ದ.ಕ.ಜಿಲ್ಲೆಯ ಯುವವಾಹಿನಿ ಸಂಸ್ಥೆ ಹಾಗೂ ನಾಲ್ವರಿಗೆ ರಾಜ್ಯೋತ್ಸವ ಪ್ರಶಸ್ತಿ
ಮಂಗಳೂರು, ಅ.30: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ರವಿವಾರ 67 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಆ ಪೈಕಿ ದ.ಕ.ಜಿಲ್ಲೆಯ ನಾಲ್ಕು ಮಂದಿಗೆ ಪ್ರಶಸ್ತಿ ಲಭಿಸಿದೆ. ಅಲ್ಲದೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ರಾಜ್ಯದ 10 ಸಂಸ್ಥೆಗಳಿಗೂ ಪ್ರಶಸ್ತಿ ಪ್ರಕಟಿಸಿದ್ದು, ಅದರಲ್ಲಿ ದ.ಕ.ಜಿಲ್ಲೆಯ ಯುವವಾಹಿನಿ ಸಂಸ್ಥೆ ಸೇರಿದೆ.
67 ಪ್ರಶಸ್ತಿಗಳ ಪೈಕಿ ದ.ಕ. ಜಿಲ್ಲೆಯ ರವಿ ಶೆಟ್ಟಿ ಮೂಡಂಬೈಲ್ (ಸಮಾಜಸೇವೆ), ನಾರಾಯಣ ಎಂ. (ಸಂಗೀತ), ಸರಪಾಡಿ ಅಶೋಕ್ ಶೆಟ್ಟಿ (ಯಕ್ಷಗಾನ), ಕಮಲಾಕ್ಷಾಚಾರ್ಯ (ನೃತ್ಯ) ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಬಿಲ್ಲವ ಯುವ ಸಮೂಹದಲ್ಲಿ ಜನಜಾಗೃತಿ, ಐಕ್ಯತೆ ಮೂಡಿಸುವ ಸಲುವಾಗಿ 1987ರ ಅಕ್ಟೋಬರ್ 2ರಂದು ಸುಂಕದಕಟ್ಟೆಯ ಅಂಬಿಕಾ ಅನ್ನಪೂರ್ಣೇಶ್ವರಿಯಲ್ಲಿ ಸ್ಥಾಪನೆಗೊಂಡ ‘ಯುವವಾಹಿನಿ’ ಸಂಸ್ಥೆಯು ಕಳೆದ 35 ವರ್ಷದಲ್ಲಿ ಮಾಡಿದ ಸಾಧನೆ, ಸೇವೆ ಅನನ್ಯ. ಶಿಕ್ಷಕರಾಗಿದ್ದ ಅಡ್ವೆಯ ರವೀಂದ್ರ ಪೂಜಾರಿಯ ಅವರು ಸೂಚಿಸಿದ್ದ ‘ಯುವವಾಹಿನಿ’ ಎಂಬ ಹೆಸರಿನ ಈ ಸಂಸ್ಥೆಗೆ ಪೆರ್ಮುದೆಯ ಮೋಹನ್ ಕುಮಾರ್ ಲೋಗೋ ರಚಿಸಿಕೊಟ್ಟಿದ್ದರು.
ಅದೇ ಹೆಸರು ಮತ್ತು ಲೋಗೋದೊಂದಿಗೆ ಪ್ರಸ್ತುತ ಮಂಗಳೂರಿನ ಉರ್ವಸ್ಟೋರ್‌ನಲ್ಲಿ ಕಚೇರಿ ಹೊಂದಿ ಕಾರ್ಯಾಚರಿಸುವ ‘ಯುವವಾಹಿನಿ’ಯು ಶಿಕ್ಷಣ, ನಿರುದ್ಯೋಗ ನಿವಾರಣೆ, ಸಾಹಿತ್ಯ, ಕ್ರೀಡೆ, ಸಮಾಜಸೇವೆ, ವ್ಯಕ್ತಿತ್ವ ವಿಕಸನದಂತಹ ಶಿಬಿರಗಳು, ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹ, ಮಾರ್ಗದರ್ಶನ, ಬಿಲ್ಲವ ಯುವಸಮೂಹದ ಮಧ್ಯೆ ಸಂಪರ್ಕ ಸೇತು ಹೀಗೆ ಒಂದಲ್ಲೊಂದು ಧ್ಯೇಯ ಉದ್ದೇಶವನ್ನಿಟ್ಟುಕೊಂಡು ಸೇವೆ ಸಲ್ಲಿಸುತ್ತಿವೆ. ಸದಾ ಸಕ್ರಿಯವಾಗಿರುವ ‘ಯುವವಾಹಿನಿ’ಯು ಪ್ರಸ್ತುತ ರಾಜ್ಯಾದ್ಯಂತ 35 ಘಟಕಗಳಲ್ಲಿ 3243 ಸದಸ್ಯರನ್ನು ಹೊಂದಿವೆ. ‘ಸಿಂಚನ’ ದ್ವೈಮಾಸಿಕ ಪತ್ರಿಕೆಯನ್ನು ಕೂಡ ಹೊರತರುತ್ತಿವೆ. ಖ್ಯಾತ ಸಾಹಿತಿ ವಿಶುಕುಮಾರ್ ಹೆಸರಿನಲ್ಲಿ ವರ್ಷಂಪ್ರತಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ವಿಶುಕುಮಾರ್ ಪ್ರಶಸ್ತಿಯನ್ನು ನೀಡುತ್ತಾ ಬಂದಿವೆ. ಗೃಹನಿರ್ಮಾಣ, ತಾಳಿಭಾಗ್ಯ, ವಧುವರರ ಅನ್ವೇಷಣೆಗೂ ಸಹಕರಿಸುತ್ತಿದೆ.
ಸಮಾಜ ಸೇವಕ-ಕಲಾಪೋಷಕ ಉದ್ಯಮಿ ರವಿ ಶೆಟ್ಟಿ ಮೂಡಂಬೈಲ್
ಇನ್ನೊಬ್ಬರಿಗಾಗಿ ಬದುಕದ ಜೀವನವು ಜೀವನಲೇ ಅಲ್ಲ ಎಂಬ ಮದರ್ ತೆರೇಸಾ ಅವರ ಮಾತಿನಿಂದ ಪ್ರೇರೇಪಿತರಾದ ಸಮಾಜ ಸೇವಕ-ಕಲಾಪೋಷಕ, ಉದ್ಯಮಿ ರವಿ ಶೆಟ್ಟಿ ವೂಡಂಬೈಲ್. ಪರರ ಕಷ್ಟಕ್ಕೆ ಸ್ಪಂದಿಸುವುದರಲ್ಲೇ ಖುಷಿ ಪಡೆಯುವ ಅಪರೂಪದ ವ್ಯಕ್ತಿಗಳಲ್ಲಿ ರವಿಶೆಟ್ಟಿ ಮೂಡಂಬೈಲ್ ಅಗ್ರಗಣ್ಯರು.
ಇಂಜಿನಿಯರಿಂಗ್ ಪದವೀಧರರಾಗಿ ದೇಶದ ಹಲವು ಪ್ರಮುಖ ಕಂಪೆನಿಗಳಲ್ಲಿ ಪ್ರತಿಷ್ಠಿತ ಹುದ್ದೆಗಳನ್ನು ನಿಭಾಯಿಸಿದ್ದ ಇವರು ಪ್ರಸ್ತುತ ಕತರ್‌ನಲ್ಲಿ ಎಟಿಎಸ್ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಹಲವು ಸಂಘಟನೆಗಳಲ್ಲೂ ಸಕ್ರಿಯರಾಗಿದ್ದಾರೆ. ಕತರ್‌ನ ತುಳುಕೂಟ, ಬಂಟರ ಸಂಘ, ಕರ್ನಾಟಕ ಸಂಘಗಳಲ್ಲಿ ಕ್ರಿಯಾಶೀಲರಾಗಿರುವ ಇವರು ಊರಿನಿಂದ ಕತರ್‌ಗೆ ತೆರಳಿದವರಿಗೆ ಅಗತ್ಯ ನೆರವು ನೀಡುವುದರಲ್ಲಿ ಕೂಡ ಎತ್ತಿದ ಕೈ. ಇಂಜಿನಿಯರ್ ಪದವಿಯೊಂದಿಗೆ ಉದ್ಯಮಿಯಾಗಿದ್ದರೂ ಕಲೆಗೆ ಪ್ರೋತ್ಸಾಹ ನೀಡುತ್ತಲೇ ಇದ್ದಾರೆ. ಮೊದಲ ಬಾರಿಗೆ ಯಕ್ಷಗಾನ ತಂಡವನ್ನು ಕತರ್‌ಗೆ ಕರೆಸಿಕೊಂಡು ಕಾರ್ಯಕ್ರಮ ಕೊಡಿಸಿದ ಹೆಮ್ಮೆ ಇವರಿಗೆ ಸಲ್ಲುತ್ತದೆ. ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಇವರು ಧಾರ್ಮಿಕ, ಸಾಮಾಜಿಕ, ಆರೋಗ್ಯ, ಶೈಕ್ಷಣಿಕ ಸಂಸ್ಥೆಗಳಿಗೂ ಸಹಾಯಧನ ನೀಡುವ ಮೂಲಕ ಕೊಡುಗೈ ದಾನಿಯಾಗಿಯೂ ಗುರುತಿಸಲ್ಪಟ್ಟಿದ್ದಾರೆ.
ನನಗೆ ಪ್ರಶಸ್ತಿ ಬಂದಿರುವ ಸುದ್ದಿ ತಿಳಿದು ತುಂಬಾ ಸಂತೊಷವಾಯಿತು. ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಹೆಚ್ಚಿದೆ. ಮತ್ತಷ್ಟು ಸಮಾಜ ಸೇವೆ ಮಾಡಲು ಪ್ರೇರಣೆಯಾಗಿದೆ ಎಂದು ರವಿ ಶೆಟ್ಟಿ ಮೂಡಂಬೈಲ್ ಪ್ರತಿಕ್ರಿಯಿಸಿದ್ದಾರೆ.
ನಾರಾಯಣ ಎಂ.
ಮೂಡುಬಿದಿರೆಯಲ್ಲಿ 1943ರಲ್ಲಿ ಜನಿಸಿದ ನಾರಾಯಣ ಅವರು ಸುರತ್ಕಲ್-ಮುಲ್ಕಿ ಪರಿಸರದಲ್ಲಿ ಸುಮಾರು 30 ವರ್ಷದಿಂದ ಸಾವಿರಾರು ಮಂದಿಗೆ ಸಂಗೀತ ಕಲಿಸಿದ್ದಾರೆ. ಮಂಗಳೂರು ಆಕಾಶವಾಣಿಯ ‘ಬಿ ಉನ್ನತ ದರ್ಜೆ’ಯ ಕಲಾವಿದರಾಗಿದ್ದ ನಾರಾಯಣ ಅವರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಭಾರತಿ ರಾಷ್ಟ್ರೀಯ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿ ಲಭಿಸಿವೆ. ಅನೇಕ ಸಂಘಟನೆಗಳಿಂದ ಸನ್ಮಾನಿಸಲ್ಪಟ್ಟಿದ್ದಾರೆ. ಕನ್ನಡ, ತುಳು, ತೆಲುಗು, ಹಿಂದಿ, ಸಂಸ್ಕೃತದಲ್ಲೂ ಪಾಂಡಿತ್ಯವುಳ್ಳ ನಾರಾಯಣ ಅವರು ‘ನಾರಾಯಣದಾಸ’ ಎಂಬ ಹೆಸರಿನಲ್ಲಿ 500ಕ್ಕೂ ಅಧಿಕ ಕೃತಿಗಳನ್ನು ರಚಿಸಿದ ಹಿರಿಮೆ ಹೊಂದಿದ್ದಾರೆ. ತನ್ನ ಸ್ವಂತ ಕೃತಿಗಳ ಮೇಲೂ ಗಾಯನ ಕಚೇರಿ ನಡೆಸಿದ್ದಾರೆ.