ಕಲಬುರಗಿ: ಬಹಿರ್ದೆಸೆಗೆ ತೆರಳಿದ್ದ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ
ಕಲಬುರಗಿ, ನ.2: ಬಯಲು ಬಹಿರ್ದೆಸೆಗೆ ತೆರಳಿದ್ದ ಬಾಲಕಿಯನ್ನು ಅತ್ಯಾಚಾರಗೈದು ಕೊಲೆಗೈದ (Rape and Murder) ಘಟನೆ ಜಿಲ್ಲೆಯ ಆಳಂದ ತಾಲೂಕಿನ ಕೊರಳ್ಳಿ ಗ್ರಾಮದ ಸೀಮಾಂತರದಲ್ಲಿ ಮಂಗಳವಾರ ನಡೆದಿದೆ.
ವಿದ್ಯಾಭ್ಯಾಸದ ಉದ್ದೇಶದಿಂದ ಅಜಲಪುರ ತಾಲೂಕಿನ 15 ವರ್ಷದ ಬಾಲಕಿ ಆಳಂದ ತಾಲೂಕಿನ ಕೊರಳ್ಳಿಯ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯವಿದ್ದಳು. ಇತ್ತೀಚೆಗೆ ಬಾಲಕಿ ಹಬ್ಬಕ್ಕೆಂದು ಐದಾರು ದಿನಗಳ ಮಟ್ಟಿಗೆ ಊರಿಗೆ ತೆರಳಿದ್ದು, ಮಂಗಳವಾರವಷ್ಟೇ ಮರಳಿ ಕೊರಳ್ಳಿಗೆ ಬಂದಿದ್ದಳು. ಆದರೆ ಮಧ್ಯಾಹ್ನ ಮನೆಯಿಂದ ಹೋದವಳು ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಾಲಕಿ ಸಂಬಂಧಿಕರು ಹುಡುಕಾಡಿದಾಗ ಸಮೀಪದ ಕಬ್ಬಿನ ತೋಟವೊಂದರಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಮಂಗಳವಾರ ಮಧ್ಯಾಹ್ನ ಬಯಲುಕಡೆ ಬಹಿರ್ದೆಸೆಗೆ ತೆರಳಿದ್ದ ಬಾಲಕಿಯನ್ನು ಕಬ್ಬಿನಗದ್ದೆಗೆ ಎಳೆದೊಯ್ದು ಕೈಕಾಲುಗಳನ್ನು ಕಟ್ಟಿ ಲೈಂಗಿಕ ದೌರ್ಜನ್ಯ ಎಸಗಿ ಕೊಲೆಗೈಯಲಾಗಿದೆ. ಬಾಲಕಿಯ ಮೈ ಮೇಲಿನ ಬಟ್ಟೆ ಹರಿದಿದ್ದು, ಅಲ್ಲಲ್ಲಿ ರಕ್ತದ ಕಲೆಗಳಿವೆ. ಕುತ್ತಿಗೆಯಲ್ಲೂ ರಕ್ತದ ಕಲೆಗಳಿದ್ದು, ಕತ್ತು ಹಿಚುಕಿ ಕೊಲೆಗೈದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆ ಬಗ್ಗೆ ಅರಿವಿಗೆ ಬರುತ್ತಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಡಿವೈಎಸ್ಪಿ ರವೀಂದ್ರ ಶಿರೂರ, ಸಿಪಿಐ ಬಾಸು ಚವ್ಹಾಣ್, ಪಿಎಸ್ಸೈ ತಿರುಮಲೇಶ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕುಟುಂಬ ಹಾಗೂ ಊರಿನವರಿಂದ ಮಾಹಿತಿ ಕಲೆಹಾಕಿದ್ದಾರೆ.
ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.