ತಾಯಿ, ಸಹೋದರಿ ಸಹಿತ ಕುಟುಂಬದ ನಾಲ್ವರು ಸದಸ್ಯರನ್ನು ಹತ್ಯೆಗೈದ ಬಾಲಕನ ಬಂಧನ
ಅಗರ್ತಲಾ, ನ. 6: ತ್ರಿಪುರಾದ ಡಲಾಯಿ ಜಿಲ್ಲೆಯ ಕುಗ್ರಾಮವೊಂದರಲ್ಲಿ ತನ್ನ ಕುಟುಂಬದ ನಾಲ್ವರು ಸದಸ್ಯರನ್ನು ಕೊಡಲಿಯಿಂದ ಕಡಿದು ಹತ್ಯೆಗೈದ ಆರೋಪದಲ್ಲಿ 17 ವರ್ಷದ ಬಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಬಾಲಕ ತನ್ನ ಅಜ್ಜ, ತಾಯಿ, ಕಿರಿಯ ಸಹೋದರಿ, ಚಿಕ್ಕಮ್ಮನನ್ನು ಶನಿವಾರ ರಾತ್ರಿ ಅವರು ನಿದ್ರೆಯಲ್ಲಿದ್ದಾಗ ಕೊಡಲಿಯಿಂದ ಕಡಿದು ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಮೀಪದ ಮಾರುಕಟ್ಟೆಯಿಂದ ರವಿವಾರ ಬೆಳಗ್ಗೆ ಆರೋಪಿಯನ್ನು ಬಂಧಿಸಲಾಯಿತು ಎಂದು ಡಲಾಯಿಯ ಹಿರಿಯ ಪೊಲೀಸ್ ಅಧಿಕಾರಿ ಡಾ. ರಮೇಶ್ ಚಂದ್ರ ಯಾದವ್ ತಿಳಿಸಿದ್ದಾರೆ.
‘‘ಈ ಭೀಭತ್ಸ ಘಟನೆಯಲ್ಲಿ ಅಪ್ರಾಪ್ತ ಬಾಲಕ ತನ್ನ ಕುಟುಂಬದ ನಾಲ್ವರು ಸದಸ್ಯರನ್ನು ಹತ್ಯೆಗೈದಿದ್ದಾನೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಹತ್ಯೆಯ ಹಿಂದಿನ ಉದ್ದೇಶ ತಿಳಿಯಲು ಬಾಲಕನ ವಿಚಾರಣೆ ನಡೆಸಲಾಗುತ್ತಿದೆ’’ ಎಂದು ತ್ರಿಪುರಾ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಾಲಕ ಟಿ.ವಿ. ವೀಕ್ಷಿಸುವ, ಮುಖ್ಯವಾಗಿ ಅಪರಾಧ ತನಿಖೆಯ ಶೋಗಳನ್ನು ವೀಕ್ಷಿಸುವ ಚಟ ಹೊಂದಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.