varthabharthi


ಪ್ರಚಲಿತ

ಇದು ಕರಾಳ ಶಾಸನದ ಸಮರ್ಥನೆ

ವಾರ್ತಾ ಭಾರತಿ : 7 Nov, 2022
ಸನತ್ ಕುಮಾರ್ ಬೆಳಗಲಿ

ಭಾರತದಲ್ಲಿ ಚುನಾವಣೆ ದೃಷ್ಟಿಯಿಂದ ಪ್ರಜಾಪ್ರಭುತ್ವ ಯಶಸ್ವಿಯಾಗಿದೆ. ಆದರೆ ಚುನಾಯಿತ ಸರಕಾರಗಳು ಜನಸಾಮಾನ್ಯರ ಆಸೆ, ಭರವಸೆಗಳನ್ನು ಈಡೇರಿಸುವಲ್ಲಿ ವಿಫಲಗೊಂಡಿವೆ. ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಇದನ್ನು ಪ್ರಶ್ನೆ ಮಾಡಿದರೆ, ಟೀಕಿಸಿದರೆ ''ಅರ್ಬನ್ ನಕ್ಸಲ್'' ಎಂಬ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ.ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ ಪ್ರಜಾಪ್ರಭುತ್ವದ ಜೀವಾಳ. ಭಾರತದ ಸಂವಿಧಾನವೂ ಇದನ್ನು ಎತ್ತಿ ಹಿಡಿಯುತ್ತದೆ.ಆದರೆ ಪ್ರಭುತ್ವದ ಅಧಿಕಾರ ಸೂತ್ರ ಹಿಡಿದವರಿಗೆ ಒಮ್ಮಿಮ್ಮೆ ತಮ್ಮ ಬಗ್ಗೆ ಬರುವ ಟೀಕೆ, ವಿಮರ್ಶೆಗಳು ಅಪಥ್ಯವಾಗುತ್ತವೆ. ಇತ್ತೀಚೆಗೆ ಸೂರಜ ಕುಂಡದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜ್ಯಗಳ ಗೃಹ ಮಂತ್ರಿಗಳ ಚಿಂತನ ಶಿಬಿರದಲ್ಲಿ ಆಡಿದ ಮಾತುಗಳಲ್ಲಿ ಭಿನ್ನಮತದ ಇಂಥ ಅಸಮಾಧಾನ ಮತ್ತು ಅಸಹನೆ ಗೋಚರಿಸಿತು.

ಆಂತರಿಕ ಭದ್ರತೆಯ ಕುರಿತ ಈ ಸಭೆಯಲ್ಲಿ ನಕ್ಸಲವಾದದ ಕುರಿತು ಮಾತನಾಡುತ್ತಾ ಗನ್ನು ಹಿಡಿದ ನಕ್ಸಲರಷ್ಟೇ ಪೆನ್ನು ಹಿಡಿದಿರುವ ನಗರ ನಕ್ಸಲರು ಅಪಾಯಕಾರಿ, ಅವರನ್ನು ಮೊದಲು ನಾಶ ಮಾಡಬೇಕು ಎಂದು ಹೇಳಿದರು.ಅದಕ್ಕಾಗಿ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯನ್ನು (ಯುಎಪಿಎ) ಇನ್ನಷ್ಟು ಬಲಪಡಿಸಬೇಕು ಎಂದರು.

ಪ್ರಧಾನ ಮಂತ್ರಿಗಳು ನಗರ ನಕ್ಸಲರೆಂದು ಯಾರನ್ನು ಕರೆದರೆಂಬುದು ಅವರ ಮಾತಿನಲ್ಲಿ ಸ್ಪಷ್ಟವಾಗಿ ಹೇಳಲಿಲ್ಲವಾದರೂ ಯಾರನ್ನು ಉದ್ದೇಶಿಸಿ ಅವರು ಈ ಮಾತನ್ನು ಆಡಿದರೆಂಬುದು ಅವರಾಡಿದ ಕೆಲ ಮಾತುಗಳಿಂದ ಸ್ಪಷ್ಟವಾಯಿತು. ಗುಜರಾತಿನಲ್ಲಿ ಸರ್ದಾರ್ ಸರೋವರ ಅಣೆಕಟ್ಟೆ ನಿರ್ಮಾಣದ ವಿರುದ್ಧ ಧ್ವನಿಯೆತ್ತಿದವರನ್ನು ಪೆನ್ನು ಹಿಡಿದ ನಗರ ನಕ್ಸಲರೆಂದು ಪ್ರಧಾನಿ ಕರೆದರು. ಸರ್ದಾರ್ ಸರೋವರ ಅಣೆಕಟ್ಟೆ ಯೋಜನೆಯ ವಿರುದ್ಧ ಯಾರು ಹೋರಾಡುತ್ತಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ. ಈ ಅಣೆಕಟ್ಟೆಯಿಂದ ಅಲ್ಲಿ ನೂರಾರು ವರ್ಷಗಳಿಂದ ನೆಲೆಸಿರುವ ಆದಿವಾಸಿಗಳು ಬೀದಿಗೆ ಬೀಳುತ್ತಾರೆ ಎಂದು ಗಾಂಧಿವಾದಿ ಮೇಧಾ ಪಾಟ್ಕರ್ ಅವರು ದಶಕಗಳಿಂದ ಅಲ್ಲಿ ಹೋರಾಡುತ್ತಿದ್ದಾರೆ. ಮೇಧಾ ಪಾಟ್ಕರ್‌ಗೂ ನಕ್ಸಲರಿಗೂ ಯಾವ ಸಂಬಂಧವೂ ಇಲ್ಲ. ಅವರ ಹಿಂಸಾತ್ಮಕ ಹೋರಾಟವನ್ನು ಮೇಧಾ ಪಾಟ್ಕರ್ ಒಪ್ಪುವುದೂ ಇಲ್ಲ. ಮಹಾರಾಷ್ಟ್ರದ ಗಾಂಧಿವಾದಿ ಮತ್ತು ಸಮಾಜವಾದಿ ತಂದೆಯ ಪುತ್ರಿಯಾದ ಮೇಧಾ ಪಾಟ್ಕರ್ ಅವರು ನಮ್ಮ ಪ್ರಧಾನಿ ಮೋದಿಯವರ ದೃಷ್ಟಿಯಲ್ಲಿ ಪೆನ್ನು ಹಿಡಿದ ನಕ್ಸಲವಾದಿಯಾಗಿದ್ದಾರೆ.

ಕೋಮುವಾದಿ ಸಿದ್ಧಾಂತವನ್ನು ವಿರೋಧಿಸುವವರು ಮತ್ತು ಮೂಢ ನಂಬಿಕೆ ಕಂದಾಚಾರಗಳ ವಿರುದ್ಧ ಧ್ವನಿಯೆತ್ತುವವರು ಈ ದೇಶದಲ್ಲಿ ಡಾ. ನರೇಂದ್ರ ದಾಭೋಲ್ಕರ್, ಗೋವಿಂದ ಪಾನ್ಸರೆ, ಡಾ. ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರಂತೆ ಹತ್ಯೆಗೀಡಾಗಿದ್ದಾರೆ. ಇವರನ್ನು ಕೊಂದವರನ್ನು ಬಂಧಿಸಿ ಶಿಕ್ಷಿಸುವುದು ನಮ್ಮ ಸರಕಾರಗಳಿಂದ ಇನ್ನೂ ಸಾಧ್ಯವಾಗಿಲ್ಲ. ಆದರೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಆನಂದ ತೇಲ್ತುಂಬ್ಡೆ, ಸುಧಾ ಭಾರದ್ವಾಜ್, ಗೌತಮ್ ನವ್ಲಾಖಾ ಮುಂತಾದವರನ್ನು ಬಂಧಿಸಿ ಜೈಲಿಗೆ ತಳ್ಳುವುದು, ಗುಜರಾತ್ ಹತ್ಯಾಕಾಂಡದ ಸಂತ್ರಸ್ತರ ಪುನರ್ವಸತಿಗಾಗಿ ಶ್ರಮಿಸುತ್ತಿದ್ದ ಸುಪ್ರೀಂ ಕೋರ್ಟ್ ನ್ಯಾಯವಾದಿ ತೀಸ್ತಾ ಸೆಟಲ್ವಾಡ್‌ರನ್ನು ರಾಷ್ಟ್ರೀಯ ಭದ್ರತೆಯ ನೆಪ ಹೇಳಿ ಬಂಧಿಸಿ ಚಿತ್ರಹಿಂಸೆ ನೀಡುವುದು ಸಹಜ ಸಂಗತಿಯಾಗಿದೆ. ವಿಷಾದದ ಸಂಗತಿಯೆಂದರೆ ಜನರಿಂದಲೂ ಅಂಥ ಪ್ರತಿರೋಧ ಬರುತ್ತಿಲ್ಲ. ಬಾಬಾಸಾಹೇಬ ರ ಮೊಮ್ಮಗಳು ರಮಾದೇವಿಯವರನ್ನು ವಿವಾಹವಾದ ಆನಂದ ತೇಲ್ತುಂಬ್ಡೆ ಬಂಧನಕ್ಕೆ ಭಾರೀ ಪ್ರತಿರೋಧ ಬರುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಈ ಮೌನ ಪ್ರಭುತ್ವದ ದಮನಕಾರಿ ಅಸ್ತ್ರವನ್ನು ಬಲಪಡಿಸುತ್ತದೆ.ಏನು ಮಾಡಿದರೂ ನಡೆಯುತ್ತದೆ ಎಂಬ ದಾರ್ಷ್ಟ ನಿರಂಕುಶತೆಗೆ ದಾರಿ ಮಾಡಿಕೊಡುತ್ತದೆ.

ಭಾರತದಲ್ಲಿ ಸಂಘ ಪರಿವಾರ ಪ್ರಾಬಲ್ಯ ಗಳಿಸಿದ ನಂತರ ಸಾಮಾನ್ಯವಾಗಿ ಭಿನ್ನಾಭಿಪ್ರಾಯ ಹೊಂದಿದವರನ್ನೆಲ್ಲ ನಕ್ಸಲರೆಂದು ಬ್ರಾಂಡ್ ಮಾಡುತ್ತ ಬಂದಿದೆ. ಅವರ ದೃಷ್ಟಿಯಲ್ಲಿ ಮೂಢ ನಂಬಿಕೆ, ಕಂದಾಚಾರಗಳ ವಿರುದ್ಧ ಹೋರಾಡುವವರು, ಕೋಮುವಾದವನ್ನು ವಿರೋಧಿಸುವವರು, ಅಸ್ಪಶ್ಯತೆ, ಜಾತಿ ತಾರತಮ್ಯದ ವಿರುದ್ಧ ಧ್ವನಿ ಎತ್ತುವವರು, ಸಮಾನತೆಯ ಸಿದ್ಧಾಂತವನ್ನು ಸಮರ್ಥಿಸುವವರು ಪೆನ್ನು ಹಿಡಿದ ನಕ್ಸಲರಾಗಿದ್ದಾರೆ. ಕರ್ನಾಟಕದಲ್ಲಿ ಹದಿನೆಂಟು ವರ್ಷಗಳ ಹಿಂದೆ ಚಿಕ್ಕಮಗಳೂರಿನ ಬಾಬಾ ಬುಡಾನ್‌ಗಿರಿ ವಿಷಯದಲ್ಲಿ ಸೌಹಾರ್ದದ ಪರವಾಗಿ ಹೋರಾಟ ಮಾಡುತ್ತಿದ್ದವರನ್ನು ನಕ್ಸಲರೆಂದು ಇದೇ ಕೋಮುವಾದಿಗಳು ಕರೆಯುತ್ತಿದ್ದರು. ಮಹಾರಾಷ್ಟ್ರದ ಅಂತರ್‌ರಾಷ್ಟ್ರೀಯ ಖ್ಯಾತಿಯ ಬಹುದೊಡ್ಡ ಲೇಖಕ, ಚಿಂತಕ ಆನಂದ ತೇಲ್ತುಂಬ್ಡೆ ಕೂಡ ಇವರ ದೃಷ್ಟಿಯಲ್ಲಿ ಪೆನ್ನು ಹಿಡಿದ ನಕ್ಸಲ. ಅಂತಲೆ ಅವರನ್ನು ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿ ಕೊಳೆ ಹಾಕಿದ್ದಾರೆ. ಕವಿ ವರವರರಾವ್ ಮತ್ತು ನ್ಯಾಯವಾದಿ ಸುಧಾ ಭಾರದ್ವಾಜ ಮತ್ತು ಪತ್ರಕರ್ತ ಸಿದ್ದೀಕ್ ಕಪ್ಪನ್ ಹಾಗೂ ವಿದ್ಯಾರ್ಥಿ ಕಾರ್ಯಕರ್ತೆಯರಾದ ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ಅವರಿಗೆ ಜಾಮೀನು ಸಿಕ್ಕಿದ್ದರೂ ಅವರಿನ್ನೂ ದೋಷಮುಕ್ತರಾಗಿಲ್ಲ. ಇವರನ್ನು ಬಿಟ್ಟು ಉಳಿದವರು ಸೆರೆಮನೆಯಲ್ಲಿ ಇದ್ದಾರೆ. ಕಾನೂನು ಹೋರಾಟ ನಡೆಸಿ ಹೊರಗೆ ಬರುವುದು ಸುಲಭವಲ್ಲ. ಈ ಯುಎಪಿಎ ಎಂಬ ಕಾನೂನು ಅತ್ಯಂತ ಕರಾಳವಾಗಿದೆ. ಜಾಮೀನು ನಿರೀಕ್ಷೆಯಲ್ಲಿದ್ದ ಸ್ಟಾನ್ ಸ್ವಾಮಿ ನೀರು ಕುಡಿಯುವ ಕೊಳವೆ ಸಿಗದೇ ಜೈಲಿನಲ್ಲಿ ಕೊನೆಯುಸಿರೆಳೆದರು.

ಯಾವುದೇ ಪ್ರಭುತ್ವ ಜನಸಾಮಾನ್ಯರು ತಿರುಗಿ ಬೀಳುವುದನ್ನು ಸಹಿಸುವುದಿಲ್ಲ. ಹಿಂದೆ ಬ್ರಿಟಿಷ್ ಸಾಮ್ರಾಜ್ಯಶಾಹಿಗಳೂ ಭಾರತವನ್ನು ಆಳು ವಾಗ ಜನರನ್ನು ಹತ್ತಿಕ್ಕಲು ್ಕಟಡ್ಝಿಠಿಛಿ ಚ್ಚಠಿನ್ನು ತಂದರು. ಅದರ ವಿರುದ್ಧ ಹೋರಾಡಿದ ಗಾಂಧೀಜಿ ಇಡೀ ದೇಶದ ಸ್ವಾತಂತ್ರ ಹೋರಾಟದ ನೇತೃತ್ವ ವಹಿಸಿಕೊಳ್ಳುವಷ್ಟು ಎತ್ತರದಲ್ಲಿ ಬೆಳೆದು ನಿಂತರು.ಈಗಿರುವ ಕರಾಳ ಶಾಸನ (ಯುಎಪಿಎ) ಕೂಡ ಬ್ರಿಟಿಷರು ತಂದ ಕರಾಳ ಶಾಸನದ ಇನ್ನೊಂದು ರೂಪ.

ಯಾವುದೇ ದೇಶದ ಭದ್ರತೆಗೆ ನಿಜವಾದ ಅಪಾಯವಿರುವುದು ಅಲ್ಲಿ ಆಂತರಿಕವಾಗಿರುವ ಬಡತನ, ಅಸಮಾನತೆ, ಮನುಷ್ಯರ ನಡುವಿನ ಭೇದ ಭಾವ, ಮೇಲು, ಕೀಳು,ರೋಗ, ರುಜಿನ, ನಿರಕ್ಷರತೆ. ಇವುಗಳನ್ನು ನಿವಾರಿಸುವುದು ಅಧಿಕಾರದಲ್ಲಿರುವವರ ಕರ್ತವ್ಯ. ಅದರ ಬದಲಾಗಿ ಇಲ್ಲಿ ಬಡತನವಿದೆ.ಅಸಮಾನತೆ ಇದೆ, ಅಸ್ಪಶ್ಯತೆ ಇದೆ, ಕಾಯಿಲೆಗಳಿಂದ ಜನ ಸಾಯುತ್ತಿದ್ದಾರೆ ಎಂದು ಸರಕಾರವನ್ನು ಎಚ್ಚರಿಸುವುದರಿಂದ ಆಂತರಿಕ ಭದ್ರತೆಗೆ ಅಪಾಯವಿದೆ ಎಂದು ದೂಷಿಸುವುದು ಪ್ರಭುತ್ವದ ವೈಫಲ್ಯ. ಪ್ರಶ್ನೆ ಮಾಡುವವರನ್ನೆಲ್ಲ ಯುಎಪಿಎ ಕಾಯ್ದೆಯಡಿ ಜೈಲಿಗೆ ತಳ್ಳುತ್ತ ಹೋದರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಈ ಕಾಯ್ದೆ ಎಷ್ಟು ಕರಾಳವಾಗಿದೆಯೆಂದರೆ ಒಮ್ಮೆ ಈ ಕಾಯ್ದೆಯಡಿ ಬಂಧನಕ್ಕೊಳಗಾದರೆ ಜಾಮೀನು ಸಿಗುವುದು ಕಷ್ಟ. ಈ ಕಾಯ್ದೆಯಡಿ ಬಂಧಿತರಾದವರ ಮೇಲೆ ಯಾವುದೇ ಖಚಿತ ಸಾಕ್ಷಿ,ಪುರಾವೆಗಳಿರುವುದಿಲ್ಲ. ಬಂಧಿತರಲ್ಲಿ ನೂರಕ್ಕೆ ತೊಂಬತ್ತೇಳರಷ್ಟು ನಿರಪರಾಧಿಗಳು ಎಂದು ನ್ಯಾಯಾಲಯಗಳೇ ಹೇಳಿವೆ. ಹೀಗಿರುವಾಗ ಪ್ರಧಾನಿ ಇದನ್ನು ಯಾಕೆ ಸಮರ್ಥಿಸಿದರೋ ಅವರಿಗೇ ಗೊತ್ತು.

ಯಾವುದೇ ಪ್ರಭುತ್ವ ಇಂಥ ದಮನಕಾರಿ ಶಾಸನ ಗಳ ಮೂಲಕ ಬಲಿಷ್ಠವಾಗುವುದಿಲ್ಲ. ಒಳಗೊಳಗೆ ಕೊಳೆಯುತ್ತ ಹೋಗುತ್ತದೆ.ಮಾನವ ಹಕ್ಕು ಉಲ್ಲಂಘನೆ ಮತ್ತು ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರದ ಅಪಹರಣ ಒಂದಿಲ್ಲೊಂದು ದಿನ ದೇಶಕ್ಕೆ ಅಪಾಯಕಾರಿ ಯಾಗಿ ಪರಿಣಮಿಸುತ್ತದೆ. ಇದಕ್ಕೆ ಇತಿಹಾಸದ ಹಿಟ್ಲರ್ ಮತ್ತು ಮುಸ್ಸಲೋನಿಗಳು ಮಾತ್ರವಲ್ಲ ಇತ್ತೀಚೆಗೆ ಪರಾಭವಗೊಂಡ ಬ್ರೆಝಿಲ್‌ನ ಬೊಲ್ಸೊನಾರೊ ಕೂಡ ಕಣ್ಣ ಮುಂದಿನ ಉದಾಹರಣೆಯಾಗಿದ್ದಾರೆ.

ಭಾರತದಲ್ಲಿ ಚುನಾವಣೆ ದೃಷ್ಟಿಯಿಂದ ಪ್ರಜಾಪ್ರಭುತ್ವ ಯಶಸ್ವಿಯಾಗಿದೆ. ಆದರೆ ಚುನಾಯಿತ ಸರಕಾರಗಳು ಜನಸಾಮಾನ್ಯರ ಆಸೆ, ಭರವಸೆಗಳನ್ನು ಈಡೇರಿಸುವಲ್ಲಿ ವಿಫಲಗೊಂಡಿವೆ. ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಇದನ್ನು ಪ್ರಶ್ನೆ ಮಾಡಿದರೆ, ಟೀಕಿಸಿದರೆ ''ಅರ್ಬನ್ ನಕ್ಸಲ್'' ಎಂಬ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ.

ಬ್ರೆಝಿಲ್‌ನಲ್ಲಿ ಸರ್ವಾಧಿಕಾರಿ ಬೊಲ್ಸೊನಾರೊನನ್ನು ಚುನಾಯಿಸಿ ಅಲ್ಲಿನ ಜನ ಸಾಕಷ್ಟು ಹೈರಾಣಾದರು. ಜನರ ಪ್ರತಿಭಟನೆಯ ಧ್ವನಿಯನ್ನು ಹತ್ತಿಕ್ಕಲು ಬಂದೂಕನ್ನು ಬಳಸಿದ ಈತನನ್ನು ಇತ್ತೀಚಿನ ಚುನಾವಣೆಯಲ್ಲಿ ಸೋಲಿಸಿದ ಜನ ಎಡಪಂಥೀಯ ನಾಯಕ ಲೂಲಾಗೆ ಮತ ಹಾಕಿ ಗೆಲ್ಲಿಸಿದರು. ದಮನ ಸತ್ರದ ಮೂಲಕ ಬಹಳ ಕಾಲ ಅಧಿಕಾರವನ್ನು ಉಳಿಸಿಕೊಳ್ಳಲು ಆಗುವುದಿಲ್ಲ ಎಂಬುದಕ್ಕೆ ಇದು ಉದಾಹರಣೆಯಾಗಿದೆ.

 ಭಿನ್ನಾಭಿಪ್ರಾಯವನ್ನು, ವಿಮರ್ಶೆಯನ್ನು ದಮನ ನೀತಿಯ ಮೂಲಕ ಹತ್ತಿಕ್ಕುವುದು ತತ್ಕಾಲಿಕವಾಗಿ ಖುಷಿ ಕೊಡಬಹುದು.ಆದರೆ ಇದರ ದುಷ್ಪರಿಣಾಮ ಗಳು ಪ್ರಜಾಪ್ರಭುತ್ವಕ್ಕೆ ಕಂಟಕಕಾರಿಯಾಗಿ ಪರಿಣಮಿಸುತ್ತವೆ. ಜನರಲ್ಲಿ ಜನತಂತ್ರದ ಬಗ್ಗೆ ನಂಬಿಕೆ ಹೊರಟು ಹೋಗುತ್ತದೆ. ಅಂತಿಮವಾಗಿ ಇದು ದೇಶದ ಭದ್ರತೆಗೆ ಮಾರಕವಾಗಿ ಪರಿಣಮಿಸುತ್ತದೆ. ಕಾರಣ ಯುಎಪಿಎಯಂಥ ಕರಾಳ ಶಾಸನವನ್ನು ಸರಕಾರ ರದ್ದುಗೊಳಿಸುವುದು ತುರ್ತು ಅಗತ್ಯವಾಗಿದೆ. ಈ ಬಗ್ಗೆ ರಾಷ್ಟ್ರೀಯ ಒಟ್ಟಾಭಿಪ್ರಾಯ ಮೂಡಿ ಬರಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)