ಓ ಮೆಣಸೇ...
ಪಾಕ್ ಹಾಗೂ ಚೀನಾ ಆಕ್ರಮಿತ ಜಾಗವನ್ನು ಭಾರತಕ್ಕೆ ಜೋಡಿಸುವ ಯಾತ್ರೆಯನ್ನು ರಾಹುಲ್ ಗಾಂಧಿ ಮಾಡಲಿ -ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಅದಕ್ಕೆಲ್ಲ ಒಮ್ಮೆ ಅಧಿಕಾರ ನಮ್ಮ ಕೈಗೆ ಬರಲಿ ಎಂದು ನೀವು ಹಲವು ದಶಕಗಳ ಆಲಾಪಿಸಿದ್ದನ್ನೇ ಈಗ ಅವರು ಆಲಾಪಿಸುತ್ತಿದ್ದಾರೆ.
ಮೀಸಲಾತಿ ಪ್ರಮಾಣ ಹೆಚ್ಚಿಸಿ ನಮ್ಮ ಸರಕಾರ ಬದ್ಧತೆಯಿಂದ ನಡೆದುಕೊಂಡಿದೆ - ಬಸವರಾಜ ಬೊಮ್ಮಾಯಿ, ಸಿಎಂ
ಮೀಸಲಾತಿಯ ಯಾವುದೇ ಹುದ್ದೆಯನ್ನು ಎಂದೂ ಖಾಲಿ ಇಡುವುದಿಲ್ಲ ಎಂಬ ಬದ್ಧತೆ ಘೋಷಿಸಿ. ಬದ್ಧತೆ ಉಳಿಸಿಕೊಳ್ಳುವ ಸಾಮರ್ಥ್ಯ ಬಯಲಾಗುತ್ತದೆ.
ರಾಜಕಾರಣಿಗಳಿಗೆ ಉಚಿತ ಸೌಲಭ್ಯಗಳು ಬೇಕಾದಷ್ಟು ದೊರೆಯುತ್ತಿರುವಾಗ ಹಣದುಬ್ಬರದಿಂದ ತತ್ತರಿಸಿದ ಜನರಿಗೆ ಏಕೆ ಸಿಗಬಾರದು - ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ
ರಾಜಕಾರಣಿಗಳ ಸೌಲಭ್ಯವೆಲ್ಲಾ ಜನರಿಗೇಕೆ? ಅವರಿಗೆ ಪಾಪ, ಮೂಲಭೂತ ಮಾನವೀಯ ಸವಲತ್ತುಗಳು ಸಿಕ್ಕರೆ ಸಾಕು.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಂದಾದ ಮೇಲೊಂದು ಸಮಸ್ಯೆಗಳು ಸೃಷ್ಟಿಯಾಗುತ್ತಿರುವುದು ಕಂಡರೆ ಇದೊಂದು ಶಾಪಗ್ರಸ್ಥ ಸಮ್ಮೇಳನವೇ ಎಂಬ ಅನುಮಾನ ಮೂಡುತ್ತಿದೆ - ಡಾ.ಮಹೇಶ್ ಜೋಶಿ, ಕಸಾಪ ಅಧ್ಯಕ್ಷ
ಹಾಲಿ ಅಧ್ಯಕ್ಷರನ್ನು ತೊಲಗಿಸಿಬಿಟ್ಟರೆ ಕಂಟಕಗಳೆಲ್ಲ ತೊಲಗುತ್ತವೆಂದು ಜ್ಯೋತಿಷಿಗಳು ಭರವಸೆ ನೀಡಿದ್ದಾರಂತೆ.
ಶಾಲಾ ಮಕ್ಕಳಿಂದ ದೇಣಿಗೆ ಸಂಗ್ರಹ ಸುತ್ತೋಲೆಯಲ್ಲಿ ನನ್ನ , ಸಿಎಂ ಪಾತ್ರ ಇಲ್ಲ - ಬಿ.ಸಿ.ನಾಗೇಶ್, ಸಚಿವ
ಹಾಗಾದರೆ ಒಂದು ಆಯೋಗವನ್ನು ನೇಮಿಸಿ, ಸರಕಾರ ನಡೆಸುತ್ತಿ ರುವುದು ಯಾರು ಎಂಬ ಬಗ್ಗೆ ಸವಿಸ್ತಾರ ತನಿಖೆ ಏರ್ಪಡಿಸಿ.
ಕೆಲವರು ಇಲ್ಲಸಲ್ಲದ ಗುಮ್ಮ ಬಿಟ್ಟು ನನ್ನನ್ನು ಹೆದರಿಸುವ ತಂತ್ರ ಮಾಡುತ್ತಿದ್ದಾರೆ - ಕುಮಾರಸ್ವಾಮಿ, ಮಾಜಿ ಸಿಎಂ
ನೀವು ಲಾಲಸೆಗೆ ಬಗ್ಗುವವರೇ ಹೊರತು ಬೆದರಿಕೆಗಲ್ಲ ಎಂಬುದು ಅವರಿಗೆ ತಿಳಿದಿಲ್ಲ.
ಒಂದಲ್ಲ ಒಂದು ದಿನ ನಾವು ಶುದ್ಧ ಸಾಹಿತ್ಯದ ಕಡೆಗೆ ವಾಲಲೇಬೇಕು - ಎಸ್.ಎಲ್.ಬೈರಪ್ಪ, ಸಾಹಿತಿ
ಶುದ್ಧ ಎಂದರೆ ವೈದಿಕ ಕೇಂದ್ರಿತ, ಶೂದ್ರ ಮುಕ್ತ, ದಲಿತ ಮುಕ್ತ ಸಾಹಿತ್ಯ ತಾನೇ?
ನಮ್ಮ ದೇಶದಲ್ಲಿ ನಾಸ್ತಿಕ, ಆಸ್ತಿಕ ಇಬ್ಬರಿಗೂ ಜಾಗ ಇದೆ - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಜಾಗ ಇಲ್ಲದ್ದು ಸ್ವಸ್ಥ ಮನಸ್ಸಿನ ಮಾನವರಿಗೆ ಮಾತ್ರ.
ದೇಶವು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕುವುದನ್ನು ತಡೆಯಲು ಸರಕಾರ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ -ನರೇಂದ್ರ ಮೋದಿ, ಪ್ರಧಾನಿ
ದಿಟ್ಟ ಅಂದರೇನು? ಬೆಲೆಗಳನ್ನು ಮತ್ತೆ ದುಪ್ಪಟ್ಟುಗೊಳಿಸುವ ಧೈರ್ಯವೇ?
ಪ್ರಜಾಪ್ರಭುತ್ವ ವ್ಯವಸ್ಥೆಯು ವಿಶ್ವದಲ್ಲಿಯೇ ಅತ್ಯುತ್ತಮ ಆಡಳಿತ ವ್ಯವಸ್ಥೆಯಾಗಿದೆ - ಜಯಪ್ರಕಾಶ್ ಹೆಗ್ಡೆ,
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಒಂದಾನೊಂದು ಕಾಲದಲ್ಲಿ ಅಂತಹ ಒಂದು ವ್ಯವಸ್ಥೆ ನಮ್ಮ ದೇಶದಲ್ಲೂ ಇತ್ತು ಅನ್ನುತ್ತಾರೆ.
ಹಿಂದುತ್ವ ಹಾಗೂ ಬ್ರಾಹ್ಮಣತ್ವ ಬೇರೆ ಬೇರೆ ಅಲ್ಲ - ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಇದನ್ನು ಹಿಂದೂ ಸಮಾಜದ ಮುಂದೆ ಸಾರಿಬಿಟ್ಟರೆ ಹೆಚ್ಚಿನವರಿಗೆ ಮುಕ್ತಿ ಸಿಕ್ಕೀತು.
ಬಿಜೆಪಿ ಕಾರ್ಯಕರ್ತರು ನಮ್ಮ ಪಕ್ಷವನ್ನು ಸೇರಲು ಬಂದರೆ ಅವರಿಗೆ ಅತಿಥಿಗಳಂತೆ ಬಿರಿಯಾನಿ ನೀಡಿ ಗೌರವಿಸುತ್ತೇವೆ - ಅಸದುದ್ದೀನ್ ಉವೈಸಿ, ಎಐಎಂಐಎಂ ಮುಖಂಡ
ನೀವು ಉಗುಳಿ ಕೊಡುವುದಿಲ್ಲ ಎಂದು ಆ ಸಂಶಯ ರೋಗಿಗಳಿಗೆ ಹೇಗೆ ಮನವರಿಕೆ ಮಾಡಿಸುತ್ತೀರಿ?
ಕೇಂದ್ರ ಸರಕಾರದ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಆರೆಸ್ಸೆಸ್ ಧಾರ್ಮಿಕ ವಿಷಯಗಳನ್ನು ಪ್ರಸ್ತಾವಿಸುತ್ತಿದೆ - ಮಾಯಾವತಿ, ಬಿಎಸ್ಪಿ ಅಧ್ಯಕ್ಷೆ
ಆದ್ದರಿಂದ ಆರೆಸ್ಸೆಸ್ ಜೊತೆ ನಿಮ್ಮ ಮೈತ್ರಿಯನ್ನು ನೀವು ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಡುವಿರಾ?
ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಿರುವುದು ವಿಶ್ವ ದಾಖಲೆ ಪಟ್ಟಿಗೆ ಸೇರಿದೆ - ಡಾ.ಸಿ.ಎಸ್.ಅಶ್ವತ್ಥನಾರಾಯಣ, ಸಚಿವ
ಪ್ರತಿಮೆಗಳ ನಿರ್ಮಾಣದಲ್ಲಿ ನಿಮ್ಮ ಈ ಹಿಂದಿನ ಹಲವಾರು ವಿಶ್ವದಾಖಲೆಗಳ ಕತೆ ಏನಾಯಿತು?
2013ರಲ್ಲಿ ನಾನು ಗೆದ್ದಿದ್ದರೆ ಮುಖ್ಯಮಂತ್ರಿಯಾಗುತ್ತಿದ್ದೆ. ಆದರೆ ನನ್ನ ಹಣೆಬರಹದಲ್ಲಿ ಇರಲಿಲ್ಲ - ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ
ಹಾಗೆಂದು ಹಣೆ ಜಜ್ಜಿಕೊಳ್ಳುತ್ತಾ ಕೂತಿರುವ ಬದಲು ಸಕ್ರಿಯವಾಗಿ ಕೆಲಸ ಮಾಡಿದರೆ ಹಣೆಬರಹ ಬದಲಾದೀತು.
ಬಿಜೆಪಿ ಸರಕಾರ ಪರಿಶಿಷ್ಟರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ|
ಅಷ್ಟಾದರೂ ಮಾಡಿದರಲ್ಲಾ. ನೀವೇನು ಮಾಡುತ್ತಿದ್ದೀರಿ?
ಅಮೆರಿಕ, ಇಂಗ್ಲೆಡ್‌ನಲ್ಲಿ ಭಾರತೀಯರು ಪ್ರಮುಖ ಹುದ್ದೆ ಅಲಂಕರಿಸಿರುವುದು ಆ ದೇಶದ ಬಹು ಸಂಖ್ಯಾತರು ಅಲ್ಪ ಸಂಖ್ಯಾತರನ್ನು ಅಪ್ಪಿಕೊಂಡಿರುವುದಕ್ಕೆ ನಿದರ್ಶನ. ನಮ್ಮ ದೇಶದ ಬಹು ಸಂಖ್ಯಾವಾದಿ ಪಕ್ಷಗಳು ಇದರಿಂದ ಪಾಠ ಕಲಿಯಬೇಕಾಗಿದೆ - ಚಿದಂಬರಂ, ಕಾಂಗ್ರೆಸ್ ಮುಖಂಡ
ಅಲ್ಲಿನವರು ಬ್ರಾಹ್ಮಣ ನೇತೃತ್ವವನ್ನು ಸ್ವೀಕರಿಸಿರುವಾಗ ಇಲ್ಲಿನವರಿಗೆ ಹಿಂಜರಿಕೆ ಏಕೆ ಎಂದು ಆಡಳಿತ ಪಕ್ಷ ಪ್ರಶ್ನಿಸುತ್ತಿದೆ.
ದುಷ್ಟರು, ರಾಕ್ಷಸರು ಇಲ್ಲದಿದ್ದರೆ ದೇವರು ತಮ್ಮ ಪವಾಡವನ್ನು ತೋರಿಸುವುದು ಹೇಗೆ? -ಸಿ.ಟಿ.ರವಿ, ಶಾಸಕ
ಹಾಗಾದರೆ ನೀವು ಬಹುಕಾಲದಿಂದ ರಾಕ್ಷಸಪಾತ್ರ ವಹಿಸಿರುವುದು ದೇವರುಗಳ ಉದ್ಧಾರಕ್ಕಾಗಿಯೇ?
ನಾನು ಕಿಂಗ್ ಆಗುವುದಕ್ಕಿಂತ ಕಿಂಗ್ ಮೇಕರ್ ಆಗಲು ಬಯಸಿದ್ದೇನೆ. ಹೀಗಾಗಿ ಬರುವ ವಿಧಾನ ಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ - ಸಿ.ಎಂ.ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ನಿಮ್ಮನ್ನು ಜೋಕರ್ ಪಾತ್ರಕ್ಕೆ ನೇಮಿಸಿದವರು ಅದಕ್ಕೆ ಒಪ್ಪುವರೇ?
ರಾಜಕಾರಣ ಹೀಗೆಯೇ ಇರುತ್ತದೆ ಎನ್ನಲಾಗದು. ಕಾಲಚಕ್ರದಲ್ಲಿ ಏನೂ ಬೇಕಾದರೂ ಆಗಬಹುದು - ಎಚ್.ವಿಶ್ವನಾಥ್, ವಿ.ಪ.ಸದಸ್ಯ
ಆದರೆ ಅದರಿಂದ ಲಾಭವಾಗುವುದು ಚಕ್ರದಡಿಗೆ ಸಿಕ್ಕಿ ಸಾಯದೆ ಅದನ್ನು ಸರಿದಿಕ್ಕಿನಲ್ಲಿ ನಡೆಸುವವರಿಗೆ ಮಾತ್ರ.
ಇನ್‌ಸ್ಪೆಕ್ಟರ್ ಹುದ್ದೆಗೆ 70 ರಿಂದ 80 ಲಕ್ಷ ರೂ.(ಲಂಚ) ಕೊಟ್ಟು ಬಂದರೆ ಅವರಿಗೆ ಹೃದಯಾಘಾತವಾಗದೆ ಇನ್ನೇನಾಗಬೇಕು?- ಎಂ.ಟಿ.ಬಿ.ನಾಗರಾಜ್, ಸಚಿವ
ಅಷ್ಟೆಲ್ಲಾ ಲಂಚ ಕೊಂಡು ಬಂದವರಿಗೆ ನಾವೆಷ್ಟು ಲಂಚ ಕೊಡಬೇಕಾದೀತು ಎಂದು ಊಹಿಸಿ ಜನತೆಗೂ ಹೃದಯಾಘಾತವಾಗಿದೆ.
ನಮ್ಮನ್ನು ಬಿಜೆಪಿಯ ಬಿ ಟೀಮ್ ಎಂದು ಟೀಕಿಸುವ ಕಾಂಗ್ರೆಸ್ ನಾಯಕರಿಂದ ನಮಗೆ ಕಲಿಯುವುದೇನೂ ಇಲ್ಲ - ಅಸದುದ್ದೀನ್ ಉವೈಸಿ, ಎಐಎಂಐಎಂ ಅಧ್ಯಕ್ಷ
ನಿಮ್ಮ ಗುರುಗಳೆಲ್ಲರೂ ಬಿಜೆಪಿಯೊಳಗೆ ಇದ್ದಾರೆ ಎಂದು ಕಾಣುತ್ತದೆ.
ಮುಸ್ಲಿಮ್ ಸಮುದಾಯದ ಕೆಲ ಗೂಂಡಾಗಳಿಗೆ ಸರಕಾರ ಮತ್ತು ಪೊಲೀಸರ ಬಗ್ಗೆ ಭಯವೇ ಇಲ್ಲದಂತಾಗಿದೆ - ಈಶ್ವರಪ್ಪ, ಶಾಸಕ
ಮಾನ ಮರ್ಯಾದೆ ಯಾವುದೂ ಇಲ್ಲವಾಗಿರುವ ಶಿವಮೊಗ್ಗ ಕಡೆಯ ಕೆಲವು ಮುದಿ ಪುಢಾರಿಗಳಿಂದ ಪ್ರೇರಿತರಾಗಿರಬೇಕು.
ಹಿಂದಿನ ಪ್ರಧಾನಿ ಮಾಡಿದ ತಪ್ಪನ್ನು ಸರಿಪಡಿಸಲು ನನನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಗಿದೆ - ರಿಷಿ ಸುನಕ್, ಬ್ರಿಟನ್ ಪ್ರಧಾನಿ
ಹಿಂದಿನ ಪ್ರಧಾನಿಯಂತೆ ರಾಜೀನಾಮೆ ನೀಡುವ ತಪ್ಪು ಮಾಡಲಾರಿರಿ ಎಂದಾಯಿತು.
ಒಮಿಕ್ರಾನ್ ಬಿಕ್ಯೂ ತಳಿ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಪ್ಪದೆ 3ನೇ ಡೋಸ್ ಲಸಿಕೆ ಪಡೆದುಕೊಳ್ಳಬೇಕು -ಡಾ.ಕೆ.ಸುಧಾಕರ್, ಸಚಿವ
ಒಂದನೇ ಮತ್ತು ಎರಡನೇ ಡೋಸ್ ತೆಗೆದುಕೊಳ್ಳದವರು ಕೂಡ ಮೂರನೇ ಡೋಸ್ ತೆಗೆದು ಕೊಳ್ಳಬೇಕೆ?
ಮಹಾರಾಷ್ಟ್ರ ಸರಕಾರವು ಮುಂದಿನ ವರ್ಷ 75 ಸಾವಿರ ಯುವ ಜನರಿಗೆ ಸರಕಾರಿ ಉದ್ಯೋಗ ನೀಡಲಿದೆ - ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಡಿಸಿಎಂ
ಅಲ್ಲಿಯವರೆಗೆ ಸರಕಾರ ಅಸ್ತಿತ್ವದಲ್ಲಿ ಇರುತ್ತದೆಯೇ? ಎನ್ನುವುದು ಜನರ ಪ್ರಶ್ನೆ.
2023ರಲ್ಲಿ ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ - ದೇವೇಗೌಡ, ಮಾಜಿ ಪ್ರಧಾನಿ
ಯಾವ ಪಂಚಾಯತ್ ನಲ್ಲಿ ಎನ್ನುವುದನ್ನು ಹೇಳಿ ಬಿಡಿ.