ಭಾರತೀಯ ಪ್ರಜಾಪ್ರಭುತ್ವ, ಚುನಾವಣಾ ರಾಜಕೀಯ ಮತ್ತು ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ
ನಮ್ಮ ಆಡಳಿತ ವ್ಯವಸ್ಥೆಯೊಳಗೆ ಕೋಮುವಾದಿ ಶಕ್ತಿಗಳು ನುಸುಳಿರುವುದು ಅತ್ಯಂತ ಆತಂಕದ ಸಂಗತಿಯಾಗಿದೆ. ಈ ಪಕ್ಷದ ಅಧ್ಯಕ್ಷ ಸ್ಥಾನವನ್ನು ಖರ್ಗೆ ವಹಿಸಿಕೊಳ್ಳುತ್ತಿರುವಾಗ, ಪಕ್ಷದ ಉನ್ನತ ನಾಯಕರ ಪೈಕಿ ಒಬ್ಬರಾಗಿರುವ ರಾಹುಲ್ ಗಾಂಧಿ ‘ಭಾರತ್ ಜೋಡೊ’ ಯಾತ್ರೆಯಲ್ಲಿ ತೊಡಗಿದ್ದಾರೆ. ಇದು ಗಾಂಧಿ, ಪಟೇಲ್, ನೆಹರೂ, ಸುಭಾಶ್ಚಂದ್ರ ಬೋಸ್ ಮತ್ತು ಅಂಬೇಡ್ಕರ್‌ರಂಥ ಮಹಾನ್ ನಾಯಕರ ಕನಸಿನ ಭಾರತದ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ದೇಶದ ಜನರನ್ನು ಒಗ್ಗೂಡಿಸುವ ಪ್ರಭಾವಿ ಅಭಿಯಾನವಾಗಬಹುದಾಗಿದೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ)ನ ಅಧ್ಯಕ್ಷ ಹುದ್ದೆಗೆ ಇತ್ತೀಚೆಗೆ ಚುನಾವಣೆ ನಡೆಯಿತು. ಅಪಾರ ರಾಜಕೀಯ ಅನುಭವವುಳ್ಳ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಅವರು ಈ ಪ್ರತಿಷ್ಠಿತ ಹುದ್ದೆಯನ್ನು ವಹಿಸಿದ ಮೂರನೇ ದಲಿತ ವ್ಯಕ್ತಿಯಾಗಿದ್ದಾರೆ. ಸುಮಾರು ೨೪ ವರ್ಷಗಳ ಬಳಿಕ ಪಕ್ಷದ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆದಿದೆ. ಇಲ್ಲಿ ಒಂದು ಆಸಕ್ತಿದಾಯಕ ಸಂಗತಿಯಿದೆ. ಭಾರತದಲ್ಲಿ, ಕಮ್ಯುನಿಸ್ಟ್ ಪಕ್ಷಗಳನ್ನು ಹೊರತುಪಡಿಸಿದರೆ, ಇತರ ಹೆಚ್ಚಿನ ಪಕ್ಷಗಳ ಹುದ್ದೆಗಳಿಗೆ ರಾಜಕಾರಣಿಗಳನ್ನು ನೇಮಕ ಮಾಡಲಾಗುತ್ತದೆ ಹಾಗೂ ಹೀಗೆ ನೇಮಕಗೊಳ್ಳುವವರ ಪೈಕಿ ಹೆಚ್ಚಿನವರು ಪ್ರಭಾವಿ ನಾಯಕರ ವಂಶಸ್ಥರೇ ಆಗಿರುತ್ತಾರೆ.
ಕಾಂಗ್ರೆಸ್‌ನ ವಂಶಪಾರಂಪರ್ಯ ಆಡಳಿತವನ್ನು ಬಿಜೆಪಿ ಕಟುವಾಗಿ
ಟೀಕಿಸಿದರೂ, ಸ್ವತಃ ಬಿಜೆಪಿಯೇ ಇಂಥ ವಂಶಸ್ಥರಿಂದ ತುಂಬಿ ಹೋಗಿದೆ.
ಆರೆಸ್ಸೆಸ್ ನೇಮಿತ ಸಂಘಟನಾ ಕಾರ್ಯದರ್ಶಿಗಳ ಕೈಯಲ್ಲಿ ಹೆಚ್ಚಿನ ನಿಯಂತ್ರಣಗಳಿರುವ ಏಕೈಕ ಪಕ್ಷ ಅದಾಗಿದೆ. ಬಿಜೆಪಿಯ ಆಗು ಹೋಗುಗಳನ್ನು ಸಾಮಾನ್ಯವಾಗಿ ನಿರ್ಧರಿಸುವುದು ಆರೆಸ್ಸೆಸ್ ಆಗಿದೆ.
ಪಕ್ಷದ ವ್ಯವಹಾರಗಳಲ್ಲಿ ಗಾಂಧಿ ಕುಟುಂಬಿಕರ ಪ್ರಾಬಲ್ಯವನ್ನು ತುಂಬಾ ಟೀಕಿಸಲಾಗಿದೆ. ೨೦೦೪ರಲ್ಲಿ ಸೋನಿಯಾ ಗಾಂಧಿ ಕಾಂಗ್ರೆಸ್
ಪಕ್ಷದ ಅಧ್ಯಕ್ಷೆಯಾಗಿ ನೇಮಕಗೊಂಡಾಗ, ಅದನ್ನು ಖಡಾಖಂಡಿತ ವಾಗಿ ವಿರೋಧಿಸಲಾಗಿತ್ತು. ಪಕ್ಷದ ಅಧ್ಯಕ್ಷರಾದವರು ಪ್ರಧಾನಿ ಹುದ್ದೆಗೆ
ಸಹಜ ಆಯ್ಕೆಯಾಗಿರುತ್ತಾರೆ. ವಿವಿಧ ವಲಯಗಳ ಜನರು ದೊಡ್ಡ ದನಿಯಲ್ಲಿ ಅವರ ವಿದೇಶಿ ಮೂಲದತ್ತ ಬೆಟ್ಟು ಮಾಡಿದರು. ಸೋನಿಯಾ
ಗಾಂಧಿಯ ‘ವಿದೇಶಿ ಮೂಲ’ದ ಬಗ್ಗೆ ಅಂದು ದೊಡ್ಡದಾಗಿ ಮಾತನಾಡಿದ ಹೆಚ್ಚಿನವರು ಇಂದು ರಿಷಿ ಸುನಕ್ ಬ್ರಿಟನ್ ಪ್ರಧಾನಿ ಯಾದಾಗ ಆನಂದತುಂದಿಲರಾಗಿದ್ದಾರೆ.
ಸವಾಲುಗಳು ಅಗಾಧವಾಗಿರುವ ಹಾಗೂ ವಿಭಾಜಕ ಶಕ್ತಿಗಳು ರಾಜಕೀಯ ಅಖಾಡ ಮತ್ತು ಸರಕಾರಿ ಯಂತ್ರಗಳಲ್ಲಿ ವಿಜೃಂಭಿಸುತ್ತಿ ರುವ
ಹೊತ್ತಿನಲ್ಲಿ ಖರ್ಗೆ ಕಾಂಗ್ರೆಸ್‌ನ ಅತ್ಯುನ್ನತ ಸ್ಥಾನವನ್ನು ವಹಿಸಿ ಕೊಳ್ಳುತ್ತಿದ್ದಾರೆ. ಉದಾಹರಣೆಗೆ; ವಿಶ್ವವಿದ್ಯಾನಿಲಯಗಳ ಉಪ ಕುಲಪತಿಗಳು ಮತ್ತು ಬೋಧಕ ಸಿಬ್ಬಂದಿಯನ್ನು ಅವರ ಶೈಕ್ಷಣಿಕ ಅರ್ಹತೆಯನ್ನು ಪರಿಗಣಿಸದೆ, ಮುಖ್ಯವಾಗಿ ಬಲಪಂಥೀಯ ಸಿದ್ಧಾಂತಕ್ಕೆ ಅವರು ಹೊಂದಿರುವ ಬದ್ಧತೆಯನ್ನು ಪರಿಗಣಿಸಿ ನೇಮಕ
ಮಾಡಲಾಗುತ್ತಿದೆ. ದೇಶದ ಜನರು ವಿವಿಧ ವಿಷಯಗಳಲ್ಲಿ ನೋವಿನಿಂದ
ನರಳುತ್ತಿರುವ ಹೊತ್ತಿನಲ್ಲಿ ಸರಕಾರವು ಇಂಥ ನಕಾರಾತ್ಮಕ ಚಟುವಟಿಕೆ ಗಳಲ್ಲಿ ತೊಡಗಿಕೊಂಡಿದೆ.
ಜಾಗತಿಕ ಹಸಿವು ಸೂಚ್ಯಂಕ, ಪತ್ರಿಕಾ ಸ್ವಾತಂತ್ರ್ಯ, ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳು, ಧಾರ್ಮಿಕ ಸ್ವಾತಂತ್ರ್ಯವು ಯಾವುದೇ ತಡೆಯಿಲ್ಲದೆ ಕುಸಿಯುತ್ತಾ ಸಾಗುತ್ತಿದೆ. ದೇಶದ ಸಾಮಾನ್ಯ ಜನರ ಆರ್ಥಿಕ ಸಂಕಷ್ಟ ಹತಾಶೆಯ ಮಟ್ಟವನ್ನು ತಲುಪಿದೆ. ಅಗತ್ಯ ವಸ್ತುಗಳ ಬೆಲೆಗಳು ಆಕಾಶಮುಖಿಯಾಗಿ ಸಾಗುತ್ತಿವೆ, ನಿರುದ್ಯೋಗ ತಾಂಡವವಾಡುತ್ತಿದೆ ಮತ್ತು ರೈತರ ಸಂಕಷ್ಟ ಮೇರೆ ಮೀರುತ್ತಿದೆ. ಅಲ್ಪಸಂಖ್ಯಾತರ ವಿರುದ್ಧದ ದೌರ್ಜನ್ಯಗಳು ಹೆಚ್ಚುತ್ತಿವೆ ಎಂಬುದಾಗಿ ಹಲವು ಅಂತರ್‌ರಾಷ್ಟ್ರೀಯ ಸಂಸ್ಥೆಗಳು ಎಚ್ಚರಿಸಿವೆ. ಜನಾಂಗೀಯ ಹತ್ಯೆಯ ಕುರಿತ ಅಧ್ಯಯನಗಳಲ್ಲಿ ಪರಿಣತಿ ಪಡೆದಿರುವ ಗ್ರೆಗರಿ ಸ್ಟ್ಯಾಂಟನ್, ಅಲ್ಪ ಸಂಖ್ಯಾತರಿಗೆ ಸಂಬಂಧಿಸಿ ಎಚ್ಚರಿಕೆಯ ಸೂಚನೆಗಳನ್ನು ನೀಡುತ್ತಿದೆ.
ಈ ಹಿನ್ನೆಲೆಯಲ್ಲಿ, ಅತ್ಯಂತ ದೊಡ್ಡ ಪ್ರತಿಪಕ್ಷದ ನಾಯಕನಾಗಿ ಅವರು, ಕಾಂಗ್ರೆಸ್ ಯಾವ ಮೌಲ್ಯಗಳ ಆಧಾರದಲ್ಲಿ ಸ್ಥಾಪನೆ ಯಾಗಿದೆಯೋ ಆ ಮೌಲ್ಯಗಳನ್ನು ಸಂರಕ್ಷಿಸುವ ಮತ್ತು ಬಲಪಡಿಸುವ ಬೃಹತ್ ಸವಾಲನ್ನು ಎದುರಿಸುತ್ತಿದ್ದಾರೆ. ಭಾರತೀಯರ ರಾಜಕೀಯ ಬೇಡಿಕೆಗಳನ್ನು ಬ್ರಿಟಿಷರಿಗೆ ತಲುಪಿಸುವ ಧ್ವನಿಯಾಗಿ ೧೮೮೫ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸನ್ನು ಸ್ಥಾಪಿಸಲಾಯಿತು. ಕೈಗಾರಿಕೀಕರಣಕ್ಕಾಗಿ ಮೂಲಸೌಕರ್ಯಗಳನ್ನು ರೂಪಿಸಬೇಕು, ಭೂಸುಧಾರಣೆಗಳನ್ನು ತರಬೇಕು, ಭಾರತದಲ್ಲಿ ಐಸಿಎಸ್ ಪರೀಕ್ಷೆಗಳ ಕೇಂದ್ರಗಳನ್ನು ಸ್ಥಾಪಿಸಬೇಕು, ಸರಕಾರದಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಬೇಕು- ಇವೇ ಮುಂತಾದ ಬೇಡಿಕೆಗಳು ಅಂದು ಚಾಲ್ತಿಯಲ್ಲಿದ್ದವು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಪನೆಯಲ್ಲಿ ಲಾರ್ಡ್ ಹ್ಯೂಮ್ ಪ್ರಮುಖ ಪಾತ್ರ ವಹಿಸಿದರು. ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಬೇಕೆಂದು ಕೇಳುವ ಸಂಘಟನೆಗಳು ಕಾಂಗ್ರೆಸ್ ಸ್ಥಾಪನೆಯ ಬೆನ್ನ ಹಿಂದಿದ್ದವು. ಧರ್ಮ, ಜಾತಿ ಮತ್ತು ಪ್ರದೇಶ ಎಂಬ ಸಂಕುಚಿತ ಮನೋಭಾವಗಳನ್ನು ಮೀರಿ ಕಾಂಗ್ರೆಸನ್ನು ಸ್ಥಾಪಿಸಲಾಯಿತು. ಬಳಿಕ, ಸೂಕ್ತ ಸಮಯದಲ್ಲಿ ಮಹಿಳೆಯರೂ ಈ ಸಂಘಟನೆಗೆ ಸೇರ್ಪಡೆ ಗೊಂಡರು. ಕಾಂಗ್ರೆಸ್ ಅಧ್ಯಕ್ಷರ ಹುದ್ದೆಯು ಮಹತ್ವದ್ದಾಗಿದೆ. ಮುಸ್ಲಿಮರು (ಮೌಲಾನಾ ಆಝಾದ್), ಕ್ರೈಸ್ತರು (ಡಬ್ಲ್ಯು.ಸಿ. ಬ್ಯಾನರ್ಜಿ), ಪಾರ್ಸಿಗಳು (ದಾದಾಭಾಯ್ ನವರೋಜಿ) ಈ ಹುದ್ದೆಯನ್ನು ಅಲಂಕರಿಸಿದ್ದಾರೆ ಹಾಗೂ ಆ ಮೂಲಕ ಸಂಘಟನೆಗೆ ‘ಎಲ್ಲರನ್ನೂ ಒಳಗೊಳ್ಳುವ ಸಂಘಟನೆ’ ಎಂಬ ರೂಪವನ್ನು ನೀಡಿದ್ದಾರೆ. ಅದರ ಆರಂಭಿಕ ನಾಯಕರಾದ ಲೋಕಮಾನ್ಯ ಬಾಲಗಂಗಾಧರ ತಿಲಕ್, ಎಮ್.ಜಿ. ರಾನಡೆ ಮತ್ತು ಗೋಪಾಲಕೃಷ್ಣ ಗೋಖಲೆ ಮುಂತಾದವರು ಸಂಸ್ಥೆಗೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ತುಂಬುತ್ತಾ ಹಾಗೂ ವಸಾಹತು ಆಡಳಿತಗಾರರ ಸ್ವೇಚ್ಛಾಚಾರದ ನೀತಿಗಳ ವಿರುದ್ಧ ಹೋರಾಡುತ್ತಾ ಸದೃಢ ಪಂಚಾಂಗವನ್ನು ಹಾಕಿದರು.
ಮಹಾತ್ಮಾ ಗಾಂಧಿಯ ಆಗಮನದ ಬಳಿಕ, ಬ್ರಿಟಿಷರ ವಿರುದ್ಧ ಸಾಮೂಹಿಕ ಚಳವಳಿಗಳನ್ನು ಆರಂಭಿಸಲಾಯಿತು. ಅವುಗಳು ಜನರನ್ನು ಒಗ್ಗೂಡಿಸಿದವು ಹಾಗೂ ಬ್ರಿಟಿಷರು ಭಾರತ ಬಿಟ್ಟು ಹೋಗು ವಲ್ಲಿ ಪ್ರಮುಖ ಪಾತ್ರ ವಹಿಸಿದವು. ಮಹಾತ್ಮಾ ಗಾಂಧೀಜಿಯ ವರ್ಚಸ್ಸು, ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಿತಾಸಕ್ತಿಯನ್ನೂ ಗಣನೆಗೆ
ತೆಗೆದುಕೊಳ್ಳುವ ಅವರ ನೀತಿಯು ಪಕ್ಷದ ನೀತಿಗಳಿಗೆ ಮಾದರಿ ಯಾದವು. ದುರದೃಷ್ಟವಶಾತ್, ಜಾಗತಿಕ ಒತ್ತಡಗಳಿಂದಾಗಿ ಬಡವರ ಹಿತಾಸಕ್ತಿಗಳನ್ನು ಗಾಳಿಗೆ ತೂರುವ ಕೆಲವು ಆರ್ಥಿಕ ನೀತಿಗಳು ಜಾರಿಗೆ ಬಂದವು. ಅವುಗಳ ಹೊರತಾಗಿಯೂ, ಯುಪಿಎ ಒಂದು ಮತ್ತು ಎರಡರ ಅವಧಿಗಳಲ್ಲಿ ಮಾಹಿತಿ ಹಕ್ಕು, ಆರೋಗ್ಯ, ಶಿಕ್ಷಣ ಮುಂತಾದ ಜನಪರ ಕಾಯ್ದೆಗಳು ಜಾರಿಗೆ ಬಂದವು. ಸಮಾಜ ಕಲ್ಯಾಣ ನೀತಿಗಳಲ್ಲಿ ಸಾಮಾಜಿಕ ಚಳವಳಿಗಳು ಮತ್ತು ಪ್ರಗತಿಪರ ಶಕ್ತಿಗಳು ಪ್ರಾತಿನಿಧ್ಯವನ್ನು ಗಳಿಸಿದವು.
ಸರಕಾರದಲ್ಲಿ ಜನಪರ ನೀತಿಗಳು ಪ್ರಾಧಾನ್ಯ ಪಡೆಯುವ ಪ್ರವೃತ್ತಿಯು ನಿಧಾನವಾಗಿ ಕೊನೆಗೊಳ್ಳಲು ಆರಂಭಿಸಿತು. ೧೯೮೦ ಮತ್ತು ೧೯೮೬ರ ಮೀಸಲಾತಿ ವಿರೋಧಿ ಗಲಭೆಗಳು, ಪರಿಸ್ಥಿತಿಯು ಮುಂದೆ ತೆಗೆದುಕೊಳ್ಳಲಿರುವ ತಿರುವುಗಳ ಬಗ್ಗೆ ಮುನ್ನೆಚ್ಚರಿಕೆಯನ್ನು ನೀಡಿದವು. ಮಂಡಲ ಆಯೋಗದ ವರದಿ ಜಾರಿಯ ಬಳಿಕ, ಮೀಸಲಾತಿಗೆ ವಿರೋಧವು ಅಡ್ವಾಣಿಯ ರಥಯಾತ್ರೆಯ ರೂಪದಲ್ಲಿ ವ್ಯಕ್ತವಾಯಿತು. ಅದರ ಬೆನ್ನಲ್ಲೇ ಬಾಬರಿ ಮಸೀದಿ ಧ್ವಂಸಗೊಂಡಿತು. ಈ ಘಟನೆಗಳು ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಬೀಜಗಳನ್ನು ಬಿತ್ತಿದವು. ಇದರ ಜೊತೆಗೆ, ದನದ ಮಾಂಸ, ಜನಸಂಖ್ಯಾ ಸಮತೋಲನ, ಘರ್ ವಾಪ್ಸಿ, ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿ ಮುಂತಾದ ವಿಷಯಗಳು, ಶತಮಾನಗಳಿಂದ ಜನರಲ್ಲಿ ಬೆಳೆದು ಬಂದಿದ್ದ ಭ್ರಾತೃತ್ವದ ಮೇಲೆ ದಾಳಿ ಮಾಡಿದವು.
ಉದಯಪುರದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶವು (೨೦೨೨) ಪಕ್ಷಕ್ಕೆ ತಿರುವೊಂದನ್ನು ನೀಡಬಹುದು ಎಂದು ಅನಿಸುತ್ತದೆ. ಭ್ರಾತೃತ್ವ, ಸಂವಿಧಾನದ ಪೀಠಿಕೆಯಲ್ಲಿರುವ ಪ್ರಧಾನ ಮೌಲ್ಯಗಳು ಮತ್ತು ದೇಶದ ಅಭಿವೃದ್ಧಿಗೆ ಅಗತ್ಯವಾಗಿರುವ ಅಂಶಗಳನ್ನು ಅದು ಮರಳಿ ತರಬಹುದು ಎಂದನಿಸುತ್ತದೆ. ನಮ್ಮ ಆಡಳಿತ ವ್ಯವಸ್ಥೆಯೊಳಗೆ ಕೋಮುವಾದಿ ಶಕ್ತಿಗಳು ನುಸುಳಿರುವುದು ಅತ್ಯಂತ ಆತಂಕದ ಸಂಗತಿಯಾಗಿದೆ. ಈ ಪಕ್ಷದ ಅಧ್ಯಕ್ಷ ಸ್ಥಾನವನ್ನು ಖರ್ಗೆ ವಹಿಸಿಕೊಳ್ಳುತ್ತಿರುವಾಗ, ಪಕ್ಷದ ಉನ್ನತ ನಾಯಕರ ಪೈಕಿ ಒಬ್ಬರಾಗಿರುವ ರಾಹುಲ್ ಗಾಂಧಿ ‘ಭಾರತ್ ಜೋಡೊ (ನಫ್ರತ್ ಚೋಡೊ)’ ಯಾತ್ರೆಯಲ್ಲಿ ತೊಡಗಿದ್ದಾರೆ. ಇದು ಗಾಂಧಿ, ಪಟೇಲ್, ನೆಹರೂ, ಸುಭಾಶ್ಚಂದ್ರ ಬೋಸ್ ಮತ್ತು ಅಂಬೇಡ್ಕರ್‌ರಂಥ ಮಹಾನ್ ನಾಯಕರ ಕನಸಿನ ಭಾರತದ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ದೇಶದ ಜನರನ್ನು ಒಗ್ಗೂಡಿಸುವ ಪ್ರಭಾವಿ ಅಭಿಯಾನವಾಗಬಹುದಾಗಿದೆ.
ಈ ಯಾತ್ರೆಯಲ್ಲಿ ಪ್ರಸ್ತಾಪಿಸಲಾಗುತ್ತಿರುವ ವಿಷಯಗಳು ರಾಷ್ಟ್ರೀಯ
ಹಿತಾಸಕ್ತಿಗೆ ಪೂರಕವಾಗಿದೆ. ನಮ್ಮ ಸಂವಿಧಾನದ ಮೇಲೆ ನಡೆಯುವ ಸೂಕ್ಷ್ಮ ದಾಳಿಗಳನ್ನೂ ಇಂದು ನಾವು ವಿರೋಧಿಸಬೇಕಾಗಿದೆ ಹಾಗೂ
ಸರ್ವರನ್ನೂ ಒಳಗೊಳ್ಳುವ ಸಂವಿಧಾನದ ಆಶಯವನ್ನು ರಕ್ಷಿಸಬೇಕಾಗಿದೆ.
ಕೃಪೆ: countercurrents.org