ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ: ಚಾಪೆ, ಹೊದಿಕೆಯೊಂದಿಗೆ ಬಂದ ಅಭಯಚಂದ್ರ ಜೈನ್
ಸುರತ್ಕಲ್, ಅ.28: ಸುರತ್ಕಲ್ ಟೋಲ್ ಗೇಟ್ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ಹಮ್ಮಿಕೊಂಡಿರುವ ಆಹೋರಾತ್ರಿ ಧರಣಿಯ ಪ್ರಥಮ ದಿನದ ರಾತ್ರಿಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ಹೋರಾಟಗಾರರಿಗೆ ಸಾಥ್ ನೀಡಿದರು.
ಧರಣಿಯ ಸ್ಥಳಕ್ಕೆ ರಾತ್ರಿ 9 ಗಂಡೆಗೆ ಬಂದ ಜೈನ್ ಅವರು, ಒಂದು ಚಾಪೆ ಹಾಗೂ ಸೊಳ್ಳೆಗಳಿಂದ ರಕ್ಷಣೆಗೆ ಒಂದು ಹೊದಿಕೆಯೊಂದಿಗೆ ಬಂದಿರುವುದು ವಿಶೇಷವಾಗಿತ್ತು.
ಈ ವೇಳೆ ʼವಾರ್ತಾಭಾರತಿʼಯೊಂದಿಗೆ ಮಾತನಾಡಿದ ಅವರು, ಸಂಸದರು ನೀಡಿರುವ ಗಡುವು ಇಂದಿನಿಂದ 10 ದಿನಗಳ ಕಾಲ ಇದೆ. ಆದ್ದರಿಂದ ಅಷ್ಟು ದಿನಗಳ ವರೆಗೆ ಪ್ರತೀ ದಿನ ಧರಣಿಯಲ್ಲಿ ಭಾಗವಹಿಸಲಿದ್ದೇನೆ. ಸಂಸದರ ಗಡುವು ಕಳೆದ ಬಳಿಕ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಿದ್ದೇನೆ ಎಂದರು.
ಆಹೋರಾತ್ರಿ ಧರಣಿಯ ಕುರಿತು ಅನುಭವ ಹಂಚಿಕೊಂಡ ಅವರು, ಇದು ಮೊದಲೂ ಅಲ್ಲ. ಕೊನೆಯೂ ಅಲ್ಲ. ಇಂತಹಾ ಅನೇಕ ಹೋರಾಟಗಳನ್ನು ಮಾಡುತ್ತಾ ಬಂದವನು. ನನಗೆ ಪೇಪರ್ ಸಿಕ್ಕಿದರೂ ಸಾಕು ಹಾಸಿಕೊಂಡು ಮಲಗಲು ಬೇರೆ ಏನೂ ಬೇಕಾಗಿಲ್ಲ ಎಂದು ಹೇಳಿದರು.
ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಇಮ್ತಿಯಾಝ್ ಬಿ.ಕೆ., ಪ್ರತಿಭಾ ಕುಳಾಯಿ, ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ, ಶ್ರೀನಾಥ್ ಕುಲಾಲ್, ಶ್ರೀಕಾಂತ್ ಸುರತ್ಕಲ್, ಜೋಕಟ್ಟೆ ಗ್ರಾ.ಪಂ. ಅಧ್ಯಕ್ಷ ಉಮರ್ ಫಾರೂಕ್ ಮೊದಲಾದವರು ಇದ್ದರು.