ಬದಲಾಗುತ್ತಿರುವ ಭಾರತೀಯ ಚುನಾವಣಾ ಅಖಾಡ
ಸಮಾಜದ ಎಲ್ಲಾ ವರ್ಗಗಳನ್ನು ಸಮಾನತೆ ಮತ್ತು ಘನತೆಯೊಂದಿಗೆ ಸ್ವೀಕರಿಸುವ ಹಾಗೂ ಅವರೆಲ್ಲರ ಕಲ್ಯಾಣವನ್ನು ದೃಷ್ಟಿಯಲ್ಲಿಟ್ಟುಕೊಂಡಿರುವ ಪಕ್ಷವೊಂದು ಭಾರತಕ್ಕೆ ಬೇಕಾಗಿದೆ. ಆ ಪಕ್ಷವು ಉದ್ಯೋಗ ಸೃಷ್ಟಿಗೆ ಮಹತ್ವ ನೀಡಬೇಕು ಮತ್ತು ಸಮಾಜದ ತುಳಿತಕ್ಕೊಳಗಾಗಿರುವ ವರ್ಗದೊಂದಿಗೆ ಸಕ್ರಿಯವಾಗಿ ವ್ಯವಹರಿಸಬೇಕು. ಧರ್ಮವನ್ನು ರಾಜಕೀಯದೊಂದಿಗೆ ಬೆರೆಸದ ಪಕ್ಷವೊಂದು ನಮಗೆ ಬೇಕಾಗಿದೆ.
ಭಾರತ ಸ್ವತಂತ್ರಗೊಂಡ ಬಳಿಕ, ಸ್ವಾತಂತ್ರ ಚಳವಳಿಯ ನೇತೃತ್ವ ವಹಿಸಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಎರಡು ಬಾರಿ ನಿರಾಯಾಸವಾಗಿ ಚುನಾವಣೆಗಳನ್ನು ಗೆದ್ದಿತು. ಅದಕ್ಕೆ ಮುಖ್ಯವಾಗಿ ಸ್ಪರ್ಧೆ ಎದುರಾದದ್ದು ಕಮ್ಯುನಿಸ್ಟ್ ಪಕ್ಷ ಮತ್ತು ಸಮಾಜವಾದಿ ಪಕ್ಷ/ಪಕ್ಷಗಳಿಂದ. ಆರೆಸ್ಸೆಸ್‌ನ ಕೂಸು ಬಿಜೆಪಿಯ ಪೂರ್ವಾವತಾರವಾಗಿದ್ದ ಭಾರತೀಯ ಜನಸಂಘಕ್ಕೂ ದೀರ್ಘಾವಧಿ ಯವರೆಗೆ ಯಾವುದೇ ಪರಿಣಾಮವನ್ನು ಬೀರಲು ಸಾಧ್ಯವಾಗಲಿಲ್ಲ. ಕೈಗಾರಿಕಾ ಅಭಿವೃದ್ಧಿ ನೀತಿಗಳು, ಕಲ್ಯಾಣ ಕಾರ್ಯಕ್ರಮಗಳು, ಉದ್ಯೋಗ ಸೃಷ್ಟಿ ಮತ್ತು ಸಮಾಜದ ಸಮಾಜವಾದಿ ಲಕ್ಷಣಗಳು ಅಂದಿನ ಮುಖ್ಯ ಚುನಾವಣಾ ವಿಷಯಗಳಾಗಿದ್ದವು.
ರಾಮ ಮಂದಿರ, ದನ, ‘ಲವ್ ಜಿಹಾದ್’, ಘರ್ ವಾಪ್ಸಿ, ‘ಹಿಂದೂಗಳು ಅಪಾಯದಲ್ಲಿದ್ದಾರೆ’ ಮುಂತಾದುವುಗಳು ಅಂದು ಸುದ್ದಿಯಲ್ಲಿರಲಿಲ್ಲ. ಸಮಾಜವಾದವು ಅಂದು ಗೌರವಾನ್ವಿತ ವಿಷಯ ವಾಗಿತ್ತು. ಎಷ್ಟೆಂದರೆ, ಜನತಾ ಪಕ್ಷದಲ್ಲಿದ್ದ ಆರೆಸ್ಸೆಸ್ ಸದಸ್ಯರು ಪಕ್ಷವನ್ನು ಒಡೆದು ಬಿಜೆಪಿಯನ್ನು ಸ್ಥಾಪಿಸಿದಾಗಲೂ, ಅದರ (ಬಿಜೆಪಿ) ಮೊದಲ ಘೋಷಣೆ ‘ಗಾಂಧಿವಾದಿ ಸಮಾಜವಾದ’ವಾಗಿತ್ತು!
ಅದಾದ ಏಳು ದಶಕಗಳ ಬಳಿಕ, ಚುನಾವಣಾ ಕಣ ಹದಗೆಟ್ಟು ಹೋಗಿದೆ. ಈಗ ಅಲ್ಲಿ ಭಾವನಾತ್ಮಕ ವಿಷಯಗಳೇ ರಾರಾಜಿಸುತ್ತಿವೆ. ಚುನಾವಣೆಯಲ್ಲಿ ಈ ‘ಐಹಿಕ’ ವಿಷಯಗಳಿಗೆ ತಿಲಾಂಜಲಿ ನೀಡುವ ಪ್ರಕ್ರಿಯೆಗೆ ಅಡಿಪಾಯ ಹಾಕಿದ್ದು ರಾಮ ಮಂದಿರ ಚಳವಳಿ. ಮಂಡಲ ಆಯೋಗದ ವರದಿ ಜಾರಿಯ ಬಳಿಕ, ಈ ಚಳವಳಿ ಪ್ರಬಲಗೊಂಡಿತು. ಅಂದಿನಿಂದ ಭಾವನಾತ್ಮಕ ಮತ್ತು ಅಸ್ಮಿತೆ ವಿಷಯಗಳು ಚುನಾವಣೆಯಲ್ಲಿ ಮೇಲುಗೈ ಪಡೆಯುತ್ತಿವೆ. ಇದು 2019ರ ಚುನಾವಣೆಯಲ್ಲಿ ಸಾಬೀತಾಗಿದೆ. ಆ ಚುನಾವಣೆಯಲ್ಲಿ ಯಾವುದೇ ಪಕ್ಷವು ‘ಜಾತ್ಯತೀತ’ ಎಂಬ ಪದವನ್ನು ಉಚ್ಚರಿಸುವ ಧೈರ್ಯ ತೋರಿಸಲಿಲ್ಲ. ಇದನ್ನು ಆ ಚುನಾವಣೆಯ ವಿಜೇತರಾದ ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಹೇಳಿದ್ದಾರೆ. ಅದನ್ನು ಅವರು ಆರೆಸ್ಸೆಸ್-ಬಿಜೆಪಿಯ ರಾಜಕೀಯ ಹೋರಾಟಕ್ಕೆ ಸಿಕ್ಕಿದ ಯಶಸ್ಸು ಎಂಬಂತೆ ಬಿಂಬಿಸಿದ್ದಾರೆ.
ಈಗ ಯಾವುದೇ ವಿಷಯಕ್ಕೂ ಧಾರ್ಮಿಕ ತಿರುವನ್ನು ಅತ್ಯಂತ ಸುಲಭವಾಗಿ ಕೊಡಬಹುದಾಗಿದೆ. ಅದಕ್ಕೆ ಯಾವುದೇ ತರ್ಕ ಅಥವಾ ಆಧಾರ ಬೇಕೆಂದೇನಿಲ್ಲ. ಮತದಾರರು ಈಗ ಅದೆಲ್ಲ ಕೇಳುವುದಿಲ್ಲ. ಇದಕ್ಕೊಂದು ಅತ್ಯುತ್ತಮ ಉದಾಹರಣೆಯೆಂದರೆ, ‘ಕೊರೋನ ಜಿಹಾದ್’ ಎಂಬ ಪದದ ಸೃಷ್ಟಿ. ಚುನಾವಣಾ ರಾಜಕೀಯವನ್ನು ಕೇವಲ ಅಸ್ಮಿತೆಯ ವಿಷಯಗಳಿಗೆ ಸಂಬಂಧಿಸಿದ ಆಟದ ಮಟ್ಟಕ್ಕೆ ಹೇಗೆ ಇಳಿಸಬಹುದು ಎನ್ನುವುದನ್ನು ಇದು ತೋರಿಸುತ್ತದೆ. ಕಳೆದ ಕೆಲವು ದಶಕಗಳ ಅವಧಿಯಲ್ಲಿ, ಬಿಜೆಪಿಯು ಈ ತಂತ್ರವನ್ನು ಕರಗತ ಮಾಡಿಕೊಂಡಿದೆ. ಬಿಜೆಪಿಯ ಸಿದ್ಧಾಂತಕ್ಕೆ ಶರಣಾಗಿರುವ ಮಾಧ್ಯಮವು, ಕೋಮುವಾದಿ ಜನರ ಕೃತ್ಯಗಳನ್ನು ವೈಭವೀಕರಿಸಲು ತನ್ನೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.
ಬಿಜೆಪಿಗೆ ಸ್ಪರ್ಧೆ ನೀಡುತ್ತಿರುವ ಕೇಜ್ರಿವಾಲ್
ಕೋಮುವಾದಿ ಕಾರ್ಯಸೂಚಿಯ ರಾಜಕಾರಣಕ್ಕೆ ಆಮ್ ಆದ್ಮಿ ಪಕ್ಷ (ಆಪ್)ದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಕೂಡ ಕಾಲಿಟ್ಟಿದ್ದಾರೆ. ಅಸ್ಮಿತೆಗೆ ಸಂಬಂಧಿಸಿದ ವಿಷಯಗಳಲ್ಲಿ ಅವರು ತನ್ನದೇ ಆದ ಜಾಣ ವಿಧಾನಗಳ ಮೂಲಕ ವಿಭಜನವಾದಿ ಶಕ್ತಿಗಳಿಗೆ ಸ್ಪರ್ಧೆ ನೀಡಿದ್ದಾರೆ. ಗುಜರಾತ್‌ಗೆ ಶೀಘ್ರವೇ ಚುನಾವಣೆ ನಡೆಯಲಿದ್ದು, ಇಲ್ಲಿ ರಾಜಕೀಯ ನೆಲೆಯನ್ನು ಪಡೆಯಲು ಎಲ್ಲಾ ಪ್ರಯತ್ನಗಳನ್ನು ಅವರು ಮಾಡುತ್ತಿದ್ದಾರೆ. ಕೇಜ್ರಿವಾಲ್‌ರ ಪಕ್ಷವು ಮುಖ್ಯವಾಗಿ ಶಿಕ್ಷಣ, ಆರೋಗ್ಯ, ವಿದ್ಯುತ್ ಮತ್ತು ನೀರಿನ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದೆ. ಅಂದರೆ, ಮೀಸಲಾತಿ ಮತ್ತು ಎಸ್‌ಸಿ/ಎಸ್‌ಟಿ/ಒಬಿಸಿ ವಿಷಯಗಳು ಅದಕ್ಕೆ ನಿಷಿದ್ಧ ಎನ್ನುವುದು ಸ್ಪಷ್ಟ. ಸಂವಿಧಾನದ 370ನೇ ವಿಧಿಯ ರದ್ದತಿಯನ್ನು ಕೇಜ್ರಿವಾಲ್ ಬೆಂಬಲಿಸಿರುವುದು ಇವೆಲ್ಲವನ್ನೂ ಸಾಬೀತುಪಡಿಸುತ್ತದೆ. ಈ ವಿಧಿಯ ಸಾಂವಿಧಾನಿಕ ಸಿಂಧುತ್ವದ ಪ್ರಶ್ನೆಯು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿಯಿರುವಾಗಲೂ ಅವರು ತನ್ನ ನಿಲುವನ್ನು ಸ್ಪಷ್ಟಪಡಿಸಿಯಾಗಿದೆ. ಶಾಹೀನ್ ಬಾಗ್ ಎನ್ನುವುದು ಬಿಜೆಪಿ ಆಡುತ್ತಿರುವ ಆಟ ಎಂಬುದಾಗಿ ಆಪ್ ಹೇಳಿದೆ. ಅದರೊಂದಿಗೆ, ಸಿಎಎ, ಎನ್‌ಆರ್‌ಸಿ, ಶಾಹೀನ್ ಬಾಗ್ ಮುಂತಾದ ವಿಷಯಗಳಲ್ಲಿ ತನ್ನ ನಿಲುವೇನು ಎನ್ನುವುದನ್ನು ಅದು ಸ್ಪಷ್ಟವಾಗಿ ತೋರಿಸಿದೆ. ದೊಡ್ಡ ಸಂಖ್ಯೆಯ ಮುಸ್ಲಿಮರ ಪೌರತ್ವಕ್ಕೆ ಎದುರಾಗಿರುವ ಬೆದರಿಕೆಯು ಆಪ್‌ಗೆ ವಿಷಯವೇ ಅಲ್ಲ.
ಶಾಹೀನ್ ಬಾಗ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಫೋಟಿಸಿದ ದಿಲ್ಲಿ ಕೋಮು ಗಲಭೆಯನ್ನು ಆಪ್ ತನಗೆ ಅನುಕೂಲವಾಗುವಂತೆ ರೊಹಿಂಗ್ಯಾ ಮುಸ್ಲಿಮರ ತಲೆಗೆ ಕಟ್ಟಿತು ಹಾಗೂ ಮುಸ್ಲಿಮರ ವಿರುದ್ಧದ ಎಲ್ಲಾ ದ್ವೇಷ ಭಾಷಣಗಳನ್ನು ಬದಿಗೆ ಸರಿಸಲಾಯಿತು. ಬಿಲ್ಕಿಸ್ ಬಾನು ಅವರ ಅತ್ಯಾಚಾರಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ, ಅದು ನಮಗೆ ವಿಷಯವಲ್ಲ ಎಂದು ಹೇಳಿದರು. ಖೇಡಾದಲ್ಲಿ ಮುಸ್ಲಿಮರನ್ನು ಕಂಬಕ್ಕೆ ಕಟ್ಟಿ ನಿರ್ದಯವಾಗಿ ಹೊಡೆದಾಗಲೂ ಕೇಜ್ರಿವಾಲ್ ವೌನವಾಗಿದ್ದರು.
ಅವರ ಈ ಮನೋಭಾವ ಉತ್ತುಂಗವನ್ನು ತಲುಪಿದ್ದು, ಅವರದೇ ಸಚಿವ ರಾಜೇಂದ್ರಪಾಲ್ ಗೌತಮ್ ಪ್ರಕರಣದಲ್ಲಿ. ದಿಲ್ಲಿಯಲ್ಲಿ ನಡೆದ ಬೌದ್ಧ ಧರ್ಮಕ್ಕೆ ಸಾಮೂಹಿಕ ಮತಾಂತರ ಕಾರ್ಯಕ್ರಮದಲ್ಲಿ, ಡಾ. ಬಿ. ಆರ್. ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರವಾಗುವ ಸಂದರ್ಭ ದಲ್ಲಿ ಅವರು ತೆಗೆದುಕೊಂಡಿದ್ದ 22 ಪ್ರತಿಜ್ಞೆಗಳನ್ನು ರಾಜೇಂದ್ರಪಾಲ್ ಗೌತಮ್ ಇತರ ಸಾವಿರಾರು ಜನರೊಂದಿಗೆ ಪುನರುಚ್ಚರಿಸಿದ್ದರು. ಆ ಪ್ರತಿಜ್ಞೆಗಳು ಹಿಂದೂ ವಿರೋಧಿಯಾಗಿವೆ ಎಂಬುದಾಗಿ ಬಿಜೆಪಿ ಆಕ್ಷೇಪಿಸಿತು.
ಈ ಘಟನೆಯ ಬೆನ್ನಿಗೇ, ಕೇಜ್ರಿವಾಲ್ ಹಿಂದೂ ವಿರೋಧಿ ಯಾಗಿದ್ದಾರೆ ಎಂಬುದಾಗಿ ಬಿಜೆಪಿಯು ಗುಜರಾತ್‌ನಲ್ಲಿ ಅಭಿಯಾನ ಆರಂಭಿಸಿತು. ಕೇಜ್ರಿವಾಲ್ ಎಷ್ಟೊಂದು ಚಾಣಾಕ್ಷರೆಂದರೆ, ಬಿಜೆಪಿಯ ಪ್ರತಿಯೊಂದು ದಾಳಿಗೂ ಪ್ರತಿ ದಾಳಿ ನಡೆಸುತ್ತಾರೆ. ಈ ಬಾರಿ, ಸಮೃದ್ಧಿಗಾಗಿ ಕರೆನ್ಸಿ ನೋಟುಗಳಲ್ಲಿ ಲಕ್ಷ್ಮಿ ಮತ್ತು ಗಣೇಶರ ಚಿತ್ರಗಳನ್ನು ಮುದ್ರಿಸಬೇಕು ಎಂಬುದಾಗಿ ಕೇಂದ್ರ ಸರಕಾರವನ್ನು ಒತ್ತಾಯಿಸುವ ಮೂಲಕ ಪ್ರತಿ ದಾಳಿ ನಡೆಸಿದರು ಹಾಗೂ ಆ ಮೂಲಕ ಬಿಜೆಪಿಯನ್ನೇ ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಿದರು.
ಹಿಂದುತ್ವ ರಾಜಕೀಯದಲ್ಲಿ ಪಳಗಿರುವ ಕೈಯಾಗಿರುವ ಬಿಜೆಪಿಯೂ ಇಲ್ಲಿ ಒಂದು ಕ್ಷಣ ಹಿನ್ನಡೆ ಅನುಭವಿಸಿತು. ಜಾತ್ಯತೀತ ದೇಶವೊಂದರಲ್ಲಿ ಇದನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂಬಂಥ ಮಾತುಗಳನ್ನೂ ಅದು ಆಡಿತು. ‘ಅತ್ಯುಗ್ರ ಹಿಂದುತ್ವ’ದ ಈ ದಾಳಿಯಿಂದ ಈಗ ಸ್ವತಃ ಬಿಜೆಪಿಯೇ ಕಂಗೆಟ್ಟಿರುವಂತಿದೆ!
ಲಕ್ಷ್ಮಿ ಮತ್ತು ಗಣೇಶರ ಚಿತ್ರಗಳನ್ನು ಕರೆನ್ಸಿ ನೋಟ್‌ಗಳಲ್ಲಿ ಮುದ್ರಿಸಿದರೆ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎನ್ನುವ ಅಭಿಪ್ರಾಯ ಐಐಟಿ ಪದವೀಧರ ಕೇಜ್ರಿವಾಲ್‌ರದ್ದು. ಇದು ವಿಜ್ಞಾನ/ವೈಜ್ಞಾನಿಕ ಚಿಂತನೆಯ ಮೇಲೆ ನಡೆದ ದಾಳಿಯ ಅತ್ಯುನ್ನತ ಮಾದರಿಯಾಗಿದೆ.
ನರೇಂದ್ರ ಮೋದಿ ಸರಕಾರದ ವೈಜ್ಞಾನಿಕಾ ಸಂಶೋಧನಾ ನೀತಿ ಗಳೂ ಇದೇ ಧೋರಣೆಯನ್ನು ಪ್ರತಿಫಲಿಸುತ್ತಿವೆ. ಪ್ರಸಕ್ತ ದಿಲ್ಲಿ ಐಐಟಿಯು ‘ಪಂಚಗವ್ಯ’ (ದನದ ಹಾಲು, ಮೊಸರು, ತುಪ್ಪ, ಮೂತ್ರ ಮತ್ತು ಸೆಗಣಿ)ದ ಬಗ್ಗೆ ಸಂಶೋಧನೆಯೊಂದನ್ನು ನಡೆಸುತ್ತಿದೆ. ಇದಕ್ಕೊಂದು ಶರತ್ತನ್ನು ವಿಧಿಸಲಾಗಿದೆ: ದನವು ಜರ್ಸಿ ತಳಿಗೆ ಸೇರಿರ ಬಾರದು. ದೇಶದ ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಇನ್ನೊಂದು ತಮಾಷೆಯ ಯೋಜನೆಗೆ ಶೀಘ್ರವೇ ಚಾಲನೆ ನೀಡಲಿದೆ. ಅದೆಂದರೆ, ಪ್ರಜ್ಞಾಹೀನ ಸ್ಥಿತಿಯಲ್ಲಿರುವ ರೋಗಿಗಳ ಮೇಲೆ ‘ಮಹಾ ಮೃತ್ಯುಂಜಯ ಜಪ’ವನ್ನು ಪ್ರಯೋಗಿಸಿ ಅಧ್ಯಯನ ಮಾಡುವುದು!
ಒಂದು ವಿಧದಲ್ಲಿ, ಆಪ್ ಎನ್ನುವುದು ಕೋಮುವಾದಿ ರಾಜಕೀಯದ ಪರ್ಯಾಯದ ಮಾದರಿಯಾಗಿದೆ. ಅದು ಹಿಂದುತ್ವ/ಕೋಮುವಾದಿ ಕಾರ್ಡ್‌ಗಳನ್ನು ಜಾಣತನದಿಂದ ಆಡುತ್ತಿದೆ.
ಸರ್ವಾಧಿಕಾರ ಚಾಲ್ತಿಯಲ್ಲಿರುವ ಪಕ್ಷಗಳ ಪಟ್ಟಿಗೆ ಈಗ ಆಪ್ ಕೂಡ ಸೇರಿದೆ. ಕರೆನ್ಸಿ ನೋಟುಗಳಲ್ಲಿ ಲಕ್ಷ್ಮಿ ಮತ್ತು ಗಣೇಶರ ಚಿತ್ರಗಳನ್ನು ಮುದ್ರಿಸಬೇಕು ಎಂಬ ಅಭಿಪ್ರಾಯವನ್ನು ಕೇಜ್ರಿವಾಲ್ ವ್ಯಕ್ತಪಡಿಸಿದ ಬಳಿಕ, ಆ ಪಕ್ಷದ ಎಲ್ಲಾ ನಾಯಕರು ಅದೇ ಮಾತು ಗಳನ್ನು ಪುನರುಚ್ಚರಿಸುತ್ತಿದ್ದಾರೆ.
ಆರೆಸ್ಸೆಸ್ ಬೆಂಬಲಿತ ಅಣ್ಣಾ ಚಳವಳಿಯ ಉತ್ಪನ್ನವಾಗಿರುವ ಆಮ್ ಆದ್ಮಿ ಪಾರ್ಟಿಯು, ಪ್ರಸಕ್ತ ರಾಜಕೀಯ ಚೆಸ್‌ಬೋರ್ಡ್‌ನಲ್ಲಿ ಗೊಂದಲದ ಆಟವಾಡುತ್ತಿದೆ. ಅವರ ಕೋಮುವಾದವು ಮುಸ್ಲಿಮರ ವಿರುದ್ಧವಲ್ಲ ಎಂದು ಹೇಳಲು ಸಂವಿಧಾನದ 370ನೇ ವಿಧಿ, ಶಾಹೀನ್ ಬಾಗ್ ಚಳವಳಿ, ಖೇಡಾ ಘಟನೆ, ಬಿಲ್ಕಿಸ್ ಬಾನು ಅತ್ಯಾಚಾರ ಅಪರಾಧಿ ಬಿಡುಗಡೆ ಪ್ರಕರಣಗಳಲ್ಲಿ ಆಪ್ ತೆಗೆದುಕೊಂಡಿರುವ ನಿಲುವುಗಳನ್ನು ಉಲ್ಲೇಖಿಸಲಾಗುತ್ತದೆ. ಆದರೆ, ಅವರ ಈ ಎಲ್ಲಾ ಕ್ರಮಗಳು ಮುಸ್ಲಿಮರಿಗೆ (ಮತ್ತು ಕ್ರೈಸ್ತರಿಗೆ) ಯಾವ ಸಂದೇಶವನ್ನು ನೀಡುತ್ತವೆ ಎನ್ನುವುದು ಅತ್ಯಂತ ಸ್ಪಷ್ಟ.
ಸಮಾಜದ ಎಲ್ಲಾ ವರ್ಗಗಳನ್ನು ಸಮಾನತೆ ಮತ್ತು ಘನತೆ ಯೊಂದಿಗೆ ಸ್ವೀಕರಿಸುವ ಹಾಗೂ ಅವರೆಲ್ಲರ ಕಲ್ಯಾಣವನ್ನು ದೃಷ್ಟಿಯಲ್ಲಿಟ್ಟುಕೊಂಡಿರುವ ಪಕ್ಷವೊಂದು ಭಾರತಕ್ಕೆ ಬೇಕಾಗಿದೆ. ಆ ಪಕ್ಷವು ಉದ್ಯೋಗ ಸೃಷ್ಟಿಗೆ ಮಹತ್ವ ನೀಡಬೇಕು ಮತ್ತು ಸಮಾಜದ ತುಳಿತಕ್ಕೊಳಗಾಗಿರುವ ವರ್ಗದೊಂದಿಗೆ ಸಕ್ರಿಯವಾಗಿ ವ್ಯವಹರಿಸಬೇಕು. ಧರ್ಮವನ್ನು ರಾಜಕೀಯದೊಂದಿಗೆ ಬೆರೆಸದ ಪಕ್ಷವೊಂದು ನಮಗೆ ಬೇಕಾಗಿದೆ.
ಉತ್ತಮ ರಾಜಕೀಯದ ದೊಡ್ಡ ಭರವಸೆಯೊಂದಿಗೆ ಆಪ್ ರಾಜಕೀಯ ರಂಗವನ್ನು ಪ್ರವೇಶಿಸಿರುವುದು ನಮಗೆ ಗೊತ್ತಿದೆ. ಅದರ ನೈಜ ಪರಿಸ್ಥಿತಿ ಈಗ ನಮ್ಮೆಲ್ಲರ ಮುಂದಿದೆ. ಕರೆನ್ಸಿ ನೋಟ್‌ಗಳಲ್ಲಿ ಲಕ್ಷ್ಮಿ ಮತ್ತು ಗಣೇಶರ ಚಿತ್ರಗಳನ್ನು ಮುದ್ರಿಸಬೇಕು ಎಂಬ ಬೇಡಿಕೆಯನ್ನು ಇಡುವ ಹಂತಕ್ಕೆ ಅದು ಬಂದು ತಲುಪಿದೆ. ಜನ ಲೋಕಪಾಲವನ್ನು ಅದು ಇತಿಹಾಸದ ಕಸದ ಬುಟ್ಟಿಗೆ ಎಸೆದಿದೆ.
ಕೃಪೆ: countercurrents.org