷಣಕ್ಕಾಗಿ ನೆಚ್ಚಿಕೊಂಡಿದ್ದಾರೆ. ಸರಕಾರಿ ಶಾಲೆಗಳು ಮುಚ್ಚಿದ್ದೇ ಆದರೆ, ಇವರ ಪಾಲಿಗೆ ಶಿಕ್ಷಣದ ಬಾಗಿಲೇ ಮುಚ್ಚಿದಂತೆ. ಕೊರೋನೋತ್ತರ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಸಾವಿರಾರು ಮಕ್ಕಳು ಶಿಕ್ಷಣದಿಂದ ಹೊರ ತಳ್ಳಲ್ಪಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಅವರನ್ನು ಮತ್ತೆ ಶಾಲೆಗಳಿಗೆ ಕರೆತರುವ ಮಹತ್ತರ ಹೊಣೆಗಾರಿಕೆ ಸರಕಾರದ ಮೇಲಿದೆ. ಆರ್ಥಿಕವಾಗಿ ಕಂಗೆಟ್ಟಿರುವ ಕುಟುಂಬಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಮಕ್ಕಳು ಶಾಲೆಗಳಿಗೆ ಮರಳಿ ಬರುವಂತೆ ಮಾಡುವ ಹೊಣೆಗಾರಿಕೆ ಸರಕಾರದ ಮೇಲಿದೆ. ಈ ಹಿಂದಿನ ಸರಕಾರಗಳು ವಿದ್ಯಾರ್ಥಿಗಳಿಗೆ ನೀಡಿದ ಉಚಿತ ಸೈಕಲ್, ಉಚಿತ ಶೂ, ಲ್ಯಾಪ್‌ಟಾಪ್‌ನಂತಹ ಯೋಜನೆಗಳಿಗೆ ಮರು ಜೀವ ನೀಡಬೇಕಾಗಿದೆ. ಇದಕ್ಕಾಗಿ ಇನ್ನಷ್ಟು ಹೆಚ್ಚು ಅನುದಾನಗಳನ್ನು ಸರಕಾರ ನೀಡಬೇಕು. ವಿಪರ್ಯಾಸವೆಂದರೆ, ಲಾಕ್‌ಡೌನ್, ಕೊರೋನಗಳಿಂದ ತತ್ತರಿಸಿ ತೀವ್ರ ಬಡತನದಲ್ಲಿರುವ ಪೋಷಕರಿಂದಲೇ ಮಾಸಿಕ ದೇಣಿಗೆ ವಸೂಲಿ ಮಾಡಿ ಸರಕಾರಿ ಶಾಲೆಗಳನ್ನು ನಡೆಸಲು ಸರಕಾರ ಮುಂದಾಗಿದೆ. ಬಹುಶಃ ಇಂತಹ ದೈನೇಸಿ ಸ್ಥಿತಿಗೆ ಈ ಹಿಂದಿನ ಯಾವ ಸರಕಾರವೂ ಇಳಿದಿರಲಿಲ್ಲ. ಮಾಸಿಕ ದೇಣಿಗೆಯನ್ನು ನೀಡುವ ಶಕ್ತಿ ಪೋಷಕರಿಗಿದ್ದರೆ ಅವರೇಕೆ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುತ್ತಿದ್ದರು ಎನ್ನುವ ಪ್ರಶ್ನೆ ಸರಕಾರವನ್ನು ಕಾಡಿದಂತಿಲ್ಲ.
ಇಂದು ಅಲ್ಪಸ್ವಲ್ಪ ಕನ್ನಡ ಜೀವಂತ ಉಳಿದಿರುವುದು ಕೂಡ ಸರಕಾರಿ ಶಾಲೆಗಳಲ್ಲಿಯೇ. ಖಾಸಗಿ ಶಾಲೆಗಳಿಂದಾಗಿ ಕನ್ನಡ ಮಾಧ್ಯಮಗಳಲ್ಲಿ ಕಲಿಯುವ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ. ಇತ್ತೀಚೆಗೆ ಕೆಲವು ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭ ಮಾಡಲಾಗಿದೆಯಾದರೂ, ಸರಕಾರದ ಸೂಕ್ತ ಪ್ರೋತ್ಸಾಹವಿಲ್ಲದೆ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಇಂಗ್ಲಿಷ್ ಮತ್ತು ಕನ್ನಡ ಜೊತೆ ಜೊತೆಯಾಗಿ ಕಲಿಯುವ ಅವಕಾಶಗಳೂ ಸರಕಾರಿ ಶಾಲೆಗಳಲ್ಲಿವೆ. ಸರಕಾರಿ ಶಾಲೆಗಳನ್ನು ಉಳಿಸುವುದು ಎಂದರೆ ಪರೋಕ್ಷವಾಗಿ ಕನ್ನಡ ನುಡಿಯನ್ನು ಉಳಿಸಿ ಬೆಳೆಸುವುದು ಎಂದೂ ಅರ್ಥ. ಎಲ್ಲ ಜಾತಿ ಧರ್ಮದ ವಿದ್ಯಾರ್ಥಿಗಳನ್ನು ತನ್ನ ಮಡಿಲಲ್ಲಿ ಒಂದಾಗಿಸಿಕೊಂಡು, ನಿಜಾರ್ಥದಲ್ಲಿ ಜಾತ್ಯತೀತ ಶಿಕ್ಷಣವನ್ನು ಮಕ್ಕಳಿಗೆ ಬೋಧಿಸುತ್ತದೆ. ವಜಾತಿ, ಮತ, ಧರ್ಮಗಳ ಭೇದವನ್ನು ಮರೆತು ವಿದ್ಯಾರ್ಥಿಗಳು ಜೊತೆ ಜೊತೆಯಾಗಿ ಬಿಸಿಯೂಟ ಸವಿಯುತ್ತಾ, ಸಹಬಾಳ್ವೆಯನ್ನು ಕಲಿಯುವುದು ಸರಕಾರಿ ಶಾಲೆಗಳಲ್ಲಿ ಮಾತ್ರ. ಇಂತಹ ಸರಕಾರಿ ಶಾಲೆಗಳನ್ನು ಮೇಲೆತ್ತಲು ಹಣವಿಲ್ಲ ಎನ್ನುವುದು ನಿಜಕ್ಕೂ ಸರಕಾರ ಎಷ್ಟು ಪಾತಾಳಕ್ಕೆ ತಲುಪಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ.
ಇಷ್ಟಕ್ಕೂ ಸರಕಾರಿ ಶಾಲೆಗಳನ್ನು ಮೇಲೆತ್ತಲು ಸರಕಾರದ ಬಳಿ ಹಣವಿಲ್ಲವೆ? ಹಣವೇ ಇಲ್ಲ ಎಂದಾದರೆ, ಇತ್ತೀಚೆಗೆ ಕರ್ನಾಟಕ ಸರಕಾರ 65 ಮಠಗಳಿಗೆ 119 ಕೋಟಿ ರೂಪಾಯಿ ಅನುದಾನವನ್ನು ಎಲ್ಲಿಂದ ಬಿಡುಗಡೆ ಮಾಡಿತು. ಈಗಾಗಲೇ ಪರಿಸರಕ್ಕೆ ಸಂಬಂಧಿಸಿ ಹಲವು ಪ್ರಕರಣಗಳನ್ನು ಮೈಮೇಲೆ ಎಳೆದುಕೊಂಡಿರುವ ಜಗ್ಗಿ ವಾಸುದೇವ್ ಅವರ ‘ಮಣ್ಣು ಆಂದೋಲನ’ಕ್ಕೆ 100 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳ ಬಾಯಿಗೆ ಮಣ್ಣು ಹಾಕಿ, ಈ ಮಣ್ಣು ಆಂದೋಲನವೆನ್ನುವ ಪ್ರಹಸನಕ್ಕೆ ಜನರ ತೆರಿಗೆ ಹಣವನ್ನು ನೀಡುವುದು ಎಷ್ಟು ಸರಿ? ಮಠ ಮಾನ್ಯಗಳು, ದೇವಸ್ಥಾನ, ಮಸೀದಿ, ಚರ್ಚುಗಳನ್ನು ಆಯಾ ಸಮುದಾಯಕ್ಕೆ ಸೇರಿದ ಜನರು ತಮ್ಮ ನಂಬಿಕೆಗೆ ಪೂರಕವಾಗಿ ನಿರ್ಮಿಸಿಕೊಂಡಿದ್ದಾರೆ. ಯಾರಿಗೆ ಅದರ ಅಗತ್ಯವಿದೆಯೋ ಅವರು ಅದಕ್ಕೆ ಬೇಕಾದ ಹಣ, ದೇಣಿಗೆಗಳನ್ನು ನೀಡಿ ಅದನ್ನು ಉಳಿಸಿಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಮರಾಠಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಮರಾಠಿ ಭಾಷೆಯನ್ನು ಉಳಿಸಿ ಬೆಳೆಸಲು ಸುಮಾರು 50 ಕೋಟಿ ರೂಪಾಯಿಯನ್ನು ಮೀಸಲಿರಿಸಿತು.ಯಾವುದೇ ಬೇಡಿಕೆ ಇಲ್ಲದೇ ಇದ್ದರೂ ಪ್ರಬಲ ಜಾತಿಗಳ ಅಭಿವೃದ್ಧಿಗಾಗಿ ನಿಗಮ, ಮಂಡಳಿ ಸ್ಥಾಪಿಸಿ ಅವುಗಳಿಗೆ ಅನುದಾನಗಳನ್ನು ಘೋಷಿಸಿತು. ಇಷ್ಟೇ ಯಾಕೆ? ಗೋವು ಪೂಜನೀಯ, ಅದನ್ನು ಮಾಂಸಾಹಾರಕ್ಕೆ ಬಳಸಬಾರದು ಎನ್ನುವ ಶೇ. 2ರಷ್ಟಿರುವ ಜನರ ವಾದಕ್ಕೆ ತಲೆ ಬಾಗಿ ಅನುಪಯುಕ್ತ ಗೋವುಗಳನ್ನು ಸಾಕುವ ಹೊಣೆಯನ್ನು ತಾನೇ ವಹಿಸಿಕೊಂಡಿತು. ಇಂದು ಸರಕಾರ ಈ ಗೋಶಾಲೆಗಳಿಗಾಗಿಯೇ ಪ್ರತಿವರ್ಷ ಹಲವು ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತಿದೆೆ. ಆದರೆ ಇದು ಪ್ರತಿಯಾಗಿ ಸಮಾಜಕ್ಕೆ, ಸರಕಾರಕ್ಕೆ ಯಾವುದನ್ನೂ ಉತ್ಪಾದಿಸುತ್ತಿಲ್ಲ. ಗೋಶಾಲೆಗಳು ಅಕ್ರಮಗಳ ಗೂಡಾಗಿವೆ. ಸರಕಾರದ ಹಣವನ್ನು ಯಾರು ಯಾರೋ ಕಬಳಿಸುತ್ತಿದ್ದಾರೆ. ಗೋಶಾಲೆಗಳಲ್ಲಿರುವ ಗೋವುಗಳು ಹಸಿವಿನಿಂದ, ರೋಗಗಳಿಂದ ಸಾಲು ಸಾಲಾಗಿ ಸಾಯುತ್ತಿವೆ. ಕೇಂದ್ರ ಸರಕಾರವನ್ನೇ ಮಾದರಿಯಾಗಿಸಿಕೊಂಡು, ರಾಜ್ಯ ಸರಕಾರವೂ ಪ್ರತಿಮೆಗಳಿಗಾಗಿ ಹಣ ಸುರಿಯುತ್ತಿವೆ. ಇವುಗಳಿಗೆಲ್ಲ ವ್ಯಯ ಮಾಡಲು ಸರಕಾರದ ಬಳಿ ಹಣ ಇದೆ. ಆದರೆ ಸರಕಾರಿ ಶಾಲೆಗಳನ್ನು ಮೇಲೆತ್ತುವುದಕ್ಕೆ ಮಾತ್ರ ಸರಕಾರದ ಬಳಿ ಹಣವಿಲ್ಲ ಎಂದರೆ, ನಂಬುವ ಮಾತೆ? ಸರಕಾರಿ ಶಾಲೆಗಳನ್ನು ಉಳಿಸುವ ಇಚ್ಛಾಶಕ್ತಿಯೇ ಸರಕಾರದ ಬಳಿ ಇಲ್ಲ ಎನ್ನುವುದನ್ನು ಇದು ಹೇಳುತ್ತಿದೆ.
ಪೋಷಕರಿಂದಲೇ ದೇಣಿಗೆ ಸಂಗ್ರಹಿಸುವ ಸುತ್ತೋಲೆ ಸರಕಾರಿ ಶಾಲೆಗಳ ಮೇಲೆ ಇನ್ನಷ್ಟು ಆಘಾತವನ್ನುಂಟು ಮಾಡಲಿವೆ. ಸರಕಾರಿ ಶಾಲೆಗಳಿಂದ ಪೋಷಕರು ಇನ್ನಷ್ಟು ದೂರವಾಗಲಿದ್ದಾರೆ. ಸರಕಾರಕ್ಕೆ ನಿಜಕ್ಕೂ ಶಾಲೆಗಳನ್ನು ಉಳಿಸುವ ಇಚ್ಛೆಯಿದ್ದರೆ, ತಕ್ಷಣವೇ ಸುತ್ತೋಲೆಯನ್ನ್ನು ಹಿಂಪಡೆಯಬೇಕು. ಜಗ್ಗಿ ವಾಸುದೇವರಂತಹ ಸಂಸ್ಥೆಗಳಿಗೆ ಬಿಡುಗಡೆ ಮಾಡುವ ಅನುದಾನಗಳನ್ನು ಸರಕಾರಿ ಶಾಲೆಗಳಿಗೆ ವರ್ಗಾಯಿಸಬೇಕು. ಮಠಗಳಿಗೆ ನೀಡುವ ಸಹಾಯ ಧನವನ್ನು ಸರಕಾರಿ ಶಾಲೆಗಳಿಗೆ ನೀಡಲಿ. ಮರಾಠಿ ಅಭಿವೃದ್ಧಿ ನಿಗಮವನ್ನು ಮುಚ್ಚಿ, ಅದಕ್ಕೆ ಪ್ರತೀ ವರ್ಷ ನೀಡುವ ಹಣವನ್ನು ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳಿಗೆ ಕೊಡಲಿ. ಹಾಗೆಯೇ ದೇಣಿಗೆಯನ್ನು ಸಂಗ್ರಹಿಸುವುದಾದರೆ, ರಾಜ್ಯದಲ್ಲಿ ಬೃಹತ್ ಕಾರ್ಪೊರೇಟ್ ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸಿ ಅದನ್ನು ಸರಕಾರಿ ಶಾಲೆಗಳಿಗೆ ವರ್ಗಾಯಿಸಲಿ. ಆ ಮೂಲಕ ಸರಕಾರಿ ಶಾಲೆಗಳನ್ನು ಮೇಲೆತ್ತಲು ಹೊಸ ಯೋಜನೆಗಳನ್ನು ರೂಪಿಸಬೇಕು. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಸರಕಾರಿ ಶಾಲೆಗಳ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಿ, ಶಾಲೆ ತೊರೆದ ಮಕ್ಕಳು ಮರಳಿ ಶಾಲೆಗೆ ಬರುವಂತೆ ನೋಡಿಕೊಳ್ಳಬೇಕು. ಇದು ಸರಕಾರದ ಕರ್ತವ್ಯವಾಗಿದೆ. ಶಾಲೆಗಳನ್ನು ಮುಚ್ಚಿ ಗೋಶಾಲೆಗಳನ್ನು ನಡೆಸಲು ಹೊರಟಿರುವ ಸರಕಾರ, ಮುಂದೊಂದು ದಿನ ಈ ಸರಕಾರಿ ಶಾಲೆಗಳನ್ನು ತೊರೆದ ವಿದ್ಯಾರ್ಥಿಗಳ ಕೈಯಲ್ಲಿ ಆ ಗೋಶಾಲೆಗಳ ಸೆಗಣಿ ಹೊರಿಸುವುದಕ್ಕೆ ಮುಂದಾದರೆ ಅಚ್ಚರಿಯಿಲ್ಲ.