ಮೀಸಲಾತಿಯ ಉದ್ದೇಶಕ್ಕೆ ಮರ್ಮಾಘಾತ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
2019ರಲ್ಲಿ ಸಂವಿಧಾನ ತಿದ್ದುಪಡಿಯೊಂದಿಗೆ ಮೇಲ್ಜಾತಿಯ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10 ಮೀಸಲಾತಿಯನ್ನು ಸರಕಾರ ಪ್ರಕಟಿಸಿತ್ತು. ಇದರ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಯಿತು. ಮೇಲ್ಜಾತಿಯ ಬಡವರಿಗೆ ಮೀಸಲಾತಿ ನೀಡುವುದರಿಂದ ಮೇಲ್ಜಾತಿಯ ಜನರನ್ನು ಇನ್ನಷ್ಟು ಬಲಾಢ್ಯರಾಗಿಸುವುದಷ್ಟೇ ಅಲ್ಲ, ದೇಶದೊಳಗಿರುವ ಸಾಮಾಜಿಕ ಅಸಮಾನತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಸಂವಿಧಾನ ತಜ್ಞರು ಆಕ್ಷೇಪ ಎತ್ತಿದರು. ಇದರ ವಿರುದ್ಧ ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿದರು. ಆದರೆ ಇದೀಗ, ಸ್ವತಃ ಸುಪ್ರೀಂ ಕೋರ್ಟ್ ಮೇಲ್ಜಾತಿಯ ಜನರಿಗೆ ಬಡತನದ ಆಧಾರದಲ್ಲಿ ಮೀಸಲಾತಿ ನೀಡುವುದನ್ನು ಸಮರ್ಥಿಸಿದೆ. ಸಂವಿಧಾನ ತಿದ್ದು ಪಡಿಯು ಸಂವಿಧಾನದ ಮೂಲರಚನೆಯನ್ನು ಮತ್ತು ಸಮಾನತೆಯ ಸಂಹಿತೆಯನ್ನು ಉಲ್ಲಂಘಿಸುವುದಿಲ್ಲ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ತೀರ್ಪಿಗೆ ಬಿಜೆಪಿ ಸಹಜವಾಗಿಯೇ ಸಂಭ್ರಮ ವ್ಯಕ್ತಪಡಿಸಿದೆ.
ಮೇಲ್ಜಾತಿಯಿಂದಲೇ ನಿಯಂತ್ರಿಸಲ್ಪಡುತ್ತಿರುವ ಬಿಜೆಪಿ, ಮೇಲ್ಜಾತಿಗೆ ದೊರಕಿರುವ ಮೀಸಲಾತಿಗಾಗಿ ಸಂಭ್ರಮಿಸುವುದರಲ್ಲಿ ಅರ್ಥವೂ ಇದೆ. ಆದರೆ ಇದೇ ಸಂದರ್ಭದಲ್ಲಿ, ಆ ಸಂಭ್ರಮದೊಂದಿಗೆ ಕಾಂಗ್ರೆಸ್‌ನ ಎಐಸಿಸಿ ಅಧ್ಯಕ್ಷರೂ, ಹಿರಿಯ ದಲಿತ ನಾಯಕರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಕೂಡ ಕೈ ಜೋಡಿಸಿರುವುದು ಹಿಂದುಳಿದ ಮತ್ತು ದಲಿತ ಸಮುದಾಯಗಳಿಗೆ ಆಘಾತವನ್ನುಂಟು ಮಾಡಿದೆ. ಮೀಸಲಾತಿ ತಿದ್ದುಪಡಿಯಲ್ಲಿ ಕಾಂಗ್ರೆಸ್‌ನ ಪಾತ್ರವನ್ನು ಅವರು ಹೆಮ್ಮೆಯಿಂದ ಸ್ಮರಿಸಿಕೊಂಡಿದ್ದಾರೆ. ಪಕ್ಷದ ಮೇಲ್ಜಾತಿಯ ಪರವಾಗಿರುವ ಅಜೆಂಡಾಗಳನ್ನು ಈಡೇರಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ದಲಿತ ನಾಯಕರೂ ಆಗಿರುವ ಖರ್ಗೆ ಅವರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆಯೆ? ಎಂದು ಹಲವರು ಪ್ರಶ್ನಿಸತೊಡಗಿದ್ದಾರೆ. ಇದ್ದುದರಲ್ಲಿ ಸಿದ್ದರಾಮಯ್ಯ ಅವರು ಸಮತೂಕದಿಂದ ಮಾತನಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ‘‘ಆರ್ಥಿಕ ಸ್ವಾವಲಂಬನೆಗೆ ಇದೊಂದು ದಿಟ್ಟ ಹೆಜ್ಜೆ. ಕರ್ನಾಟಕದಲ್ಲಿ ಆರ್ಥಿಕ ಮೀಸಲಾತಿಯನ್ನು ಅನುಷ್ಠಾನಕ್ಕೆ ತರಲಿದ್ದೇವೆ’’ ಎಂದು ಬೀದಿಗಿಳಿದಿದ್ದಾರೆ. ಒಟ್ಟಿನಲ್ಲಿ ಈ ಆರ್ಥಿಕ ಮೀಸಲಾತಿ ತೀರ್ಪನ್ನು ಈ ದೇಶದ ‘ಬಡವರ ಪರವಾಗಿ ಬಂದ ತೀರ್ಪು’ ಎಂದು ಜನರನ್ನು ದಾರಿತಪ್ಪಿಸುವಲ್ಲಿ ರಾಜಕಾರಣಿಗಳು ಭಾಗಶಃ ಯಶಸ್ವಿಯಾಗಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ತಮಿಳುನಾಡಿನಂತಹ ರಾಜ್ಯಗಳು ಈ ತೀರ್ಪಿನ ವಿರುದ್ಧ ಬಂಡೆದ್ದಿವೆ. ತಮಿಳುನಾಡು ತೀರ್ಪಿನ ಕುರಿತಂತೆ ಚರ್ಚಿಸುವುದಕ್ಕೆ ಸರ್ವಪಕ್ಷ ಸಭೆಯನ್ನು ಕರೆದಿದೆ.
ದೇಶದಲ್ಲಿ ಮೀಸಲಾತಿ ಜಾರಿಗೆ ಬಂದಿರುವುದು ಆರ್ಥಿಕವಾಗಿ ಬಡವರಾಗಿರುವವರನ್ನು ಮೇಲೆತ್ತುವ ಉದ್ದೇಶದಿಂದ ಅಲ್ಲ. ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕುವ ಉದ್ದೇಶದಿಂದ ಮೀಸಲಾತಿಯನ್ನು ಜಾರಿಗೆ ತರಲಾಯಿತು. ಒಂದು ನಿರ್ದಿಷ್ಟ ಜಾತಿಯಲ್ಲಿ ಹುಟ್ಟಿದ ಒಂದೇ ಕಾರಣದಿಂದ, ಶತಮಾನಗಳಿಂದ ಸಾಮಾಜಿಕವಾಗಿ ತುಳಿತಕ್ಕೊಳಪಟ್ಟ ಜನರನ್ನು ಮೇಲೆತ್ತುವುದಕ್ಕೆ ದಾರಿ ಸುಗಮ ಮಾಡುವ ಮಹತ್ತರ ಉದ್ದೇಶದಿಂದ ಮೀಸಲಾತಿಯನ್ನು ಜಾರಿಗೊಳಿಸಲಾಯಿತು. ಮೇಲ್ಜಾತಿಯ ಬಡವನೊಬ್ಬ ನಾಳೆ ಶ್ರೀಮಂತನಾಗುವುದಕ್ಕೆ ಸಾವಿರ ದಾರಿಗಳಿವೆ. ಅವರ ಸಮಸ್ಯೆ ಬಡತನವಷ್ಟೇ. ಇಷ್ಟಕ್ಕೂ ಬಡವರಿಗಾಗಿಯೇ ಸರಕಾರದ ಹತ್ತು ಹಲವು ಕಲ್ಯಾಣ ಯೋಜನೆಗಳಿವೆ. ಎಲ್ಲ ಅರ್ಹ ಬಡವರೂ ಇದರ ಫಲಾನುಭವಿಗಳಾಗಿರುತ್ತಾರೆ. ಕರ್ನಾಟಕದಲ್ಲಂತೂ ಬ್ರಾಹ್ಮಣರ ಕಲ್ಯಾಣಕ್ಕಾಗಿಯೇ ವಿಶೇಷ ನಿಗಮವನ್ನು ರಚಿಸಲಾಗಿದೆ. ಹಾಗೆಯೇ, ಬಡತನದ ರೇಖೆಗಿಂತ ಕೆಳಗಿರುವ ಎಲ್ಲರಿಗೂ ಸರಕಾರದ ಕಲ್ಯಾಣ ಯೋಜನೆಗಳು ಅನ್ವಯವಾಗುತ್ತವೆ. ಆದರೆ ಕೆಳಜಾತಿಯ ಬಡವನೊಬ್ಬನ ಸಮಸ್ಯೆ ಕೇವಲ ಬಡತನ ಮಾತ್ರವಲ್ಲ. ಆತ ಬಡತನವನ್ನು ಮೀರಿದರೂ, ತನ್ನ ಜಾತಿಯನ್ನು ಮೀರಲು ಸಾಧ್ಯವಾಗುವುದಿಲ್ಲ. ದಲಿತನೊಬ್ಬ ತನ್ನ ಮದುವೆಗೆ ಕುದುರೆಯೇರಿದರೆ ಮೇಲ್ಜಾತಿಯಿಂದ ಆತ ಹಲ್ಲೆಗೀಡಾಗಬೇಕಾಗುತ್ತದೆ. ಮೀಸೆ ಇಟ್ಟರೆ ಥಳಿತಕ್ಕೊಳಗಾಗಬೇಕಾಗುತ್ತದೆ. ಮೇಲ್ಜಾತಿಯ ವ್ಯಕ್ತಿಯೊಬ್ಬ ಬಡವನಾಗಿರುವುದು ಆಕಸ್ಮಿಕ. ಆದರೆ, ಕೆಳಜಾತಿಯ ಜನರು ಇಂದು ತೀವ್ರ ಬಡತನದಲ್ಲಿ ಸೊರಗಿರುವುದು ಸಾಮಾಜಿಕ ಅಸಮಾನತೆಯ ಕಾರಣದಿಂದ. ಇತರ ಬಲಾಢ್ಯ ಸಮುದಾಯಗಳ ಜೊತೆಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎನ್ನುವ ಕಾರಣದಿಂದ, ಅವರಿಗೆ ಮೀಸಲಾತಿಯನ್ನು ನೀಡಲಾಗಿದೆ.
ಮೇಲ್ಜಾತಿಯ ಬಡವರಿಗೆ ಶೇ. 10 ಮೀಸಲಾತಿಯನ್ನು ನೀಡುವುದರಿಂದ, ಮೇಲ್ಜಾತಿಯೊಳಗಿರುವ ಬಡವರನ್ನು ನಿವಾರಿಸಲು ಕೇಂದ್ರ ಸರಕಾರ ಹೊರಟಿದೆ. ಆದರೆ ಇದೇ ಸಂದರ್ಭದಲ್ಲಿ ಕೆಳಜಾತಿಯಲ್ಲಿರುವ ಬಡವರನ್ನು ನಿವಾರಿಸುವಲ್ಲಿ ಮೀಸಲಾತಿಯ ವೈಫಲ್ಯದ ಬಗ್ಗೆ ಜಾಣ ವೌನವನ್ನು ತಳೆದಿದೆ. ಬಡವರಿಗೆ ಶೇ.10 ಮೀಸಲಾತಿಯು ಈ ದೇಶದ ಎಲ್ಲ ಬಡವರಿಗೆ ಅನ್ವಯವಾಗುವುದಿಲ್ಲ ಎನ್ನುವುದನ್ನು ‘ತೀರ್ಪಿಗೆ ಸಂಭ್ರಮಿಸುವವರು’ ಗಮನಿಸಬೇಕಾಗಿದೆ. ಹಿಂದುಳಿದ ವರ್ಗದ ವ್ಯಾಪ್ತಿಯೊಳಗಿರುವ ಒಕ್ಕಲಿಗರು, ಲಿಂಗಾಯತ ಸಮುದಾಯದ ‘ಬಡವರಿಗೆ’ ಕೂಡ ಈ ಮೀಸಲಾತಿ ಅನ್ವಯವಾಗುವುದಿಲ್ಲ. ಅವರು ಈ ಮೀಸಲಾತಿಯಲ್ಲಿ ತಮ್ಮ ಪಾಲನ್ನು ಕೇಳುವಂತಿಲ್ಲ. ಶೇ. 4ರಷ್ಟಿರುವ ಬಲಾಢ್ಯ ಸಮುದಾಯದೊಳಗಿರುವ ‘ಬಡವರನ್ನು’ ಮೇಲೆತ್ತುವ ಉದ್ದೇಶವನ್ನು ಮಾತ್ರ ಈ ಮೀಸಲಾತಿ ಹೊಂದಿದೆ. ಇಷ್ಟಕ್ಕೂ ಮೇಲ್ಜಾತಿಯ ‘ಬಡವರ’ ಬಗೆಗಿನ ಮಾನದಂಡವೂ ಪ್ರಶ್ನಾರ್ಹವಾಗಿದೆ. ಈ ಮೀಸಲಾತಿಗೆ ‘ವಾರ್ಷಿಕವಾಗಿ 8 ಲಕ್ಷ ರೂ. ಆದಾಯವಿರುವ ಅಂದರೆ ಮಾಸಿಕವಾಗಿ ಸುಮಾರು 65,000 ರೂ. ಆದಾಯವಿರುವ ಮೇಲ್ ಜಾತಿಯ ‘ಬಡವ’ ಅರ್ಹನಾಗಿರುತ್ತಾನೆ. ಹಾಗೆಯೇ 5 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿದವನೂ ಸರಕಾರದ ಪ್ರಕಾರ ‘ಬಡವ’ನಾಗಿರುತ್ತಾನೆ. 1000 ಚ. ಅಡಿ ಮತ್ತು ಅದರ ಒಳಗಿನ ವಿಸ್ತೀರ್ಣದ ಮನೆಯಿರುವವನೂ ಇಲ್ಲಿ ‘ಬಡವ’ನಾಗುವುದಕ್ಕೆ ಯೋಗ್ಯ. ಮೇಲ್ಜಾತಿಯಲ್ಲಿ ಬಡವರೇ ಇಲ್ಲದಂತೆ ಮಾಡಲು ಪಣತೊಟ್ಟಿರುವ ಸರಕಾರ, ಕೆಳಜಾತಿಗಳಲ್ಲಿ ಲಕ್ಷಾಂತರ ಜನರು ವಸತಿ, ಭೂಮಿಯಿಲ್ಲದೆ ಸಂಕಷ್ಟ ಅನುಭವಿಸುತ್ತಿರುವುದನ್ನು ಮರೆತಿದೆ. ಇವರನ್ನು ಮೇಲೆತ್ತಲು ಸರಕಾರದ ಬಳಿ ಯಾವುದೇ ಹೊಸ ಯೋಜನೆಗಳು ಇಲ್ಲ. ಇರುವ ಮೀಸಲಾತಿಯು ದುರ್ಬಲ ವರ್ಗವನ್ನು ಮೇಲೆತ್ತುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.
ಸಾರ್ವಜನಿಕ ಸಂಸ್ಥೆಗಳೆಲ್ಲವೂ ಒಂದೊಂದಾಗಿ ಖಾಸಗೀಕರಣಗೊಳ್ಳುತ್ತಿರುವ ದಿನಗಳಲ್ಲಿ ಮೀಸಲಾತಿಯಿಂದ ಈ ವರ್ಗಕ್ಕೆ ಸಿಗುವ ಉದ್ಯೋಗ ಅಷ್ಟರಲ್ಲೇ ಇದೆ. ಖಾಸಗಿ ವಲಯದಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿ, ದುರ್ಬಲ ವರ್ಗಕ್ಕೆ ನ್ಯಾಯ ನೀಡಬೇಕಾದ ಸರಕಾರ, ತೋಳಕ್ಕೆ ಇನ್ನೆರಡು ಹಲ್ಲುಗಳನ್ನು ಸಿಕ್ಕಿಸಿ, ಕುರಿಗಳಿಗೆ ಸಮನಾಗಿಸಲು ಮುಂದಾಗಿದೆ. ಶೇ. 10 ಮೀಸಲಾತಿ ಶೇ. 4ರಷ್ಟಿರುವ ಮೇಲ್ಜಾತಿಯನ್ನು ಇನ್ನಷ್ಟು ಸಬಲವಾಗಿಸುತ್ತದೆ ಮಾತ್ರವಲ್ಲ, ದುರ್ಬಲ ಜಾತಿಗಳನ್ನು ಇನ್ನಷ್ಟು ದುರ್ಬಲವಾಗಿಸುತ್ತದೆ ಎನ್ನುವುದು ಆತಂಕಕಾರಿ ಅಂಶವಾಗಿದೆ. ಒಟ್ಟಿನಲ್ಲಿ ಮೇಲ್ಜಾತಿಯ ಬಡವರಿಗೆ ಶೇ. 10 ಮೀಸಲಾತಿಯಿಂದಾಗಿ ಮೀಸಲಾತಿಯ ಉದ್ದೇಶವೇ ಅಸ್ತವ್ಯಸ್ತಗೊಂಡಿದೆ. ಜನಸಂಖ್ಯೆಯಲ್ಲಿ ಅಧಿಕವಿರುವ ದುರ್ಬಲ ಸಮುದಾಯಕ್ಕೆ ಮೀಸಲಾತಿಯ ಪಾಲು ಕಡಿಮೆಯಾಗಿದೆ. ಇದೇ ಸಂದರ್ಭದಲ್ಲಿ ಜನಸಂಖ್ಯೆಯಲ್ಲಿ ಕಡಿಮೆಯಿರುವ ಆದರೆ ಎಲ್ಲ ಕ್ಷೇತ್ರಗಳನ್ನೂ ಆಳುತ್ತಿರುವ ಬಲಾಢ್ಯ ವರ್ಗಕ್ಕೆ ಹೆಚ್ಚು ಮೀಸಲಾತಿಯನ್ನು ಒದಗಿಸಿದಂತಾಗಿದೆ.
ತೀರ್ಪಿನಲ್ಲಿ, ‘ನಮ್ಮ ದೇಶಕ್ಕೆ ಸ್ವಾತಂತ್ರ ಲಭಿಸಿ 75 ವರ್ಷಗಳಾಗಿರುವ ಈ ಸಂದರ್ಭದಲ್ಲಿ ಮೀಸಲಾತಿ ವ್ಯವಸ್ಥೆ ಪುನರ್ ಪರಿಶೀಲನೆಗೊಳಪಡಬೇಕು’ ಎಂದು ನ್ಯಾಯಾಧೀಶರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಮೀಸಲಾತಿ ತನ್ನ ಉದ್ದೇಶವನ್ನು ಸಾಧಿಸಲು ವಿಫಲಗೊಂಡಿರುವ ಈ ದಿನಗಳಲ್ಲಿ, ಮೀಸಲಾತಿಯನ್ನು ಯಶಸ್ವಿಗೊಳಿಸಲು ಮಾರ್ಗದರ್ಶನ ನೀಡಬೇಕಾಗಿದ್ದ ನ್ಯಾಯಾಧೀಶರೇ ಇಂತಹದೊಂದು ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ವಿಷಾದನೀಯವಾಗಿದೆ. ಎಲ್ಲಿಯವರೆಗೆ ಜಾತಿ ಅಸಮಾನತೆ ಈ ದೇಶದಲ್ಲಿ ಅಸ್ತಿತ್ವದಲ್ಲಿರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿಯೂ ಅಸ್ತಿತ್ವದಲ್ಲಿರುವುದು ಸಮ ಸಮಾಜವನ್ನು ಕಟ್ಟುವುದಕ್ಕೆ ಅನಿವಾರ್ಯವಾಗಿದೆ. ಮೀಸಲಾತಿಯ ವಿರುದ್ಧ ನೇರ ಯುದ್ಧ ಸಾಧ್ಯವಾಗದೇ ಇರುವ ಕಾರಣಕ್ಕಾಗಿ, ಪರೋಕ್ಷ ಯುದ್ಧದ ಮೂಲಕ ಅದನ್ನು ಸರ್ವನಾಶಗೊಳಿಸುವ ಪ್ರಯತ್ನ ನಡೆಯುತ್ತಿದೆ. ಮೀಸಲಾತಿಯ ಉದ್ದೇಶವನ್ನು ಬುಡಮೇಲುಗೊಳಿಸಲು ಯತ್ನಿಸುತ್ತಿರುವ ಸಂಚುಗಳ ವಿರುದ್ಧ ಹಿಂದುಳಿದವರ್ಗ, ದಲಿತ ಮತ್ತು ಅಲ್ಪಸಂಖ್ಯಾತ ವರ್ಗದ ಶೋಷಿತ ಜನರು ಸಂಘಟಿತರಾಗಿ ಒಂದಾಗಬೇಕಾದ ಅಗತ್ಯವಿದೆ