ಸಮಯಾವಕಾಶದ ಅಗತ್ಯವಿದೆ
ಮಾನ್ಯರೇ
ರಾಜ್ಯದೆಲ್ಲೆಡೆ ಕಾರಿನಲ್ಲಿ ಪ್ರಯಾಣಿಸುವಾಗ ಚಾಲಕ ಮಾತ್ರವಲ್ಲ, ಸಹ ಪ್ರಯಾಣಿಕರು ಕೂಡ ಸೀಟ್ ಬೆಲ್ಟ್ ಹಾಕಬೇಕೆಂದು ನಿಯಮ ಕಡ್ಡಾಯಗೊಳಿಸಲಾಗಿದ್ದು, ಈ ನಿಯಮದಿಂದ ಕಾರು ಪ್ರಯಾಣಿಕರಿಗೆ ಹೆಚ್ಚಿನ ರಕ್ಷಣೆ ಸಿಗುತ್ತದೆ ಎನ್ನಲಾಗುತ್ತಿದೆ. ಈ ಹಿಂದೆ ನಡೆದ ಹೆಚ್ಚಿನ ಅಪಘಾತಗಳಲ್ಲಿ ಪ್ರಾಣ ಹಾನಿ ಸಂಭವಿಸಿದ್ದಕ್ಕೆ ಸೀಟ್ ಬೆಲ್ಟ್ ಧರಿಸದೇ ಇರುವುದು ಕೂಡಾ ಕಾರಣ ಎಂಬುದು ಅನೇಕ ಕಡೆೆ ತನಿಖೆಯಿಂದ ಬಹಿರಂಗಗೊಂಡಿದೆ.
ಆದರೆ ಈಗಿನ ಈ ಹೊಸ ನಿಯಮ ಜನರಿಗೆ ಹೊರೆಯಾಗದಂತೆ ನೋಡಿಕೊಳ್ಳಬೇಕಾಗಿರುವುದು ಸರಕಾರದ ಮುಂದಿರುವ ದೊಡ್ಡ ಜವಾಬ್ದಾರಿಯಾಗಿದೆ. ಅಲ್ಲದೆ ಈ ನಿಯಮ ಜಾರಿಯಾದ ನಂತರ ಹೊಸತೊಂದು ಸಮಸ್ಯೆ ಸೃಷ್ಟಿಯಾಗಿದೆ. ಅದೇನೆಂದರೆ 2020ರ ಜನವರಿ ಬಳಿಕ ಮಾರುಕಟ್ಟೆಗೆ ಬಂದಿರುವ ಕಾರುಗಳಲ್ಲಿ ಮುಂಬದಿ, ಹಿಂಬದಿಗಳಲ್ಲಿ ಸೀಟ್ ಬೆಲ್ಟ್ ಸೌಲಭ್ಯ ಇದೆ. ಆದರೆ ಹಳೆಯ ಕಾರುಗಳಲ್ಲಿ ಹಿಂಬದಿಯಲ್ಲಿ ಸೀಟ್ ಬೆಲ್ಟ್ ಸೌಲಭ್ಯ ಇರುವುದಿಲ್ಲ. ಹೀಗಾಗಿ ಇಂತಹ ಕಾರುಗಳಲ್ಲಿ ಸೀಟ್ ಬೆಲ್ಟ್ ಅಳವಡಿಸಿಕೊಳ್ಳಲು ಸಮಯ ಅವಕಾಶ ನೀಡಬೇಕು. ಈ ಕುರಿತು ಸರಕಾರ ಇನ್ನೂ ಸ್ಪಷ್ಟತೆ ನೀಡಿಲ್ಲ. ಹೀಗಾಗಿ ಮರುವ್ಯವಸ್ಥೆಗೆ ಸಮಯಾವಕಾಶ ನೀಡಬೇಕು. ಅಲ್ಲದೆ ಈ ವಿಚಾರದಲ್ಲಿ ಬೇಕಾಬಿಟ್ಟಿ ದಂಡ ಹಾಕುವುದನ್ನು ನಿಲ್ಲಿಸಬೇಕು. ಕಾರಲ್ಲಿ ಪ್ರಯಾಣ, ಜೀವ ರಕ್ಷಣೆ ಎಂಬುದು ಜಾಗೃತಿ ವಿಷಯವಾಗಿದೆ. ಹೀಗಾಗಿ ಮೊದಲು ಈ ವಿಚಾರದ ಕುರಿತು ಜಾಗೃತಿ ಮೂಡಿಸಿ ಕಾಲಕ್ರಮೇಣ ನಿಯಮ ಕಡ್ಡಾಯಗೊಳಿಸಬೇಕಾಗಿದೆ. ಅಲ್ಲದೆ ಟ್ರಾಫಿಕ್ ಪೊಲೀಸರು ಈ ಕುರಿತು ಜನರಿಗೆ ಅಗತ್ಯ ತಿಳಿವಳಿಕೆ ನೀಡಿ ಮಾನವೀಯ ನೆಲೆಯಲ್ಲಿ ವರ್ತಿಸಬೇಕಾದ ಅಗತ್ಯವಿದೆ.