ಬೆಳ್ತಂಗಡಿ : ವಿದ್ಯುತ್ ತಂತಿ ತಗುಲಿ ಓರ್ವ ಮೃತ್ಯು
ಬೆಳ್ತಂಗಡಿ: ತೋಟದಲ್ಲಿ ಕಾಡುಪ್ರಾಣಿಗಳನ್ನು ಹಿಡಿಯಲು ಎಂದು ಹಾಕಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಲ್ಮಂಜ ಗ್ರಾಮದ ಕರಿಯನೆಲ ಎಂಬಲ್ಲಿ ರವಿವಾರ ಸಂಭವಿಸಿದೆ.
ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಕರಿಯನೆಲದ ಕರ್ಬಿತ್ತಿಲ್ ನಿವಾಸಿ ಶೀನಪ್ಪ ಗೌಡ ಎಂಬವರ ಪುತ್ರ ಉದಯ ಗೌಡ (43) ಮೃತರು ಎಂದು ಗುರುತಿಸಲಾಗಿದೆ.
ಇವರು ತೋಟಕ್ಕೆಂದು ಹೋದವರು ಮನೆಗೆ ಹಿಂತಿರುಗಿ ಬಾರದ ಹಿನ್ನೆಲೆಯಲ್ಲಿ ಮನೆಮಂದಿ ಸುತ್ತಮುತ್ತ ಹುಡುಕಾಟ ನಡೆಸಿದಾಗ ಸಂಜೆಯ ವೇಳೆ ತೋಟದಲ್ಲಿ ಬಿದ್ದು ಮೃತಪಟ್ಟಿರುವುದು ಕಂಡು ಬಂದಿದೆ ಎಂದು ದೂರಲಾಗಿದೆ.
ಸ್ಥಳೀಯ ನಿವಾಸಿಗಳಾಗಿರುವ ಹರೀಶ ಮತ್ತು ಇತರರು ಸೇರಿ ತೋಟಕ್ಕೆ ಬರುವ ಕಾಡು ಪ್ರಾಣಿಗಳನ್ನು ಓಡಿಸಲೆಂದು ಅಕ್ರಮವಾಗಿ ತಮ್ಮ ಪಂಪ್ ಶೆಡ್ ನಿಂದ ತೋಟದ ಸುತ್ತ ತಂತಿಯ ಮೂಲಕ ವಿದ್ಯುತ್ ಹರಿಸಿದ್ದರು. ಜನ ನಡೆದಾಡುವ ದಾರಿಯ ಬದಿಯಲ್ಲಿಯೇ ಅತ್ಯಂತ ಅಪಾಯಕಾರಿಯಾಗಿ ವಿದ್ಯುತ್ ಹರಿಯಬಿಟ್ಟಿದ್ದು, ಮನೆಯಿಂದ ತೋಟಕ್ಕೆಂದು ಹೋದ ಉದಯ ಅವರ ಕಾಲಿಗೆ ವಿದ್ಯುತ್ ಹರಿಯುತ್ತಿದ್ದ ತಂತಿ ಸಿಲುಕಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ದೂರು ನೀಡಲಾಗಿದೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷ ಶಿವಕುಮಾರ್, ಧರ್ಮಸ್ಥಳ ಠಾಣಾಧಿಕಾರಿ ಅನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.