'ಹಿಂದೂ ಧರ್ಮ ಅನ್ನೋದು ಇಲ್ಲ...': ಬಿಜೆಪಿ ನಾಯಕ ರಮೇಶ್ ಕತ್ತಿ ವಿಡಿಯೋ ವೈರಲ್
ಬೆಳಗಾವಿ, ನ.8: 'ಹಿಂದೂ' ಪದದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಬಗ್ಗೆ ಭಾರೀ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಮಾಜಿ ಸಚಿವ ದಿವಂಗತ ಉಮೇಶ್ ಕತ್ತಿ ಅವರ ಸಹೋದರ ಮಾಜಿ ಸಂಸದ ರಮೇಶ್ ಕತ್ತಿ ಅವರ ವಿಡಿಯೋ ಒಂದು ವೈರಲ್ ಆಗುತ್ತಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರುವ ರಮೇಶ್ ಕತ್ತಿ ಅವರು, ' ಹಿಂದೂ ಧರ್ಮ ಅನ್ನೋದು ಇಲ್ಲ. ಅದೊಂದು ಬಳುವಳಿ. ಅದೊಂದು ಜೀವನ ಶೈಲಿ' ಎಂದು ಹೇಳಿರುವುದು ವೈರಲ್ ಆಗುತ್ತಿರುವ ವಿಡಿಯೋದಲ್ಲಿ ದಾಖಲಾಗಿದೆ.
'ಹಿಮಾಲಯ ಪರ್ವತ ಒಂದು ಕಡೆ, ಹಿಂದೂ ಮಹಾ ಸಾಗರ ಒಂದು ಕಡೆ, ಅದೇ ರೀತಿ ಸಿಂಧ್ ಪ್ರಾಂತದಲ್ಲಿ ನೆಲೆಸುವ ಜನಾಂಗಕ್ಕೆ ಯುರೋಪಿಯನ್ಸ್, ಆಸ್ಟ್ರೇಲಿಯನ್ಸ್, ಅಮೆರಿಕನ್ಸ್ ಅಂತ ಕರೆಯುವಂತೆ ಹಿಂದೂ ಅಂತ ಕರೆಯಲಾಗಿದೆ. ಅದು ಧರ್ಮ ಅಲ್ಲ, ನ್ಯಾಷನಲಿಟಿ ' ಎಂದು ಹೇಳಿದ್ದಾರೆ.
ಇನ್ನು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಹಂಚಿಕೊಂಡಿದ್ದು, ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಬೆನ್ನಲ್ಲೇ ಈ ವಿಡಿಯೋ ರಾಜಕೀಯ ಚರ್ಚೆಗೆ ಕಾರಣವಾಗಿದೆ.
Next Story