varthabharthi


ಅನುಗಾಲ

ಕಾಂತಾರ-ಒಂದು ಜಿಜ್ಞಾಸೆ

ವಾರ್ತಾ ಭಾರತಿ : 3 Nov, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

‘ಕಾಂತಾರ’ ಸಿನೆಮಾ ನಮ್ಮ ಗ್ರಾಮೀಣ ನಂಬಿಕೆಗಳನ್ನು ಆಧರಿಸಿ ಅವನ್ನು ಆಧುನಿಕ ದೃಷ್ಟಿಕೋನದಲ್ಲಿ ನಮ್ಮ ನಡುವಣ ಪ್ರಕೃತಿಯೆಂಬಂತೆ ಬಿಂಬಿಸಲು ಸಫಲವಾಯಿತು. ಇದರ ನಿರ್ಮಾತೃಗಳು ಭಾರೀ ಆಸೆ-ಆಕಾಂಕ್ಷೆಗಳನ್ನಿಟ್ಟುಕೊಂಡು ಸಿನೆಮಾ ಮಾಡಿದ ಹಾಗಿರಲಿಲ್ಲ. ಆದರೆ ಯಾವುದೋ ಒಂದು ಘಳಿಗೆಯಲ್ಲಿ ಈ ಚಿಪ್ಪಿಗೆ ಸ್ವಾತಿಮುತ್ತಿನ ಅದೃಷ್ಟ ಲಭ್ಯವಾಯಿತು. ಅದು ಮುತ್ತಾಯಿತು. ಯಶಸ್ಸಿನ ಕಾರಣಗಳು ಹತ್ತಾರು. ಪ್ರಾಯಃ ನೊಂದವರ ನೋವನ್ನು ನೊಂದವರಿಗೆ ಮಾತ್ರವಲ್ಲ ನೋಯದವರಿಗೂ ತಲುಪಿಸಲು ಈ ಸಿನೆಮಾ ಸಫಲವಾಯಿತೆಂದು ಅನ್ನಿಸುತ್ತದೆ.


ಒಂದು ಸಿನೆಮಾವನ್ನು ಅದರೊಳಗೆಷ್ಟು ಮತ್ತು ಹೊರಗೆಷ್ಟು ವಿಮರ್ಶಿಸಬೇಕು? ಕರಾವಳಿಯಲ್ಲಿ ಪ್ರಚಲಿತವಿರುವ ಹಾಸ್ಯಪ್ರಸಂಗವೊಂದರಲ್ಲಿ ಆತ ಸಿನೆಮಾಕ್ಕೆ ಹೋಗುತ್ತಾನೆ. ಅದರಲ್ಲಿ ಹುಲಿಯೊಂದು ಹಾರುವ ಸನ್ನಿವೇಶ ಬಂದಾಗ ಭಯಭೀತನಾದ ಆತ ಚಿತ್ರಮಂದಿರದಿಂದ ಹೊರಗೆ ಓಡುತ್ತಾನೆ. ಹೊರಗಿರುವ ಭದ್ರತಾ ಕಾವಲುಗಾರ ಆತನಿಗೆ ‘‘ಇದು ಸಿನೆಮಾದ ಹುಲಿ ಮಾತ್ರ, ಹೆದರಬೇಕಾಗಿಲ್ಲ’’ ಎಂದು ಒಳಗೆ ಕಳುಹಿಸುತ್ತಾನೆ. ಈ ಹುಲಿ ಹಾರುವ ಸನ್ನಿವೇಶ ಮತ್ತೆರಡು ಬಾರಿ ಬಂದಾಗಲೂ ಆತ ಹೊರಗೋಡುತ್ತಾನೆ ಮತ್ತು ಕಾವಲುಗಾರ ಆತನಿಗೆ ಧೈರ್ಯ ಹೇಳುತ್ತಾನೆ. ಮೂರನೇ ಬಾರಿ ಹೇಳಿದಾಗ ಆತ ‘‘ಅದು ಸಿನೆಮಾದ ಹುಲಿ ಅಂತ ನನಗ್ಗೊತ್ತುಂಟು, ನಿನಗೂ ಗೊತ್ತುಂಟು, ಆ ಹುಲಿಗೆ ಗೊತ್ತಿರಬೇಕಲ್ಲ!’’ ಎಂದು ಉತ್ತರಿಸುತ್ತಾನೆ. ಆತನ ಭಯ ನೀಗುವುದಿಲ್ಲ. ಕಾಂತಾರ ಎಂಬ ಸಂಸ್ಕೃತ ಹಾಗೂ ಕನ್ನಡ ಪದನಾಮದ (ಉದಾಹರಣೆಗೆ ಭರ್ತೃಹರಿಯ ಶತಕಗಳಲ್ಲಿ ಸಂಸ್ಕೃತದ, ಕನ್ನಡ ಜೈಮಿನಿ ಭಾರತದಲ್ಲಿ ಕನ್ನಡದ ಪದವಾಗಿ ಇದು ಬಳಸಲ್ಪಟ್ಟಿದೆ) ಈ ಕನ್ನಡ ಸಿನೆಮಾದಲ್ಲಿ ಕಂಡ ತುಳು(ನಾಡಿನ) ಸಂಸ್ಕೃತಿ ಅನೇಕರಿಗೆ ಹೀಗನ್ನಿಸಿದ್ದೇ ಜಾಸ್ತಿಯೆಂದು ನಾನಂದುಕೊಳ್ಳುತ್ತೇನೆ. ನಾನು ಈ ಸಿನೆಮಾದ ಕುರಿತ ಸಾಕಷ್ಟು ವಿಮರ್ಶೆ, ಅನಿಸಿಕೆ, ಅಭಿಪ್ರಾಯ, ಅಭಿಮತ, ಟೀಕೆಗಳನ್ನು ಓದಿದಾಗಲೂ ಈ ಸಿನೆಮಾವನ್ನು ನೋಡಬೇಕೆಂದು ಅಥವಾ ನೋಡಬಹುದೆಂದು ಅನ್ನಿಸಿರಲಿಲ್ಲ. (ಕಳೆದ ಕೆಲವು ದಶಕಗಳಿಂದ ನಾನು ಭೂರಿ ಪ್ರಚಾರಗೊಂಡ ಸಿನೆಮಾಗಳನ್ನು ಥಿಯೇಟರಿನಲ್ಲಿ ನೋಡಿದ್ದು ಇಲ್ಲವೇ ಇಲ್ಲವೆನ್ನುವಷ್ಟಲ್ಲದಿದ್ದರೂ ಅಪರೂಪ. ಅವುಗಳ ಧೂಳು ನೆಲದಲ್ಲಿ ತಂಗಿದ ಮೇಲೆ ಟೀವಿಯಲ್ಲಿ ನೋಡಿದ್ದೇ ಹೆಚ್ಚು.) ನಾನಿರುವ ಸ್ಥಳ ಜಿಲ್ಲಾ ಕೇಂದ್ರವಾದರೂ ಅಲ್ಲಿ ಮಲ್ಟಿಪ್ಲೆಕ್ಸ್ ಹೋಗಲಿ, ಟೆಂಟ್ ಸಿನೆಮಾ ಥಿಯೇಟರೂ ಇಲ್ಲ. ಅಷ್ಟರಲ್ಲಿ ನನ್ನ ಕಕ್ಷಿದಾರರೊಬ್ಬರು ಟಿಕೇಟು ಖರೀದಿಸಿ ನನ್ನನ್ನು ಬಲವಂತವಾಗಿ ಈ ಸಿನೆಮಾ ನೋಡಿಸಿದರು. ನಾನು ನೋಡಿದೆ. ನಾನು ತಾಂತ್ರಿಕವಾಗಿ ಸಿನೆಮಾ ವಿಮರ್ಶಕನೂ ಅಲ್ಲ, ಸಾಹಿತ್ಯ ವಿಮರ್ಶಕನೂ ಅಲ್ಲ. ಆದರೂ ಒಂದಿಷ್ಟು.

ಈ ಸಿನೆಮಾ ಇಷ್ಟವಾಯಿತೆಂದರೆ ಬಹಳಷ್ಟು ಎಂದರ್ಥವಲ್ಲ. ಬಹಳ ದೊಡ್ಡ ಸಂದೇಶವೇನೂ ಈ ಸಿನೆಮಾದಲ್ಲಿ ಕಂಡುಬರಲಿಲ್ಲ. ‘‘ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಭಾವಗೀತ!’’ ಎಂದು ಕವಿ ಹೇಳಲಿಲ್ಲವೇ? ಆದರೆ ತೆಳುವಾದ ಒಂದು (ದಂತ) ಕತೆಯನ್ನು ಅದರ ಪ್ರಾದೇಶಿಕ ಮಿತಿಯಲ್ಲಿ ಚಿತ್ರೀಕರಿಸಿ ವಿಶ್ವಾತ್ಮಕಗೊಳಿಸಿದ್ದೇ ಅದರ ಹಿರಿಮೆ. ಭೂತದ ಐತಿಹ್ಯ ಕರಾವಳಿಯಲ್ಲಿ ಪ್ರಸಿದ್ಧವಾದದ್ದು. ಅದನ್ನು ನಿಗೂಢಗೊಳಿಸಿದ್ದು ಮಾತ್ರವಲ್ಲ, ಇತರ ಗ್ರಾಮೀಣ ವ್ಯವಹಾರವನ್ನು ಒಳಗೊಂಡು ಬಡಜನರ ನೆಲೆಯ ಸಮಸ್ಯೆಗಳನ್ನು ಆಕರ್ಷಕವಾಗಿ ಮೂಡಿಸಲಾಗಿದೆ. ಬಡವರ ಹೋರಾಟ ಪ್ರಕೃತಿಯೊಂದಿಗಲ್ಲ; ಪ್ರಕೃತಿಯೊಂದಿಗೇ ಅವರ ಒಡನಾಟ. ಅವರ ಹೋರಾಟ ಪ್ರಕೃತಿಯನ್ನು ನಿಯಂತ್ರಿಸಲು ಯತ್ನಿಸುವ ಕ್ಷುದ್ರಜೀವಿಗಳೊಂದಿಗೆ. ಅದು ಸರಕಾರವಿರಬಹುದು; ಊರಿನ ಶ್ರೀಮಂತರಿರಬಹುದು; ಪ್ರತಿಗಾಮಿ ಮನೋವೃತ್ತಿಯವರಿರಬಹುದು. ನೆಮ್ಮದಿಗಾಗಿ ಭೂತದೊಂದಿಗೆ ಕಾಡನ್ನು ವಿನಿಮಯಮಾಡಿಕೊಳ್ಳುವವನಿಗೆ ಮನಸ್ಸೇ ಸಾಧನ. ಮನಸ್ಸು ಹೇಗಿದೆಯೋ ಹಾಗೆ ಮನುಷ್ಯ. ಕಾಡನ್ನು ಭೂತ ಅನುಭವಿಸಿತೆಂಬುದಕ್ಕೆ ಯಾವ ಆಧಾರವೂ ಇಲ್ಲ. ಆದರೆ ಅವನಿಗೆ ನೆಮ್ಮದಿ ಸಿಕ್ಕಿತಲ್ಲ! ಅಷ್ಟು ಸಾಕು. ಭೂತವು ತನ್ನನ್ನು ಧರಿಸಿದವನೊಂದಿಗೆ ಕಾಡಿನೊಳಗಡೆ ಹೋಗಿ ಮಾಯವಾಗುವ ನಿಗೂಢತೆಗೆ ವಿವರಣೆಗಳಿಲ್ಲ; ವಿವರಣೆ ಬೇಡ.

ಸೈರಂಧ್ರಿಯನ್ನು ಕಾಡಲು ಹೊರಟ ಕೀಚಕನ ಸಾವಿನಂತೆ. ವಿವರಣೆ ಸಿಕ್ಕಿದರೆ ಅದು ನಿಗೂಢ ಹೇಗಾದೀತು? ಅದಕ್ಕೆ ಸವಾಲೆಸೆದವನು ರಕ್ತಕಾರಿ ಸತ್ತರೆ ಅದಕ್ಕೆ ವೈಜ್ಞಾನಿಕ ಕಾರಣವನ್ನು ಹುಡುಕಹೊರಟರೆ ಅದು ಸಿನೆಮಾ ಆಗುವುದಿಲ್ಲ. ಈಗ ಕಾಡು ಸರಕಾರದ್ದು. ಅದರ ಹಕ್ಕುಬಾಧ್ಯತೆಗಳು ನಿಯಮಾನುಸಾರ ನಡೆಯಬೇಕಾದ್ದು. ಭೂತದ ಹಕ್ಕಿಗೆ ಕಾನೂನುಗಳೆಲ್ಲಿವೆ? ಹೋಗಲಿ, ಕಾಡಿನಲ್ಲಿರುವ ಕ್ರೂರಪ್ರಾಣಿಗಳಿಗೆ, ವಿಷಪೂರಿತ ಹಾವುಗಳಿಗೆ ಯಾವ ಅರಣ್ಯ ಕಾನೂನು? ಅವೆಲ್ಲ ಊರಿಗೆ, ನಾಡಿಗೆ ಬಂದವುಗಳಿಗೆ ಮಾತ್ರ ಮತ್ತು ಕಾಡಿನೊಳಗೆ ನೆಲೆ ನಿಂತ ಮನುಷ್ಯರಿಗೆ. ಇಂತಹ ಬೌದ್ಧಿಕ ಸ್ಥಿತಿಯಲ್ಲಿ ದೈವದ ಬಲ, ಬೆಂಬಲ ಏನೂ ಮಾಡಲಾರದು. ಅದು ಏನು ಮಾಡಬೇಕಾದರೂ ಮಾನಸಿಕ ಸ್ಥಿತಿಯಲ್ಲಿ ಮಾತ್ರ. ಪ್ರತ್ಯಕ್ಷ ಅಧಿಕಾರವು ಅಮೂರ್ತ ಅಧಿಕಾರಕ್ಕಿಂತ ದೊಡ್ಡದು. ಆದ್ದರಿಂದ ದೈವ-ದೇವ-ಧರ್ಮ ಕೇಂದ್ರಗಳು ಕಾನೂನಿನಡಿ ಕೆಡವಲ್ಪಟ್ಟಾಗ ಜನರು ಅದನ್ನು ಅಸಹಾಯಕತೆಯಿಂದ ಗಮನಿಸಿ, ಅನುಭವಿಸಿ, ಅನಿವಾರ್ಯವೆಂಬಂತೆ ಮರೆಯುತ್ತಾರೆ. ಕಳೆದ ಕೆಲವು ವಾರಗಳಲ್ಲಿ ಬಹಳಷ್ಟು ವಾದ ವಿವಾದಗಳು ನಡೆದಿವೆ.

ಶ್ರೀಸಾಮಾನ್ಯನಿಂದ ಪಂಡಿತೋತ್ತಮರ ವರೆಗೂ ಈ ವಾದಸರಣಿ ಬೆಳೆದಿದೆ. ಮತೀಯ ಇಲ್ಲವೇ ರಾಜಕೀಯ ಆಧಾರದ ಸಿದ್ಧಾಂತದಡಿ ಕೆಲವರು, ಸಾಮಾಜಿಕ ಮೇಲು-ಕೀಳುಗಳನ್ನು ಬಂಡವಾಳವಾಗಿಸಿ ಕೆಲವರು, ಎಡಬಲದ ಕವಾಯತ್ತೂ ನಡೆದಿದೆ. ಇವ್ಯಾವುದೂ ಇಲ್ಲದೆ ಕಲೆಗಾಗಿ ಕಲೆ ಎಂಬಂತೆ ಕೆಲವರು ಚರ್ಚಿಸಿದರು. ಇವೆಲ್ಲವೂ ಅರಿವನ್ನು ವಿಸ್ತರಿಸುವ ಒಳ್ಳೆಯ ಓದನ್ನು ನೀಡಿದ್ದಂತೂ ಸತ್ಯ. ಸಮಾಜಶಾಸ್ತ್ರಜ್ಞ ಅಶೀಶ್ ನಂದಿ ತಮ್ಮ "An Ambiguous Journey to the City' (ನಗರಕ್ಕೆ ಒಂದು ಅಸ್ಪಷ್ಟ ಪ್ರಯಾಣ) ಎಂಬ ಕೃತಿಯಲ್ಲಿ ಕಲೆ ಮತ್ತು ಸಮಾಜವ್ಯವಸ್ಥೆ ಹಾಗೂ ನಮ್ಮ ಸಂಸ್ಕೃತಿಯ ಪಳೆಯುಳಿಕೆಗಳು ನಾಗರಿಕತೆಯ ಬೆಳವಣಿಗೆಯಡಿ ನಡೆಯಲಾಗದೆ ಕುಸಿದು ಬೀಳುವುದನ್ನು ವಿವರವಾಗಿ ಚಿತ್ರಿಸುತ್ತಾರೆ. ಸತ್ಯಜಿತ್ ರೇ ಸಿನೆಮಾದಿಂದ ಬರುವಾ ಅವರ ವರೆಗೆ, ದೇವದಾಸ್ ಯಶಸ್ಸಿನ ಬಗ್ಗೆ, ಹಾಗೆಯೇ ಪುರಾಣ ಪ್ರತಿಮೆಗಳು ವರ್ತಮಾನದಲ್ಲಿ ಒಡ್ಡಿಕೊಳ್ಳುವುದನ್ನು ಕರ್ಣನ ಪಾತ್ರದ ಮೂಲಕ ಹಾಗೆಯೇ ಕೌರವ-ಕರ್ಣ ಸಂಬಂಧವನ್ನು ಅಧರಿಸಿದ ‘ದಳಪತಿ’ ಎಂಬ ತಮಿಳು ಸಿನೆಮಾದ ಮೂಲಕ ತಲುಪಲು ಯತ್ನಿಸುತ್ತಾರೆ. ‘ಕಾಂತಾರ’ ಸಿನೆಮಾ ನಿಗೂಢ ಮನುಷ್ಯರ ಕತೆಯೂ ಆಗುವುದು ಈ ಕಾರಣದಿಂದಲೇ.

ಕಾಂತಾರವು ವೈದಿಕ ಪ್ರಜ್ಞೆಯನ್ನು ಬೆಂಬಲಿಸಿತು ಎಂದು ಒಂದು ವರ್ಗ ಹೇಳಿದರೆ ಇನ್ನೊಂದು ವರ್ಗ ಅದು ಮೂಢನಂಬಿಕೆಯನ್ನು ಬೆಳೆಸಿತು ಎಂದು ಹೇಳಿತು. ಅಷ್ಟೇ ಅಲ್ಲ, ಸಿನೆಮಾದ ನಾಯಕ, ನಿರ್ದೇಶಕನನ್ನೂ ಇಕ್ಕಟ್ಟಿಗೆ ಸಿಲುಕಿಸುವಷ್ಟು ಕ್ರೌರ್ಯವನ್ನೂ ಪ್ರದರ್ಶಿಸಿತು. ಒಂದು ಸಿನೆಮಾ ಜನಪ್ರಿಯವಾಗಬೇಕಾದರೆ ಅದು ಡಾಕ್ಯುಮೆಂಟರಿಯಂತೆ ವರದಿಯನ್ನೊಪ್ಪಿಸಲಾರದು. ಅಲ್ಲಿ ನಾವು ನಂಬದ, ಆದರೆ ಇಷ್ಟಪಡುವ ತಂತ್ರಗಳೇ ಬೇಕು. ಸಿನೆಮಾದಲ್ಲಿ ಬಳಸಿದ ಹಾಡಿನಲ್ಲಿ ಯಾವ ಮತ್ತು ಯಾರ ವೈಭವೀಕರಣವಿದೆಯೆಂಬುದು ಸಿನೆಮಾದೊಳಗೇ ವಿವೇಚಿಸಬೇಕಾದ ವಿಚಾರ. ಕಾಂತಾರ ಸಿನೆಮಾದಲ್ಲಿ ಕೊನೆಗೊಂದು ಹಾಡು ಬರುತ್ತದೆ. ‘‘ವರಾಹರೂಪಂ.. ದೈವ ವಿಶಿಷ್ಟಂ...’’ ಎಂದು. ಇದನ್ನು ಸಂಸ್ಕೃತ ಮತ್ತು ಆ ಮೂಲಕ ವೈದಿಕ ಎಂದೆಲ್ಲ ಟೀಕೆಗಳು ಬಂದವು. ಕಾಂತಾರ ಎಂಬ ಶೀರ್ಷಿಕೆಯೇ ಸಂಸ್ಕೃತ. ಅದು ಸಮಸ್ಯೆಯಾಗದವರಿಗೆ ಈ ಹಾಡು ಸಮಸ್ಯೆಯಾದದ್ದು ವಿಚಿತ್ರ. ನಮ್ಮಲ್ಲನೇಕರ ಹೆಸರುಗಳೇ ಸಂಸ್ಕೃತ ಜನ್ಯವಾದದ್ದು. ಅದು ಗುಣಸೂಚಕ ಹೇಗಾಗುತ್ತದೆ? ವರಾಹ ಎಂಬ ಪದ ವೈದಿಕವೇ ಯಾಕೆ ಅಗಬೇಕು? ಮಲೆಯಾಳ ಸಿನೆಮಾಗಳ ಬಹುಪಾಲು ಹಾಡುಗಳು ಸಂಸ್ಕೃತ ಭೂಯಿಷ್ಠವಾಗಿವೆ. ಒಂದು ವೇಳೆ ಈ ಹಾಡಿನ ಮೊದಲ ನಾಲ್ಕು ಸಾಲುಗಳು ಮಲೆಯಾಳವೆಂದು ಹೇಳಿದ್ದರೆ ವಿವಾದವನ್ನು ಗುಡಿಸಿಹಾಕಬಹುದಿತ್ತು.

ಈಗ ಕೃತಿಸ್ವಾಮ್ಯ ಸಮಸ್ಯೆ ಈ ಹಾಡಿಗೆ ಎದುರಾಗಿದೆ. ಅದು ಸಿನೆಮಾದ ಹೊರಗೆ ನಿಂತು ಅದನ್ನು ರೂಪುಗೊಳಿಸಿದವರ ಸಮಸ್ಯೆ. ಈಗ ಅದು ಸಂಸ್ಕೃತವೋ, ವೈದಿಕವೋ ಎಂಬುದು ಸಮಸ್ಯೆಯೇ ಅಲ್ಲ. ಕೃತಿಸ್ವಾಮ್ಯ ಕಾನೂನಿನಡಿ ಅದರ ಗತಿಯೇನು ಎಂಬುದು ಮಾತ್ರ ಸಮಸ್ಯೆ. ಯಾವುದೇ ಸಿನೆಮಾದ ಒಂದಷ್ಟು ಅಂಶಗಳು ಸದಾ ವಿವಾದಕ್ಕೆ ಗುರಿಯಾಗಬಲ್ಲವು. ಅವನ್ನು ಮರೆತು ಕಲಾತ್ಮಕತೆಯನ್ನು ಹೀರಬಲ್ಲವನಷ್ಟೇ ಕಲಾಭಿಮಾನಿಯಾಗಬಹುದು. ಕ್ಯಾಡ್‌ಬರಿ ಸಂಸ್ಥೆಯ ಜಾಹೀರಾತೊಂದು ಅದರಲ್ಲಿರುವ ವ್ಯಕ್ತಿಯ ಹೆಸರನ್ನು ದಾಮೋದರ ಎಂದು ಸೂಚಿಸಿದ್ದಕ್ಕಾಗಿ ವಿವಾದಕ್ಕೊಳಗಾಯಿತು. ಪ್ರಧಾನಿಯ ತಂದೆ ದಾಮೋದರ. ಆದ್ದರಿಂದ ಅದು ಆಕ್ಷೇಪಾರ್ಹ. ಯಾವ ವಸ್ತುವಿಗೂ, ವ್ಯಕ್ತಿಗೂ ಇಂತಹ ಕಳಂಕವನ್ನೋ ಆರೋಪವನ್ನೋ ಹೇರಬಹುದು. ಝಾಕಿರ್ ಹುಸೈನ್ ಅವರ ಮೂರು ಗಂಟೆಗಳ ಕಾಲದ ಸಂಗೀತ ಕಚೇರಿಯನ್ನು ಕೇಳಿದ ಸಂಗೀತ ವಿಮರ್ಶಕನೊಬ್ಬ ಅವರಲ್ಲಿ ‘‘ನಿಮ್ಮ ಸಂಗೀತದ ಎರಡು ಗಂಟೆ ಏಳು ನಿಮಿಷದ ಹೊತ್ತಿನಲ್ಲಿ ಒಂದೆಡೆ ಅಪಸ್ವರ ಬಂದಿದೆಯಲ್ಲ?’’ ಎಂದನಂತೆ. ಅದಕ್ಕವರು ‘‘ನೀವು ಈ ಬಗ್ಗೆ ತಲೆಕೆಡಿಸಿಕೊಂಡು ನನ್ನ ಒಟ್ಟು ಕಚೇರಿಯನ್ನು ಆಸ್ವಾದಿಸಲು ವಿಫಲರಾದಿರಿ ನೋಡಿ ಅದು ನಿಮ್ಮ ದೋಷ’’ ಎಂದರಂತೆ. ಛಿದ್ರಾನ್ವೇಶಣೆಗೆ ಎಲ್ಲೆಯಿಲ್ಲ. ಒಬ್ಬ ಸಿನೆಮಾವನ್ನು ಯಾಕೆ ನಿರ್ಮಿಸುತ್ತಾನೆ? ವ್ಯಾವಹಾರಿಕ ವಾಗಿ ನಷ್ಟಮಾಡಿಕೊಳ್ಳುವ ಸಲುವಾಗಿ ಖಂಡಿತಾ ಅಲ್ಲ.

ನಾವು ಸದಭಿರುಚಿಯೆಂದೆಲ್ಲ ಕೊಂಡಾಡುವ ಸಿನೆಮಾಗಳೂ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಳ್ಳಲು ತಯಾರಿರುವುದಿಲ್ಲ. ಹಾಗಾದರೆ ಸಿನೆಮಾವೊಂದನ್ನು ನಿರ್ಮಿಸುವವನು ಯಾವ ಆಧಾರದಲ್ಲಿ ಜನರನ್ನು ತಲುಪಲು ಯತ್ನಿಸಬೇಕು? ಒಂದು ವಿಚಾರವನ್ನು ಮನದಟ್ಟುಮಾಡಿಕೊಳ್ಳಬೇಕು: ಸಿನೆಮಾ ತಯಾರಿಗೆ ಸಾಕಷ್ಟು ವೆಚ್ಚವಿದೆ. ಬಂಡವಾಳ ಹಾಕುವವನು ಬೇಕು. ಹಲವರು ಸೇರಿ ಮಾಡುವ ಈ ಕಾರ್ಯಸಂಪನ್ನತೆಯಲ್ಲಿ ತಾಂತ್ರಿಕ ಪರಿಣತರು ಮತ್ತು ಕಲಾವಿದರು ಪರಸ್ಪರ ನೆರವಾಗಬೇಕಾಗುತ್ತದೆ. ಒಂದು ಪದ್ಯವೋ, ಕಥೆಯೋ, ಕಾದಂಬರಿಯೋ ಬರೆಯುವಾಗ ವೆಚ್ಚವಿಲ್ಲ. ಅದರ ಪ್ರಕಟಣೆಗೆ ಒಂದಿಷ್ಟು ವೆಚ್ಚವಾಗಬಹುದು. ಬರೆದವನಿಗೆ ಆತ್ಮತೃಪ್ತಿ ಮುಖ್ಯ. ಜನಮನ್ನಣೆ ಸಿಕ್ಕಿದರೆ ಸಂತೋಷ. ನಾಟಕ ರಚನೆಗೂ ಹೆಚ್ಚು ವೆಚ್ಚವಿಲ್ಲ. ಪ್ರದರ್ಶನಕ್ಕೆ ವೆಚ್ಚವಿದೆ. ರಂಗಮಾಧ್ಯಮವನ್ನು ಹವ್ಯಾಸಿಗಳು ವೆಚ್ಚಹಂಚಿಕೆಯೊಂದಿಗೆ ಬಳಸಿಕೊಂಡದ್ದುಂಟು. ಆದರೆ ಸಿನೆಮಾ ತಯಾರಿಸುವುದು ಹವ್ಯಾಸವಲ್ಲ; ವ್ಯವಸಾಯ. ಒಂದು ಸಿನೆಮಾದ ತಾಂತ್ರಿಕ, ಆರ್ಥಿಕ, ಕಲಾತ್ಮಕ ಯಶಸ್ಸು ಅಥವಾ ವೈಫಲ್ಯವು ತಯಾರಕನ ಬದುಕನ್ನು, ಭವಿಷ್ಯವನ್ನು ನಿರ್ಧರಿಸಬಹುದು. ಆದ್ದರಿಂದ ಮಾರುಕಟ್ಟೆಯ ಅನಿಶ್ಚಿತತೆಯೊಂದಿಗೆ ತಯಾರಕನು ಕೈಸುಟ್ಟುಕೊಳ್ಳುವುದಕ್ಕೆ ತಯಾರಿರುವುದಿಲ್ಲ. ಅತಿಮೀರಿದ ಕಲಾತ್ಮಕತೆ ಮತ್ತು ಕಲಾರಾಹಿತ್ಯವು ಕಳಪೆ ನಿರ್ಮಾಣ ಚಲನಚಿತ್ರಗಳಿಗೂ ಕಾರಣವಾದದ್ದಿದೆ. ಆದ್ದರಿಂದ ಮಾರುಕಟ್ಟೆಗೆ ಅನುಗುಣವಾದ ದೃಶ್ಯಮಾಧ್ಯಮವನ್ನು ಸಿದ್ಧಪಡಿಸುವ ಮತ್ತು ಅದನ್ನು ಸ್ವಿಕಾರಾರ್ಹವಾಗಿ ಮಾಡಬಲ್ಲ ಜಾಣತನ ಬೇಕೇಬೇಕು. ನಾಟಕ, ಸಾಹಿತ್ಯ ಹೀಗೆ ಎಲ್ಲ ಮಾಧ್ಯಮಗಳಲ್ಲೂ ಈ ರೀತಿಯ ಜಾಣತನದ ಅಗತ್ಯವಿತ್ತು.

ಕನ್ನಡದಲ್ಲಿ ಅನೇಕ ಇಂತಹ ಜಾಣರಿದ್ದರು. ಅವರು ಜನರ ಟೀಕೆಗೆ ಒಳಗಾಗಿರಲಿಲ್ಲವೆಂದಲ್ಲ. ಆದರೆ ಜನರು ಇತ್ತೀಚಿನ ದಶಕದ ವರೆಗೂ ವರ್ತಮಾನಕ್ಕಿಂತ ಹೆಚ್ಚು ಸಹನಾಶೀಲರಾಗಿದ್ದರು. ನಮ್ಮ ದೇವದೇವರುಗಳ ಕುರಿತ ಹಾಸ್ಯವನ್ನು ನಾಟಕದಲ್ಲಾಗಲಿ, ಸಿನೆಮಾದಲ್ಲಾಗಲಿ ನೋಡಿ ನಕ್ಕು ಸುಮ್ಮನಾಗುತ್ತಿದ್ದರು. ಇನ್ನೊಂದೆಡೆ ವ್ಯವಸ್ಥೆಯ ವಿರುದ್ಧ ದಿಕ್ಕಿನಲ್ಲಿ ಪ್ರವಹಿಸುವ ಕಲಾ ನಿರ್ಮಾಪಕರು, ನಿರ್ದೇಶಕರು, ನಟರು ಇದ್ದರು. ಸತ್ಯಜಿತ್‌ರೇ ಪ್ರಜ್ಞಾಪೂರ್ವಕವಾಗಿ ಜನಪ್ರಿಯ ಹಿಂದಿ ಮತ್ತು ಬೆಂಗಾಲಿ ಸಿನೆಮಾಗಳ ಪರಂಪರೆಯನ್ನು ಮೀರುವ ಪ್ರಯತ್ನ ಮಾಡಿದರು. ದಕ್ಷಿಣ ಭಾರತದಲ್ಲಿ ಪ್ರತಿನಾಯಕರನ್ನು ನಾಯಕರಾಗಿಸಿ ಸಿನೆಮಾ ಮಾಡಬೇಕಾದರೆ ಎಂಟೆದೆ ಬೇಕಿತ್ತು. ತಮಿಳು, ತೆಲುಗು ಸಿನೆಮಾಗಳಲ್ಲಿ ಎನ್.ಟಿ.ಆರ್., ಶಿವಾಜಿ ಗಣೇಶನ್, ಎಮ್.ಜಿ.ಆರ್.ರಂತಹ ಜನಪ್ರಿಯ ನಾಯಕರು ಪುರಾಣ ಮತ್ತು ಇತಿಹಾಸದ ಯಾರನ್ನೇ ಆಗಲಿ ನಾಯಕರನ್ನಾಗಿ ಮಾಡಬಲ್ಲರು. ಕನ್ನಡದ ರಾಜಕುಮಾರ್ ಒಬ್ಬರೇ ಇಂತಹ ಸಾಹಸಕ್ಕಿಳಿದದ್ದು; ಪ್ರತಿನಾಯಕನನ್ನು ದುರಂತಕ್ಕೀಡಾಗಿಸಿಯೂ ಜನಪ್ರಿಯರಾದದ್ದು. ಸಿನೆಮಾಕ್ಕೆ ನಾಟಕಕ್ಕಿಂತ ಹೆಚ್ಚು ಆಯಾಮಗಳಿವೆ. ನಾಟಕದಲ್ಲಿ ಒಬ್ಬನನ್ನೇ ಏಕಕಾಲಕ್ಕೆ ಎರಡು ಪಾತ್ರಗಳಲ್ಲಿ ತೋರಿಸಲು ಸಾಧ್ಯವಿಲ್ಲ. ಹೀಗಾಗಿ ಸಿನೆಮಾದಲ್ಲಿ ವಾಸ್ತವತೆಯೆಂಬುದಿದ್ದರೂ ಮಾಯಾ ವಾಸ್ತವತೆಯನ್ನೂ ಛಾಯಾಗ್ರಹಣದ ತಂತ್ರದಿಂದ ತೋರಿಸಬಹುದಿತ್ತು. ಈಗ ಕಂಪ್ಯೂಟರ್ ಜಾಲ ವ್ಯಾಪಕವಾದ ಮೇಲಂತೂ ಏನೂ ಮಾಡಬಹುದು. ಇತ್ತೀಚೆಗಿನ ಬಾಹುಬಲಿ, ಪುಷ್ಪ, ಕೆ.ಜಿ.ಎಫ್. ಮುಂತಾದ ಸಿನೆಮಾಗಳು ಈ ತಂತ್ರಗಳ ಬಳಕೆಯಿಂದಲೇ ಭಾರತೀಯ ಸಿನೆಮಾ ಜಗತ್ತನ್ನು ಅಡಿಮೇಲು ಮಾಡಿದವು. ಹೊಸ ಜಗತ್ತನ್ನು ಸೃಷ್ಟಿಸಿದವು. ಅವೆಲ್ಲ ಸುಳ್ಳೆಂದು ತಿಳಿದಾಗಲೂ ಹಣಕೊಟ್ಟು ನೋಡಿದೆವು. ಅದನ್ನು ನಮ್ಮ ನಂಬಿಕೆಯನ್ನು ಬದಿಗೊತ್ತಿ ಮೌಲ್ಯಮಾಪನಮಾಡಿದೆವು.

‘ಕಾಂತಾರ’ ಸಿನೆಮಾ ಈ ಎಲ್ಲ ತಂತ್ರಗಳಿಂದ ದೂರವಿರಲಿಲ್ಲ. ಆದರೆ ನಮ್ಮ ಗ್ರಾಮೀಣ ನಂಬಿಕೆಗಳನ್ನು ಆಧರಿಸಿ ಅವನ್ನು ಆಧುನಿಕ ದೃಷ್ಟಿಕೋನದಲ್ಲಿ ನಮ್ಮ ನಡುವಣ ಪ್ರಕೃತಿಯೆಂಬಂತೆ ಬಿಂಬಿಸಲು ಸಫಲವಾಯಿತು. ಇದರ ನಿರ್ಮಾತೃಗಳು ಭಾರೀ ಆಸೆ-ಆಕಾಂಕ್ಷೆಗಳನ್ನಿಟ್ಟುಕೊಂಡು ಸಿನೆಮಾ ಮಾಡಿದ ಹಾಗಿರಲಿಲ್ಲ. ಆದರೆ ಯಾವುದೋ ಒಂದು ಘಳಿಗೆಯಲ್ಲಿ ಈ ಚಿಪ್ಪಿಗೆ ಸ್ವಾತಿಮುತ್ತಿನ ಅದೃಷ್ಟ ಲಭ್ಯವಾಯಿತು. ಅದು ಮುತ್ತಾಯಿತು. ಯಶಸ್ಸಿನ ಕಾರಣಗಳು ಹತ್ತಾರು. ಪ್ರಾಯಃ ನೊಂದವರ ನೋವನ್ನು ನೊಂದವರಿಗೆ ಮಾತ್ರವಲ್ಲ ನೋಯದವರಿಗೂ ತಲುಪಿಸಲು ಈ ಸಿನೆಮಾ ಸಫಲವಾಯಿತೆಂದು ಅನ್ನಿಸುತ್ತದೆ. ಒಂದು ಸಿನೆಮಾದ ಯಶಸ್ಸು ಮತ್ತು ಜನಪ್ರಿಯತೆ ಎಲ್ಲ ತರ್ಕಗಳನ್ನೂ ಮೀರಿದ್ದು ಎಂದು ಹೇಳಿ ಸುಮ್ಮನಾಗಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)