ಎಫ್‍ಎಂಸಿಜಿ ಕ್ಲಸ್ಟರ್ ನಿಂದ ರಾಜ್ಯದಲ್ಲಿ ಅಭಿವೃದ್ಧಿ ಪರ್ವ: ಸಿಎಂ ಬೊಮ್ಮಾಯಿ
ಹುಬ್ಬಳ್ಳಿ, ಅ.28: ಬೆಂಗಳೂರು ನಂತರ ಕೈಗಾರಿಕೆ ಬೆಳವಣಿಗೆಗೆ ಎಲ್ಲ ರೀತಿಯಸೌಲಭ್ಯವುಳ್ಳ ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಸ್ಥಾಪಿಸಲಾಗುತ್ತಿರುವ ಎಫ್‍ಎಂಸಿಜಿ ಕ್ಲಸ್ಟರ್ ನಲ್ಲಿ 1200 ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಕಾರ್ಯ ದಕ್ಷಿಣ ಭಾರತಕ್ಕೆ ಮಾದರಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶುಕ್ರವಾರ ಹುಬ್ಬಳ್ಳಿ ನಗರದ ಖಾಸಗಿ ಹೋಟೆಲ್‍ನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾಡಳಿತ ಹಾಗೂ ಎಫ್‍ಐಸಿಸಿಐ ಸಹಯೋಗದಲ್ಲಿ ಆಯೋಜಿಸಿದ್ದ ಎಫ್‍ಎಂಸಿಜಿ ಕ್ಲಸ್ಟರ್ ಹುಬ್ಬಳ್ಳಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಥಿಕತೆ ಎಂದರೆ ದುಡಿಮೆ. ಯಾವ ದೇಶದಲ್ಲಿ ದುಡಿಮೆ ಇರುತ್ತದೆಯೋ ಅಲ್ಲಿ ಬಡತನವಿರುವುದಿಲ್ಲ. ಕೈಗೆ ಕೆಲಸ ಕೊಡುವ ಕೈಗಾರಿಕೆಗಳಿದ್ದಲ್ಲಿ ಆ ಪ್ರದೇಶ ಬೆಳವಣಿಗೆಯಾಗುತ್ತದೆ. ಆರ್ಥಿಕ ಹಾಗೂ ಸಾಮಾಜಿಕ ಮೌಲ್ಯ ಬೆಳೆದರೆ ದೇಶ ಪ್ರಗತಿಯತ್ತ ಸಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಸವಾರ್ಂಗೀಣ ಅಭಿವೃದ್ಧಿಯಾಗಲು ಸರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ತಿಳಿಸಿದರು.