ಜೈನ ಸಮುದಾಯದ ಯಾವುದೇ ಆಕ್ಷೇಪವಿಲ್ಲ: ಪುಷ್ಪರಾಜ್ ಜೈನ್
ಮಹಾವೀರ ವೃತ್ತದ ಬಳಿ ಶಿವಾಜಿ ಪ್ರತಿಮೆ ನಿರ್ಮಾಣದ ವಿಚಾರ
ಮಂಗಳೂರು,ನ.1: ಮಹಾವೀರ ವೃತ್ತದ ಮತ್ತೊಂದು ಬದಿಯ ಪೊಲೀಸ್ ಚೌಕಿ ಬಳಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣದ ವಿಚಾರದಲ್ಲಿ ಜೈನ ಸಮುದಾಯದ ಯಾವುದೇ ಆಕ್ಷೇಪವಿಲ್ಲ ಎಂದು ಜೈನ ಸಮುದಾಯದ ಮುಖಂಡ ಪುಷ್ಪರಾಜ್ ಜೈನ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಮಹಾವೀರ ವೃತ್ತ ನಿರ್ಮಾಣಕ್ಕೆ ಈಗಾಗಲೇ ಸರಕಾರವೇ ನಾಮನಿರ್ದೇಶಗೊಳಿಸಿರುವ ಕಾರಣ ಶಿವಾಜಿ ಪ್ರತಿಮೆ ನಿರ್ಮಾಣದಿಂದ ಮಹಾವೀರ ವೃತ್ತದ ಹೆಸರಿಗೆ ಯಾವುದೇ ಸಮಸ್ಯೆಯಿಲ್ಲ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರವೆಸಗುವವರಿಗೂ ನಮ್ಮ ಸಮುದಾಯಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.
ಸಕಾರಾತ್ಮಕ ಸ್ಪಂದನೆ:
ಜೈನ ಸಮುದಾಯಕ್ಕೆ ಕೊಟ್ಟ ಮಾತಿನಂತೆ ಶಾಸಕರು ಮತ್ತು ಸಂಸದರು ವೃತ್ತ ನಿರ್ಮಾಣ, ಕಲಶ ಸ್ಥಾಪನೆ ಸೇರಿದಂತೆ ಮೇಲ್ಸೇತುವೆಗೆ ನಾಮಕರಣ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಜೈನ ಸಮುದಾಯ ಧನ್ಯವಾದಗಳನ್ನು ಸಲ್ಲಿಸುತ್ತದೆ. ಕಲಶ ನಿರ್ಮಾಣದ ಕಾಮಗಾರಿ ಶೀಘ್ರದಲ್ಲಿಯೇ ಪ್ರಾರಂಭವಾಗಲಿದ್ದು ಗತವೈಭವ ಪುನರಾವರ್ತನೆಯಾಗಲಿದೆ ಎಂದು ಪುಷ್ಪರಾಜ್ ಜೈನ್ ತಿಳಿಸಿದ್ದಾರೆ.
ಹಿಂದೆ ಇದ್ದ ಮಹಾವೀರ ವೃತ್ತವನ್ನು ಅಭಿವೃದ್ಧಿಯ ದೃಷ್ಟಿಯಿಂದ ತೆರವುಗೊಳಿಸಲಾಗಿತ್ತು. ಜೈನ ಸಮುದಾಯದ ಕೊಡುಗೆಯಾಗಿದ್ದ ಮಹಾವೀರ ವೃತ್ತದ ಕಲಶ ಪುನರ್ ನಿರ್ಮಾಣದ ಕುರಿತು ಶಾಸಕ ವೇದವ್ಯಾಸ್ ಕಾಮತ್ ಅವರಲ್ಲಿ ಸಮುದಾಯದ ವತಿಯಿಂದ ಬೇಡಿಕೆಯಿಡಲಾಗಿತ್ತು. ಆ ಸಂದರ್ಭದಲ್ಲಿ ಕಲಶ ನಿರ್ಮಾಣದ ಭರವಸೆ ನೀಡಿದ್ದ ಶಾಸಕರು ಹಾಗೂ ಸಂಸದರು ಇತ್ತೀಚೆಗೆ ವೃತ್ತ ನಿರ್ಮಾಣದ ಭೂಮಿಪೂಜೆ ನೆರವೇರಿಸುವ ಮೂಲಕ ಸಮುದಾಯಕ್ಕೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ ಎಂದು ಪುಷ್ಪರಾಜ್ ಜೈನ್ ತಿಳಿಸಿದ್ದಾರೆ.