ಹಿಂದಿ-ಹಿಂದೂ ಹೇರಿಕೆ ನಿಲ್ಲಬೇಕೆಂದರೆ ಭಾರತವು ರಾಜ್ಯಗಳ ಯೂನಿಯನ್ ಆಗದೆ ರಾಜ್ಯಗಳ ಫೆಡರೇಶನ್ ಆಗಬೇಕು
‘ಭಾರತವನ್ನು ಒಂದು ಫೆಡರಲ್ ಒಕ್ಕೂಟವೆಂದು ಕರೆಯದೇ ಯೂನಿಯನ್ ಎಂದು ಕರೆಯಲು ತೀರ್ಮಾನಿಸಿತು’ ಹಾಗೂ ಆ ತೀರ್ಮಾನಕ್ಕೆ ಬರಲು ಕಾರಣ ವೇನೆಂದು ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಅವರು ಸುದೀರ್ಘ ವಿವರಣೆಯನ್ನೂ ನೀಡಿದ್ದಾರೆ.
ಮೊನ್ನೆ ಅಮಿತ್ ಶಾ ನೇತೃತ್ವದ ‘‘ರಾಜ್ ಭಾಷಾ ಅನುಷ್ಠಾನದ ಬಗೆಗಿನ ಸಂಸದೀಯ ಸಮಿತಿ’’ ರಾಷ್ಟ್ರಪತಿಗಳಿಗೆ ತನ್ನ ವರದಿಯನ್ನು ಸಲ್ಲಿಸಿದೆ. ಅದು ತನ್ನ ವರದಿಯಲ್ಲಿ ಹಿಂದಿ ಭಾಷಿಕ ಪ್ರದೇಶಗಳ ಆಡಳಿತದಲ್ಲಿ ಮತ್ತು ಕೇಂದ್ರೀಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಇಂಗ್ಲಿಷ್ ಬಳಕೆಯನ್ನು ಪೂರ್ಣವಾಗಿ ನಿಲ್ಲಿಸಿ ಹಿಂದಿಯ ಬಳಕೆಯನ್ನು ಪೂರ್ಣವಾಗಿಸಲು ತ್ವರಿತ ಕ್ರಮ ತೆಗೆದುಕೊಳ್ಳಬೇಕು ಒಳಗೊಂಡಂತೆ ನೂರಕ್ಕೂ ಹೆಚ್ಚು ಶಿಫಾರಸುಗಳನ್ನು ಮಾಡಿದೆ. ಇದು ಹಿಂದಿ ಯೇತರ ರಾಜ್ಯಗಳಲ್ಲಿ ದಿಗಿಲನ್ನು ಹುಟ್ಟಿಸಿದೆ. ಏಕೆಂದರೆ ಕೇಂದ್ರೀಯ ಸಂಸ್ಥೆಗಳಲ್ಲಿ ಹಿಂದಿಯನ್ನು ಪ್ರಧಾನಗೊಳಿಸಿದರೆ ಅಂಥ ಸಂಸ್ಥೆಗಳಲ್ಲಿ ಹಿಂದಿಯೇತರ ಭಾಷಿಕರ ಪ್ರವೇಶ ಅಸಾಧ್ಯವಾಗುತ್ತದೆ. ಇದು ಭಾರತ ದೇಶದಲ್ಲಿ ಕ್ರಮೇಣವಾಗಿ ಹಿಂದಿಯೇತರರನ್ನು ದ್ವಿತೀಯ ದರ್ಜೆ ಭಾಷಿಕರನ್ನಾಗಿ ಮಾಡುವ ಸಂಚೆಂದೇ ಪರಿಗಣಿಸಲಾಗುತ್ತಿದೆ. ಹೀಗಾಗಿ ಈ ಕ್ರಮವನ್ನು ವಿರೋಧಿಸಿ ತಮಿಳುನಾಡು ಮತ್ತು ಕೇರಳ ಸರಕಾರಗಳು ಪ್ರಧಾನಿಗೆ ಪತ್ರ ಬರೆದಿವೆ. ಆದರೆ ಸಂಘಪರಿವಾರದ ನಮ್ಮ ‘ಬೊಂಬಾಯಿ’ ಸರಕಾರ ಬಾಯಿ ಮುಚ್ಚಿಕೊಂಡು ಕೂತಿದೆ. ಹಾಗೆ ನೋಡಿದರೆ ಹಿಂದಿ ಹೇರಿಕೆ ಕೇವಲ ಭಾಷಾ ಹೇರಿಕೆಯ ಸಮಸ್ಯೆ ಅಲ್ಲವೇಅಲ್ಲ. ಅದು ನಮ್ಮ ರಾಷ್ಟ್ರನಿರ್ಮಾಣದಲ್ಲೇ ಅಡಕವಾಗಿರುವ ಸಮಸ್ಯೆಯ ಪ್ರತಿಫಲನವಾಗಿದೆ.
ಹಿಂದಿಯೇತರ ಭಾಷೆಗಳ ಅಸ್ಮಿತೆ ಭಾರತದ ಐಕ್ಯತೆಗೆ ಗಂಡಾಂತರವೇ?
ಉದಾಹರಣೆಗೆ ಭಾರತದ ಸಂವಿಧಾನದಲ್ಲಿ ಹಿಂದಿಗೆ ನೀಡಲಾಗಿರುವ ರಾಜ ಮರ್ಯಾದೆಯನ್ನು ನೋಡಿ. ಹಿಂದಿಯೇತರ ಇತರ ಭಾರತೀಯ ಭಾಷೆಯ ಬಗೆಗಿನ ಎಲ್ಲಾ ವಿಷಯಗಳು ಸಂಸ್ಕೃತಿ ಮತ್ತು ಶಿಕ್ಷಣ ಇಲಾಖೆಗಳ ಭಾಗವಾಗಿ ನಿರ್ವಹಿಸಲ್ಪಟ್ಟರೆ ರಾಜ್ಭಾಷಾ ಅರ್ಥಾತ್ ಹಿಂದಿ ಭಾಷಾ ಅನುಷ್ಠಾನದ ವಿಷಯವು ಮಾತ್ರ ಗೃಹ ಇಲಾಖೆಯು ಅರ್ಥಾತ್ ದೇಶದ ಭದ್ರತೆಯನ್ನು ನಿರ್ವಹಿಸುವ ಇಲಾಖೆಯಡಿ ನಿರ್ವಹಿಸ ಲ್ಪಡುತ್ತದೆ. ಅಂದರೆ ಹಿಂದಿ ಭಾಷೆಯ ಬಳಕೆಯನ್ನು ಈ ದೇಶದ ಸಂವಿಧಾನ ಒಂದು ದೇಶದ ಐಕ್ಯತೆ- ಸಮಗ್ರತೆ ಮತ್ತು ಭದ್ರತೆಯ ವಿಷಯವನ್ನಾಗಿ ಪರಿಗಣಿಸುತ್ತದೆ. ಹೀಗಾಗಿಯೇ ಹಿಂದಿಯೇತರ ಭಾಷಿಕರ ಆತಂಕ ಮತ್ತು ವಿರೋಧಗಳು ಕೂಡ ಭಾಷಿಕ ಸಂವಹನದ ವಿಷಯವಾಗದೆ ದೇಶದ ಭದ್ರತೆಗೆ ಆತಂಕ ತರುವ ವಿಷಯವಾಗಿ ಪರಿಗಣಿಸಲ್ಪಡುತ್ತಿದೆ. ಇದು ನಮ್ಮ ರಾಷ್ಟ್ರ ನಿರ್ಮಣದಲ್ಲಿರುವ ಒಂದು ದೊಡ್ಡ ಪುರ್ವಗ್ರಹದ ಸಂಕೇತವೂ ಆಗಿದೆ.
ಅಷ್ಟು ಮಾತ್ರವಲ್ಲ. ಈ ಹೇರಿಕೆ ಮತ್ತು ಪೂರ್ವಗ್ರಹವನ್ನು ನಮ್ಮ ಸಂವಿಧಾನದ 344ನೇ ವಿಧಿ ಸಂವಿಧಾನಬದ್ಧಗೊಳಿಸುತ್ತದೆ. ಇದರಿಂದ ಹಿಂದಿಯೇತರ ಭಾಷಿಕರು ಸಾಂವಿಧಾನಿಕವಾಗಿಯೇ ದ್ವಿತೀಯ ದರ್ಜೆ ಭಾಷಿಕರಾಗಿ ಸಾಂಸ್ಥಿಕ ತಾರತಮ್ಯಕ್ಕೆ ಗುರಿಯಾಗುವಂತಾಗಿದೆ. ಹೀಗಾಗಿ ಹಿಂದಿ ಹೇರಿಕೆಯೆನ್ನುವುದು ಕೇವಲ ಭಾಷಾ ಹೇರಿಕೆಯ ಸಮಸ್ಯೆ ಯಲ್ಲ. ಅದು ನಮ್ಮ ರಾಷ್ಟ್ರದ ಘಟಕಗಳ ನಡುವಿನ ಸಂಬಂಧದ ವಿಷಯವೂ ಆಗಿದೆ. ಅರ್ಥಾತ್ ಭಾರತ ರಾಷ್ಟ್ರದ ಸಾಂವಿಧಾನಿಕ ರಚನೆಯ ಸಮಸ್ಯೆಯೇ ಆಗಿದೆ. ಭಾರತವು ತನ್ನ ವಿವಿಧ ಭಾಷಿಕ ಹಾಗೂ ಆಡಳಿತಾತ್ಮಕ ಘಟಕಗಳ ನಡುವೆ ಸರಿಸಮದ ಹಾಗೂ ಪರಸ್ಪರ ಸಮ್ಮತಿಯಾಧಾರಿತ ‘ಫೆಡರಲ್’ ಸಂಬಂಧವನ್ನು ಹೊಂದಿದೆಯೇ ಅಥವಾ ಶಾಸನ ಬಲದ ಮೂಲಕ ‘ಹಿಡಿದಿಟ್ಟುಕೊಳ್ಳುವ’ ಏಕಕೇಂದ್ರ ಸ್ವರೂಪದ-ಯೂನಿಯನಿಸ್ಟಿಕ್- ರಚನೆಯನ್ನು ಹೊಂದಿದೆಯೇ ಎನ್ನುವುದೇ ಹಿಂದಿ ಹೇರಿಕೆ, ಕೇಂದ್ರದ ಏಕಾಧಿಪತ್ಯ, ಅಸಮತೋಲಿತ ಅಭಿವೃದ್ಧಿ ಇನ್ನಿತ್ಯಾದಿಗಳ ಹಿಂದಿರುವ ಸಮಸ್ಯೆಯ ಮೂಲ. ಆದ್ದರಿಂದ ಭಾರತದ ಸಂವಿಧಾನ ಸಭೆ ಇದರ ಬಗ್ಗೆ ಯಾವ ಚರ್ಚೆಯನ್ನು ಮಾಡಿ ಯಾವ ತೀರ್ಮಾನಕ್ಕೆ ತಲುಪಿತು, ಸಂವಿಧಾನ ಕರ್ತರು ಅಂದು ವಿಧಿಸಿ ಕೊಟ್ಟ ಸಂವಿಧಾನದ ಕಲಮುಗಳು ಏನು ಹೇಳುತ್ತವೆ ಮತ್ತು 75 ವರ್ಷಗಳ ನಮ್ಮ ಅನುಭವದಲ್ಲಿ ಆ ತೀರ್ಮಾನದ ಪರಿಣಾಮಗಳೇನಾಗಿವೆ ಎಂಬುದನ್ನು ಈಗ ಪರಿಷೀಲನೆಗೆ ಒಡ್ಡಬೇಕಿದೆ. ಸಾರದಲ್ಲಿ ನಮ್ಮ ಒಕ್ಕೂಟವು ‘ಫೆಡರಲ್’ ಹೌದೋ ಅಲ್ಲವೋ ಎಂಬುದೇ ಈ ಪರಾಮರ್ಶೆಯ ಅಡಿಗಲ್ಲು ಆಗಬೇಕಿದೆ. ಈ ವಿಷಯದಲ್ಲಿ ಭಾರತದ ಇತರ ಎಲ್ಲಾ ರಾಜ್ಯಗಳಿಗಿಂತ ತಮಿಳುನಾಡು ಅತ್ಯಂತ ಸೂಕ್ಷ್ಮವಾಗಿದ್ದು ಹಿಂದಿ ಹೇರಿಕೆಯನ್ನು ಒಳಗೊಂಡಂತೆ ಯಾವುದೇ ಬಗೆಯ ಆರ್ಯ-ಭಾರತ ಹೇರಿಕೆಯನ್ನು ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಬಲವಾಗಿ ಪ್ರತಿರೋಧಿಸುತ್ತಾ ಬಂದಿದೆ.
ಒಂದ್ರೀಯ ಮತ್ತು ಕೇಂದ್ರೀಯ
ಕಳೆದ ವರ್ಷ ತಮಿಳುನಾಡಿನಲ್ಲಿ ಸ್ಟಾಲಿನ್ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಡಿಎಂಕೆ ಸರಕಾರ ಇನ್ನು ಮುಂದೆ ಭಾರತ ಸರಕಾರವನ್ನು ಕೇಂದ್ರ ಸರಕಾರ ಎಂದು ಸಂಬೋಧಿಸದೆ ‘ಒಂದ್ರೀಯ ಸರಕಾರ’ - ಯೂನಿಯನ್ ಗವರ್ಮೆಂಟ್ ಎಂದು ಸಂಬೋಧಿಸಬೇಕೆಂದು ಆದೇಶ ಹೊರಡಿಸಿದೆ. ಏಕೆಂದರೆ ಸಂವಿಧಾನದಲ್ಲಿ ಭಾರತ ಸರಕಾರವನ್ನು ಯೂನಿಯನ್ ಗವರ್ನಮೆಂಟ್ ಎಂದು ಗುರುತಿಸಲಾಗಿದೆಯೇ ವಿನಾ ಕೇಂದ್ರ ಸರಕಾರವೆಂದಲ್ಲ ಎಂಬುದು ಅವರ ಪ್ರತಿಪಾದನೆ. ಇದು ನಿಜ ಕೂಡ. ಭಾರತ ಸರಕಾರವನ್ನು ಕೇಂದ್ರ ಸರಕಾರ ಎಂದು ಸಂಬೋಧಿಸದಿರುವುದರ ಹಿಂದೆ ಮೋದಿ ಸರಕಾರದ ಆಳ್ವಿಕೆಯಲ್ಲಿ ಹೆಚ್ಚುತ್ತಿರುವ ಸರ್ವಾಧಿಕಾರಿ ಹಾಗೂ ಕೇಂದ್ರೀಕರಣದ ಧೋರಣೆಯನ್ನು ವಿರೋಧಿಸುವ ಆಶಯವೂ ಅಡಕವಾಗಿದೆ.
ಅದೇ ಸಂದರ್ಭದಲ್ಲಿ ಭಾರತವು ಸಾಂವಿಧಾನಿಕವಾಗಿ ಒಂದು ‘ಫೆಡರಲ್’ - ಒಕ್ಕೂಟ ಸ್ವರೂಪಿ ಸಂವಿಧಾನವೇ ಆಗಿತ್ತು. ಆದರೆ ಮೋದಿ ಸರಕಾರ ವ್ಯವಸ್ಥಿತವಾಗಿ ಹಾಗೂ ಅದರ ಹಿಂದಿನ ಯುಪಿಎ ಸರಕಾರ ಕೂಡ ಯಥಾಶಕ್ತಿ ಅದರ ಒಕ್ಕೂಟ ಸ್ವರೂಪವನ್ನು ತಿದ್ದುತ್ತಾ ಏಕರೂಪಿ ಹಾಗೂ ಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನಾಗಿ ರೂಪಿಸುತ್ತಿದೆ ಎಂಬ ಭಾವನೆಯೂ ಬಲಿಯುತ್ತಿದೆ. ಹೀಗಾಗಿ ಭಾರತ ಸರಕಾರವನ್ನು ಸಂಬೋಧಿಸುವಾಗ ಒಕ್ಕೂಟ- ಫೆಡರಲ್ ಸರಕಾರ ಎಂದು ಸಂಬೋಧಿಸಬೇಕೆ ವಿನಾ ಕೇಂದ್ರ ಸರಕಾರವೆಂದಲ್ಲ ಎಂಬ ಪ್ರತಿಪಾದನೆಯೂ ನಡೆಯುತ್ತಿದೆ.
ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಆಡಳಿತಾತ್ಮಕ, ಸಾಂಸ್ಕೃತಿಕ, ರಾಜಕೀಯ ಏಕರೂಪತೆಯನ್ನು ತರಲು ಹಿಂದಿ ಮತ್ತು ಬ್ರಾಹ್ಮಣೀಯ ಹಿಂದುತ್ವದ ಹೇರಿಕೆ ಹಿಂದೆಂದಿಗಿಂತಲೂ ಹೆಚ್ಚಿನ ಆಕ್ರಮಣಕಾರಿ ಸ್ವರೂಪವನ್ನು ಪಡೆದುಕೊಂಡಿದ್ದರೂ ಅದರ ತಾತ್ವಿಕ ಮೂಲಗಳು ನಮ್ಮ ಸಂವಿಧಾನದಲ್ಲೇ ಇದೆ ಎಂಬುದು ದುರಂತದ ಸಂಗತಿ. ಹಿಂದಿ ಹೇರಿಕೆಯ ಸಾಂವಿಧಾನಿಕ ಬೇರು ಏಕೆಂದರೆ ಭಾರತ ಸಂವಿಧಾನದ ಆರ್ಟಿಕಲ್ 1- ಭಾರತವನ್ನು ಇಂಡಿಯಾ, ಅಂದರೆ ಭಾರತವು ರಾಜ್ಯಗಳ ಯೂನಿಯನ್ ಆಗಿರುತ್ತದೆ (India- That is Bharath, shall be Union Of States ) ಎಂದು ಹೇಳುತ್ತದೆ. ಆನಂತರದಲ್ಲೂ ಸಂವಿಧಾನದಲ್ಲಿ ಎಲ್ಲಿಯೂ ಭಾರತ ಸರಕಾರವನ್ನು ಸೂಚಿಸು ವಾಗ ಕೇಂದ್ರ ಸರಕಾರ ಎಂದೂ ಗುರುತಿಸಿಲ್ಲ ಎಂಬುದು ಎಷ್ಟು ನಿಜವೋ ಒಕ್ಕೂಟಸರಕಾರ- ಫೆಡರಲ್ ಸರಕಾರ ಎಂತಲೂ ಸೂಚಿಸಿಲ್ಲ ಎಂಬುದೂ ಅಷ್ಟೇ ನಿಜ. ಭಾರತದ ಸಂವಿಧಾನ ಭಾರತವನ್ನು ಯೂನಿಯನ್ ಎಂದು ಮಾತ್ರ ನಮೂದಿಸಿದೆ ಹಾಗೂ ಯೂನಿಯನ್ ಎಂದರೆ ಫೆಡರಲ್ ಎಂದರ್ಥವಲ್ಲ! ಇದೇ ಸಮಸ್ಯೆಯ ಮೂಲವೂ ಆಗಿದೆ. ಹಾಗಿದ್ದಲ್ಲಿ ಭಾರತ ಸಂವಿಧಾನದಲ್ಲಿ ಪ್ರಸ್ತಾವವಾಗಿರುವ ಯೂನಿಯನ್ನ ಅರ್ಥವೇನು? ಭಾರತದ ಸಂವಿಧಾನದ ಸ್ವರೂಪವೇನು? ಮೋದಿ ಸರಕಾರ ದಲ್ಲಿ ಹೆಚ್ಚುತ್ತಿರುವ ಸರ್ವಾಧಿಕಾರಿ ಧೋರಣೆಗಳಿಗೆ ಸಾಂವಿಧಾನಿಕ ಮಾನ್ಯತೆ ಯಿದೆಯೇ? ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಅವರು ಸಂವಿಧಾನದ ಮೂಲಕವೇ ಸರ್ವಾಧಿಕಾರಿ ಹಿಂದೂರಾಷ್ಟ್ರ ತರುವ ಮಾತುಗಳನ್ನಾಡುತ್ತಿ ದ್ದಾರೆಯೇ? ಹಾಗಿದ್ದಲ್ಲಿ ಯೂನಿಯನ್ ಅನ್ನು ಒಕ್ಕೂಟ ಎಂದು ಭಾಷಾಂತರ ಮಾತ್ರ ಮಾಡಿಕೊಂಡು ಸಮಾಧಾನಿಸಿಕೊಳ್ಳುವುದು ಐತಿಹಾಸಿಕವಾಗಿ ಹಾಗೂ ಆಗಬೇಕಿರುವ ಬದಲಾವಣೆಯ ದೃಷ್ಟಿಯಿಂದ ಸರಿಯಾದ ರಾಜಕೀಯ ನಡೆಯಾಗುತ್ತದೆಯೇ?
ಇವೆಲ್ಲದಕ್ಕೂ ಸರಿಯಾದ ಉತ್ತರವನ್ನು ಕಂಡುಕೊಳ್ಳಬೇಕೆಂದರೆ ಆಧುನಿಕ ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಪ್ರಜಾತಾಂತ್ರಿಕ ಸಂವಿಧಾನದ ಮಾದರಿಗಳನ್ನೂ, ಭಾರತದ ಸಂವಿಧಾನ ರಚನೆಯಾಗುತ್ತಿದ್ದಾಗ ಇದ್ದ ಸಂದರ್ಭವನ್ನೂ ಹಾಗೂ ಈ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳ ಸಾರವನ್ನು ಗಮನಿಸಬೇಕಾಗುತ್ತದೆ.
ಒಪ್ಪಂದದ ಒಕ್ಕೂಟ ಮತ್ತು ಬಲವಂತದ ಕೂಟ
ಫೆಡರಲ್- ಎಂಬ ಪದದ ಮೂಲ Foedus ಎಂಬ ಲ್ಯಾಟಿನ್ ಪದವಾಗಿದ್ದು ಒಪ್ಪಂದ ಎಂಬ ಅರ್ಥವನ್ನು ಕೊಡುತ್ತದೆ. ಹೀಗಾಗಿ ಹಲವು ಭಿನ್ನ ಘಟಕಗಳು ಪರಸ್ಪರ ಒಪ್ಪಂದದ ಮೂಲಕ ಒಗ್ಗೂಡಿ ಏರ್ಪಡುವ ಘಟಕವನ್ನು ಫೆಡರಲ್- ಒಕ್ಕೂಟ ಎಂದು ಕರೆಯಲಾಗುತ್ತದೆ. ಇಲ್ಲಿ ಭಿನ್ನ ಘಟಕಗಳು ಒಪ್ಪಂದದ ಆಧಾರದ ಮೇಲೆ ಒಗ್ಗೂಡಲು ಮುಂದೆಬರುತ್ತವೆ (Coming Together). ಹಾಗೂ ಅಂಥ ಏರ್ಪಾಡಿನಲ್ಲಿ ಭಿನ್ನ ಘಟಕಗಳಿಗೆ ಅತಿ ಹೆಚ್ಚು ಸ್ವಾಯತ್ತತೆ ಇರುತ್ತದೆ.
ಆದರೆ ಕೆಲವೊಮ್ಮೆ ಹಲವು ಭಿನ್ನ ಘಟಕಗಳನ್ನು ಒಂದಾಗಿ ‘ಹಿಡಿದಿಡಲಾ ಗುತ್ತದೆ’ (Holding Together). ಅಲ್ಲಿ ಒಪ್ಪಂದವಿರು ವುದಿಲ್ಲ. ಹೀಗಾಗಿ ಅಲ್ಲಿನ ಉಪ ಘಟಕಗಳಿಗೆ ಫೆಡರಲ್ ಸ್ವರೂಪದ ರಚನೆಗಳಲ್ಲಿರುವಷ್ಟು ಸ್ವಾಯತ್ತತೆ ಇರುವುದಿಲ್ಲ.
ಆಧುನಿಕ ಜಗತ್ತಿನ ಇತಿಹಾಸದಲ್ಲಿ ಫೆಡರಲ್ ಸಂವಿಧಾನಗಳಿಗೆ ಅತಿ ದೊಡ್ಡ ಉದಾಹರಣೆ ಅಮೆರಿಕ ಸಂಯುಕ್ತ ಸಂಸ್ಥಾನದ ಫೆಡರಲ್ ಒಕ್ಕೂಟ. ಅಲ್ಲಿ ವಿವಿಧ ಪ್ರಾಂತೀಯ ಘಟಕಗಳು ಪೂರ್ವ ಶರತ್ತು ಹಾಗೂ ಪೂರ್ವ ಒಪ್ಪಂದಗಳ ಅನ್ವಯ ಒಂದು ಫೆಡರಲ್ ಒಕ್ಕೂಟವಾಗಿ ಏರ್ಪಟ್ಟವು. ಹೀಗಾಗಿ ಅಲ್ಲಿನ 50 ಭಿನ್ನ ರಾಜ್ಯಗಳು ಸಂಪೂರ್ಣ ಸ್ವಾಯತ್ತತೆಯನ್ನು ಹೊಂದಿವೆ. ಅಮೆರಿಕದ ಫೆಡರಲ್ ಸರಕಾರ ಕೊಡುವ ನಾಗರಿಕತ್ವದ ಜೊತೆಗೆ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಪ್ರತ್ಯೇಕ ನಾಗರಿಕತ್ವವನ್ನು ಕೊಡುತ್ತದೆ. ಹಾಗೆಯೇ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಪ್ರತ್ಯೇಕ ಚುನಾವಣಾ ವ್ಯವಸ್ಥೆ ಹಾಗೂ ಆಯೋಗವನ್ನು ಹೊಂದಿದೆ. ಒಕ್ಕೂಟ ಸರಕಾರಕ್ಕೆ ಸೀಮಿತ ಅಧಿಕಾರವಿದೆ. ಸಂವಿಧಾನದಲ್ಲಿ ಹೇಳದೆ ಉಳಿದು ಹೋದ ಅಥವಾ ಹೊಸದಾಗಿ ಉದ್ಭವಿಸುವ ವಿಷಯಗಳ ಮೇಲೆ ಶಾಸನ ಮಾಡುವ ಅಂತಿಮ ಅಧಿಕಾರ ರಾಜ್ಯಗಳಿಗೇ ನೀಡಲಾಗಿದೆ. ರಾಜ್ಯಗಳ ಗಡಿಗಳ ಮೇಲೆ ಪರಮಾಧಿಕಾರವೂ ಆಯಾ ರಾಜ್ಯಗಳದ್ದೇ ಆಗಿದೆ.
ಹಾಗೆಯೇ ಈ ಹಿಂದಿನ ಸೋವಿಯತ್ ಗಣರಾಜ್ಯಗಳ ಒಕ್ಕೂಟವೂ ತನ್ನ ಘಟಕಗಳಿಗೆ ಸಂವಿಧಾನದಲ್ಲಿ ಸಂಪೂರ್ಣ ಸ್ವಾಯತ್ತೆಯನ್ನು ಘೋಷಿಸಿತ್ತು ಮತ್ತು ಸ್ವನಿರ್ಣಯ ಅಧಿಕಾರದ ಜೊತೆಗೆ ಒಕ್ಕೂಟದಿಂದ ಬೇರ್ಪಡುವ ಹಕ್ಕು ಆ ಸಂವಿಧಾನದಲ್ಲಿ ಅಂತರ್ಗತವಾಗಿತ್ತು.
ಇದರ ಜೊತೆಗೆ ಕೆನಡ ಮತ್ತು ಸ್ವಿಟ್ಸರ್ಲ್ಯಾಂಡ್ ಸಂವಿಧಾನಗಳು ಯೂನಿಯನ್ ಎಂಬ ಹೆಸರಿಟ್ಟುಕೊಂಡಿದ್ದರೂ ಪರಿಪೂರ್ಣ ಫೆಡರಲ್ ಸಂವಿಧಾನಗಳಾಗಿವೆ. ಆಸ್ಟ್ರೇಲಿಯಾ ಕೂಡ ಒಕ್ಕೂಟದ ಪಟ್ಟಿಗೆ ಸೇರಿಕೊಳ್ಳುತ್ತವೆ. ಆದರೆ ವರ್ಣಭೇದದ ದ.ಆಫ್ರಿಕ ಸಂವಿಧಾನ ಇದಕ್ಕೆ ತದ್ವಿರುದ್ಧವಾಗಿ ಭಿನ್ನಘಟಕಗಳನ್ನು ಒಗ್ಗೂಡಿಸಿ ಮಾಡಿದ ಯೂನಿಯನ್ ಆಗಿತ್ತು.
ಭಾರತ ಸಂವಿಧಾನ ಸಭೆಯ ದ್ವಂದ್ವ ದುರಂತಗಳು
ಭಾರತವು ಸ್ವತಂತ್ರಗೊಂಡು ತನ್ನದೇ ಆದ ಸಂವಿಧಾನವನ್ನು ರಚಿಸಿಕೊಳ್ಳಲು ಸಭೆ ಸೇರುವ ಹೊತ್ತಿನಲ್ಲಿ ಭಾರತದ ಮುಂದೆ ಈ ಮೇಲಿನ ಉದಾಹರಣೆಗಳಿದ್ದವು.
ಸ್ವಾತಂತ್ರ ಹೋರಾಟದುದ್ದಕ್ಕೂ ಭಾರತವನ್ನು ಒಂದು ನೈಜವಾದ ‘ಫೆಡರಲ್ ರಿಪಬ್ಲಿಕ್’ (ಒಕ್ಕೂಟ ಗಣರಾಜ್ಯ)ಆಗಿ ರೂಪಿಸಲಾಗುವುದೆಂಬ ಭರವಸೆಯನ್ನೇ ಜನತೆಗೆ ನೀಡಲಾಗಿತ್ತು. ಆದರೆ ಭಾರತದ ಸಂವಿಧಾನ ಸಭೆಯು ಕರಡು ಸಂವಿಧಾನದ ಚರ್ಚೆಯನ್ನು ಕೈಗೆತ್ತಿಕೊಳ್ಳುವ ವೇಳೆಗೆ ಭಾರತದ ವಿಭಜನೆ ಯಾಗಿತ್ತು. ಹೀಗಾಗಿ ಒಂದು ಬಲವಾದ ಕೇಂದ್ರ ಸರಕಾರವಿರಬೇಕೆಂಬ ಧೋರಣೆಯೂ ಬಲಪಡೆದುಕೊಂಡಿತ್ತು.
ಭಾರತದ ಸಂವಿಧಾನ ಸಭೆಯಲ್ಲಿ 1948ರ ನವೆಂಬರ್ 15-18ರ ವರೆಗೆ ಆರ್ಟಿಕಲ್ 1ರ ಬಗ್ಗೆ ಚರ್ಚೆ ನಡೆಯಿತು. ಅದಕ್ಕೂ ಪೂರ್ವಭಾವಿಯಾಗಿ ಕರಡುರಚನೆಗೆ ಮುನ್ನ ನಡೆದ ಸಭೆಯಲ್ಲಿ ಭಾರತವನ್ನು ಒಂದು ಫೆಡರಲ್ ರಿಪಬ್ಲಿಕ್ ಆಗಿ ರೂಪಿಸಬೇಕೆಂಬ ಪ್ರಸ್ತಾವವನ್ನೇ ಮಾಡಲಾಗಿತ್ತು. ಆದರೆ ಕರಡಿನಲ್ಲಿ ಅದು ‘ರಾಜ್ಯಗಳ ಯೂನಿಯನ್’ ಎಂದು ಬದಲಾಗಿತ್ತು. ಕರಡು ರಚನಾ ಸಭೆಯಲ್ಲಿ ಇದಕ್ಕೆ ಹಲವಾರು ತಿದ್ದುಪಡಿಗಳೂ ಪ್ರಸ್ತಾವವಾಗಿದ್ದವು. -ಅದರಲ್ಲಿ ಮುಖ್ಯವಾಗಿ ಬಲಪಂಥೀಯ ಧೋರಣೆಯ ಎಚ್.ವಿ. ಕಾಮತ್ ಅವರು ರಾಜ್ಯಗಳನ್ನು ರಾಜ್ಯಗಳೆಂದು ಕರೆಯದೇ ‘ಪ್ರದೇಶ’ ಎಂದು ಕರೆಯಬೇಕೆಂದು ಪ್ರಸ್ತಾವಿಸಿದ್ದರು. -ಇದರ ಜೊತೆಗೆ ರಾಜ್ಯ ಅಥವಾ ಪ್ರದೇಶ ಎಂಬ ಘಟಕಗಳನ್ನೂ ಪ್ರಸ್ತಾವಿಸದೆ ಕೇವಲ ಭಾರತ ಗಣರಾಜ್ಯ ಎಂದು ಹೆಸರಿಸಬೇಕೆಂಬ ತಿದ್ದುಪಡಿಗಳನ್ನೂ ಮಂಡಿಸಲಾಯಿತು.
-ಕೆ.ಟಿ.ಶಾ ಅವರು ಭಾರತವನ್ನು “Secular, Federal, Socialistic Union Of States” (ರಾಜ್ಯಗಳ ಸೆಕ್ಯುಲರ್, ಫೆಡರಲ್ ಮತ್ತು ಸಮಾಜವಾದಿ ಯೂನಿಯನ್) ಎಂದು ಕರೆಯಬೇಕೆಂದು ಪ್ರತಿಪಾದಿಸಿದ್ದರು.
-ಮೌಲಾನಾ ಹಝ್ರತ್ ಮೊಹಾನಿ ಎಂಬ ಸಂವಿಧಾನ ರಚನಾ ಸಭೆಯ ಧರ್ಮಬೀರು ಕಮ್ಯುನಿಸ್ಟ್ ಸದಸ್ಯರು ಭಾರತವನ್ನು ಸೋವಿಯತ್ ಗಣರಾಜ್ಯದ ರೀತಿಯಲ್ಲಿ Union Of Indian Socilaistic Republics” (ಸಮಾಜವಾದಿ ಗಣರಾಜ್ಯಗಳ ಭಾರತೀಯ ಯೂನಿಯನ್) ಆಗಬೇಕೆಂದು ಪ್ರತಿಪಾದಿಸಿದ್ದರು.
ಅಂದರೆ ಭಾರತ ಯೂನಿಯನ್ನ್ನೊಳಗಿನ ಪ್ರತಿಯೊಂದು ರಾಜ್ಯವೂ ಸ್ವಾಯತ್ತ ಸಮಾಜವಾದಿ ಗಣರಾಜ್ಯಗಳಾಗಿದ್ದು ಒಕ್ಕೂಟದೊಳಗಿನ ಸಮಭಾಗಿ ಘಟಕಗಳಾಗಿರಬೇಕು ಎಂಬುದು ಅವರ ಒತ್ತಾಸೆಯಾಗಿತ್ತು. ಭಾರತದ ಸಂವಿಧಾನ ರಚನೆಯನ್ನು ಮಾಡುವಾಗ ಅಮೆರಿಕ, ಆಸ್ಟ್ರೇಲಿಯ, ಕೆನಡ, ಐರ್ಲ್ಯಾಂಡ್ ಸಂವಿಧಾನಗಳನ್ನು ಪರಿಷೀಲಿಸಿದಷ್ಟು ಸೋವಿಯತ್ ಒಕ್ಕೂಟದ ಸಂವಿಧಾನವನ್ನು ಪರಿಷೀಲಿಸಲಾಗಿಲ್ಲವೆಂಬುದು ಅವರ ಬಲವಾದ ಆಕ್ಷೇಪಣೆಯೂ ಆಗಿತ್ತು.
ಇಷ್ಟೆಲ್ಲಾ ಪ್ರತಿಪಾದನೆಗಳ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿ ಚರ್ಚೆ ನಡೆದು ಪ್ರಜ್ಞಾಪೂರ್ವಕವಾಗಿ ಅಂದಿನ ಸಂವಿಧಾನ ಸಭೆ:
‘ಭಾರತವನ್ನು ಒಂದು ಫೆಡರಲ್ ಒಕ್ಕೂಟವೆಂದು ಕರೆಯದೇ ಯೂನಿಯನ್ ಎಂದು ಕರೆಯಲು ತೀರ್ಮಾನಿಸಿತು’ ಹಾಗೂ ಆ ತೀರ್ಮಾನಕ್ಕೆ ಬರಲು ಕಾರಣ ವೇನೆಂದು ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಅವರು ಸುದೀರ್ಘ ವಿವರಣೆಯನ್ನೂ ನೀಡಿದ್ದಾರೆ.
ಭಾರತವೆಂಬ ಹಿಡಿದಿಟ್ಟ ಸಂಸ್ಥಾನಗಳ ಕೂಟ:
ಸಂವಿಧಾನ ರಚನಾ ಸಭೆಯ ಪ್ರಕಾರ ಭಾರತವನ್ನು ಉದ್ದೇಶಪೂರ್ವಕವಾಗಿಯೇ ಫೆಡರಲ್ ಎಂದು ಕರೆಯದೇ ಯೂನಿಯನ್ ಎಂದು ಕರೆಯಲಾಗಿದೆ.
ಏಕೆಂದರೆ:
-ಭಾರತ ಒಕ್ಕೂಟವು ಅಮೆರಿಕದಂತೆ ಅದರ ಭಿನ್ನ ಘಟಕಗಳೊಡನೆ ಆದ ಪೂರ್ವ ಒಪ್ಪಂದದಂತೆ ಅಸ್ತಿತ್ವಕ್ಕೆ ಬಂದ ಗಣರಾಜ್ಯವಲ್ಲ.
-ಭಾರತ ಗಣರಾಜ್ಯಗಳೊಳಗಿನ ರಾಜ್ಯ ಘಟಕಗಳಿಗೆ ಭಾರತದಿಂದ ಬೇರ್ಪಡುವ ಸ್ವಾತಂತ್ರವಿಲ್ಲ.
-ಸಂವಿಧಾನದಲ್ಲಿ ಅಳಿದುಳಿದ (ರೆಸಿಡ್ಯುಅಲ್) ಅಧಿಕಾರವು ಯೂನಿಯನ್ ಸರಕಾರಕ್ಕಿರುತ್ತದೆಯೇ ವಿನಾ ರಾಜ್ಯ ಸರಕಾರಗಳಿಗಲ್ಲ. ಮತ್ತು
-ರಾಜ್ಯಗಳ ಗಡಿಯನ್ನು ಬದಲಿಸುವ ಸಾರ್ವಭೌಮಿ ಅಧಿಕಾರ ಯೂನಿಯನ್ ಸರಕಾರಕ್ಕಿರುತ್ತದೆಯೇ ವಿನಾ ರಾಜ್ಯಗಳಿಗಲ್ಲ. ಅರ್ಥಾತ್ ಭಾರತವು ಬದಲಿಸಲಾಗದ ರಾಜ್ಯಗಳ ಬದಲಿಸಲಾಗದ ಯೂನಿಯನ್ ಅಲ್ಲ.
ಬದಲಿಗೆ ಬದಲಿಸಬಹುದಾದ ರಾಜ್ಯಗಳ ಆದರೆ ಬದಲಿಸಲಾಗದ ಯೂನಿಯನ್ ಆಗಿರುತ್ತದೆ.
ಇದರ ಜೊತೆಗೆ ಸ್ವತಂತ್ರವಾಗಿ ತೆರಿಗೆ ವಿಧಿಸುವ ಹಾಗೂ ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ನೇರ ಸಾರ್ವಭೌಮಿ ಅಧಿಕಾರ ಪಡೆದುಕೊಂಡಿರುವ ಘಟಕಗಳನ್ನುಳ್ಳ ಅರೆ ಫೆಡರಲ್ ಸ್ವರೂಪವನ್ನೂ ಸಂವಿಧಾನದಲ್ಲಿ ಅಡಕಗೊಳಿಸ ಲಾಯಿತು.
ಅದರ ಭಾಗವಾಗಿಯೇ ಏಳನೇ ಶೆಡ್ಯೂಲಿನಲ್ಲಿ ಯೂನಿಯನ್ ಸರಕಾರಕ್ಕಿರುವ ಅಧಿಕಾರ, ರಾಜ್ಯಗಳಿಗಿರುವ ಅಧಿಕಾರವನ್ನು ಸ್ಪಷ್ಟಪಡಿಸುವ ಬಾಬತ್ತುಗಳನ್ನು ಸಂವಿಧಾನದಲ್ಲೇ ಸೇರಿಸಲಾಯಿತು. ಆದರೆ ಅದರ ಜೊತೆಗೆ ಯೂನಿಯನ್ನ ಮಧ್ಯಪ್ರವೇಶವನ್ನು ಹಿಂಬಾಗಿಲಿಂದ ಹೆಚ್ಚಿಸುವ ಸಮವರ್ತಿ ಪಟ್ಟಿಯನ್ನು ಸೇರಿಸಲಾಯಿತು!
ಅಂಬೇಡ್ಕರ್ ಅವರ ಮಾತುಗಳಲ್ಲೇ ಹೇಳುವುದಾದರೆ:
‘‘ಸಂವಿಧಾನದಲ್ಲಿ ನಿಗದಿಪಡಿಸಿದ ಕ್ಷೇತ್ರಗಳಲಿ ಸಾಂವಿಧಾನಿಕ ಅಧಿಕಾರಗಳನ್ನು ಪಡೆದಿರುವ ಯೂನಿಯನ್ ಸರಕಾರವು ಕೇಂದ್ರದಲ್ಲಿಯೂ ಹಾಗೂ ರಾಜ್ಯ ಸರಕಾರಗಳನ್ನೂ ಅಂಚಿನಲ್ಲಿಯೂ ಹೊಂದಿರುವ ಒಕ್ಕೂಟ ಸ್ವರೂಪವನ್ನು ಭಾರತದ ಯೂನಿಯನ್ ಹೊಂದಿದೆ’’.
ಹೀಗಾಗಿ ದಿಲ್ಲಿ ದರ್ಬಾರನ್ನು ಕೇಂದ್ರ ಸರಕಾರ ಎಂದರೂ ಅಥವಾ ಯೂನಿಯನ್ ಸರಕಾರ ಎಂದರೂ ಸಾಂವಿಧಾನಿಕವಾಗಿ ತಪ್ಪೇನಿಲ್ಲ. ಯೂನಿಯನ್ ಎಂದು ಕರೆದ ಮಾತ್ರಕ್ಕೆ ಅದರ ಏಕಾಧಿಪತ್ಯ ಸ್ವರೂಪ ಬದಲಾಗುವುದಿಲ್ಲ. ಆದರೆ, ಕೇಳಬೇಕಿರುವುದು ಕೇಂದ್ರದಲ್ಲಿರುವುದು ಕೇಂದ್ರೀಕೃತವಾದ ಸರ್ವಾಧಿಕಾರವನ್ನು ಹೊಂದಿರುವ ಅಥವಾ ಹೊಂದುತ್ತಿರುವ ಸರಕಾರವೋ ಮತ್ತು ಅದಕ್ಕೆ ಸಾಂವಿಧಾನಿಕ ಮಾನ್ಯತೆ ಇದೆಯೇ ಎಂಬ ಪ್ರಶ್ನೆಗಳನ್ನು..
ಅದೇ ಚರ್ಚೆಯಲ್ಲಿ ಅಂಬೇಡ್ಕರ್ ಅವರು: ‘‘ಇಂದಿನ ಆಧುನಿಕ ಜಾಗತಿಕ ಸಂದರ್ಭದಲ್ಲಿ ನೀವು ಎಷ್ಟೇ ಬೇಡವೆಂದರೂ ಕೇಂದ್ರವು ಹೆಚ್ಚಿನ ಅಧಿಕಾರ ಪಡೆಯುವುದನ್ನು ತಡೆಯಲು ಸಾಧ್ಯವಿಲ್ಲ. ಏಕೆಂದರೆ ಆಧುನಿಕ ಜಗತ್ತಿನ ಸಂದರ್ಭವೇ ಹೆಚ್ಚಿನ ಕೇಂದ್ರೀಕರಣದ ಕಡೆಗಿದೆ’’ ಎಂದು ವಿವರಿಸುತ್ತಾರೆ. ಹೆಚ್ಚಿನ ವಿವರಗಳನ್ನು ಆಸಕ್ತರು ಸಂವಿಧಾನ ರಚನಾ ಸಭೆಯಲ್ಲಿ ಈ ಬಗ್ಗೆ ನಡೆದ ಚರ್ಚೆಗಳಿರುವ ಈ ವೆಬ್ ಸೈಟನ್ನು ಸಂದರ್ಶಿಸಬಹುದು :
ಈಗಾಗಲೇ ಚರ್ಚಿಸಿದಂತೆ ಸಂವಿಧಾನ ಸಭೆಯು ಕರಡು ಚರ್ಚೆಯನ್ನು ಕೈಗೆತ್ತಿಕೊಳ್ಳುವವೇಳೆಗೆ ದೇಶವಿಭಜನೆಯ ಕರಾಳ ನೆರಳು ಸದಸ್ಯರ ಮನಸ್ಸನ್ನು ಆವರಿಸಿತ್ತು. ಹೀಗಾಗಿ ಹೊಸದಾಗಿ ಅಸ್ತಿತ್ವಕ್ಕೆ ಬರುತ್ತಿರುವ ಭಾರತವು ಬಲವಾದ ಕೇಂದ್ರ ಸರಕಾರವಿಲ್ಲದೆ ಉಳಿಯುವುದು ಅಸಾಧ್ಯ ಎಂಬ ಗ್ರಹಿಕೆ ವ್ಯಾಪಕವಾಗಿತ್ತು. ಅದು ಇಡೀ ಭಾರತವನ್ನು ಇಡಿಯಾದ ಮಾರುಕಟ್ಟೆಯಾಗಿ ಪಡೆಯಬಯಸಿದ ಭಾರತದ ಬಂಡವಾಳಶಾಹಿಗಳನ್ನೂ ಒಳಗೊಂಡಂತೆ ಆಳುವವರ್ಗಗಳ ಹಿತಾಸಕ್ತಿಯೂ ಆಗಿತ್ತು. ಹೀಗಾಗಿ ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆಯನ್ನು ಕೇಳುವವರೂ ಹಾಗೂ ಮೈನಾರಿಟಿಗಳಿಗೆ ಹೆಚ್ಚಿನ ಹಕ್ಕುಗಳನ್ನು ಕೇಳುವವರ ಧ್ವನಿ ಅಮಾನ್ಯಗೊಂಡಿತ್ತು.
ಆದಷ್ಟು ಬೇಗ ಭಾರತವು ಭಿನ್ನತೆಗಳಿಲ್ಲದ ಒಂದೇ ದೇಶವಾಗಿ ರೂಪುಗೊಳ್ಳುವುದು ಅತ್ಯಗತ್ಯವೆಂಬುದು ಅಂದಿನ ಸಂವಿಧಾನಕರ್ತರ ಪ್ರಧಾನ ಧೋರಣೆಯಾಗಿತ್ತು.
ಅಂಬೇಡ್ಕರ್ ಅವರ ಮಾತಿನಲ್ಲೇ ಹೇಳುವುದಾದರೆ:
‘‘ಬಿಸ್ಮಾರ್ಕನ ನೇತೃತ್ವದಲ್ಲಿ 1870ರಲ್ಲಿ ಜರ್ಮನಿಯು ಒಂದು ದೇಶವಾಗಿ ರೂಪುಗೊಳ್ಳುವ ಸಂದರ್ಭದಲ್ಲಿ ಜರ್ಮನಿಯೊಳಗೆ 25 ಭಿನ್ನ ಘಟಕಗಳಿದ್ದವು. ಅದರಲ್ಲಿ ಮೂರು ಮಾತ್ರ ಗಣರಾಜ್ಯ. ಉಳಿದದ್ದೆಲ್ಲ ರಾಜ ಸಂಸ್ಥಾನಗಳು. ಆದರೆ ಕ್ರಮೇಣ ಐತಿಹಾಸಿಕ ಪ್ರಕ್ರಿಯೆಯಲ್ಲಿ ಅವೆಲ್ಲವೂ ಜರ್ಮನಿಯೊಳಗೆ ವಿಲೀನಗೊಂಡು ಜರ್ಮನಿ ಒಂದೇ ದೇಶವಾಯಿತು. ಭಾರತದಲ್ಲಿ ಈ ಸಂವಿಧಾನ ಮುಖೇನ ಆ ಪ್ರಕ್ರಿಯೆ ಇನ್ನೂ ತ್ವರಿತವ�