ಮಂಗಳೂರು: ಕೊಲೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ
ಮಂಗಳೂರು(Mangaluru): ಬೆಳ್ತಂಗಡಿಯ (Belthangady) ಕಳಿಯ ಗ್ರಾಮದಲ್ಲಿ 2017ರಲ್ಲಿ ನಡೆದಿದ್ದ ಟಿಪ್ಪರ್ ಚಾಲಕ (Tipper Driver) ಗುರುವಾಯನಕೆರೆ ಕುವೆಟ್ಟು ಗ್ರಾಮದ ಶಿವಾಜಿನಗರದ ಪ್ರದೀಪ್(36) ಎಂಬವರ ಕೊಲೆ ಪ್ರಕರಣದ ಆರೋಪಿ ಮೊಡಂತ್ಯಡ್ಕ ನ್ಯಾಯತರ್ಪು ನಿವಾಸಿ ದಿನೇಶ್(32) ಎಂಬಾತನಿಗೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಸೋಮವಾರ ತೀರ್ಪು ನೀಡಿದೆ.
ಆರೋಪಿ ದಿನೇಶ್ ಕೆಲಸದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರದೀಪ್‌ಗೆ ಬೈದು ಬಳಿಕ ರಾಡ್‌ನಿಂದ ಹೊಡೆದಿದ್ದ ಎಂದು ಆರೋಪಿಸಲಾಗಿತ್ತು. ಗಂಭೀರ ಗಾಯಗೊಂಡಿದ್ದ ಪ್ರದೀಪ್ ಮೃತಪಟ್ಟಿದ್ದರು. ಈ ಬಗ್ಗೆ ಕೊಲೆ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ದ.ಕ.ಜಿಲ್ಲೆಯ ಗ್ರಾಪಂ ಉಪಚುನಾವಣೆ: ಫಲಿತಾಂಶ ಪ್ರಕಟ
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಶನಿವಾರದಂದು ಆರೋಪ ಸಾಬೀತಾಗಿರುವುದಾಗಿ ತೀರ್ಪು ನೀಡಿದ್ದರು. ಹಾಗೇ ಆರೋಪಿ ದಿನೇಶ್‌ನಿಗೆ ಸೋಮವಾರ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿದ್ದಾರೆ. ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ 1 ವರ್ಷ ಹೆಚ್ಚುವರಿ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ಕೊಲೆಯಾದ ಪ್ರದೀಪ್‌ರ ತಾಯಿಗೆ ಪರಿಹಾರ ನೀಡುವಂತೆಯೂ ಆದೇಶಿಸಿದ್ದಾರೆ.
ಈ ಹಿಂದೆ ಸರಕಾರಿ ಅಭಿಯೋಜಕರಾಗಿದ್ದ ಶೇಖರ ಶೆಟ್ಟಿ ಸಾಕ್ಷಿಗಳ ವಿಚಾರಣೆ ನಡೆಸಿದ್ದರು. ಪ್ರಸ್ತುತ ಸರಕಾರಿ ಅಭಿಯೋಜಕಿಯಾಗಿ ಜುಡಿತ್ ಒ.ಎಂ. ಕ್ರಾಸ್ತಾ ವಾದ ಮಂಡಿಸಿದ್ದರು.