ಡಾಲರ್-ರೂಪಾಯಿ ಏರಿಳಿತದ ಆತಂಕ
ಜನಧ್ವನಿ
ಡಾಲರ್ ಬೆಲೆ ಅಧಿಕಗೊಳ್ಳುತ್ತಿದ್ದರೂ ರೂಪಾಯಿ ಬೆಲೆ ಕುಸಿದಿಲ್ಲ ಎಂಬ ಹಣಕಾಸು ಸಚಿವರ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಡಾಲರ್ ಬೆಲೆಗೆ ಸರಿಸಮಾನವಾಗಿ ರೂಪಾಯಿ ಬೆಲೆ ಕುಸಿಯುತ್ತಿರುವುದು ಎಲ್ಲರ ಗಮನಕ್ಕೆ ಬಂದಿರುವ ಸಂಗತಿ. ಆದರೆ ಅದನ್ನು ಹಣಕಾಸು ಸಚಿವರು ಸಮರ್ಥಿಸಿಕೊಳ್ಳುವುದು ಸರಿಯಲ್ಲ ಎಂಬುದು ಹಲವರ ವಾದ. ಇದನ್ನು ಕೆಲವು ಆರ್ಥಿಕ ತಜ್ಞರು ಒಪ್ಪುತ್ತಿಲ್ಲ. ಹಣಕಾಸು ಸಚಿವರು ಆರ್ಥಿಕ ಪರಿಭಾಷೆಯಲ್ಲಿ ಹೇಳಿದ್ದಾರೆ. ಡಾಲರ್ ಬೆಲೆ ಅಧಿಕಗೊಳ್ಳಲು ಹಲವು ಕಾರಣಗಳಿವೆ. ಅದರಲ್ಲಿ ಪ್ರಮುಖ ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರ ಹೆಚ್ಚಿಸಿರುವುದು. ಇದರಿಂದ ಜಾಗತಿಕ ಮಟ್ಟದಲ್ಲಿ ಡಾಲರ್ ಅಧಿಕಗೊಂಡಿದೆ. ಇದನ್ನು ಗಮನಿಸಿದ ಬಂಡವಾಳ ಹೂಡಿಕೆದಾರರು ಡಾಲರ್ ಮೇಲೆ ಬಂಡವಾಳ ಹೂಡುವುದು ಸಹಜ. ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಕಡಿಮೆಯಾಗಲು ಇದೂಒಂದು ಕಾರಣ. ಜಗತ್ತಿನ ಎಲ್ಲ ದೇಶಗಳ ಹಣ ಮುಗ್ಗರಿಸುತ್ತಿವೆ. ಅದಕ್ಕೆ ಹೋಲಿಸಿದಾಗ ರೂಪಾಯಿ ಬೆಲೆ ಅಲ್ಪ ಸ್ವಲ್ಪ ಮಟ್ಟಿಗೆ ಸ್ಥಿರತೆ ಕಾಯ್ದುಕೊಳ್ಳುವ ಹಂತದಲ್ಲಿದೆ. ಈ ಪರಿಸ್ಥಿತಿ ವರ್ಷದ ಅಂತ್ಯದವರೆಗೂ ಮುಂದುವರಿಯಲಿದೆ. ಇದು ನಮ್ಮ ವಿದೇಶಿ ವಿನಿಮಯ ಇಡುಗಂಟಿನ ಮೇಲೂ ಪರಿಣಾಮ ಬೀರುತ್ತಿದೆ. ಅದರಲ್ಲೂ ಇಂಧನ ತೈಲದ ಆಮದನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ. ಅದರಿಂದ ಹೆಚ್ಚು ಡಾಲರ್ ವ್ಯಯವಾಗುತ್ತಿದೆ. ಡಾಲರ್ ಬಳಕೆಯನ್ನು ಕಡಿಮೆ ಮಾಡಿದಲ್ಲಿ ಮಾತ್ರ ಇಂದಿನ ಆರ್ಥಿಕ ದುರ್ಬರ ಸ್ಥಿತಿಯಿಂದ ಪಾರಾಗಬಹುದು. ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಕೂಡ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿವೆ. ಕಳೆದ ಎರಡು ವರ್ಷಗಳಿಂದ ಕೊರೋನ ಹಾವಳಿಗೆ ಆರ್ಥಿಕ ಬೆಳವಣಿಗೆ ನೆಲ ಕಚ್ಚಿತ್ತು. ಈಗ ರಶ್ಯ-ಉಕ್ರೇನ್ ಯುದ್ಧದಿಂದ ಇಂಧನ ತೈಲದಿಂದ ಹಿಡಿದು ಎಲ್ಲ ವಸ್ತುಗಳ ಬೆಲೆ ಅಧಿಕಗೊಂಡಿದೆ. ಇದರ ನಡುವೆ ಡಾಲರ್ ಬೆಲೆ ಅಧಿಕಗೊಳ್ಳುತ್ತಿರುವುದು ಆತಂಕ ತಂದಿರುವುದಂತೂ ನಿಜ. ರಿಸರ್ವ್ ಬ್ಯಾಂಕ್ 190 ಮೂಲಾಂಶ ಬಡ್ಡಿ ದರವನ್ನು ಹೆಚ್ಚಿಸಿ ಹಣದ ಚಲಾವಣೆಯನ್ನು ನಿಯಂತ್ರಿಸಲು ಯತ್ನಿಸಿದೆ. ಆದರೂ ಅಂತರ್‌ರಾಷ್ಟ್ರೀಯ ಮಟ್ಟದ ಪರಿಸ್ಥಿತಿಗಳು ಆಶಾದಾಯಕವಾಗಿಲ್ಲ. ಮುಂದಿನ ಬಜೆಟ್‌ನಲ್ಲಿ ಆಹಾರ ವಸ್ತುಗಳ ಬೆಲೆ ಮತ್ತು ಇಂಧನ ತೈಲದ ಬೆಲೆ ಪ್ರಮುಖ ಹೊರೆಯಾಗಲಿದೆ ಎಂದು ಅರ್ಥ ಸಚಿವರು ಈಗಾಗಲೇ ಎಚ್ಚರಿಸಿದ್ದಾರೆ. ಸುದೈವದಿಂದ ದೇಶದ ಎಲ್ಲಾ ಕಡೆ ಮಳೆ ಬಂದಿರುವುದು ಕೃಷಿ ರಂಗ ನಮ್ಮನ್ನು ಆರ್ಥಿಕವಾಗಿ ಕಾಪಾಡಬಹುದು ಎಂಬ ಆಶಾಭಾವನೆ ಮೂಡಿದೆ. ಅದರಿಂದ ಕೃಷಿ ರಂಗಕ್ಕೆ ಬೇಕಾದ ರಸಗೊಬ್ಬರ ಉತ್ಪಾದನೆಗೆ ಸರಕಾರ ಆದ್ಯತೆ ನೀಡಿದೆ. ಕೃಷಿ ರಂಗದಲ್ಲಿ ಗುರಿ ಸಾಧಿಸಿದಲ್ಲಿ ಜಿಡಿಪಿಯಲ್ಲಿ ಶೇ.5 ರಷ್ಟು ಬೆಳವಣಿಗೆ ಕಾಣಬಹುದು. ಹಣದುಬ್ಬರ, ಬೆಲೆ ಏರಿಕೆ ಸಮಸ್ಯೆಗಳು, ಡಾಲರ್-ರೂಪಾಯಿ ಬೆಲೆ ಏರಿಳಿತಕ್ಕೆ ಪ್ರಮುಖವಾಗಿ ಕಾಡುತ್ತಿದೆ. ನಿರುದ್ಯೋಗ ಸಮಸ್ಯೆ, ಕೊರೋನ ಕಾಲದಲ್ಲಿ ತಲೆ ಹಾಕಿದ್ದು ಇನ್ನೂ ಶಮನಗೊಂಡಿಲ್ಲ. ಡಾಲರ್ ದರ ಏರಿಕೆ ನಮ್ಮ್ಮೆಬ್ಬರ ಸಮಸ್ಯೆ ಏನಲ್ಲ. ಎಲ್ಲ ದೇಶಗಳಿಗೂ ಇದರ ಬಿಸಿ ತಾಗಿದೆ. ಹೀಗಾಗಿ ಪರಿಹಾರವನ್ನು ಜಾಗತಿಕ ಮಟ್ಟದಲ್ಲಿ ಕಂಡುಕೊಳ್ಳುವುದು ಅಗತ್ಯ. ಸದ್ಯಕ್ಕೆ ಜಾಗತಿಕ ಮಟ್ಟದಲ್ಲಿ ಡಾಲರ್ ಹೊರತುಪಡಿಸಿದರೆ ಬೇರೆ ಹಣ ಚಲಾವಣೆಯಲ್ಲಿಲ್ಲ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತದ ನೆರಳು ಕಾಣಿಸಿಕೊಳ್ಳುತ್ತಿರುವುದರಿಂದ ಮಿತವ್ಯಯವೊಂದೇ ಈಗ ಇರುವ ಮಾರ್ಗ. ದೇಶದ ಒಟ್ಟಾರೆ ವೆಚ್ಚದಲ್ಲಿ ಕಡಿತ ಮನಃಪೂರ್ವಕ ನಡೆಯುವುದು ಅಗತ್ಯವಾಗಿದೆ. ಮುಂದಿನ ಬಜೆಟ್‌ಗೆ ತಯಾರಿ ನಡೆಸುವ ಹಾಗೆ ಮಿತವ್ಯಯ ಕ್ಕೂ ಯೋಜನೆ ಸಿದ್ಧಪಡಿಸುವುದು ಅಗತ್ಯ. ಅದರಲ್ಲೂ ಡಾಲರ್ ಬಳಕೆ ಕಡಿತಗೊಳಿಸುವ ಬಗ್ಗೆ ಚಿಂತನೆ ನಡೆಯಬೇಕು. ರಫ್ತು ಅಧಿಕಗೊಂಡಲ್ಲಿ ಡಾಲರ್ ಮೂಲಕ ಹೆಚ್ಚಿನ ವರಮಾನ ಪಡೆಯ ಬಹುದು. ಅದರೊಂದಿಗೆ ವಿದೇಶದಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ಇಲ್ಲೇ ತಯಾರು ಮಾಡಿಕೊಳ್ಳಲು ಕ್ರಮ ಕೈಗೊಳ್ಳುವುದು ಅಗತ್ಯ.
ವಿದ್ಯುತ್ ರಂಗದಲ್ಲಿ ಸೋಲಾರ್ ಉತ್ಪಾದನೆ ಹೆಚ್ಚಿಸುವುದು ಮಿತವ್ಯಯಕ್ಕೆ ಇಂಬು ಕೊಡುತ್ತದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸೋಲಾರ್ ವಿದ್ಯುತ್ ಬಳಕೆಗೆ ಹೆಚ್ಚಿನ ಅನುದಾನ ನೀಡುವುದು ಅಗತ್ಯ. ಸರಕಾರ ಈಗ ನೀಡುತ್ತಿರುವ ಸಬ್ಸಿಡಿಯ ಪ್ರಮಾಣವನ್ನು ಕಡಿಮೆ ಮಾಡುವುದು ಇಂದಿನ ಅನಿವಾರ್ಯತೆ. ಡಾಲರ್ ಬೆಲೆ ಏರಿಕೆ ನಿಯಂತ್ರಣ ನಮ್ಮ ಕೈಯಲ್ಲಿಲ್ಲ. ಆದರೆ ರೂಪಾಯಿ ಬೆಲೆ ಕುಸಿಯದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ನಮ್ಮದು